ಮೈಸೂರು: ‘ಪುರಾಣ ಹಾಗೂ ಚರಿತ್ರೆಯಲ್ಲಿನ ದೇವರುಗಳೆಲ್ಲ ಅಂತರ್ಜಾತಿ ವಿವಾಹವಾದವರೇ ಆಗಿದ್ದೂ, ಅವರ ಭಕ್ತರು ಮಾತ್ರ ಪ್ರೇಮ ವಿವಾಹ ವಿರೋಧಿಸುತ್ತಿದ್ದಾರೆ. ಮರ್ಯಾದೆ ಗೇಡು ಹತ್ಯೆ ಇನ್ನೂ ನಡೆಯುತ್ತಿವೆ’ ಎಂದು ಹೈಕೋರ್ಟ್ ವಕೀಲ ಪ್ರೊ.ರವಿವರ್ಮಕುಮಾರ್ ಬೇಸರ ವ್ಯಕ್ತಪಡಿಸಿದರು.
ಕಿರುರಂಗಮಂದಿರದಲ್ಲಿ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ‘ಪ್ರೊ.ಕೆ.ರಾಮದಾಸ್ ನೆನಪಿನಲಿ’ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿವ, ಕೃಷ್ಣ, ರಾಮ ಎಲ್ಲರೂ ಅಂತರ್ಜಾತಿ ವಿವಾಹಿಗಳೇ. ಕಲಿಯುಗದ ದೇವರಾದ ವೆಂಕಟರಮಣ, ಚೆಲುವನಾರಾಯಣಸ್ವಾಮಿ ಸಹ ಪ್ರೀತಿಸಿ ಮದುವೆಯಾದವರು. ಮೇಲುಕೋಟೆಯ ದೇವರನ್ನು ದೆಹಲಿಯ ಸುಲ್ತಾನನ ಮಗಳು ಬೀಬಿನಾಚ್ಚಿಯಾರ್ ಮದುವೆಯಾಗಿದ್ದಳು. ದೇವರ ಆದರ್ಶ ಮಾತ್ರ ಭಕ್ತರು ಮರೆತು ಅಂತರ್ಜಾತಿ, ಅಂತರ್ಧರ್ಮೀಯ ವಿವಾಹಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.
‘ಪ್ರೇಮ ವಿವಾಹಗಳಿಗೆ ಸಂಕೋಲೆಗಳಿಲ್ಲ, ವರದಕ್ಷಿಣೆಯ ಪಿಡುಗಿಲ್ಲ, ಆಡಂಬರದ ಅಬ್ಬರವಿಲ್ಲ, ದುಂದುವೆಚ್ಚ ಬೇಕಿಲ್ಲ, ಅವು ನಿಜವಾದ ಪ್ರೀತಿಯ ಸಂಕೇತಗಳಾಗಿವೆ. ಅಂತರ್ಜಾತಿ ವಿವಾಹಿತರಿಗೆ ತಾತ್ವಿಕ ಸ್ಪಷ್ಟತೆಯಿದ್ದರೆ ಜೀವನದ ಸವಾಲು ಎದುರಿಸಬಹುದು’ ಎಂದರು.
‘ಜಾತಿ, ಧರ್ಮ ಲೆಕ್ಕಿಸದ ಸಂಗಾತಿ ಆಯ್ಕೆ ವ್ಯಕ್ತಿಯ ಮೂಲಭೂತ ಹಕ್ಕೆಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಸುಜಾತಾ ತೀರ್ಪು ನೀಡಿದ್ದಾರೆ. ಸಂಕರದ ಮದುವೆಗಳಿಗೆ ಭಾರತದ ಸಂವಿಧಾನವೇ ಶಕ್ತಿ, ಆಸರೆಯಾಗಿದೆʼ ಎಂದು ಅಭಿಪ್ರಾಯಪಟ್ಟರು.
‘ಬಸವಣ್ಣನ ತತ್ವದಂತೆ ಮಾನವ ಮಂಟಪವನ್ನು ಸ್ಥಾವರವಾಗಿಸದೇ ಜಂಗಮವಾಗಿಸಿದವರು ಪ್ರೊ.ಕೆ.ರಾಮದಾಸ್. ನಿರಂತರತೆ ಚಲನಶೀಲತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದವರು. ಹೋರಾಟ, ಸಂಘಟನೆಗಳ ಮೂಲಕ ನೂರಾರು ಮನಸ್ಸುಗಳನ್ನು ನಿರ್ಮಾಣ ಮಾಡಿದರು’ ಎಂದರು.
‘ಪ್ರಜಾಪ್ರಭುತ್ವ ಮತ್ತು ವಾಸ್ತವತೆ’ ಪುಸ್ತಕ ಬಿಡುಗಡೆ ಮಾಡಿದ ಲೇಖಕ ಸನತ್ ಕುಮಾರ್ ಬೆಳಗಲಿ, ಅಂತರ್ಜಾತಿ ವಿವಾಹಿತರು ತಮ್ಮ ಮಕ್ಕಳನ್ನು ಮತ್ತೆ ಜಾತಿ ಸಂಕೋಲೆಗೆ ಸಿಲುಕಿಸಬಾರದು. ಮಾನವ ಮಂಟಪ ಮುಂದಾಗಿ ಮದುವೆ ಮಾಡುವ ಕೆಲಸಕೆಕ ಮುಂದಾಗಬೇಕೆಂದು ಸಲಹೆ ನೀಡಿದರು.
‘ಸಂವಿಧಾನ, ಪ್ರಜಾಪ್ರಭುತ್ವವನ್ನು ದಮನ ಮಾಡುವ ಶಕ್ತಿಗಳೂ ವಿಜೃಂಭಿಸುವಾಗ ಬಹುತ್ವದ ಭಾರತ ಉಳಿಸುವುದು ಎಲ್ಲರ ಜವಾಬ್ದಾರಿ’ ಎಂದರು.
ಡಾ.ವಸುಂಧರಾ ಭೂಪತಿ ಮಾತನಾಡಿ, ‘ಪಠ್ಯಪುಸ್ತಕಗಳಲ್ಲಿ ಮಹಿಳಾ, ದಲಿತ ಸಂವೇದನೆ ಮಾಯವಾಗಿದೆ.
ಮಹಿಳೆಯರನ್ನು ಅವಮಾನಿಸುವ ಪಾಠಗಳಿವೆ. ಪರಿಷ್ಕರಣೆಯ ಮೂಲಕ ಕೋಮುವಾದದ ವಿಷ ಬಿತ್ತುತ್ತಿರುವ ಸನ್ನಿವೇಶದಲ್ಲಿ ಪ್ರೊ.ರಾಮದಾಸ್ ಜಾತ್ಯತೀತ ಚಿಂತನೆಯ ಮಾದರಿಯಾಗಿ ಕಾಣುತ್ತಾರೆ’ ಎಂದು ಹೇಳಿದರು.
‘ಪ್ರೇಮ ವಿವಾಹಗಳಿಂದ ಸಾಮಾಜಿಕ ಬದಲಾವಣೆ: ಸಾಧಕ– ಬಾಧಕಗಳು’ ಕುರಿತು ಮಾನವ ಮಂಟಪದ ಅಂತರ್ಜಾತಿ ವಿವಾಹಿತರಾದ 20 ಮಂದಿ ಮಾತನಾಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಉಡುಪಿಯ ತನ್ವೀರ್ ಪಾಷಾ, ಮೈಸೂರಿನ ವರಲಕ್ಷ್ಮಿ ಮಂಜುನಾಥ್, ಹಾಸನದ ಗೌತಮ್ ಶ್ರೀಧರ್ ಅವರಿಗೆ ನಗದು ಬಹುಮಾನ ನೀಡಲಾಯಿತು. ಮಾನವ ಮಂಟಪದ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ದೇಸಿರಂಗ ಸಂಸ್ಥೆಯ ಕೃಷ್ಣ ಜನಮನ ಇದ್ದರು.