ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಬಯಲಾಗಿರುವ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್.ಬಿ. ತಿಮ್ಮಾಪುರ ರ ವಿರುದ್ಧ ಪ್ರಕರಣದ ದೂರುದಾರ ಲಕ್ಷ್ಮೀನಾರಾಯಣ್ ಲೋಕಾಯುಕ್ತಕ್ಕೆ ಮತ್ತೊಂದು ದೂರು ಸಲ್ಲಿಸಿದ್ದಾರೆ.
ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಸಚಿವರ ಪಾತ್ರದ ಕುರಿತು, ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್ ನಾಯ್ಕ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಹಿತ ದಾಖಲೆಗಳನ್ನು ದೂರುದಾರ ಲಕ್ಷ್ಮೀನಾರಾಯಣ್ ಅವರು ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಿದ್ದಾರೆ.
ದೂರು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮೀನಾರಾಯಣ್, “ಟ್ರ್ಯಾಪ್ ಆದಾಗ ಮೂವರ ಬಂಧನವಾಗಿದೆ. ಮಂತ್ರಿಯವರಿಗೆ ಎಷ್ಟು ಹಣ ಕೊಡಬೇಕಿದೆ ಎಂದು ಅಬಕಾರಿ ಡಿಸಿಯವರು ಬಹಿರಂಗವಾಗಿ ಪ್ರಸ್ತಾಪಿಸಿದ್ದರು. ಆದ್ದರಿಂದ ಮಂತ್ರಿಯವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದರು.
ಇದನ್ನೂ ಓದಿ: ಆದಿವಾಸಿ–ದಲಿತ ಮಕ್ಕಳ ಕನಸಿಗೆ ಬುಲ್ಡೋಜರ್!
ನಾನು ಸರ್ಕಾರಕ್ಕೆ ಪಾವತಿಸಬೇಕಿರುವ ಎಲ್ಲಾ ಶುಲ್ಕವನ್ನು ಪಾವತಿಸಿದ್ದರೂ ಸಹ ಲಂಚಕ್ಕೆ ಬೇಡಿಕೆಯಿಟ್ಟು, ಪರವಾನಗಿಯನ್ನ ಕೊಟ್ಟಿರಲಿಲ್ಲ. ಟ್ರ್ಯಾಪ್ ಆಗುವ ಐದು ನಿಮಿಷಗಳಿಗೂ ಮುಂಚೆ ಡಿಸಿ ಮಾತಾಡಿರುವ ಆಡಿಯೋ ನನ್ನ ಬಳಿ ಇದೆ. ಆ ಆಡಿಯೋ ಸೇರಿದಂತೆ ಸೂಕ್ತ ದಾಖಲೆಗಳನ್ನ ಲೋಕಾಯುಕ್ತ ಎಸ್‌ಪಿಯವರಿಗೆ ನೀಡಿದ್ದೇನೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ, ಬೇರೆ ಕಾನೂನು ಮಾರ್ಗಗಳ ಬಗ್ಗೆ ಪರಿಶೀಲಿಸುತ್ತೇವೆ ಎಂದು ತಿಳಿಸಿದರು.
ಭಾನುವಾರ ಬಿಜೆಪಿ ಕಚೇರಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಜೊತೆ ಜಂಟಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಅಬಕಾರಿ ಇಲಾಖೆಗೆ ವರ್ಷದಿಂದ ವರ್ಷಕ್ಕೆ ಕಲೆಕ್ಷನ್ ಟಾರ್ಗೆಟ್ ಕೊಡುತ್ತಿದ್ದರು. ಅದರ ಪರಿಣಾಮ ಸನ್ನದುಗಳು ಅಬಕಾರಿ ಇಲಾಖೆಯಲ್ಲಿ ಹರಾಜು ಆಗುತ್ತಿದೆ. ನಿನ್ನೆ ಲೋಕಾಯುಕ್ತ ಅಧಿಕಾರಿಗಳು ದೊಡ್ಡ ತಿಮಿಂಗಿಲ ಬಂಧಿಸಿದ್ದಾರೆ. ಒಂದೇ ಒಂದು ಸನ್ನದಿಗೆ 2.30 ಕೋಟಿ ರೂ. ಕೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅಬಕಾರಿ ಇಲಾಖೆಯು ಆರ್ಥಿಕ ಇಲಾಖೆಯಡಿ ಬರುತ್ತದೆ. ಅಬಕಾರಿ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಿದ್ದರಾಮಯ್ಯ ನೇರ ಕಾರಣ ಎಂದು ಆರೋಪಿಸಿದ್ದರು.
ನಕಲಿ ಗಾಂಧಿಗಳು ಇವರು, ಗಾಂಧಿ ಹೆಸರು ಹೇಳಲು ನೈತಿಕತೆ ಇಲ್ಲ. ಗಾಂಧಿಯವರ ಬಗ್ಗೆ ಮಾತಾಡ್ತಾರೆ?, ಎಲ್ಲಿದೆ ಆದರ್ಶ? ಜನರನ್ನು ಕುಡಿಸಿ ಕುಡಿಸಿ ಹಾಳು ಮಾಡುತ್ತಿದ್ದಾರೆ. ಇನ್ನೊಂದು ಕಡೆ ಬೆಂಗಳೂರನ್ನು ನಶೆಯಲ್ಲಿ ಮುಳುಗಿಸಿದ್ದಾರೆ. ಕಳ್ಳ ಕಾಂಗ್ರೆಸಿಗರು ಒಂದು ಕಡೆ ಕುಡಿಸೋದು, ಇನ್ನೊಂದು ಕಡೆ ವಸೂಲಿ. ಅಬಕಾರಿ ಮಂತ್ರಿ ತಿಮ್ಮಾಪುರ ಒಂದು ಕ್ಷಣವೂ ಅಧಿಕಾರದಲ್ಲಿ ಇರಬಾರದು, ರಾಜೀನಾಮೆ ಕೊಡಬೇಕು. ಇಲ್ಲವೆಂದರೆ ಮಂತ್ರಿಗಳನ್ನು ಸಂಪುಟದಿಂದ ಸಿಎಂ ತೆಗೆಯಲಿ ಎಂದು ಒತ್ತಾಯಿಸಿದ್ದರು.
ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಎ1 ಖದೀಮ, ಸೂಪರಿಂಟೆಂಡೆಂಟ್ ತಮ್ಮಣ್ಣ ಮಿನಿ ಖದೀಮ, ಲಕ್ಕಪ್ಪ ಗಣಿ ಹೆಸರಲ್ಲೇ ಗಣಿ ಇದೆ. ಮೂವರೂ ಲೋಕಾ ಬಲೆಗೆ ಬಿದ್ದಿದ್ದಾರೆ. ಸಿಎಲ್-7 ಒಟ್ಟು 750 ಲೈಸೆನ್ಸ್ ಕೊಡುತ್ತಿದ್ದಾರೆ. ಪ್ರತಿ ಸಿಎಲ್-7ಗೆ 1.5 ಕೋಟಿ ರೂ. ಲಂಚ, 650 ಸಿಎಲ್-2 ಸನ್ನದುಗಳು 1.5 ಕೋಟಿ ರೂ.ಗೆ ಹರಾಜು, ಒಟ್ಟು 950 ಕೋಟಿ ಲಂಚ, 1 ಕೋಟಿಗೆ ಸಿಎಲ್-9 ಕೊಡುತ್ತಿದ್ದಾರೆ, ಒಟ್ಟು 92 ಕೋಟಿ, ಮೈಕ್ರೋಬ್ರೆವರಿಗಳಿಗೆ ಅತೀ ಹೆಚ್ಚು ಲಂಚ ಕೊಡಬೇಕು. 1 ಮೈಕ್ರೋಬ್ರೆವರಿಗೆ 2.5 ಕೋಟಿ ರೂ., ಅಂತಹ 550 ಮೈಕ್ರೋಬ್ರೆವರಿಗಳಿವೆ’ ಎಂದಿದ್ದರು.
ಇದನ್ನೂ ನೋಡಿ: ಉತ್ತರ ಪ್ರದೇಶ | ಮತದಾರರ “ಪರಿಷ್ಕರಣೆಯೋ? ಹರಣವೋ? | ಗುರುರಾಜ ದೇಸಾಯಿ| Janashakthi Media #upsir
