ರಾಮನಗರ: ಬಿಡದಿಯು ಕೈಗಾರಿಕಾ ಪ್ರದೇಶವಾಗಿದ್ದು, ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಉದ್ಯೋಗ ಮಾಡುತ್ತಿದ್ದಾರೆ. ಅವರ ಓಡಾಟಕ್ಕೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಬಿಡದಿಗೆ ನಮ್ಮ ಮೆಟ್ರೋ ಘೋಷಣೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ ನಮ್ಮ ಮೆಟ್ರೋ ಮಾಡುವ ಬಗ್ಗೆ ಇಲ್ಲಿನ ಎಂಎಲ್‌ಎ ಹಾಗೂ ಎಂಪಿಗಳು ಮನವಿ ಮಾಡಿದ್ದರು. ಈ ಬಗ್ಗೆ ಕರ್ನಾಟಕದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಡಿಪಿಆರ್ ಮಾಡಲು ಸೂಚಿಸಿದ್ದೇನೆ. ಹಿಂದೆ ಬಿಡದಿ ಸ್ಮಾರ್ಟ್ ಸಿಟಿಗಾಗಿ ಹತ್ತು ಸಾವಿರ ಎಕರೆ ಜಾಗ ವಶ ಪಡಿಸಿಕೊಳ್ಳಲಾಗಿತ್ತು. ಆದರೆ ಅದು ಹಾಗೆಯೆ ಉಳಿದುಕೊಂಡಿದೆ.
ಹೀಗಾಗಿ ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಪ್ಲ್ಯಾನಿಂಗ್ಗೆ ಬಿಡದಿ ಘೋಷಿಸಲಾಗಿದೆ. ಮುಂದೆ ಲೀಗಲ್ ಪ್ರೊಸಿಜರ್ ಆಗಲಿದೆ. ಎಲ್ಲರಿಗೂ ಶಕ್ತಿ ತುಂಬುವ ದೃಷ್ಟಿಯಿಂದ ಈ ಘೋಷಣೆಗಳನ್ನು ಮಾಡಲಾಗುತ್ತಿದೆ. ಈ ನಿಟ್ಟಿನಿಂದ ಸ್ಥಳೀಯರಿಗೆ ಉದ್ಯೋಗಕ್ಕಾಗಿ ಪ್ರತ್ಯೇಕ ಸಭೆ ನಡೆಸಿ, ಎಲ್ಲ ಕಾರ್ಖಾನೆಗಳ ಬಳಿ ಮನವಿ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಗೆಯೇ ರಾಮನಗರಕ್ಕೆ ಮರುನಾಮಕರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಬೆಂಗಳೂರಿನವರು. ನಮ್ಮ ಮೂಲ ಹೆಸರನ್ನು ನಾವು ಕೆಳದುಕೊಳ್ಳುವುದಿಲ್ಲ. ಹೀಗಾಗಿ ಬೆಂಗಳೂರು ದಕ್ಷಿಣವನ್ನಾಗಿ ಜಿಲ್ಲೆಯ ಹೆಸರು ಬದಲಿಸುವ ಬಗ್ಗೆ ಜನರಿಂದ ಅಭಿಪ್ರಾಯ ಕೇಳಲಾಗುತ್ತಿದೆ. ಬಳಿಕ ಸರ್ಕಾರದ ಮುಂದಿಟ್ಟು ಬದಲಾವಣೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಾಗೆಯೇ ಅಕ್ರಮ ಆಸ್ತಿ ಕುರಿತು ಸಿಬಿಐ ಅರ್ಜಿ ವಜಾ ವಿಚಾರವಾಗಿ ಮಾತನಾಡಿದ ಅವರು, ವಜಾ ಆಗಿದ್ಯಾ? ನನಗೆ ಗೊತ್ತಿಲ್ಲ. ವಜಾ ಏಕಾಯ್ತು? ಈಗ ಕಾರ್ಯಕ್ರಮದಲ್ಲಿದ್ದೇನೆ. ವಿಚಾರಿಸಿ ನಂತರ ಮಾತನಾಡುತ್ತೇನೆ ಎಂದರು.
ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕೆಲಸವಾಗುತ್ತಿದೆ – ಸಂಸದ ಡಿಕೆ ಸುರೇಶ್: ಇದೊಂದು ಸುದಿನ. ಟೊಯೋಟಾ 25 ವರ್ಷ ಪೂರೈಸಿದೆ. ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಲು ತರಬೇತಿ ಯೋಜನೆ ರೂಪಿಸಿರೋದು ಶ್ಲಾಘನೀಯ. ಟೊಯೋಟಾ ಭಾರತದ ಅದರಲ್ಲೂ ಕರ್ನಾಟಕದ ಹೆಮ್ಮೆಯ ಸಂಸ್ಥೆ. ಗುಣಮಟ್ಟದಲ್ಲಿ ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ರಾಮನಗರದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ. ಉದ್ಯೋಗ ಸೃಷ್ಟಿಸಿ ಸಂಸ್ಥೆ ಅದನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ. ಯುವಕ, ಯುವತಿಯರಿಗೆ ಬದುಕು ಕಟ್ಟಿ ಕೊಡುತ್ತಿದೆ. ಹೆಣ್ಣು ಮಕ್ಕಳಿಗೆ ವಿಶೇಷ ತರಬೇತಿಗೆ ಮುಂದಾಗಿರೋದು ಮಾದರಿಯಾಗಿದೆ ಎಂದರು.
ಶಿಕ್ಷಣ, ಗಾರ್ಮೆಂಟ್ ಉದ್ಯಮದಲ್ಲಿ ಸಾಧನೆ ಮಾಡಿರುವ ಮಹಿಳೆಯರ ಕೈಗೆ ಸ್ಕ್ರೂ ಡ್ರೈವರ್, ಸ್ಪಾನರ್ ಕೊಟ್ಟು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೆ ಪ್ರೇರಣೆ ನೀಡಿರುವುದು ಅನುಕರಣನೀಯ. ವಿಶ್ವದಲ್ಲಿ ಮಹಿಳಾ ಶಕ್ತಿ ಪ್ರಾಮುಖ್ಯತೆ ಪಡೆದಿದೆ. ಮಹಿಳೆಯರು ಸ್ವಾವಲಂಬನೆ ಸಾಧಿಸುತ್ತಿರೋದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಡಿಸಿಎಂ ಮೂಲಕ ಸಿಎಂ ಅವರಿಗೆ ವಿಶೇಷ ಮನವಿ ಮಾಡುತ್ತೇನೆ. ಉದ್ಯೋಗದಲ್ಲಿ ಮಹಿಳೆಯರಿಗೆ ಶೇಕಡಾ 25 ರಷ್ಟು ಮೀಸಲಿಡಲು ಕೋರುತ್ತೇನೆ. ಟೊಯೋಟಾದಲ್ಲಿ ರಾಮನಗರ ಜಿಲ್ಲೆಯವರಿಗೆ ಕೆಲಸ ಕೊಡ್ತಿಲ್ಲ ಅನ್ನುವ ಆಪಾದನೆ ಇದೆ. ಆದರೆ ಕಾರಣ ಗೊತ್ತಿಲ್ಲ. ಹಿಂದಿನ ಘಟನೆಗಳೆನಾದರೂ ಇದ್ದರೆ, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ನೋಡಬೇಡಿ. ಉದ್ಯೋಗ ನೀಡುವಾಗ ರಾಮನಗರ ಜಿಲ್ಲೆಯವರನ್ನೂ ಪರಿಗಣಿಸಿ ಎಂದರು.
ಹಾಗೆಯೇ ಸರಕಾರಿ ಶಾಲೆಗಳ ಉನ್ನತೀಕರಣ ಹಾಗೂ ಪಬ್ಲಿಕ್ ಮಾದರಿ ಶಾಲೆಗಳ ನಿರ್ಮಾಣಕ್ಕೆ ಟೊಯೋಟಾ ಸಂಸ್ಥೆ ಸುಮಾರು 30 ಕೋಟಿ ಸಿಎಸ್ಸಾರ್ ನೆರವು ನೀಡಲು ಮುಂದಾಗಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.