ಅನ್ನದಾತರಿಂದ ಇಂದು ದೇಶವ್ಯಾಪಿ “ಚಕ್ಕಾ ಜಾಮ್”

1 ನಿಮಿಷ ಟ್ರಾಕ್ಟರ್ ಹಾರ್ನ್ ಹಾಕೋ ಮೂಲಕ ಚಕ್ಕಾ ಜಾಮ್ ಪ್ರತಿಭಟನೆ ಅಂತ್ಯಗೊಳ್ಳಲಿದೆ ಎಂದು ರೈತ ಸಂಘಟನೆಗಳು ಹೇಳಿವೆ.

ಬೆಂಗಳೂರು ಫೆ 06 : ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಇಂದು (ಶನಿ​ವಾರ) ನಡೆ​ಯ​ಲಿ​ರುವ ಹೋರಾಟದ ಭಾಗವಾಗಿ ರಾಜ್ಯದಲ್ಲೂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಮಧ್ಯಾಹ್ನ 12ರಿಂದ 3 ಗಂಟೆವರೆಗೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆದು ಧರಣಿ ನಡೆಸಲು ಕರೆ ನೀಡಲಾಗಿದೆ.

ರೈತರ ರಸ್ತೆತಡೆ ಪ್ರತಿಭಟನೆಗೆ ಕಾರ್ಮಿಕರು, ಕೂಲಿಕಾರ, ದಲಿತ, ವಿದ್ಯಾರ್ಥಿ,ಯುವಜನ, ಮಹಿಳಾ ಸಂಘಟನೆಗಳು ಸೇರಿದಂತೆ ಅನೇಕ ಜನಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಕರ್ನಾಟಕದ ಬಹುತೇಕ ಜಿಲ್ಲಾ ಮತ್ತು ತಾಲ್ಲೂಕ ಕೇಂದ್ರಗಳಲ್ಲಿ 200 ಕ್ಕೂ ಹೆಚ್ಚು ಕಡೆ ರಸ್ತೆ ತಡೆ ನಡೆಯಲಿದೆ.

ದೆಹಲಿ ವರದಿ :ಹೊಸದಿಲ್ಲಿ: ರೈತರ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೆಂಬಲ, ಸೆಲೆಬ್ರಿಟಿಗಳ ಟ್ವೀಟ್‌ ಸಮರ ಮುಂದುವರಿದಿರುವ ನಡುವೆ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಮುಂದಾಗಿರುವ ರೈತ ಸಂಘಟನೆಗಳು ಇಂದು (ಶನಿವಾರ) ದೇಶಾದ್ಯಂತ ರಸ್ತೆ ಹಾಗೂ ಹೆದ್ದಾರಿ ತಡೆ (ಚಕ್ಕಾ ಜಾಮ್‌) ನಡೆಸಲು ನಿರ್ಧರಿಸಿವೆ.

ಮೂರು ವಿವಾದಿತ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಶನಿವಾರ ಮಧ್ಯಾಹ್ನ 12ರಿಂದ 3 ಗಂಟೆಯವರಗೆ ದೇಶಾದ್ಯಂತ ‘ಚಕ್ಕಾ ಜಾಮ್‌’ ನಡೆಸಲು ರೈತರು ನಿರ್ಧರಿಸಿದ್ದಾರೆ.

ರೈತರ ಪ್ರತಿಭಟನೆ ವಿಷಯದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸಹ ಇದೇ ಮೊದಲ ಬಾರಿ ರಂಗಪ್ರವೇಶ ಮಾಡಿದ್ದು, ರೈತರ ಹೆದ್ದಾರಿ ತಡೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಶುಕ್ರವಾರ ಸುದೀರ್ಘ ಸಮಾಲೋಚನೆ ನಡೆಸಿದರು. ನಂತರ ದಿಲ್ಲಿ ಪೊಲೀಸ್‌ ಆಯುಕ್ತ ಎಸ್‌.ಎನ್‌. ಶ್ರೀವಾತ್ಸವ್‌ ಅವರ ಜತೆ ತುರ್ತು ಸಭೆ ನಡೆಸಿದರು. ಸಾಕಷ್ಟು ಭದ್ರತೆ ನೀಡುವ ಕುರಿತು ಚರ್ಚಿಸಲಾಗಿದೆ.

ರಸ್ತೆ ತಡೆಯಿಂದ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ಜನರಿಗೆ ರೈತರೇ ಆಹಾರ ಮತ್ತು ನೀರು ಪೂರೈಸುತ್ತಾರೆ. ಆ ಮೂಲಕ ಸರಕಾರ ನಮ್ಮೊಂದಿಗೆ ಹೇಗೆ ವರ್ತಿಸುತ್ತಿದೆ ಎಂಬುದನ್ನು ಜನತೆಗೆ ಮನದಟ್ಟು ಮಾಡಿಕೊಡುತ್ತೇವೆ ಎಂದು ಬಿಕೆಯು ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.

3 ಗಂಟೆಯಾಗುತ್ತಿದ್ದಂತೆ 1 ನಿಮಿಷ ಟ್ರಾಕ್ಟರ್ ಹಾರ್ನ್ ಹಾಕೋ ಮೂಲಕ ಚಕ್ಕಾ ಜಾಮ್ ಪ್ರತಿಭಟನೆ ಅಂತ್ಯಗೊಳ್ಳಲಿದೆ. ಚಕ್ಕಾ ಜಾಮ್ ಶಾಂತಿಯುತವಾಗಿ ನಡೆಸಲು ನಿರ್ಧರಿಸಲಾಗಿದೆ. ಭದ್ರತೆ ಹೆಸರಲ್ಲಿ ಪೊಲೀಸ್ ಬಲವನ್ನು ಸರಕಾರ ಬಳೆಸುತ್ತಿದೆ. ಅನಗತ್ಯ ಗೊಂದಲ ಸೃಷ್ಟಿಸಲು ಸರಕಾರ ಯೋಜನೆ ರೂಪಿಸುತ್ತಿದೆ. ನಾವು ಸಾಕಷ್ಟು ಜಾಗೃತೆಯಿಂದ ಸಿದ್ದತೆ ಮಾಡಿಕೊಂಡಿದ್ದು, ಚಕ್ಕಾ ಜಾಮ್ ಶಾಂತಿಯುತವಾಗಿ ನಡೆಯಲಿದೆ ಎಂದು AIKS ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಹನನ್ ಮುಲ್ಲಾ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *