ದೆಹಲಿ/ ಬೆಂಗಳೂರು,ಫೆ. 18 : ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಿದ್ದು, ರೈತರು ಗುರುವಾರ ರೈಲು ತಡೆ ನಡೆಸಿದ್ದಾರೆ. ಪಂಜಾಬ್, ಹರ್ಯಾಣದಲ್ಲಿ ಹಳಿಗಳ ಮೇಲೆ ಕುಳಿತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಲಿರುವ ರೈತ ಸಂಘಟನೆಗಳು ಗುರುವಾರ ಮೂರು ತಾಸಿನ ರಾಷ್ಟ್ರವ್ಯಾಪ್ತಿ ರೈಲ್ ರೋಕೋ (ರೈಲು ತಡೆ) ಚಳವಳಿ ನಡೆಸಿದರು. ಮಧ್ಯಾಹ್ನ 12ರಿಂದ ಸಂಜೆ 3ರ ವರೆಗೆ ರೈಲು ರೋಕೋ ಚಳವಳಿ ನಡೆಸಿದರು. ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ, ಹಿಮಾಚಲ ಪ್ರದೇಶದ ಅನೇಕ ಸ್ಥಳಗಳಲ್ಲಿ ರೈಲ್ವೆ ಹಳಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೇ ಅಧಿಕಾರಿಗಳು ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸಿದ್ದರು.
ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕಳೆದ ವಾರ ರಾಷ್ಟ್ರವ್ಯಾಪಿ ರೈಲು ತಡೆಯನ್ನು ಘೋಷಿಸಿ, ಕೃಷಿ ಕಾನೂನು ರದ್ದು ಮಾಡುವಂತೆ ಒತ್ತಾಯಿಸಿತ್ತು. ಜಲಂಧರ್‌ನ ಜಲಂಧರ್ ಕ್ಯಾಂಟ್-ಜಮ್ಮು ರೈಲು ಹಳಿಗಳ ಮೇಲೆ ಕುಳಿತ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೊಹಾಲಿಯಲ್ಲೂ ರೈತರು ರೈಲು ಹಳಿ ತಡೆದಿದ್ದಾರೆ. ಅಂತೆಯೇ ಹರಿಯಾಣದಲ್ಲಿ, ಅಂಬಾಲಾ, ಕುರುಕ್ಷೇತ್ರ, ಪಾಣಿಪತ್ ಮತ್ತು ಪಂಚಕುಲ ಜಿಲ್ಲೆಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ ಮಹಿಳೆಯರು ಸೇರಿದಂತೆ ಪ್ರತಿಭಟನಾ ನಿರತ ರೈತರು ರೈಲು ಹಳಿಗಳ ಮೇಲೆ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ :“ಚಕ್ಕಾ ಜಾಮ್” ಗೆ ಬಲ ತುಂಬಿದ ಅನ್ನದಾತ
ಕರ್ನಾಟಕದಲ್ಲೂ ಉತ್ತಮ ಬೆಂಬಲ : ದೇಶವ್ಯಾಪಿ ಕರೆ ನೀಡಿದ್ದ ರೈಲ್ ರೋಕೋಗೆ ಕರ್ನಾಟಕದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ರೈತರು ಮುತ್ತಿಗೆ ಹಾಕಲು ಬಂದಾಗ ರೈತರು ಮತ್ತು ಪೋಲೀಸರು ನಡುವೆ ಮಾತಿನ ಚಕಮಕಿ ನಡೆಯಿತು. ಬೀದರನಲ್ಲಿ ರೈತರನ್ನು ರೈಲ್ವೇಯ ಮುಖ್ಯದ್ವಾರದಲ್ಲೆ ತಡೆ ಹಿಡಿದರು ರೈತರು ಅಲ್ಲಿಯೆ ಕುಳಿತು ಪ್ರತಿಭಟನೆ ನಡೆಸಿದರು. ರಾಯಚೂರು, ಯಾದಗಿರಿ, ಬೆಳಗಾವಿ, ಹುಬ್ಬಳ್ಳಿ, ಕೋಲಾರದಲ್ಲಿ ರೈಲ್ ರೋಕೋಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರೈಲು ತಡೆಗೆ ಮುಂದಾದ ರೈತರನ್ನು ಪೊಲೀಸರು ಬಂಧಿಸಿ ನಂತರದಲ್ಲಿ ಬಿಡುಗಡೆ ಮಾಡಿದ್ದಾರೆ.