ನವದೆಹಲಿ ಫೆ 04: ಕೃಷಿಕಾಯ್ದೆ ರದ್ದು ಮಾಡುವಂತೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಹಾಲಿವುಡ್ ನಟಿ ರಿಹಾನ್ನಾ ಬೆನ್ನಲ್ಲೇ ಇದೀಗ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿರುವ ಸೆಲೆಬ್ರಿಟಿಗಳ ಪಟ್ಟಿ ಬೆಳೆಯುತ್ತಿದೆ.
ಖ್ಯಾತ ಹಾಲಿವುಡ್ ನಟಿ ಹಾಗೂ ಪಾಪ್ ಗಾಯಕಿ ರಿಹಾನ್ನಾ ಟ್ವೀಟ್ ಬೆನ್ನಲ್ಲೇ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಈ ಪಟ್ಟಿಗೆ ಇದೀಗ ಕೆನಡಾ ಮೂಲದ ಖ್ಯಾತ ಯೂಟ್ಯೂಬರ್ ಲಿಲ್ಲಿ ಸಿಂಗ್ ಮತ್ತು ಖ್ಯಾತ ಗಾಯಕ ಜಯ್ ಸೀನ್ ಸೇರ್ಪಡೆಯಾಗಿದ್ದಾರೆ.
39 ವರ್ಷದ ಗಾಯಕ ಜಯ್ ಸೀನ್, ಈ ಕುರಿತಂತೆ ತಮ್ಮ ಇನ್ ಸ್ಚಾಗ್ರಾಮ್ ನಲ್ಲಿ ರೈತರ ಪ್ರತಿಭಟನೆಯ ಫೋಟೋ ಶೇರ್ ಮಾಡಿದ್ದಾರೆ. ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರತಿಭಟನೆ ಇದು. ಅಮೆರಿಕದ ಪ್ರಮುಖ ಮಾಧ್ಯಮಗಳು ಇದರ ಬಗ್ಗೆ ಆಗಾಗ ಸುದ್ದಿ ಮಾಡುತ್ತಿವೆ. ಆದರೆ ಈ ಬಗ್ಗೆ ಇನ್ನಷ್ಟು ಪ್ರಾಮುಖ್ಯತೆ ನೀಡಿ ಗಮನಹರಿಸಿ ಸುದ್ದಿ ಮಾಡಬೇಕು ಮತ್ತು ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಬೇಕು.ಹಿರಿಯ ನಾಗರಿಕರೂ ಕೂಡ ಚಳಿ ಎನ್ನದೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮದ ಅಗತ್ಯವಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಪೋಸ್ಟ್ ಮಾಡಿರುವ ಕೆನಡಾ ಮೂಲದ ಖ್ಯಾತ ಯೂಟ್ಯೂಬರ್ ಲಿಲ್ಲಿ ಸಿಂಗ್ ಅವರು, ಥ್ಯಾಂಕ್ಯೂ ರಿಹಾನ್ನಾ…ಇದು ಮಾನವೀಯತೆಯ ವಿಚಾರವಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಅಮೆರಿಕದ ಖ್ಯಾತ ವ್ಲಾಗರ್ ಅಮಂಡಾ ಸೆರ್ನಿ ಅವರು, ಪ್ರತಿಭಟನಾ ನಿರತ ರೈತ ಮಹಿಳೆಯರ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇಡೀ ಜಗತ್ತು ನೋಡುತ್ತಿದೆ. ವಿಚಾರ ಏನೆಂದು ತಿಳಿಯಲು ನೀವು ಭಾರತೀಯರೋ, ಪಂಜಾಬಿಯೋ ಅಥವಾ ಏಶಿಯನ್ ಆಗಬೇಕಿಲ್ಲ. ಮಾನವೀಯತೆ ಇದ್ದರೆ ಸಾಕು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಮೂಲ ಮಾನವ ಮತ್ತು ನಾಗರಿಕ ಹಕ್ಕುಗಳು-ಕಾರ್ಮಿಕರಿಗೆ ಸಮಾನತೆ ಮತ್ತು ಘನತೆಯನ್ನು ಯಾವಾಗಲೂ ಕೇಳಿ ಎಂದು ಪೋಸ್ಟ್ ಮಾಡಿದ್ದಾರೆ.
ರೈತ ಹೋರಾಟವನ್ನು ಬೆಂಬಲಿಸಿದ ಖ್ಯಾತ ಪಾಪ್ ಗಾಯಕಿ, ಹಾಲಿವುಡ್ ನಟಿ ರಿಹಾನ್ನಾಗೆ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರು, ’ರಿರಿ’ ಎಂಬ ಹೊಸ ಹಾಡನ್ನು ಗೌರವಾರ್ಥವಾಗಿ ಸಮರ್ಪಿಸಿದ್ದಾರೆ.
ಭಾರತೀಯ ಸೆಲೆಬ್ರಿಟಿ ಗಳ ವಿರೋಧಕ್ಕೆ ಆಕ್ರೋಶ : ಅಂತರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು ರೈತ ಹೋರಾಟವನ್ನು ಬೆಂಬಲಿಸುತ್ತಿದ್ದಂತೆ ಭಾರತದ ಸೆಲೆಬ್ರಿಟಿಗಳಾದ ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಕರಣ್ ಜೋಹರ್, ಏಕ್ತಾ ಕಪೂರ್, ಕಂಗನಾ ಸೇರಿದಂತೆ ಇತರರು ಅಂತರಾಷ್ಟ್ರೀಯ ಸೆಲೆಬ್ರಿಟಿ ಗಳು ಭಾರತದ ವಿಚಾರ ಕುರಿತು, ರೈತರು ಕುರಿತು ನಿವ್ಯಾಕೆ ಮಾತನಾಡುತ್ತಿರಿ ಎಂದು ಟ್ವೀಟ್ ಮಾಡಿದ್ದಾರೆ. ಭಾರತದ ಸೆಲೆಬ್ರಿಟಿ ಗಳ ಈ ಕ್ರಮವನ್ನು ಅನೇಕರು ವಿರೋಧಿಸಿದ್ದು, ರೈತರು ಎರಡು ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ, ಆಗ ನೀಮ್ಮ ಬಾಯಿಗೆ ಏನಾಗಿತ್ತು,150 ಕ್ಕೂ ಹೆಚ್ಚು ರೈತರು ಸತ್ತಾಗ ಯಾಕೆ ಮೌನ ವಹಿಸಿದ್ದರು, ರೈತರ ಪರ ನಿಲ್ಲವುದು, ಮಾತನಾಡುವುದಕ್ಕೆ ಪಂಜಾಬಿಗರೆ, ಭಾರತೀಯರೆ ಆಗಬೇಕೆಂದೇನು ಇಲ್ಲ. ಅವರು ಮನುಷ್ಯರಾಗಿದ್ದರೆ ಸಾಕು ಮಾತನಾಡುತ್ತಾರೆ, ನಿಮ್ಮ ಸಾದನೆಗಳ ಹಿಂದೆ ಅನ್ನದಾತರ ಪರಿಶ್ರಮ ಇದೆ ಎನ್ನುವುದನ್ನು ಮರೆಯಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.