ಬೆಂಗಳೂರು : ಉಚಿತ ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಬಿಜೆಪಿಯವರು ಬಡವರ ವಿರೋಧಿಗಳು, ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಅಕ್ಕಿ ಸಂಗ್ರಹ ಇದ್ದರೂ ಕೇಂದ್ರ ಸರ್ಕಾರ ಏಕೆ ಪೂರೈಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿ ತಲಾ 5 ಕೆ.ಜಿ ಅಕ್ಕಿ ವಿತರಣೆಗಾಗಿ ತಿಂಗಳಿಗೆ 2.28 ಲಕ್ಷ ಟನ್ ಅಕ್ಕಿ ನೀಡಲು ಒಪ್ಪಿದ್ದ ಭಾರತೀಯ ಆಹಾರ ನಿಗಮ ಈಗ ಹಿಂದೇಟು ಹಾಕಿದೆ. ಈ ಸಂಬಂಧ ಕೇಂದ್ರಕ್ಕೆ ಪ್ರತಿಭಟನಾ ಪತ್ರ ಬರೆಯಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
‘ನಿಗಮವು 7 ಲಕ್ಷ ಟನ್ ಅಕ್ಕಿ ಇಟ್ಟುಕೊಂಡು ಕೊಡುವುದಿಲ್ಲ ಎನ್ನುತ್ತಿದೆ. ಅನ್ನಭಾಗ್ಯ ಯೋಜನೆಯಿಂದ ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ಬರುತ್ತದೆ. ಬಡವರ ಕಲ್ಯಾಣ ಆಗುತ್ತದೆ. ಅದನ್ನು ತಪ್ಪಿಸಬೇಕು ಎಂದೇ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ’ ಎಂದು ದೂರಿದರು.
‘ಭಾರತೀಯ ಆಹಾರ ನಿಗಮ ಅಕ್ಕಿ ಕೊಡುವುದಾಗಿ ತಿಳಿಸಿದ್ದರಿಂದ ನಾವು ಜುಲೈ 1 ರಿಂದಲೇ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ತಲಾ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಈಗ ಕೊಡುವುದಿಲ್ಲ ಎನ್ನುತ್ತಿದೆ. ಬೇರೆ ರಾಜ್ಯಗಳಿಂದ ಖರೀದಿಸಬೇಕಾಗಿದೆ. ತಮ್ಮ ಬಳಿ ಅಕ್ಕಿ ಇಲ್ಲ ಎಂದು ಪಂಜಾಬ್ ಹೇಳಿದೆ. ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನೋಡೋಣ ಎಂದಿದ್ದಾರೆ. ಆ ರಾಜ್ಯಗಳ ಜತೆ ಮಾತುಕತೆಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಅಲ್ಲಿಗೆ ತೆರಳಲಿದ್ದಾರೆ’ ಎಂದರು.
‘ಹೆಚ್ಚುವರಿ 5 ಕೆ.ಜಿ ಅಕ್ಕಿ ನೀಡುವ ಯೋಜನೆ ಪ್ರಕಟಿಸಿದ ಬಳಿಕ ಭಾರತೀಯ ಆಹಾರ ನಿಗಮಕ್ಕೆ ನಮ್ಮ ಅಧಿಕಾರಿಗಳು ಪತ್ರ ಬರೆದರು. ಅದಕ್ಕೆ ಪ್ರತಿಕ್ರಿಯಿಸಿದ ನಿಗಮ ಅಧಿಕಾರಿಗಳು ನಿಗಮದ ಬಳಿ ಅಕ್ಕಿ ಇದೆ. 2.8 ಲಕ್ಷ ಟನ್ ಅಕ್ಕಿ ಕೊಡಲು ಅಭ್ಯಂತರವಿಲ್ಲ ಎಂದು ಹೇಳಿದ್ದರು. ಪ್ರತಿ ಕ್ವಿಂಟಲ್‌ಗೆ ₹3,400 ರಂತೆ, ಎಲೆಕ್ಟ್ರಾನಿಕ್ ಹರಾಜಿನಲ್ಲಿ ಭಾಗವಹಿಸದೇ ಪಡೆದುಕೊಳ್ಳಬಹುದು ಎಂದೂ ನಿಗಮದ ಪ್ರಾದೇಶಿಕ ವ್ಯವಸ್ಥಾಪಕರು ತಿಳಿಸಿದ್ದರು. ಆ ಬಳಿಕ ಇನ್ನೊಂದು ಪತ್ರ ಬರೆದು 13,189.45 ಟನ್ ಅಕ್ಕಿ ಕೊಡುವುದಾಗಿಯೂ ಹೇಳಿದ್ದರು’ ಎಂದು ಸಿದ್ದರಾಮಯ್ಯ ವಿವರಿಸಿದರು.