ನೋಟಾಗಿಂತಲೂ ಕಡಿಮೆ ಮತ ಪಡೆದ ಮಾಜಿ ಶಾಸಕ!

ಬಳ್ಳಾರಿ : ರಾಜ್ಯ ವಿಧಾನಸಭಾ ಚುನಾವಣೆ ಹಲವು ಶಾಕ್​ಗಳನ್ನು ಕೊಟ್ಟಿದೆ. ಈ ರೀತಿ ಹೊಡೆತ ತಿಂದವರಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಒಬ್ಬರು. ನೋಟಾಗಿಂತಲೂ ಕಡಿಮೆ ಮತ ಪಡೆದು 6ನೇ ಸ್ಥಾನ ಪಡೆಯುವ ಮೂಲಕ ರಾಜಕೀಯ ಭವಿಷ್ಯವನ್ನು ಅಂತ್ಯಗೊಳಿಸಿದ್ದಾರೆ.

ಬಳ್ಳಾರಿ ಗಣಿಗಣಿಗಳಲ್ಲೊಬ್ಬರೆಂದು ಹೆಸರುವಾಸಿಯಾದ ಮತ್ತು ಮಾಜಿ,ಶಾಸಕ, ರಾಜ್ಯಸಭಾ ಸದಸ್ಯರಾಗಿದ್ದ ಅನಿಲ್ ಲಾಡ್ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದು ಮಾತ್ರವಲ್ಲ, ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ. ಮತದಾನಕ್ಕೆ ಮುನ್ನವೇ ತಾವು ಸೋಲಬಹುದು ಎಂಬ ಸುಳಿವು ಅವರಿಗೆ ಸ್ಪಷ್ಟವಾಗಿ ಸಿಕ್ಕಿತ್ತಾದರೂ ನೋಟಾ ಗಿಂತಲೂ ಕಡಿಮೆ ಮತ ಪಡೆಯುತ್ತೇನೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಎನಿಸುತ್ತದೆ.

ಶನಿವಾರ ಪ್ರಕಟವಾದ ಫಲಿತಾಂಶದಲ್ಲಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಅನಿಲ್ ಲಾಡ್ ಪಡೆದ ಮತ ಕೇವಲ 610. ಅದೂ ಜೆಡಿಎಸ್ ಪಕ್ಷದ ಟಿಕೆಟ್​ನಲ್ಲಿ ಸ್ಪರ್ಧಿಸಿದ್ದ ಅವರು 6ನೇ ಸ್ಥಾನ ಪಡೆದಿದ್ದಾರೆ. ಆಮ್ ಆದ್ಮಿ ಅಭ್ಯರ್ಥಿ ಮತ್ತು ನೋಟಾಗಿಂತಲೂ ಕಡಿಮೆ ಮತ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ನೋಟಾಗೆ ಬಿದ್ದ ಮತ 975.

ಕಾಂಗ್ರೆಸ್​ನಿಂದ ಟಿಕೆಟ್ ಸಿಗದೆ ಜೆಡಿಎಸ್​ಗೆ ವಲಸೆ ಬಂದಿದ್ದ ಅನಿಲ್ ಲಾಡ್ ಮತದಾನಕ್ಕೆ ಮುನ್ನವೇ ಜನರ ನಾಡಿಮಿಡಿತದ ಅರಿವು ಅಲ್ಪಸ್ಪಲ್ಪ ಪಡೆದಂತಿತ್ತು. ತಾನು 30,000 ಕ್ಕೂ ಕಡಿಮೆ ಮತಗಳನ್ನು ಪಡೆದರೆ ರಾಜಕೀಯಕ್ಕೇ ಅನರ್ಹ ಎಂದು ಮತದಾನಕ್ಕೆ ಮೂರ್ನಾಲ್ಕು ದಿನ ಮುನ್ನ ಮಾಧ್ಯಮಗಳೆದುರು ಅನಿಲ್ ಲಾಡ್ ಹೇಳಿಕೊಂಡಿದ್ದರು. ಈಗ ಅವರು 30,000 ಇರಲಿ, ಅದರ ಶೇ. 1ರಷ್ಟು ಮತಗಳೂ ಅವರಿಗೆ ಸಿಕ್ಕಿಲ್ಲ.

ಬಳ್ಳಾರಿ ನಗರ ಕ್ಷೇತ್ರ ನಾನಾ ಕಾರಣಗಳಿಗೆ ಗಮನ ಸೆಳೆದಿತ್ತು. ಜನಾರ್ದನ ರೆಡ್ಡಿ ತನ್ನ ಸ್ವಂತ ಸೋಮಶೇಖರ್ ರೆಡ್ಡಿ ವಿರುದ್ಧ ತಮ್ಮ ಪತ್ನಿಯನ್ನೇ ಕಣಕ್ಕಿಳಿಸಿದ್ದರು. ಸೋಮಶೇಖರ್ ರೆಡ್ಡಿ ಹಾಲಿ ಶಾಸಕ. ಈ ಚುನಾವಣೆಯಲ್ಲಿ ಸೋಮಶೇಖರ್ ರೆಡ್ಡಿ 3ನೇ ಸ್ಥಾನ ಪಡೆದರು. ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಎರಡನೇ ಸ್ಥಾನ ಪಡೆದರು.

Donate Janashakthi Media

Leave a Reply

Your email address will not be published. Required fields are marked *