ಜುಲೈ 10: ಸರ್ಕಾರಕ್ಕೆ 63 ಸಾವಿರ ಮೊಬೈಲ್‌ಗಳನ್ನು ವಾಪಾಸು ಮಾಡಲಿರುವ ಅಂಗನವಾಡಿ ಕಾರ್ಯಕರ್ತೆಯರು!

ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಈ ಪ್ರತಿಭಟನೆ ನಡೆಲಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ಹೇಳಿದೆ

ಬೆಂಗಳೂರು: ಜುಲೈ 10ರ ಸೋಮವಾರದಂದು ರಾಜ್ಯದಾದ್ಯಂತ 63 ಸಾವಿರ ಅಂಗನವಾಡಿ ಕಾರ್ಯಕರ್ತರು ಸರ್ಕಾರ ತಮಗೆ ನೀಡಿರುವ ಮೊಬೈಲ್‌ಗಳನ್ನು ಸರ್ಕಾರಕ್ಕೆ ವಾಪಾಸು ಮಾಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಎಸ್‌. ವರಲಕ್ಷ್ಮಿ ಶನಿವಾರ ಹೇಳಿದರು. ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಈ ಪ್ರತಿಭಟನೆ ನಡೆಲಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವರಲಕ್ಷ್ಮಿ, “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸಗಳಿಗೆ ಎಂದು ನಾಲ್ಕು ವರ್ಷಗಳ ಹಿಂದೆ ಮೊಬೈಲ್ ನೀಡಲಾಗಿತ್ತು. ಅದರಲ್ಲಿ ಬೇರೆ ಇಲಾಖೆಗಳ ಕೆಲಸಗಳನ್ನೂ ಮಾಡಿಸಲಾಗುತ್ತಿದೆ. ಯಾವುದೆ ಉತ್ತಮ ತಂತ್ರಾಂಶಗಳಿಲ್ಲ ಈ ಮೊಬೈಲ್‌ಗಳು ಕಳಪೆ ಗುಣಮಟ್ಟದ್ದಾಗಿದೆ” ಎಂದರು.

ಇದನ್ನೂಓದಿ: ಬೊಮಾಯಿ ಸರ್ಕಾರದಿಂದ 3 ಲಕ್ಷ ಕುಟುಂಬಗಳಿಗೆ ಮೋಸ: ಅಂಗನವಾಡಿ ನೌಕರರ ಸಂಘ ಆಕ್ರೋಶ

“ಕೆಲಸ ಆಗಿಲ್ಲವೆಂದರೆ ನೋಟಿಸ್ ನೀಡಿ ಬೆದರಿಸಲಾಗುತ್ತಿದೆ. ಹೊಸ ಮೊಬೈಲ್ ಅಥವಾ ಲ್ಯಾಪ್‌ಟಾಪ್ ನೀಡುವಂತೆ ನಾವು ಮನವಿ ಮಾಡಿದರೂ ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಜುಲೈ 10ರ ಸೋಮವಾರದಂದು ಸರ್ಕಾರ ನೀಡಿರುವ ಮೊಬೈಲ್‌ಗಳನ್ನು ಸರ್ಕಾರಕ್ಕೆ ವಾಪಾಸು ಮಾಡಲಿದ್ದು, ಈಗಾಗಲೆ ಹೆಚ್ಚಿಸಲಾಗಿರುವ ನಮ್ಮ ಗೌರವಧದ ಪಾವತಿಗಾಗಿ ಪ್ರತಿಭಟನೆ ನಡೆಸಲಿದ್ದೇವೆ” ಎಂದರು.

“ಇದೇ ವೇಳೆ ಬೊಮ್ಮಾಯಿ ಅವರ ಸರ್ಕಾರವಿದ್ದಾಗ ಘೋಷಿಸಿದ್ದ 1000 ರೂ ಗೌರವಧದ ಆದೇಶ ಇನ್ನೂ ಆಗಿಲ್ಲ. ಬಜೆಟ್‌ನಲ್ಲಿ ಘೋಷಣೆಯಾದರೂ ಅದಕ್ಕೆ ಅನುದಾನ ಮೀಸಲಿಟ್ಟಿಲ್ಲ. ಸಿದ್ದರಾಮಯ್ಯ ಅವರ ಹೊಸ ಸರ್ಕಾರ ಕೂಡಾ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೆ ವಿಚಾರವನ್ನು ಎತ್ತಿಕೊಂಡಿಲ್ಲ. ಗೃಹಲಕ್ಷ್ಮಿ ಯೋಜನೆ ನೀಡುವ ಹಣವನ್ನು ಅಂಗನವಾಡಿ ಸಹಾಯಕಿಯರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಗೃಹಲಕ್ಷ್ಮಿ ಯೋಜನೆ ರಾಜ್ಯದ ಎಲ್ಲಾ ಮಹಿಳೆಯರಿಗೆ ನೀಡಲಾಗುವ ಯೋಜನೆಯಾಗಿದೆ. ಆದರೆ ನಾವು ಕೇಳುತ್ತಿರುವುದು ಈ ಉಚಿತ ಹಣವನ್ನಲ್ಲ, ನಮಗೆ ಈಗಾಗಲೆ ಘೋಷಿಸಿರುವ ನಮ್ಮ ದುಡಿಮೆಯ  ಹಣವನ್ನಾಗಿದೆ” ಎಂದು ವರಲಕ್ಷ್ಮಿ ಹೇಳಿದರು.

ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರ ಫಡರೇಷನ್ ಅಧ್ಯಕ್ಷರಾದ ಅಮ್ಜದ್ ಬಿ. ಮಾತನಾಡಿ, “ಸರ್ಕಾರ 2019ರಲ್ಲಿ ನೀಡಿದ್ದ ಮೊಬೈಲ್, ನಾಲ್ಕು ವರ್ಷ ಕಳೆದು ಐದನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಎಲ್ಲಾ ಮೊಬೈಲ್‌ಗಳು ಹಾಳಾಗಿದೆ. ಆದರೆ ಕಾರ್ಯಕರ್ತೆರ ಮೇಲೆ ಇಲಾಖೆ ಅದೇ ಮೊಬೈಲ್ ಅಲ್ಲಿ ಕೆಲಸ ಮಾಡಲು ಒತ್ತಡ ಹೇರುತ್ತಿದೆ. ಕೇವಲ ಇಲಾಖೆಯ ಕೆಲಸವನ್ನಲ್ಲದೆ ಆರೋಗ್ಯ ಇಲಾಖೆ ಸೇರಿದಂತೆ, ಬಿಎಲ್‌ಒ ಕೆಲಸಗಳನ್ನು ಅದೇ ಮೊಬೈಲ್‌ನಲ್ಲಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ” ಎಂದು ಹೇಳಿದರು.

ಇದನ್ನೂಓದಿ: ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಗೃಹಜ್ಯೋತಿ ಹೊರೆ – ಸಂಘಟನೆಗಳ ತೀವ್ರ ಆಕ್ರೋಶ

“ಹೆಚ್ಚಳ ಮಾಡಿರುವ 1000 ಗೌರವಧನದ ಬಗ್ಗೆ ಕೇಳಿದರೆ, ಗೃಹಲಕ್ಷ್ಮಿ ಯೋಜನೆಯ ಹಣ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಇದು ಮಹಿಳೆಯರ ವೃತ್ತಿ ಗೌರವಕ್ಕೆ ಧಕ್ಕೆ ತರುವ ಕೃತ್ಯ. ಅಂಗನವಾಡಿ ನೌಕರರು 7-8 ಘಂಟೆಗಳ ಕಾಲ ದುಡಿಯುತ್ತಿದ್ದಾರೆ, ಅವರೇನು ಭಿಕ್ಷುಬೇಡುತ್ತಿಲ್ಲ” ಎಂದು ಅಮ್ಜದ್ ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಮಹಾ ಮಂಡಳಿ ಅಧ್ಯಕ್ಷರಾದ ಜಿ.ಆರ್. ಶಿವಶಂಕರ್ ಮಾತನಾಡಿ, “ನಿವೃತ್ತಿ ಆದಂತಹ ಎಲ್ಲಾ ಸಹಾಯಕಿ ಮತ್ತು ಕಾರ್ಯಕರ್ತರಿಗೆ ಕಡ್ಡಾಯವಾಗಿ 2 ಸಾವಿರ ನೀಡಬೇಕು. ಬಹುತೇಕ ಹೆಣ್ಣು ಮಕ್ಕಳಿಗೆ ಮೊಬೈಲ್ ಬಳಸುವುದರ ಬಗ್ಗೆ ಗೊತ್ತಿಲ್ಲ.‌ ಇಲಾಖೆಯ ಒಳಗಡೆ ಒಬ್ಬ ಅಧಿಕಾರಿ ಮಾಡಿದ ಆದೇಶದ ತದ್ವಿರುದ್ಧವಾಗಿ ಮತ್ತೊಬ್ಬ ಅಧಿಕಾರಿ ಆದೇಶ ಮಾಡುತ್ತಿದ್ದಾರೆ” ಎಂದರು.

“ಎಲ್ಲಾ ಇಲಾಖೆಯ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಡಿಸಲಾಗುತ್ತಿದೆ. ಸರ್ಕಾರಿ ಅಧ್ಯಾಪಕರಿದ್ದರೂ ಈ ಯಾವುದೇ ಕೆಲಸವನ್ನು ಅವರಿಂದ ಮಾಡಿಸುತ್ತಿಲ್ಲ. ಕಾರ್ಯಕರ್ತರು ಜವಾಬ್ದಾರಿಯುತ ಕೆಲಸ ಮಾಡುತ್ತಿರುವುದರಿಂದ ಸರ್ಕಾರ ಅವರನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವರೆಗೆ 70% ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಮೊಬೈಲ್ ವಾಪಸಾತಿ ವಿಚಾರದಲ್ಲಿ ನಮ್ಮ ಎಲ್ಲಾ ಸಂಘಟನೆಗಳು ಒಮ್ಮತದಲ್ಲಿವೆ” ಎಂದು ಶಿವಶಂಕರ್ ಹೇಳಿದರು.

ಇದನ್ನೂಓದಿ: ಅಂಗನವಾಡಿಗಳ ಸುತ್ತ ಸಮಸ್ಯೆಗಳ ಹುತ್ತ : ಬಾಡಿಗೆ ಹಣವೂ ಇಲ್ಲ, ಮೊಟ್ಟೆ ಹಣವೂ ಇಲ್ಲ

ಸ್ವತಂತ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಉಮಾಮಣಿ ಮಾತನಾಡಿ, “ಕಾರ್ಯಕರ್ತೆಯರಿಗೆ ನೀಡಿರುವ ಮೊಬೈಲ್ ಹಾಳಾಗಿದೆ. ರಿಪೇರಿ ಮಾಡಿದರೂ ಅದು ಸರಿಯಾಗುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಲ್ಲದೆ ಬೇರೆ ಇಲಾಖೆಗಳ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಇ-ಸರ್ವೆ ಸೇರಿದಂತೆ ಎಲ್ಲಾ ಇಲಾಖೆಗಳ ಕೆಲಸಗಳಿಂದ ನಮಗೆ ಮುಕ್ತಿ ನೀಡಬೇಕು” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಎಚ್‌.ಎಸ್‌. ಸುನಂದ, ಗಿರಿಜಾ ಹಾಗೂ ಧನಲಕ್ಷ್ಮಿ ಭಾಗವಹಿಸಿದ್ದರು.

 

 

Donate Janashakthi Media

Leave a Reply

Your email address will not be published. Required fields are marked *