ಬಜೆಟ್‌ನಲ್ಲಿ ಈಡೇರದ ಬೇಡಿಕೆ : ಬೀದಿಗಿಳಿದ ಅಂಗನವಾಡಿ ನೌಕರರು

ಬೆಂಗಳೂರು :  ರಾಜ್ಯ ಬಜೆಟ್‌ನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆಗ್ರಹಿಸಿ ಅಂಗನವಾಡಿ ನೌಕರರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ (ಸಿಐಟಿಯು)  ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿಂದೆ ರಾಜ್ಯದ ಎಲ್ಲಾ ಶಾಸಕರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ವೇತನ ಹೆಚ್ಚಳ, ಅಂಗನವಾಡಿಗಳ ಬಲವರ್ಧನೆ, ಹಾಗೂ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ನಡೆಸಲು ನಿರ್ಧರಿಸಬೇಕು ಎಂದು ಮನವಿ ನೀಡಿದ್ದರು.  ಸಾಕಷ್ಟು ಒತ್ತಡ ಬಂದ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ ಸಂಘಟನೆಯ ಮುಖಂಡರ ಜೊತೆ ಮಾತುಕತೆ ನಡೆಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದರು.

ಬೇಡಿಕೆಗಳಿಗೆ ಸ್ಪಂದಿಸದ ಹಿನ್ನಲೆಯಲ್ಲಿ ನಿನ್ನೆಯಿಂದ ಸಾವಿರಾರು ಅಂಗನವಾಡಿ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಸೇವಾ ಜ್ಯೇಷ್ಟತೆಯ ಆಧಾರದಲ್ಲಿ ಅತ್ಯಲ್ಪ ಗೌರವಧನ ಹೆಚ್ಚಳಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಪೂರ್ಣ ಪ್ರಮಾಣದ ಬೇಡಿಕೆ ಈಡೇರುವವರೆಗೂ  ಪ್ರತಿಭಟನೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮಿ ತಿಳಿಸಿದ್ದಾರೆ.

ಇಲಾಖೆಯಿಂದ 339.49 ಲಕ್ಷ ಶಿಫಾರಸ್ಸು ಆಗಿತ್ತು. ಅದರ ಪ್ರಕಾರ 20 ವರ್ಷ ಸೇವಾವಧಿ ಮೇಲ್ಪಟ್ಟವರಿಗೆ 2೦೦೦ ರೂ,
ಸಹಾಯಕಿ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಗೆ ತಲಾ 17೦೦ ರೂ ನೀಡಲು ಇಲಾಖೆ ಶಿಫಾರಸ್ಸು ಮಾಡಿತ್ತು. ಆದರೆ ಈಗ ಘೋಷಣೆಯಾಗಿರುವುದು ಕೇವಲ ಅತ್ಯಲ್ಪ ಮಾತ್ರ. ಕೋಳಿ ಮೊಟ್ಟೆಯ ಹಣವನ್ನು ಮುಂಗಡವಾಗಿ ಇಲಾಖೆಯಿಂದಲೇ ಸರಬರಾಜು ಮಾಡಬೇಕಿತ್ತು. ಪ್ರತಿಯೊಂದು ಕಾರ್ಯಕರ್ತೆ ತಮ್ಮ ಕೈಯಿಂದಲೇ ಮೂರ್ನಾಲ್ಕು ಸಾವಿರ ರೂ. ಹಣ ಹಾಕಿ ಮೊಟ್ಟೆ ಖರೀದಿಸಿ ನೀಡುತ್ತಿದ್ದು ಸಕಾಲದಲ್ಲಿ ಹಣ ಬಿಡುಗಡೆ ಯಾಗದೇ ಹಾಗೂ ಗೌರವಧನವೂ ಸೂಕ್ತಕಾಲದಲ್ಲಿ ನೀಡದೇ ಸಂಕಷ್ಟವೊದಗಿದೆ. ಇದು ಒಂದೆಡೆಯಾದರೆ ಸ್ಥಳೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆ ದರ ನೀಡದೇ ಇರುವುದರಿಂದ ಸಾವಿರಾರು ರೂಪಾಯಿ ಕಳೆದುಕೊಳ್ಳುವ ಪರಿಸ್ಥಿತಿ ಕಳೆದ ಹಲವು ವರ್ಷಗಳಿಂದ ಉದ್ಘವವಾಗಿದೆ. ಈ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ವರಲಕ್ಷ್ಮಿ ಆಗ್ರಹಿಸಿದ್ದಾರೆ.

ರಾಜ್ಯ ಪ್ರಧಾನಕಾರ್ಯದರ್ಶಿ ಎಚ್‌.ಎಸ್‌. ಸುನಂದಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ಕೆಲಸದ ಅವಧಿಯಲ್ಲಿ ತೀರಿಕೊಂಡಾಗ ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕೆಂಬ ಆದೇಶದಲ್ಲಿ ಮೃತರ ಮಗಳು ಅಥವಾ ಸೊಸೆಗೆ ಅದೇ ಹುದ್ದೆಯನ್ನು ನೀಡಬೇಕು ಹಾಗಾಗಿ ಆದೇಶಕ್ಕೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡುವ ಭರದಲ್ಲಿ ರಾಜ್ಯದ ಅಂಗನವಾಡಿ ನೌಕರರಿಗೆ ಸಮಸ್ಯೆಯಾಗುವಂಥ ರೀತಿಯಲ್ಲಿ ಇಂದು ಬಜೆಟ್ ಭಾಷಣದಲ್ಲಿ ಪ್ರಸ್ತಾಪವಾಗಿದೆ. ಐಸಿಡಿಎಸ್ ನ ಮಾರ್ಗದರ್ಶಿ ಸೂತ್ರದಂತೆ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ತೆರಳಬೇಕಾದ 3 ರಿಂದ 6 ವರ್ಷ ವಯೋಮಾನದ ಮಕ್ಕಳನ್ನು ಪ್ರಾಥಮಿಕ ಶಿಕ್ಷಣ ವಿಭಾಗಕ್ಕೆ ಸೇರಿಸಿದ್ದರಿಂದ ಅಂಗನವಾಡಿ ಗಳ ಮಹತ್ವ ಇಳಿಮುಖವಾಗುತ್ತದೆ, ಹಂತಹಂತವಾಗಿ ಸಮುದಾಯದ ಕೇಂದ್ರಗಳಾದ ಅಂಗನವಾಡಿಗಳು ಮುಚ್ಚಿಹೋಗುತ್ತವೆ. ಮಾತ್ರವಲ್ಲದೆ, ಈಗಾಗಲೇ ಶಾಲಾಪೂರ್ವ ಶಿಕ್ಷಣ ನೀಡುವ ಅಂಗನವಾಡಿ ನೌರಕರು ಕೇವಲ 3 ವರ್ಷ ಒಳಗಿನವರ ಕೆಲಸಕ್ಕೆ ಸೀಮಿತವಾಗುವ ಅಪಾಯ ಈ ಬಜೆಟ್ ಘೋಷಣೆಯಲ್ಲಿ ಸ್ಪಷ್ಟವಾಗುತ್ತದೆ. ಹಾಗಾಗಿ ಈ ಪ್ರಸ್ತಾಪವನ್ನು ಸರ್ಕಾರ ಹಿಂಪಡೆಯಬೇಕು ಎಂದು ಸುನಂದಾ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *