ಹೆಚ್ಚಿನ ಯುವಕರು ಅಂಗಾಂಗ ದಾನಕ್ಕೆ ಮುಂದಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ವ್ಯಕ್ತಿ ಸತ್ತ ಮೇಲೂ ಆತನ ಅಂಗಾಂಗಳು 8 ಜೀವಗಳಿಗೆ ಉಪಯೋಗವಾಗಲಿದೆ. ಈ ಮೂಲಕ ಅಂಗಾಂಗ ದಾನ ಮಾಡಿ ಮತ್ತೊಬ್ಬರ ಜೀವಕ್ಕೆ ಮತ್ತು ಜೀವನಕ್ಕೆ ನೆರವಾಗಬಹುದು. ಚರ್ಮದಿಂದ ಹಿಡಿದು ಎಲ್ಲಾ ಅಂಗಾಂಗ ದಾನ ಮಾಡಬಹುದಾಗಿದೆ ಎಂದರು.

ಸ್ವಾಮಿ ವಿವೇಕಾನಂದರು ಹೇಳಿದಂತೆ ‘ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ’. ಮಾನವ ಜನ್ಮ ಶ್ರೇಷ್ಠವಾದುದು. ಅಂಗಾಂಗ ದಾನ ಮೂಲಕ ಈ ಶ್ರೇಷ್ಠ ಜೀವವನ್ನು ಉಳಿಸಿದಂತಾಗುತ್ತದೆ. ರಾಜ್ಯದಲ್ಲಿ ಪ್ರಸ್ತುತ 18 ಅಂಗಾಂಗ ಮರುಪಡೆಯುವಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿಮಾನ್ಸ್​​ನಲ್ಲಿ ಮೆದುಳು ದಾನ ಹಾಗೂ ಹುಬ್ಬಳ್ಳಿ ಕಿಮ್ಸ್​​ನಲ್ಲಿ ಮೂತ್ರಪಿಂಡ ದಾನಗಳನ್ನು ಮಾಡಬಹುದಾಗಿದೆ. ಇದು ಸರ್ಕಾರದ ದೊಡ್ಡ ಸಾಧನೆ. ಅಂಗಾಂಗ ದಾನ ಮಾನವೀಯತೆ ಕೆಲಸ ಎಂದರು.

ವಿಶ್ವ ಅಂಗಾಂಗ ದಾನ ದಿನಾಚರಣೆ ಹಿನ್ನೆಲೆ ಹಮ್ಮಿಕೊಂಡ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದರು. ಅಲ್ಲದೆ, ಅಂಗಾಂಗ ದಾನ ಮಾಡಿದ ಕುಟುಂಬಸ್ಥರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾರ್ಕೋನಳ್ಳಿಯ ಕೃಷ್ಣಪ್ಪ, ನವೀನ ಕುಮಾರ್ ಇವರು ಅತ್ಯಂತ ಬಡಕುಟುಂಬದವರು. ಇವರ ಕುಟುಂಬದವರು ಮಗನನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರೂ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಉದಾತ್ತ ಗುಣ ಮೆರೆದಿದ್ದಾರೆ. ಇವರ ಈ ಗುಣ ಎಲ್ಲರಿಗೂ ಅನುಕರಣೀಯ ಎಂದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ವಿಶ್ವ ಅಂಗಾಂಗ ದಾನ ದಿನಕ್ಕೆ ಚಾಲನೆ ನೀಡಿದರು. ನಂತರ ವಿಧಾನಸೌಧ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಇತರರು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ವಿಧಾನಸೌಧ ಮಾರ್ಗ ಮಧ್ಯೆ ಸಾಗುವಾಗ ವಿದ್ಯಾರ್ಥಿಗಳೆಡೆಗೆ ಕೈ ಬೀಸಿ ಶುಭ ಕೋರಿದರು.

ಸಾವಿರಾರು ವಿದ್ಯಾರ್ಥಿಗಳು ಮೇಕ್ರಿ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವನದ ವರೆಗೆ ಬೃಹತ್‌ ಮಾನವ ಸರಪಳಿ ರಚಿಸಿ. ಮೆರವಣಿಗೆ ಸಾಗಿ ಅಂಗಾಂಗ ದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ರಾಜ್ಯದ ಹಲವು ನರ್ಸಿಂಗ್ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಆರೋಗ್ಯ ಇಲಾಖೆ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *