ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಸಹಸ್ರಾರು ಅಂಗನವಾಡಿ ನೌಕರರು ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಆಗಮಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಳಿಯನ್ನೂ ಲೆಕ್ಕಿಸದೇ ಸೋಮವಾರ(ಜನವರಿ 23) ಅಹೋರಾತ್ರಿ ರಸ್ತೆಯಲ್ಲಿಯೇ ಮಲಗಿದರು.
ಇದನ್ನು ಓದಿ: ಬೇಡಿಕೆ ಈಡೇರುವವರೆಗೂ ಕದಲುವುದಿಲ್ಲವೆಂದು ಅಂಗನವಾಡಿ ನೌಕರರ ಧರಣಿ ಆರಂಭ…
ಸ್ವಾತಂತ್ರ್ಯ ಉದ್ಯಾನವನ ಪ್ರತಿಭಟನೆಗೆಂದೇ ಮೀಸಲಿಟ್ಟ ಸ್ಥಳವಾಗಿದ್ದು, ಪ್ರತಿಭಟನಾಕಾರರಿಂದ ತುಂಬಿ ಹೋಗಿದೆ. ಪಕ್ಕದ ಎರಡೂ ಬದಿ ರಸ್ತೆಗಳ ಮೇಲೂ ಪ್ರತಿಭಟನಾಕಾರರು ಕುಳಿತಿದ್ದಾರೆ. ಹಲವರು ಅಂಗನವಾಡಿ ನೌಕರರು ರಾತ್ರಿ ರಸ್ತೆಯಲ್ಲಿಯೇ ಮಲಗಿದ್ದರು. ಪ್ರತಿಭಟನಾಕಾರರು ಶೇಷಾದ್ರಿ ರಸ್ತೆಯ ಒಂದು ಭಾಗದಲ್ಲಿ ಕುಳಿತಿರುವುದರಿಂದ ಆ ಒಂದು ಭಾಗದಲ್ಲಿ ವಾಹನಗಳ ಸಂಚಾರ ಬಂದ್ ಆಗಿದೆ. ಗಾಂಧಿನಗರದ ಕಡೆ ಇರುವ ಮತ್ತೊಂದು ಬದಿಯ ರಸ್ತೆ ಸಂಪೂರ್ಣವಾಗಿ ಹೋರಾಟಗಾರು ಕುಳಿತಿದ್ದಾರೆ.
ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅವರು ‘ರಾಜ್ಯದ ಮಕ್ಕಳ ಬೆಳವಣಿಗೆಗೆ ಅಂಗನವಾಡಿಗಳು ಕೊಡುಗೆ ನೀಡುತ್ತಿವೆ. ಅನ್ನದ ಕೇಂದ್ರಗಳಾಗಿರುವ ಅಂಗನವಾಡಿಗಳನ್ನು ಅಕ್ಷರ ಕೇಂದ್ರಗಳಾಗಿ ಮಾರ್ಪಡಿಸಬೇಕು. ಕಾರ್ಯಕರ್ತೆಯರನ್ನು ಸರ್ಕಾರಿ ಶಿಕ್ಷಕಿಯರೆಂದು ಪರಿಗಣಿಸಿ, ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಮುಗ್ಧತೆ ಬಿಟ್ಟು ಚಾಮುಂಡಿ ಅವತಾರ ತಾಳಬೇಕು: ಸಿನಿಮಾ ಕಲಾವಿದೆ ಪಂಕಜ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರಂಗಭೂಮಿ, ಸಿನಿಮಾ ಮತ್ತು ಟಿವಿ ಧಾರವಾಹಿ ಕಲಾವಿದೆ ಪಂಕಜ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತಾಡಿದ ಅವರು, ‘ಅಂಗನವಾಡಿ ನೌಕರರನ್ನು ಸರ್ಕಾರ ಕಾರ್ಮಿಕರು ಎಂದು ಪರಿಗಣಿಸಬೇಕು ಎಂಬುದು ನಿಮ್ಮ ಹಕ್ಕು. ಈ ನಿಮ್ಮ ಹಕ್ಕುಗಳನ್ನು ಪಡೆಯಲು ಬೆಂಗಳೂರಿಗೆ ಬಂದು ಹಗಲು-ರಾತ್ರಿ ಹೋರಾಟದಲ್ಲಿ ತೊಡಗಿದ್ದೀರಿ. ನೀವು ನಿಮ್ಮ ಮುಗ್ಧತೆ ಬಿಟ್ಟು ಚಾಮುಂಡಿ, ಅವತಾರ ತಾಳಬೇಕು. ಆಳುವವರ ಕುತ್ತಿಗೆ ಪಟ್ಟಿಹಿಡಿದು ನಿಮ್ಮ ಹಕ್ಕುಗಳನ್ನು ಕೇಳಬೇಕು’ ಎಂದು ಕರೆಕೊಟ್ಟ ಅವರು, ನಿಮ್ಮ ಹೋರಾಟದ ಜೊತೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಂತೇಶ್ ಮಾತನಾಡಿ, ಅಂಗನವಾಡಿ ನೌಕರರನ್ನು ಕಾರ್ಮಿಕರು ಎಂದು ಪರಿಗಣಿಸಿದರೆ, ಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಪಡೆಯುವ ಹಕ್ಕು ಸಿಗುತ್ತದೆ. ಸರ್ಕಾರ ನಿಮ್ಮನ್ನು ಕಾರ್ಮಿಕರು ಎಂದು ಪರಿಗಣಿಸಬೇಕು ಎಂದರು.
ಇದನ್ನು ಓದಿ: 2023 ಜನವರಿ 23 ರಿಂದ ಅಂಗನವಾಡಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ: ಈ ಮುಷ್ಕರ ಯಾಕೆ?
ಗ್ರ್ಯಾಚುಟಿ ಕೊಡಲು ಹಣವಿಲ್ಲ ಎನ್ನುವ ಸರ್ಕಾರದ ವಾದವನ್ನು ಒಪ್ಪಲಾಗುವುದಿಲ್ಲ. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇರಿ ಒಟ್ಟು ಒಂದೂವರೆ ಲಕ್ಷ ನೌಕರರು ಇದ್ದಾರೆ. ಅಂದಾಜಿನ ಪ್ರಕಾರ ವರ್ಷದಲ್ಲಿ 2 ಸಾವಿರ ನೌಕರರು ನಿವೃತ್ತಿ ಹೊಂದುತ್ತಾರೆ. ಇವರಿಗೆ ಇಂದಿನ ವೇತನದ ಅನುಸಾರವಾಗಿ ಗ್ರ್ಯಾಚುಟಿ ನೀಡಿದರೆ 300 ಕೋಟಿ ರೂಪಾಯಿಗಳು ಬೇಕಾಗುತ್ತದೆ. ಸರ್ಕಾರಕ್ಕೆ ಇದೇನೂ ದೊಡ್ಡ ಮೊತ್ತವಲ್ಲ. ರಾಜ್ಯ ಸರ್ಕಾರದ ವಾರ್ಷಿಕ ಆದಾಯ 2 ಲಕ್ಷ ಕೋಟಿ ರೂಪಾಯಿ. ಕೇಂದ್ರ ಸರ್ಕಾರದ ವಾರ್ಷಿಕ ಆದಾಯ 15 ಲಕ್ಷ ಕೋಟಿ ರೂಪಾಯಿ. ನಾವು ಅಂಗನವಾಡಿ ನೌಕರರಿಗಾಗಿ ಕೇಳುವುದು ಕೆರೆ ನೀರಿನಲ್ಲಿ ಒಂದು ಬೊಗಸೆ ನೀರಷ್ಟೆ ಎಂದರು.
ಜನವರಿ 24 ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಅಂಗನವಾಡಿ ನೌಕರರು ಕೇಕ್ ಕತ್ತರಿಸಿ, ಘೋಷಣೆ ಕೂಗಿ ಆಚರಣೆ ಮಾಡಿದರು.
ಅಂಗನವಾಡಿ ನೌಕರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ಎಸ್ ಸುನಂದಾ, ಯಮುನಾ ಗಾಂವ್ಕರ್, ಶಾಂತಾ ಎನ್.ಘಂಟೆ, ಟಿ.ಲೀಲಾವತಿ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.
ವರದಿ: ಸಿ. ಸಿದ್ದಯ್ಯ
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ