ಹಾಸನ: ಮುಂಬಡ್ತಿ ಹಾಗೂ ವರ್ಗಾವಣೆಗೆ ಆಗ್ರಹಿಸಿ ಅಂಗನವಾಡಿ ನೌಕರರರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತದ್ದ ವೇಳೆ ಪ್ರತಿಭಟನೆಕಾರರ ಜೊತೆ ಶಾಸಕ ಎಚ್‌ಡಿ ರೇವಣ್ಣ ಅನುಚಿತವಾಗಿ ವರ್ತಿಸಿದ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ.
ಸಿಡಿಪಿಒ ಕಚೇರಿಗೆ ಶಾಸಕ ಎಚ್.ಡಿ.ರೇವಣ್ಣ ಭೇಟಿ ನೀಡಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಜಿ.ಪಿ.ಶೈಲಜಾ ಅವರ ಜತೆ ಮಾತನಾಡಿ, ಸಿಡಿಪಿಒಗೆ ವರ್ಗಾವಣೆ ಮಾಡುವ ಹಕ್ಕಿಲ್ಲ, ನೀವುಗಳು ಹೇಳಿಕೆ ಮಾತುಗಳನ್ನು ಕೇಳಿಕೊಂಡು ಧರಣಿ ನಡೆಸುತ್ತಿದ್ದೀರಿ. ಇಲ್ಲಿಯ ತನಕ ನಿಮ್ಮಗಳ ಬಗ್ಗೆ ದೂರುಗಳು ಬಂದರೂ ಕ್ರಮಕ್ಕೆ ಸೂಚಿಸಿರಲಿಲ್ಲ, ಇಂದು ವಿನಾಕಾರಣ ಧರಣಿ ನಡೆಸುತ್ತಿದ್ದೀರಿ, ಧರಣಿ ನಡೆಸಿ, ಏನು ಮಾಡಬೇಕು ಎಂದು ನನಗೆ ಗೊತ್ತಿದೆ ಎಂದು ರೇಗಿದರು.
ಜಿಲ್ಲಾ ಮುಖಂಡ ಪೃಥ್ವಿ ಎಂಬುವರ ಜತೆಯಲ್ಲಿ ವಾದ ಮಾಡುತ್ತಾ ನನ್ನ ಕ್ಷೇತ್ರದಲ್ಲಿ ನಿಂದೇನು ಕೆಲಸ, ಕಾರ್ಯಕರ್ತೆಯರ ಕಾರ್ಯವೈಖರಿ ಬಗ್ಗೆ ನನಗೆ ಗೊತ್ತಿದೆ, ಧರಣಿ ನಿರತ ಕಾರ್ಯಕರ್ತೆಯರ ಉದ್ದೇಶಿಸಿ ಇಲ್ಲಿ ತನಕ ನಿಮ್ಮನ್ನ ನಂಬಿದೆ, ಇನ್ನು ಮುಂದೆ ಹೇಗೆ ಬಲಿ ಹಾಕಬೇಕು ಗೊತ್ತಿದೆ, ಎಂದು ರೇಗಿದರು. ಇವರಿಗೆ ರಜಾ ಮಂಜೂರು ಮಾಡಿದ್ದೀರ, ಇಂದು ಎಲ್ಲರಿಗೂ ಗೈರು ಹಾಜರಿ ಹಾಕಿ, ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಆಹಾರಧಾನ್ಯ ಹಾಗೂ ಇತರೆ ವಸ್ತುಗಳ ವಿತರಣೆಯಲ್ಲಿ ವ್ಯತ್ಯಯವಾದಾಗ ಗ್ರಾಮೀಣ ಜನರಿಂದ ದೂರು ಕೊಡಿಸಿ, ಕೇಸು ದಾಖಲಿಸಿ, ಕೆಲವರನ್ನು ವಜಾ ಗೊಳಿಸಿದರೆ ಬುದ್ದಿ ಕಲಿಯುತ್ತಾರೆ ಎಂದು ಸಿಟ್ಟಿನಿಂದ ತೆರಳಿದರು.
ಸುದ್ದಿಗಾರರ ಜತೆಯಲ್ಲಿ ಮಾತನಾಡಿ ಇವರುಗಳು ರಾಜಕಿಯ ಮಾಡುವುದಾದರೆ ಮಾಡಲಿ, ಆದರೆ ಸೌಮ್ಯ ಸ್ವಭಾವದ ಹಾಗೂ ಕರ್ತವ್ಯದಲ್ಲಿ ನಿಷ್ಠೆ ತೋರುವ ಸಿಡಿಪಿಒ ಪ್ರಸನ್ನ ವಿರುದ್ಧ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ, ಇದು ಎಷ್ಟು ಸರಿ. ಇಲ್ಲಿಯ ತನಕ ಅಂಗನವಾಡಿ ಕೇಂದ್ರಗಳ ಬಗ್ಗೆ, ಸೌಲಭ್ಯಗಳ ವಿತರಣೆ ಬಗ್ಗೆ ಇಲ್ಲಿಯ ತನಕ ಕೇಳಿಲ್ಲ, ಕೆಲವು ಪ್ರದೇಶಗಳಲ್ಲಿ ಮೊಟ್ಟೆ ಹಣ್ಣು ವಿತರಣೆ ಮಾಡುತ್ತಿಲ್ಲ, ಇದರ ಬಗ್ಗೆ ಪ್ರಶ್ನಿಸಿದ್ದೀವಾ ಎಂದರು. ಅತ್ತಿಚೌಡೇನಹಳ್ಳಿ ಗ್ರಾಮದ ಮಹಿಳೆ ವಿಷ ಸೇವಿಸುತ್ತೇನೆ ಎಂದು ಹೆದರಿಸುತ್ತಾರೆ, ದಾಳಗೌಡನಹಳ್ಳಿ ಗ್ರಾಮದಲ್ಲಿ ಬಾಗಿಲೇ ತೆರೆಯೊಲ್ಲ ಎಂಬ ದೂರಿದೆ. ಐದು ಸಲ ಅರ್ಜಿ ಆಹ್ವಾನ ಮಾಡಿದ್ದರೂ ಬಂದಿಲ್ಲ, ಏನು ಮಾಡಲು ಸಾಧ್ಯ, ಆದರೆ ಈ ರೀತಿಯ ಬೆದರಿಕೆ ತಂತ್ರ ಮತ್ತು ಅವರ ವರ್ತನೆ ಸರಿಯಿಲ್ಲವೆಂದರು.