ಸಕಲೇಶಪುರದಲ್ಲಿ ನಿಲ್ಲದ ಕಾಡಾನೆ ಹಾವಳಿ : ಆನೆ ದಾಳಿಗೆ ಇಬ್ಬರು ಮೃತ್ಯು

ಸಕಲೇಶಪುರಹೆತ್ತೂರು ಹೋಬಳಿಯ ಕಲ್ಲತೋಟ ಗ್ರಾಮದಲ್ಲಿ ಕಾಡಾನೆ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೇರಳ ಮೂಲದ ರಾಮಕೃಷ್ಣ (70) ಮೃತ ವ್ಯಕ್ತಿ. ಗ್ರಾಮದ ರಾಜದೀಪ ಎಂಬುವವರ ಕಾಫಿತೋಟದಲ್ಲಿ ರೈಟರ್ ಆಗಿದ್ದ ಈ ವ್ಯಕ್ತಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಹಿನ್ನಲೆಯಲ್ಲಿ ತೋಟದ ಮಾಲೀಕರು ತೋಟಕ್ಕೆ ಬಂದ ವೇಳೆ ತೋಟದಲ್ಲಿನ ಮನೆಯ ಅನತಿ ದೂರದಲ್ಲಿ ಆನೆ ತುಳಿತಕ್ಕೆ ಬಲಿಯಾಗಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಯಸಳೂರು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸರು,ಶಾಸಕ ಎಚ್.ಕೆ ಕುಮಾರಸ್ವಾಮಿ,ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಜೆ ಸಚ್ಚಿನ್,ಕಾರ್ಯಾದರ್ಶಿ ಶ್ರೀಧರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಈ ಘಟನೆ ಮಾಸುವ ಮುನ್ನವೇ,   ತಾಲೂಕಿನ ಸುಳ್ಳಕ್ಕಿ ಗ್ರಾಮ ಮೇಗಲ ಕೇರಿಯಲ್ಲಿ ಮಂಜುನಾಥ (54) ರೈತ ಬೆಳಗ್ಗೆ ಗದ್ದೆಗೆ ತೆರಳುವ ವೇಳೆ ಆನೆ ದಾಳಿಯಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : “ಆನೆ ಮತ್ತು ಮಾನವ ಸಂಘರ್ಷ – ಕಾರಣ ಮತ್ತು ಪರಿಹಾರ”

ತೀವ್ರ ಆಕ್ರೋಶ: ಈಗಾಗಲೇ ಏಲಕ್ಕಿ ಬೆಳೆ ನಾಶದಿಂದ ಕಂಗೆಟ್ಟಿದ್ದ ಈ ಭಾಗದ ಜನರು ಈಗ ಕಾಡಾನೆ ಸಮಸ್ಯೆಯಿಂದ ನರಳುತ್ತಿದ್ದೇವೆ. ಇದುವರೆಗೆ ನಾಲ್ಕರಿಂದ ಐದು ಕಾಡಾನೆಗಳಿದ್ದ ಪ್ರದೇಶಕ್ಕೆ ಬೇರೆಡೆಯಿಂದ 20 ಕ್ಕೂ ಅಧಿಕ ಆನೆಗಳು ಆಗಮಿಸಿದ್ದು ಮನೆಯಿಂದ ಹೊರಬರಲಾರದಂತ ಪರಿಸ್ಥಿತಿ ಸೃಷ್ಠಿಸಿವೆ. ಇಲ್ಲಿಂದ ಎಲ್ಲಾ ಕಾಡಾನೆ ಗಳನ್ನು ಸ್ಥಳಾಂತರಿಸಿ ನಾವು ಬದುಕಲು ಅವಕಾಶ ಕಲ್ಪಿಸಿ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಸಳೂರು ಪೋಲಿಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

ಪೊಲೀಸರಿಂದ ಬೆದರಿಕೆ: ಕಲ್ಲತೋಟ ಗ್ರಾಮದಲ್ಲಿ ಕಾಡಾನೆ ತುಳಿತಕ್ಕೆ ವ್ಯಕ್ತಿ ಬಲಿಯಾಗಿದ್ದಾನೆ ಎಂದು ಅರೋಪಿಸಿ ಸುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಶಾಸಕರು ಅಗಮಿಸಬೇಕು ಎಂದು ಪಟ್ಟು ಹಿಡಿದು ಮೃತ ದೇಹ ಮೇಲೆತ್ತಲು ಅವಕಾಶ ನೀಡಿರಲಿಲ್ಲ. ಈ ವೇಳೆ ಯಸಳೂರು ಪೊಲೀಸರು ಮೃತದೇಹದ ಮೇಲೆ ಕಾಡಾನೆ ತುಳಿದಿರುವುದಕ್ಕೆ ಯಾವುದೆ ಗಾಯಗಳಿಲ್ಲ ಮರಣೋತ್ತರ ಪರೀಕ್ಷೆಯಲ್ಲಿ ಕಾಡಾನೆ ತುಳಿದಿಲ್ಲ ಎಂದು ವರದಿ ಬಂದರೆ ಕಾಫಿತೋಟದ ಮಾಲೀಕ ಸೇರಿದಂತೆ ಪ್ರತಿಭಟನೆಯ ನೇತೃತ್ವ ವಹಿಸಿರುವ ಎಲ್ಲರ ಮೇಲೆ ದೂರು ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *