ಆಣೆ ಪ್ರಮಾಣದ ಬಗ್ಗೆ ಆರೋಪ-ಪ್ರತ್ಯಾರೋಪಕ್ಕೆ ಮುಂದಾಗಿರುವ ಸಿದ್ಧು-ಹೆಚ್‌ಡಿಕೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಸರಣಿ ಟ್ವೀಟ್‌ ಮಾಡುವ ಮೂಲಕ ಪ್ರತ್ಯೂತ್ತರ ನೀಡಿದ್ದಾರೆ. ಸಿದ್ಧರಾಮಯ್ಯ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಎಚ್‌.ಡಿ. ಕುಮಾರಸ್ವಾಮಿ ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇಬ್ಬರ ನಡುವಿನ ರಾಜಕೀಯ ಟ್ವೀಟ್ ಸಮರ, ವಾಕ್ಸಮರ ತಾರಕ್ಕೇರಿದೆ.

ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ- ಟೀಮ್ ಎಂದು ಹೇಳಿದ್ದರು. ಇದಕ್ಕೆ ಕುಮಾರಸ್ವಾಮಿ ಅವರು ‘ಹೆಸರಲ್ಲಿ ರಾಮ! ಉಂಡಮನೆಗೆ ಪಂಗನಾಮ’ ಎಂದು ಸಿದ್ದರಾಮಯ್ಯ ವಿರುದ್ಧ ಟ್ವೀಟ್‌ ಮಾಡಿದ್ದರು.

ಇದನ್ನು ಓದಿ: ಉಂಡ ಮನೆಗೆ ಮೂರು ಬಗೆದ ನೈಜ ಕಳ್ಳ; ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ ಹೆಚ್​ ಡಿ ಕುಮಾರಸ್ವಾಮಿ

ಎಚ್‌.ಡಿ. ಕುಮಾರಸ್ವಾಮಿ ಅವರ ಸರಣಿ ಟ್ವೀಟ್‌ಗೆ ಸಿದ್ದರಾಮಯ್ಯ ಅವರು, ‘ವಚನಭಂಗದ ನಿಮ್ಮ ಇತಿಹಾಸವನ್ನು ಕಂಡ ನಾಡಿನ ಜನತೆ ಸುಲಭದಲ್ಲಿ ನಿಮ್ಮನ್ನು ನಂಬಲಾರರು. ನಂಬಿಕೆ ಹುಟ್ಟಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಿಮ್ಮ ತಂದೆ ಎಚ್‌ಡಿ. ದೇವೇಗೌಡ ಅವರ ಮೇಲೆ ಆಣೆ ಮಾಡಿ ಘೋಷಿಸಲು ಸಿದ್ದ ಇದ್ದೀರಾ? ಎಚ್‌.ಡಿ. ಕುಮಾರಸ್ವಾಮಿ ಅವರೇ’ ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಇಂದು ನಡೆಯುತ್ತಿರುವ ಜಾತ್ಯತೀತತೆ ಮತ್ತು ಕೋಮುವಾದದ ನಡುವಿನ ನಿರ್ಣಾಯಕ ಹೋರಾಟದಲ್ಲಿ ನಾವೆಲ್ಲಿ ನಿಂತಿದ್ದೇವೆ ಎನ್ನುವುದನ್ನು ಜನತೆಗೆ ತಿಳಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ನಿತ್ಯ ನನ್ನ ವಿರುದ್ದ ನಂಜು ಕಾರುತ್ತಿರುವ ಕುಮಾರಸ್ವಾಮಿಯವರೇ ನೀವೆಲ್ಲಿ ನಿಂತಿದ್ದೀರಿ? ಎಂದು ಮೊದಲು ಹೇಳಿ. ನಿಮ್ಮದು ಜಾತ್ಯತೀತತೆಗೆ ಬದ್ಧವಾಗಿರುವ ಪಕ್ಷ ಎಂದು ಹೇಳುತ್ತಲೇ ಬಂದಿದ್ದೀರಿ. ಹಾಗಿದ್ದರೆ, ಮುಂದಿನ ದಿನಗಳಲ್ಲಿ ನಿಮ್ಮ ಪಕ್ಷ ಬಿಜೆಪಿಯ ಜೊತೆ ಚುನಾವಣಾ ಪೂರ್ವ ಇಲ್ಲವೇ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಲು ಸಿದ್ಧ ಇದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಜೊತೆ ಎಂದೆಂದೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನೀವು ಘೋಷಿಸಿಬಿಟ್ಟರೆ ನಿಮ್ಮ ಪಕ್ಷ ಬಿಜೆಪಿಯ ‘ಬಿ-ಟೀಮ್’ ಎಂಬ ಆರೋಪವನ್ನು ಕೂಡಾ ಸುಳ್ಳು ಎಂದು ಸಾಬೀತು ಮಾಡಿದಂತಾಗುತ್ತದೆ. ನಿಮ್ಮ ಪಕ್ಷದ ಹೆಸರು ಕೂಡಾ ಅರ್ಥಪೂರ್ಣವಾಗುತ್ತದೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಗೋಮುಖ ವ್ಯಾಘ್ರರೇ ಸುತ್ತ ಕುಣಿದಾಡುತ್ತಿರುವ ಈ ಸಂದರ್ಭದಲ್ಲಿ ಜನ ಪ್ರತಿಯೊಬ್ಬರನ್ನೂ ಸಂಶಯದಿಂದ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಅಸಲಿ ಮುಖವನ್ನು ಜನರ ಮುಂದೆ ತೆರೆದಿಟ್ಟು ಅವರ ವಿಶ್ವಾಸವನ್ನು ಗಳಿಸಿ, ನಮ್ಮ ಹೋರಾಟದಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕಾಗಿದೆ.

ಉಳಿದುದೆಲ್ಲವನ್ನೂ ಪಕ್ಕಕ್ಕಿಟ್ಟು ನನ್ನ ವಿರುದ್ಧದ ವೈಯಕ್ತಿಕ ನಿಂದೆ, ವಿಕೃತ ಮನಸ್ಸಿನ ಹಳಹಳಿಕೆ ಮತ್ತು ಸುಳ್ಳುಗಳಿಂದ ಕೂಡಿದ ಅಭಿಯಾನವನ್ನೇ ನೀವು ಮುಂದುವರಿಸುವುದಾದರೆ ಹಾಗೆಯೇ ಮಾಡಿ ಕುಮಾರಸ್ವಾಮಿ ಅವರೇ ಸಾರ್ವಜನಿಕ ಜೀವನದಲ್ಲಿರುವ ನಮ್ಮನ್ನು – ನಿಮ್ಮನ್ನು ಜನ ನೋಡಿದ್ದಾರೆ. ಅವರು ತೀರ್ಮಾನಿಸುತ್ತಾರೆ ಎಂದು ಸಿದ್ದರಾಮಯ್ಯ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಆಣೆ ಮಾಡಲು ಹೇಳಕ್ಕೆ ನೀನು ಯಾರು?;ಹೆಚ್ಡಿ ಕುಮಾರಸ್ವಾಮಿ

ದೇವೇಗೌಡರ ಮೇಲೆ ಆಣೆ ಮಾಡುವುದಕ್ಕೆ ಹೇಳುತ್ತಾರೆ. ಇದನ್ನು ಹೇಳಲು ಸಿದ್ದರಾಮಯ್ಯ ನೀನು ಯಾವೂರು ದಾಸಯ್ಯ. ಸಿದ್ದರಾಮಯ್ಯ ಎಚ್ಚರಿಕೆಯಿಂದ ಮಾತನಾಡಬೇಕು. ಪದೇಪದೆ ಜೆಡಿಎಸ್ ಅನ್ನು ಬಿಜೆಪಿ ಬಿ ಟೀಂ ಎನ್ನುತ್ತೀರಿ. ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರ ಬಂದಿದ್ದು ಯಾರಿಂದ. ಸಂಪುಟ ವಿಸ್ತರಣೆಯ ವೇಳೆ ಟವಲ್ ಕೊಡವಿ ಎದ್ದಿದ್ದರು. ಇಬ್ಬರು ಪಕ್ಷೇತರರನ್ನು ಮಂತ್ರಿ ಮಾಡಿಸಿ ಸರ್ಕಾರ ಕಿತ್ತರು. ಸಮ್ಮಿಶ್ರ ಸರ್ಕಾರ ಬೀಳುವುದಕ್ಕೆ ಇವರೇ ಮೂಲ ಕಾರಣ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬಿಜೆಪಿ ಜತೆ ಮೈತ್ರಿ ವಿಚಾರವಾಗಿ ಹೆಚ್ ಡಿ ದೇವೇಗೌಡರ ಮೇಲೆ ಆಣೆ ಮಾಡಲು ಸಿದ್ಧರಿದ್ದೀರಾ? ಎಂಬ ಬಗ್ಗೆ ಸುಳ್ಳಿನ ರಾಮಯ್ಯ ನಾನು ಕೇಳಿದ 4 ಪ್ರಶ್ನೆಗಳಿಗೆ ಉತ್ತರಿಸಲಿ. ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಸ್ವಲ್ಪ ಉಸಿರಾಡುತ್ತಿದೆ. ಇವರು ಯಾವ ಕೋಮುವಾದ ನಿಲ್ಲಿಸುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಇವರ ಪಕ್ಷದವರೇ ಹೋಗಿ ಡಿ.ಜೆ.ಹಳ್ಳಿಯಲ್ಲಿ ಬೆಂಕಿ ಹಚ್ಚಿದ್ದರು. ಈಗ ಹುಬ್ಬಳ್ಳಿಯಲ್ಲೂ ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಇಂತಹವರು ದೇಶದಲ್ಲಿ ಜಾತ್ಯತೀತ ವಾದವನ್ನು ಉಳಿಸುತ್ತಾರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *