ಆ ಮುಸ್ಲೀಮ ಇಲ್ಲದೇ ಇದ್ದರೆ ಇವತ್ತು ಕಾಪುವಿನಲ್ಲಿ ಮಾರಿಗುಡಿಯೇ ಇರುತ್ತಿರಲಿಲ್ಲ?!

ನವೀನ್ ಸೂರಿಂಜೆ

ಉಡುಪಿ ಐತಿಹಾಸಿಕ ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಅವಕಾಶ ಇಲ್ಲ ಎಂದು ಸೂಚನೆ ಹೊರಡಿಸಲಾಗಿದೆ. ಹಿಂದೂ ಜಾಗರಣ ವೇದಿಕೆಯ ಮನವಿಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.

“ಹೌದಲ್ವಾ ! ಹಿಂದೂಗಳ ಜಾತ್ರೆಯಲ್ಲಿ ಮುಸ್ಲೀಮರು ಯಾಕೆ ಅಂಗಡಿ ಹಾಕಬೇಕು?” ಎಂದು ಈಗಿನ ಯುವ ಸಮುದಾಯ ಮುಸ್ಲಿಂ ವ್ಯಾಪಾರಿಗಳಿಗೆ ಹಾಕಲಾದ ನಿರ್ಬಂಧವನ್ನು ಬೆಂಬಲಿಸುತ್ತಿದ್ದಾರೆ. “ಇದು ಹಿಂದೂಗಳ ಒಗ್ಗಟ್ಟು, ಇದು ಹಿಂದೂಗಳ ತಾಕತ್ತು” ಎಂದು ಈಗಿನ ಯುವಕರು ಸಂಭ್ರಮಿಸಬಹುದು. ಆದರೆ ಕಾಪುವಿಗೆ ಮಾರಿಯಮ್ಮ ಬಂದಿದ್ದು ಹೇಗೆ? ಮಾರಿಯಮ್ಮಳಿಗಾಗಿ ಕಾಪುವಿನಲ್ಲಿ ಹಿಂದೂಗಳನ್ನು ಒಗ್ಗಟ್ಟು ಮಾಡಿದ್ದು ಯಾರು? ಎಂಬ ಜನಪದ ಅಥವಾ ಇತಿಹಾಸವನ್ನು ಈಗಿನ ಸಮುದಾಯ ಅರಿಯಬೇಕು.

ಅವತ್ತು ಆ ಮುಸ್ಲೀಮ ಇಲ್ಲದೇ ಇದ್ದರೆ ಇವತ್ತು ಕಾಪುವಿನಲ್ಲಿ ಮಾರಿಗುಡಿಯೇ ಇರುತ್ತಿರಲಿಲ್ಲ. ಅವತ್ತು ಜಾತಿಯ ಕಾರಣಕ್ಕಾಗಿ ಚದುರಿ ಹೋಗಿದ್ದ ಹಿಂದೂಗಳನ್ನು ಒಂದು ಮಾಡಿ ಮಾರಿ ಗುಡಿ ಕಟ್ಟಿಸುವಂತೆ ಹುರಿದುಂಬಿಸಿದ್ದೇ ಒಬ್ಬ ಮುಸ್ಲೀಮ ಎಂಬುದು ಇತಿಹಾಸ… ಕಾಪುವಿನ ಕಾರ್ಣಿಕದ ಮಾರಿಯಮ್ಮ ಮೊದಲ ಬಾರಿ ಮನುಷ್ಯನೊಂದಿಗೆ ಮಾತನಾಡಿದ್ದರೆ ಅದು ಮುಸ್ಲೀಮನೊಂದಿಗೆ ಎಂಬುದು ಜನಪದ ಕತೆ ಹೇಳುತ್ತದೆ.

ಬಸಪ್ಪ ನಾಯಕನು ಕರಾವಳಿಯನ್ನು ಆಳುತ್ತಿದ್ದ ದಿನಗಳಲ್ಲಿ ಕಾಪುವಿನಲ್ಲಿ ಕೋಟೆಗಳನ್ನು ಕಟ್ಟಿದನು. ಕಾಪು ಎಂದರೆ ತುಳುವಿನಲ್ಲಿ ಕಾಯುವುದು ಎಂದರ್ಥ. ಸೈನಿಕರು ಕೋಟೆ ಕಾಯುವಿಕೆಯನ್ನು ಇದು ಸಂಕೇತಿಸುತ್ತದೆ.

ಬಸಪ್ಪ ನಾಯಕ ಕಟ್ಟಿಸಿದ ಕೋಟೆಯೊಳಗಿನ ಕೆರೆಯಲ್ಲಿ ರಾತ್ರಿ ಯಾರೋ ಸ್ನಾನ ಮಾಡುತ್ತಿರುವ ನೀರಿನ ಸದ್ದು ಕೇಳಿಸುತ್ತದೆಯಂತೆ. ಜೊತೆಗೆ ಕೆರೆಯ ಕಡೆಯಿಂದ ಮಲ್ಲಿಗೆಯ ಪರಿಮಳ ಬರುತ್ತಿರುತ್ತದೆ. ಸೇನೆಯಲ್ಲಿದ್ದ ಮುಸ್ಲಿಂ ಉಗ್ರಾಣಿಯು ಕೆರೆಯ ಬಳಿ ಹೋಗಿ “ಯಾರು ಯಾರದು?” ಎಂದು ಪ್ರಶ್ನಿಸುತ್ತಾನಂತೆ. ಅದಕ್ಕೆ ಕೆರೆಯಿಂದ “ನಾನು ಮಾರಿ. ನನಗೆ ಇರಲು ನೆಲೆ ಬೇಕು” ಎನ್ನುವ ಅಶರೀರವಾಣಿ ಕೇಳಿಸುತ್ತದೆಯಂತೆ. “ಇದು ಕೋಟೆ ಕಣಮ್ಮಾ. ಸೈನಿಕರಷ್ಟೇ ಇರ್ತಾರೆ. ನೆಲೆ ಹೇಗೆ ಒದಗಿಸಲಿ. ಅದಲ್ಲದೆ ನಾನೊಬ್ಬ ಮುಸ್ಲೀಮ” ಎಂದು ಮುಸ್ಲಿಂ ಉಗ್ರಾಣಿ ಅಸಹಾಯಕತೆ ವ್ಯಕ್ತಪಡಿಸಿದಾಗ “ನೀನು ಈ ಊರಿನ ನಾಲ್ಕು ಜಾತಿಗಳನ್ನು ಒಟ್ಟುಗೂಡಿಸಿ ನನಗೆ ಗುಡಿ ಕಟ್ಟು” ಎಂದು ಮಾರಿ ನುಡಿಯುತ್ತಾಳೆ. ಇದು ಜನಪದ ಕತೆ ಮತ್ತು ಜನರ ನಂಬಿಕೆ.

ಬಸಪ್ಪ ನಾಯಕ ಕಟ್ಟಿಸಿದ ಕೋಟೆಯಲ್ಲಿದ್ದ ಮುಸ್ಲಿಂ ಉಗ್ರಾಣಿಯು ಮಾರಿಯ ಮಾತು ಕೇಳಿ ಸುಮ್ಮನಿರಬಹುದಿತ್ತು. ಆದರೆ ಹಾಗೆ ಮಾಡದೇ ಹಿಂದೂ ಸಮುದಾಯದ ನಾಲ್ಕು ಜಾತಿಗಳನ್ನು ಒಗ್ಗೂಡಿಸುತ್ತಾನೆ. ಈಗಿನ ಕಾಲದಲ್ಲೇ ಹಿಂದೂ ಧರ್ಮದ ನಾಲ್ಕು ಜಾತಿಗಳನ್ನು ಒಟ್ಟು ಸೇರಿಸುವುದು ಕಷ್ಟ. ಅಂತದ್ದರಲ್ಲಿ ಸುಮಾರು ಕ್ರಿ ಶ. 1740 ಅವಧಿಯಲ್ಲಿ ಬಸಪ್ಪ ನಾಯಕನ ಸೈನ್ಯದಲ್ಲಿದ್ದ ಮುಸ್ಲೀಮನೊಬ್ಬ ಐದು ಜಾತಿಗಳನ್ನು ಒಟ್ಟುಗೂಡಿಸಿ ಕಾಪು ಮಾರಿಗುಡಿಯನ್ನು ನಿರ್ಮಿಸುತ್ತಾನೆ.

ಆ ಬಳಿಕ ಕರಾವಳಿಯಲ್ಲಿ ಟಿಪ್ಪುವಿನ ಆಡಳಿತ ಬರುತ್ತದೆ. ಕಾಪು ಕೋಟೆ ಟಿಪ್ಪುವಿನ ವಶವಾದ ಬಳಿಕ ಸೈನಿಕರು ನಿತ್ಯ ಕಾಪು ಮಾರಿಯಮ್ಮನಿಗೆ ಪೂಜೆ ಮಾಡಲು ಶುರು ಮಾಡಿದರು. ಆ ಸಂದರ್ಭದಲ್ಲೇ ಕಾಪು ಮಾರಿಯಮ್ಮಳನ್ನು ಕಾಪುದಪ್ಪೆ (ಕಾಯುವ ತಾಯಿ ಅಥವಾ ಕಾಪುವಿನ ತಾಯಿ) ಎಂದು ಕರೆಯಲಾಗುತ್ತದೆ. ಅದನ್ನು ಹವಾಲ್ದಾರ್ ಪೂಜೆ ಎನ್ನುತ್ತಾರೆ. ಈಗಲೂ ಚಾಲ್ತಿಯಲ್ಲಿ ಇದೆ ಎಂದು ಭಾವಿಸುತ್ತೇನೆ. ಟಿಪ್ಪುವಿನ ಕಾಲದ ಖಡ್ಗಗಳು ಈಗಲೂ ಕಾಪು ಕೋಟೆ ಮಾರಿಯಮ್ಮನ ಮೂಲ ಸನ್ನಿದಿಯಲ್ಲಿದ್ದು ಅದಕ್ಕೆ ಈಗಲೂ ಪೂಜೆ ನಡೆಯುತ್ತಿದೆ ಎಂದು ಮಾಹಿತಿ ಇದೆ.

ಅವತ್ತು ಆ ಮುಸ್ಲಿಂ ಉಗ್ರಾಣಿ ಇಲ್ಲದೇ ಇದ್ದರೆ ಇವತ್ತು ಕಾಪುವಿನಲ್ಲಿ ಮಾರಿಗುಡಿಯೇ ಇರುತ್ತಿರಲಿಲ್ಲ. ಅವತ್ತು ಟಿಪ್ಪು ಇಲ್ಲದೇ ಇರುತ್ತಿದ್ದರೆ ಕಾಪು ಮಾರಿಗುಡಿಗೆ ಐತಿಹಾಸಿಕ ಪ್ರಾಧಾನ್ಯತೆ ಬರುತ್ತಿರಲಿಲ್ಲ. ಕಾಪು ಮಾರಿಯಮ್ಮಳ ಮೊದಲ ಧ್ವನಿ ಮತ್ತು ಅಕೆ ಮುಡಿದ ಮಲ್ಲಿಗೆಯ ಘಮ ಮುಸ್ಲಿಂ ಉಗ್ರಾಣಿಗೆ ಮೊದಲು ಗೊತ್ತಾಗಿದ್ದಕ್ಕೋ ಏನೋ, ಕಳೆದ ವರ್ಷದವರೆಗೂ ಕಾಪು ಮಾರಿಯಮ್ಮ ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳ ಮಲ್ಲಿಗೆ ಅಂಗಡಿ ಇರಲೇಬೇಕಿತ್ತು. ಬಹುಶಃ ಮುಸ್ಲಿಮರ ಅಂಗಡಿಯಿಂದ ಮಲ್ಲಿಗೆ ಬಂದರೆ ಮಾತ್ರ ದೇವಿಗೆ ಸಮಾಧಾನವೋ ಏನೋ…

ಮುಸ್ಲೀಮನೇ ಹಿಂದೂಗಳ ನಾಲ್ಕು ಜಾತಿಯನ್ನು ಒಟ್ಟು ಸೇರಿಸಿ ಕಟ್ಟಿದ ಮಾರಿ ಗುಡಿಯ ಜಾತ್ರೆಗೆ ಈಗ ಹಿಂದೂಗಳೇ ಒಟ್ಟಾಗಿ ಮುಸ್ಲೀಮರನ್ನು ಹೊರಗಿಟ್ಟರು ಎಂಬ ಹೊಸ ಇತಿಹಾಸ ಸೃಷ್ಟಿಸದಿರಿ. ಇಂತಹ ಕೃತಘ್ನತೆಯನ್ನು ಇತಿಹಾಸ ಮತ್ತು ಜನಪದರ ಕಾಪು ಮಾರಿಯಮ್ಮ ಕ್ಷಮಿಸಲ್ಲ.

Donate Janashakthi Media

Leave a Reply

Your email address will not be published. Required fields are marked *