ಅಮರಾವತಿ: ರೇಪಲ್ಲಿ ರೈಲು ನಿಲ್ದಾಣದಲ್ಲಿ 25 ವರ್ಷದ ಗರ್ಭಿಣಿ ಮಹಿಳೆಯ ಮೇಲಿನ ಅತ್ಯಾಚಾರ ಯೋಜಿತವಲ್ಲ. ಆದರೆ ಇದು ಅನಿರೀಕ್ಷಿತವಾಗಿ ಸಂಭವಿಸಿದೆ ಎಂದು ಆಂಧ್ರಪ್ರದೇಶದ ಗೃಹ ಸಚಿವೆ ತಾನೆತಿ ವನಿತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೇ 1ರಂದು ರೇಪಲ್ ರೈಲ್ವೆ ನಿಲ್ದಾಣದ ಬಳಿ ಗರ್ಭಿಣಿ ಯುವತಿ ಮೇಲೆ ನಡೆದ ಅತ್ಯಾಚಾರ ಅನಿರೀಕ್ಷಿತವೇ ಹೊರತು ಪೂರ್ವ ಯೋಜಿತವಲ್ಲ ಎಂದಿರುವ ಸಚಿವೆ, ಈ ಹಿಂದೆ ವೈಜಾಗ್ ನಲ್ಲಿ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಗುವಿನ ಸುರಕ್ಷತೆಯ ಜವಾಬ್ದಾರಿ ತಾಯಿಯ ಮೇಲಿದೆ ಎಂದು ಹೇಳಿದ್ದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತ್ಯಾಚಾರಿಗಳ ಮಾನಸಿಕ ಪರಿಸ್ಥಿತಿ” ಮತ್ತು ಬಡತನ ಕಾರಣವೆಂದು ಹೇಳಿದ ಸಚಿವೆ ತಾನೆತಿ ವನಿತಾ ʻಆರೋಪಿಗಳು ಅತ್ಯಾಚಾರ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಪಾನಮತ್ತರಾಗಿದ್ದ ಪುರುಷರು ಸಂತ್ರಸ್ತೆ ಪತಿಯ ಬಳಿ ಕದಿಯುವ ಉದ್ದೇಶದಿಂದ ದಾಳಿ ನಡೆಸಿದ್ದರು. ಈ ವೇಳೆ ಮಹಿಳೆ ಅಡ್ಡ ಬಂದ ಪರಿಣಾಮ ಇದು “ಅನಿರೀಕ್ಷಿತ ರೀತಿಯಲ್ಲಿ” ಸಂಭವಿಸಿದೆ ಎಂದು ಹೇಳಿಕೆ ನೀಡಿದ್ದಾರೆ.
ಲಭ್ಯವಿಲ್ಲದ ಸರಿಯಾದ ರೈಲ್ವೆ ಪೋಲೀಸ್ ಪಡೆಗಳನ್ನು ದೂಷಿಸಲಾಗುವುದಿಲ್ಲ. ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.
ಇದು ಬೇಜವಾಬ್ದಾರಿ ಹೇಳಿಕೆ ಎಂದು ವಿರೋಧ ಪಕ್ಷ ತೆಲುಗು ದೇಶಂ ಟೀಕಿಸಿದೆ.
ಕಳೆದ ಎರಡು ವಾರದಲ್ಲಿ ಆಂಧ್ರ ಪ್ರದೇಶದ ರೈಲು ನಿಲ್ದಾಣಗಳಲ್ಲಿ ಎರಡು ಅತ್ಯಾಚಾರ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ಏಪ್ರಿಲ್ 16ರಂದು ಗುರಜಾಲ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.