ಆರ್‌ಟಿಇ ಸೀಟುಗಳನ್ನು ಭರ್ತಿ ಮಾಡಿ; ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಆಂಧ್ರ ಹೈಕೋರ್ಟ್‌

ಅಮರಾವತಿ: ಖಾಸಗಿ ಶಾಲೆಗಳಲ್ಲಿ ಶೇ 25 ರಷ್ಟು ಪ್ರಥಮ ದರ್ಜೆಯ ಮಕ್ಕಳ ಶೈಕ್ಷಣಿಕ ದಾಖಲಾತಿಗೆ ಸಂಬಂಧಿಸಿ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್​ಟಿಇ) ಉಚಿತವಾಗಿ ತುಂಬಿಕೊಳ್ಳಲು ವಿಫಲವಾದ ಆಂಧ್ರ ಪ್ರದೇಶ ಸರ್ಕಾರದ ಅಧಿಕಾರಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರ್​ಟಿಇ ಅಡಿ ಮಕ್ಕಳನ್ನು ದಾಖಲಿಸಿಕೊಳ್ಳಬೇಕೆಂದು ಖಾಸಗಿ ಶಾಲೆಗಳಿಗೆ ಕಡ್ಡಾಯ ಅಧಿಸೂಚನೆಯನ್ನು ಸರ್ಕಾರ ಕೈಗೊಳ್ಳದಿರುವುದರಿಂದ ಆ ಶಾಲೆಗಳಿಗೆ ಪರೋಕ್ಷವಾಗಿ ಲಾಭ ಮಾಡಿಕೊಡುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಬಡ ವಿದ್ಯಾರ್ಥಿಗಳ ಜೀವನೊಂದಿಗೆ ಯಾಕೆ ಆಟವಾಡುತ್ತಿರುವಿರಿ ಎಂದು ಪ್ರಶ್ನಿಸಿರುವ ನ್ಯಾಯಾಲಯ, ಆರ್‌ಟಿಇ ಕಾಯ್ದೆಯನ್ನು ಕೇವಲ ಮಾತಿನಲ್ಲಿ ಅಲ್ಲದೆ ಕೃತಿಯಲ್ಲಿ ಜಾರಿ ಮಾಡುವಂತೆ ತಾಕೀತು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಡಿವಿಎಸ್ ಎಸ್ ಸೋಮಯಾಜುಲು ಅವರನ್ನೊಳಗೊಂಡ ಪೀಠ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಯಲ್ಲಿ ಶೇ 25ರಷ್ಟು ಮಕ್ಕಳನ್ನು ಉಚಿತವಾಗಿ ದಾಖಲು ಮಾಡಿಕೊಳ್ಳಲು ನ್ಯಾಯಾಲಯದ ತೀರ್ಪು ಜಾರಿಯಾಗುತ್ತಿಲ್ಲ ಎಂದು ವಕೀಲ ತಾಂಡವ ಯೋಗೇಶ್ ಅವರು ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.

25ರಷ್ಟು ಸೀಟುಗಳನ್ನು ಭರ್ತಿ ಮಾಡಿದ ಪುರಾವೆ ತೋರಿಸದಿದ್ದಲ್ಲಿ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗಬಹುದು ಎಂದಿರುವ ನ್ಯಾಯಾಲಯವು ನಿಂದನೆ ಪ್ರಕರಣದ ಪ್ರತಿವಾದಿಗಳಾದ ಮುಖ್ಯ ಕಾರ್ಯದರ್ಶಿ (ಸಿಎಸ್), ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಎಚ್ಚರಿಕೆ ನೀಡಿದೆ.

ವಾದ ಮಂಡಿಸಿದ ವಕೀಲ ಯೋಗೇಶ್ ಸೀಟುಗಳ ಬದಲಾವಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪಾಲಕರಲ್ಲಿ ಜಾಗೃತಿ ಮೂಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯದ 16 ಸಾವಿರ ಖಾಸಗಿ ಶಾಲೆಗಳಲ್ಲಿ ತಲಾ ಕನಿಷ್ಠ ಐದು ಸೀಟು ಹಂಚಿಕೆ ಮಾಡಿದರೂ ಒಟ್ಟು 80 ಸಾವಿರ ಮಕ್ಕಳಿಗೆ ಉಚಿತ ಪ್ರವೇಶ ಸಿಗಲಿದೆ ಎಂದರು.

ಸರ್ಕಾರಿ ವಕೀಲ ನಾಗರಾಜು ಮಾತನಾಡಿ, ಸೀಟುಗಳ ಬದಲಾವಣೆ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದು, ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುತ್ತಿದ್ದೇವೆ. ವಿವರಗಳನ್ನು ನ್ಯಾಯಾಲಯದ ಮುಂದೆ ಇಡಲು ಕಾಲಾವಕಾಶ ಕೋರಿದರು.

ಆರ್‌ಟಿಇ ಅಡಿಯಲ್ಲಿ ಮಕ್ಕಳು ಶಾಲೆಗೆ ಸೇರಬೇಕು. ಇಲ್ಲವಾದರೆ ನೀವು ಜೈಲಿನಲ್ಲಿರಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಕಾಯ್ದೆಯಡಿಯಲ್ಲಿ ಶಾಲೆಗಳಿಗೆ ಎಷ್ಟು ಮಕ್ಕಳು ಪ್ರವೇಶ ಪಡೆದಿದ್ದಾರೆ ಎಂಬ ವಿವರವನ್ನು ಹಾಜರುಪಡಿಸಬೇಕು. ನೀಡಿದ ವಿವರಗಳು ತೃಪ್ತಿಕರವಾಗಿಲ್ಲದಿದ್ದರೆ, ವೈಯಕ್ತಿಕ ಹಾಜರಾತಿಗೆ ಆದೇಶಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿ, ವಿವರ ಸಲ್ಲಿಸಲು ಇದೇ ತಿಂಗಳ 7ಕ್ಕೆ ವಿಚಾರಣೆಯನ್ನು ಮುಂದೂಡಿದೆ.

Donate Janashakthi Media

Leave a Reply

Your email address will not be published. Required fields are marked *