ಅಮರಾವತಿ: ಆಂಧ್ರ ಪ್ರದೇಶ ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿವಾದಾತ್ಮಕ ನಿರ್ಣಯವನ್ನು ಕೈಗೊಂಡಿದ್ದರು. ಆ ಮಸೂದೆಯನ್ನು ರಾಜ್ಯ ಸರ್ಕಾರ ಕೊನೆಗೂ ಹಿಂಪಡೆದುಕೊಂಡಿದೆ.
ಆಂಧ್ರ ಪ್ರದೇಶಕ್ಕೆ ಮೂರು ಆಡಳಿತಾತ್ಮಕ ರಾಜಧಾನಿಗಳೆಂದು ಘೋಷಿಸಿದ ಮಸೂದೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಿಳಿಸಿದರು.
ಅಮರಾವತಿ ಆಂಧ್ರ ಪ್ರದೇಶದ ಏಕೈಕ ರಾಜಧಾನಿಯಾಗಿರಲಿದೆ.
ವಿಧಾನಸಭಾ ಚುನಾವಣೆ ನಂತರ ನಡೆದ ಅಧಿಕಾರ ಬದಲಾವಣೆಯಿಂದಾಗಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಹಿಡಿದುಕೊಂಡಿತು. ಆಗ ಮೂರು ರಾಜಧಾನಿಗಳನ್ನು ಘೋಷಣೆ ಮಾಡಿತ್ತು. ಈ ವಿವಾದಿತ ಮಸೂದೆಯಲ್ಲಿ ಕಾರ್ಯಕಾರಿ ರಾಜಧಾನಿಯಾಗಿ ವಿಶಾಖಪಟ್ಟಣಂ, ಶಾಸಕಾಂಗ ರಾಜಧಾನಿಯಾಗಿ ಅಮರಾವತಿ, ನ್ಯಾಯಾಂಗ ರಾಜಧಾನಿ ಕರ್ನೂಲ್ ಜಿಲ್ಲೆಗಳೆಂದು ಪ್ರಸ್ತಾಪಿಸಲಾಗಿತ್ತು.
ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದೀಗ ಅಮರಾವತಿ ರೈತರ ಮತ್ತು ಹಲವಾರು ವಲಯಗಳ ತೀವ್ರ ಪ್ರತಿರೋಧದ ಹಿನ್ನಲೆಯಲ್ಲಿ ಆಂಧ್ರಪ್ರದೇಶದ ರಾಜ್ಯ ಸರಕಾರವು ವಿವಾದಾತ್ಮಕ ಮೂರು ರಾಜಧಾನಿ ಮಸೂದೆಯನ್ನು ಹಿಂಪಡೆಯಲು ನಿರ್ಧರಿಸಿದೆ.
ಹೈಕೋರ್ಟ್ ಗೆ ಮಾಹಿತಿ ನೀಡಿದ ಅಡ್ವೊಕೇಟ್ ಜನರಲ್
ಮೂರು ರಾಜಧಾನಿ ಮಸೂದೆಯನ್ನು ವಾಪಸ್ ಪಡೆದ ಕುರಿತು ಅಡ್ವೊಕೇಟ್ ಜನರಲ್ ಎಸ್.ಶ್ರೀರಾಮ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು, ‘ವಿಕೇಂದ್ರೀಕರಣ ಮಸೂದೆಯನ್ನು ಕ್ಯಾಬಿನೆಟ್ ರದ್ದುಗೊಳಿಸಿದ್ದು, ಸಿಆರ್‌ಡಿಎ ರದ್ದತಿ ವಿಧೇಯಕಗಳನ್ನು ಕ್ಯಾಬಿನೆಟ್ ರದ್ದುಗೊಳಿಸಿದೆʼ ಎಂದರು. ಈ ಕುರಿತು ಇಂದು ವಿಧಾನಸಭೆಯಲ್ಲಿ ಸಿಎಂ ಜಗನ್ ಮಹತ್ವದ ಹೇಳಿಕೆ ನೀಡುವ ಸಾಧ್ಯತೆ ಇದ್ದು, ಮಸೂದೆ ಹಿಂಪಡೆದರೆ ಅಮರಾವತಿಯೇ ಆಂಧ್ರ ಪ್ರದೇಶದ ಪೂರ್ಣಪ್ರಮಾಣದ ರಾಜಧಾನಿಯಾಗಿ ಮುಂದುವರಿಯಲಿದೆ.
ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ವಲಯಗಳ ಸಮಗ್ರ ಅಭಿವೃದ್ಧಿ ಮಸೂದೆ -2020 ಮತ್ತು ಆಂಧ್ರ ಪ್ರದೇಶ ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ(ವಾಪಸ್) ಮಸೂದೆ 2020 ಗಳನ್ನು ರಾಜ್ಯ ಸರ್ಕಾರ ಹಿಂಪಡೆಯಲಿದೆ. ಈ ಮಸೂದೆಗಳಿಗೆ ಕಳೆದ ವರ್ಷದ ಜುಲೈನಲ್ಲಿ ರಾಜ್ಯಪಾಲರು ಅಂಕಿತ ಹಾಕಿದ್ದರು.