ವಿಜಯವಾಡ: ಚುನಾವಣಾ ಪ್ರಚಾರದ ರೋಡ್ ಶೋ ವೇಳೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ವಿಜಯವಾಡದಲ್ಲಿ ಶನಿವಾರ ಕಲ್ಲುತೂರಾಟ ನಡೆದಿದೆ. ಘಟನೆಯಲ್ಲಿ ಜಗನ್ ರೆಡ್ಡಿ ಅವರಿಗೆ ಗಾಯಗಳಾಗಿವೆ. ರೋಡ್ ಶೋ ಮೇಲೆ ಕಲ್ಲು ತೂರಾಟ ನಡೆದಿದ್ದು, ಅದರಲ್ಲಿ ಒಂದು ಕಲ್ಲು ಜಗನ್ ಅವರಿಗೆ ಬಡಿದಿದೆ.
ಜಗನ್ ರೆಡ್ಡಿ ಅವರ ತಲೆಯಲ್ಲಿ ಎಡ ಕಣ್ಣಿನ ಕೊಂಚ ಮೇಲ್ಭಾಗದಲ್ಲಿ ಸಣ್ಣ ಗಾಯವಾಗಿದೆ. ಚುನಾವಣಾ ಪ್ರಚಾರದ ವೇಳೆ ಜಗನ್ ರೆಡ್ಡಿ ಅವರ ಜತೆಗೆ ಇದ್ದ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದ (ವೈಎಸ್‌ಆರ್ ಕಾಂಗ್ರೆಸ್) ಶಾಸಕ ವೆಲ್ಲಂಪಲ್ಲಿ ಶ್ರೀನಿವಾಸ ರಾವ್ ಅವರಿಗೆ ಸಹ ಗಾಯಗಳಾಗಿವೆ.
ಇದನ್ನೂ ಓದಿ: ಕರ್ನಾಟಕ ರಾಷ್ಟ್ರೀಯ ಅಂತರರಾಷ್ಟ್ರೀಯ ಇತರೆ ವಿದ್ಯಮಾನ ಸಂಘಪರಿವಾರದ ಚುನಾವಣಾ ತಂತ್ರಗಾರಿಕೆ ಬಿಚ್ಚಿಟ್ಟ ಬಿಜೆಪಿಯ ಅಭ್ಯರ್ಥಿ
“ವಿಜಯವಾಡದ ಸಿಂಗ್ ನಗರದಲ್ಲಿನ ವಿವೇಕಾನಂದ ಸ್ಕೂಲ್ ಸೆಂಟರ್ ಬಳಿ ಬಸ್ ಪ್ರವಾಸದ ಭಾಗವಾಗಿ ಸಾಗುವಾಗ ಸಿಎಂ ಜಗನ್ ರೆಡ್ಡಿ ಜನರಿಂದ ಶುಭ ಹಾರೈಕೆಗಳನ್ನು ಸ್ವೀಕರಿಸುತ್ತಿದ್ದರು. ಆಗ ಅವರಿಗೆ ಕಲ್ಲು ಬಡಿದಿದೆ” ಎಂದು ಆಂಧ್ರ ಪ್ರದೇಶ ಸಿಎಂ ಕಚೇರಿ ಹೇಳಿಕೆ ತಿಳಿಸಿದೆ.
ಈ ದಾಳಿಯಲ್ಲಿ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ (ಟಿಡಿಪಿ) ಕೈವಾಡ ಇದೆ ಎಂದು ವೈಎಸ್‌ಆರ್ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಆಂಧ್ರಪ್ರದೇಶದ 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ಮೇ 13 ರಂದು ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.