– ವಸಂತರಾಜ ಎನ್.ಕೆ
ದಕ್ಷಿಣ ಆಫ್ರಿಕಾವು ಬಡತನ ಮತ್ತು ಅಸಮಾನತೆಯ ತೊಡೆದು ಹಾಕಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತದೆಯೇ ಮತ್ತು ಏಕಧ್ರುವೀಯ US ಪ್ರಾಬಲ್ಯವನ್ನು ಕೊನೆಗೊಳಿಸುವ ಹೋರಾಟವನ್ನು ಮುನ್ನಡೆಸುವ ಪಾತ್ರವನ್ನು ವಹಿಸುತ್ತದೆಯೇ ಅಥವಾ ಬಿಳಿಯ ಬಲಪಂಥೀಯ ಶಕ್ತಿಗಳ, ಪಾಶ್ಚಿಮಾತ್ಯ ಒತ್ತಡಕ್ಕೆ ಸಿಲುಕಿ ಬಹುಸಂಖ್ಯಾತ ಕರಿಯರ ಹಿತಾಸಕ್ತಿ ಕಾಪಾಡುವಲ್ಲಿ ಸೋಲುತ್ತದೆಯೆ – ಎಂಬ ಕೂಡುದಾರಿಯಲ್ಲಿ ಇಂದು ನಿಂತಿದೆ.
1994 ರಲ್ಲಿ ಮೊದಲ ಪ್ರಜಾಸತ್ತಾತ್ಮಕ ಚುನಾವಣೆಯ ಮೂವತ್ತು ವರ್ಷಗಳ ನಂತರ, ದಕ್ಷಿಣ ಆಫ್ರಿಕಾವು ರಾಜಕೀಯ ಕೂಡುದಾರಿಯಲ್ಲಿ ನಿಂತಿದೆ. 2024 ರ ಚುನಾವಣೆಯು ಆಳುವ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ANC) ನ ಮತದಲ್ಲಿ ಕುಸಿತವನ್ನು ಕಂಡಿತು. ANC ಕೇವಲ 40% ಮತಗಳನ್ನು ಗಳಿಸಿತು. 2019 ಕ್ಕಿಂತ 17 % ಮತ ಕಡಿಮೆಯಾಗಿದೆ. ಮೊದಲ ಬಾರಿಗೆ ಬಹುಮತ ಕಳೆದುಕೊಂಡಿದೆ. ಮತದಾನವೂ ಕೇವಲ 58% ರಷ್ಟಾಗಿದ್ದು 6 % ರಷ್ಟು ಕಡಿಮೆಯಾಗಿದೆ. ಗಂಭೀರ ಭ್ರಷ್ಟಾಚಾರದ ಆಪಾದನೆ, ಕೋರ್ಟು ಪ್ರಕರಣಗಳು ಮತ್ತು ಪಕ್ಷದ ಶಿಸ್ತುಕ್ರಮ ಎದುರಿಸಿದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರು ANC ಬಿಟ್ಟು ತಮ್ಮದೇ ಹೊಸ ಪಕ್ಷ (ಎಂಕೆ ಪಾರ್ಟಿ) ರಚಿಸಿ ಚುನಾವಣೆ ಸ್ಪರ್ಧೆ ಮಾಡಿ 15% ಮತ ಗಳಿಸಿದ್ದು ಬಹುಶಃ ಈ ಮತಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಈ ಚುನಾವಣೆಯ ನಂತರ ವಿವಿಧ ಬಲಪಂಥೀಯ ಪಕ್ಷಗಳ ಪಾತ್ರವನ್ನು ದೇಶದ ರಾಜಕೀಯದಲ್ಲಿ ಹೆಚ್ಚಿಸಿದೆ. ಫಲಿತಾಂಶಗಳ ಹಿನ್ನೆಲೆಯಲ್ಲಿ ವರ್ಣಭೇದ ನೀತಿಯ ಅಂತ್ಯದ ನಂತರ ಮೊಟ್ಟಮೊದಲ ಸಮ್ಮಿಶ್ರ ಸರ್ಕಾರಕ್ಕಾಗಿ ANC ಎಲ್ಲ ಪಕ್ಷಗಳ ಜತೆ ಮಾತುಕತೆ ನಡೆಸಬೇಕಾಯಿತು. ಅಂತಿಮವಾಗಿ ANC , ಪ್ರಮುಖ ವಿರೋಧ ಪಕ್ಷವಾದ ಅಲ್ಪಸಂಖ್ಯಾತ ಬಿಳಿಯರ ಪಕ್ಷ ಡೆಮಾಕ್ರಟಿಕ್ ಅಲೈಯನ್ಸ್ (DA) ಸೇರಿದಂತೆ ಹಲವು ಪಕ್ಷಗಳ ಬೆಂಬಲಿತ ‘ರಾಷ್ಟ್ರೀಯ ಸರಕಾರ’ ರಚಿಸಲಿದೆ. ANC ಯ ಸಿರಿಲ್ ರಾಂಫೋಸಾ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ANC ಯ ಭಾಗವಾಗಿದ್ದು ಹೊರ ಹೋದ ಎಡಪಂಥೀಯ ಪಕ್ಷಗಳಾದ ಆರ್ಥಿಕ ಸ್ವಾತಂತ್ರ್ಯ ಹೋರಾಟಗಾರರು (EFF) ಮತ್ತು ಜುಮಾ ಅವರ ಹೊಸ ಪಕ್ಷ uMkhonto we Sizwe (MKP) ಹಲವು ‘ಅಸ್ವೀಕಾರಾರ್ಹ’ ಷರತ್ತು’ ಗಳನ್ನು ಹಾಕಿದ್ದು ANC ಅವನ್ನು ಒಪ್ಪದ್ದರಿಂದ ಅವು ಬೆಂಬಲಿಸುತ್ತಿಲ್ಲ. MKP ಸಿರಿಲ್ ರಾಂಫೋಸಾ ಅಧ್ಯಕ್ಷರಾಗುವಂತಿಲ್ಲ ಅಂತ ಷರತ್ತು ಹಾಕಿತ್ತು. ಅಲ್ಪಸಂಖ್ಯಾತ ಸ್ಥಿತಿಯಿಂದಾಗಿ ANC ಯ ‘ರಾಷ್ಟ್ರೀಯ ಸರಕಾರ’ ತನ್ನ ನೀತಿಗಳನ್ನು ಅನುಸರಿಸಲು ಇತರ ಪಕ್ಷಗಳಿಂದ ಅಡೆತಡೆ ಎದುರಿಸಬಹುದು.
ದಕ್ಷಿಣ ಆಫ್ರಿಕಾವು ಬಡತನ ಮತ್ತು ಅಸಮಾನತೆಯ ತೊಡೆದು ಹಾಕಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತದೆಯೇ ಮತ್ತು ಏಕಧ್ರುವೀಯ US ಪ್ರಾಬಲ್ಯವನ್ನು ಕೊನೆಗೊಳಿಸುವ ಹೋರಾಟವನ್ನು ಮುನ್ನಡೆಸುವ ಪಾತ್ರವನ್ನು ವಹಿಸುತ್ತದೆಯೇ ಅಥವಾ ಬಿಳಿಯ ಬಲಪಂಥೀಯ ಶಕ್ತಿಗಳ, ಪಾಶ್ಚಿಮಾತ್ಯ ಒತ್ತಡಕ್ಕೆ ಸಿಲುಕಿ ಬಹುಸಂಖ್ಯಾತ ಕರಿಯರ ಹಿತಾಸಕ್ತಿ ಕಾಪಾಡುವಲ್ಲಿ ಸೋಲುತ್ತದೆಯೆ – ಎಂಬ ಕೂಡುದಾರಿಯಲ್ಲಿ ಇಂದು ನಿಂತಿದೆ. ANC, ದಕ್ಷಿಣ ಆಫ್ರಿಕಾದ ಕಮ್ಯುನಿಸ್ಟ್ ಪಕ್ಷ ಮತ್ತು ಟ್ರೇಡ್ ಯೂನಿಯನ್ ಕೇಂಧ್ರ COSATU ತ್ರಿಪಕ್ಷೀಯ ಕೂಟ ರಚಿಸಿದ್ದು, ಚುನಾವಣೆಯಲ್ಲಿ ANC ಯನ್ನು ಬೆಂಬಲಿಸುತ್ತವೆ. ಹೀಗಾಗಿ, ಎರಡನೆಯ ಸಾಧ್ಯತೆ ಕಡಿಮೆ. ಆದರೆ ಮೊದಲನೆಯ ಸಾಧ್ಯತೆ ಜಾರಿಗೆ ತೀವ್ರ ಅಡೆತಡೆ ನಿರೀಕ್ಷಿತವಾಗಿದೆ.
ಫಲಿತಾಂಶ
ಮತದಾನ ಮಾಡಿದ ನಾಗರಿಕರಲ್ಲಿ 4 ಅಗ್ರ ಪಕ್ಷಗಳು ANC 159 ಸೀಟು (40.2% ಮತ), DA 87 ಸೀಟು ( 21.8% ಮತ), MKP 58(14.6%, ಮತ) EFF 39 ಸೀಟು (9.5%ಮತ) ಗಳಿಸಿವೆ.
ದಕ್ಷಿಣ ಆಫ್ರಿಕಾದ ಮತದಾರರ ವಯಸ್ಸಿನ ಸಂಖ್ಯೆ ಸುಮಾರು 4.2 ಕೋಟಿ. ಅವರಲ್ಲಿ ಕೇವಲ 2.7 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. 1.6,0 ಕೋಟಿ ನೋಂದಾಯಿತ ಮತದಾರರು ಮತ ಚಲಾಯಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷವು ವಯಸ್ಕ ಜನಸಂಖ್ಯೆಯ 16% ಕ್ಕಿಂತ ಹೆಚ್ಚು ಜನರನ್ನು ಪ್ರತಿನಿಧಿಸುತ್ತದೆ ಎಂದು ಹೇಳಿಕೊಳ್ಳುವಂತಿಲ್ಲ. ಮತದಾನದ ವಯಸ್ಸಿನ ಜನಸಂಖ್ಯೆಯ ದೃಷ್ಟಿಯಿಂದ ಇಲ್ಲಿ ಅಗ್ರ 4 ಪಕ್ಷಗಳು – ANC 15.5%, DA 8.4%, MKP 5.6%, EFF 3.6% ಮತ ಮಾತ್ರ ಪಡೆದಿವೆ.
ಬಂಡವಾಳಶಾಹಿ ಮಾಧ್ಯಮಗಳು ಮುಖ್ಯವಾಗಿ ಚುನಾವಣೆಯನ್ನು ANC ಸರ್ಕಾರದ ಮತ್ತು ನೀತಿಗಳ ನಿರಾಕರಣೆ ಎಂದು ನಿರೂಪಿಸುತ್ತಿವೆ. ಆದರೆ ಫಲಿತಾಂಶಗಳು ವಾಸ್ತವದಲ್ಲಿ, ಇಡೀ ರಾಜಕೀಯ ವ್ಯವಸ್ಥೆಯ ಮತ್ತು ಮತದಾನವು ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಎಂಬ ಕಲ್ಪನೆಯ ನಿರಾಕರಣೆಯಾಗಿದೆ. ಇದು ದೇಶದ ಭೀಕರ ಸ್ಥಿತಿಯ ಪ್ರತಿಬಿಂಬವಾಗಿದೆ.
ದಕ್ಷಿಣ ಆಫ್ರಿಕಾದ ಖನಿಜ ಸಂಪತ್ತು ವರ್ಷಕ್ಕೆ ಕನಿಷ್ಠ 125 ಶತಕೋಟಿ ಡಾಲರ್ ಉತ್ಪಾದಿಸುತ್ತಿದೆ, ಕನಿಷ್ಠ 2.4 ಟ್ರಿಲಿಯನ್ ಡಾಲರ್ ಮೌಲ್ಯದ ಖನಿಜಗಳು ಇನ್ನೂ ನೆಲದಲ್ಲಿ ಉಳಿದಿವೆ. ಆಫ್ರಿಕಾದ ಅತಿ ದೊಡ್ಡ ಜೋಹಾನ್ಸ್ ಬರ್ಗ್ ಶೇರು ಮಾರುಕಟ್ಟೆಯಲ್ಲಿರುವ ಕಂಪನಿಗಳು 2023 ರಲ್ಲಿ ಸರಿಸುಮಾರು 1 ಟ್ರಿಲಿಯನ್ ಡಾಲರ್ ಮೌಲ್ಯದ್ದಾಗಿದ್ದವು.
ಆದಾಗ್ಯೂ, ಜನಸಂಖ್ಯೆಯ 10% ಜನರು 80% ಸಂಪತ್ತನ್ನು ಹೊಂದಿದ್ದಾರೆ. ನಿರುದ್ಯೋಗವು ಅಧಿಕೃತವಾಗಿ 32.9% ರಷ್ಟಿದೆ, 15-34 ವಯೋಮಾನದವರಲ್ಲಿ ರಲ್ಲಿ 45.5%. 55% ಕುಟುಂಬಗಳು ನೀರು ಪೂರೈಕೆ ಹೊಂದಿಲ್ಲ ಮತ್ತು 34% ಇನ್ನೂ ಫ್ಲಶ್ ಶೌಚಾಲಯಗಳನ್ನು ಹೊಂದಿಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರ ದೇಶದ 50% ಬಡತನದಲ್ಲಿ ವಾಸಿಸುತ್ತಿದ್ದಾರೆ, ಗ್ರಾಮೀಣ ಪ್ರದೇಶಗಳಲ್ಲಿ 65% ಬಡತನವಿದೆ, ಇದಲ್ಲದೆ, ಕೆಲವು ಕ್ರಮಗಳ ಪ್ರಕಾರ, ದಕ್ಷಿಣ ಆಫ್ರಿಕಾವು ಭೂಮಿಯ ಮೇಲಿನ ಆದಾಯದ ಅಸಮಾನತೆಯ ಅತ್ಯುನ್ನತ ಮಟ್ಟವನ್ನು ಹೊಂದಿದೆ. ಇದರ ಜೊತೆಗೆ, 75% ಕೃಷಿ ಭೂಮಿ ಇನ್ನೂ ಬಿಳಿಯರ ಒಡೆತನದಲ್ಲಿದೆ.
ಇದು ಫಲಿತಾಂಶಗಳಲ್ಲಿಯೂ ಪ್ರತಿಫಲಿಸುತ್ತದೆ. ಮತ ಚಲಾಯಿಸಲು ಆಯ್ಕೆ ಮಾಡಿದವರಲ್ಲಿ 64.2% ಜನರು ANC, MK ಅಥವಾ EFF ಗಳನ್ನು (ಇವೆಲ್ಲ ಹೆಚ್ಚು ಕಡಿಮೆ ANC ಕಾರ್ಯಕ್ರಮವನ್ನೇ ಹೊಂದಿವೆ) ಬೆಂಬಲಿಸಿದ್ದಾರೆ. ಅವರೆಲ್ಲರೂ ಈ ಸಮಸ್ಯೆಗಳನ್ನು ಪರಿಹರಿಸಲು ದೃಢವಾಗಿ ಕೆಲಸ ಮಾಡುವ ಇರಾದೆಯವರು. ANC 2030 ರ ವೇಳೆಗೆ ಬಡತನವನ್ನು ಕೊನೆಗೊಳಿಸುತ್ತೇವೆ ಎಂದು ಮತದಾರರಿಗೆ ತಿಳಿಸಿದರು. MK ಮತ್ತು EFF ಮತದಾರರಿಗೆ ಪರಿಹಾರವಿಲ್ಲದೆ ಭೂಮಿಯನ್ನು ವಶಪಡಿಸಿಕೊಳ್ಳುವುದಾಗಿ ಮತ್ತು ಗಣಿ ಮತ್ತು ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವುದಾಗಿ ಭರವಸೆ ನೀಡಿದರು. ಉಚಿತ ಆರೋಗ್ಯ ರಕ್ಷಣೆ, ವಸತಿ ಮತ್ತು ಶಿಕ್ಷಣಕ್ಕೆ ಗಮನಾರ್ಹವಾಗಿ ವಿಸ್ತರಿಸಿದ ಪ್ರವೇಶದ ಬಗ್ಗೆ ಮೂವರೂ ಪ್ರಚಾರ ಮಾಡುತ್ತಾರೆ. ಅಂತಾರಾಷ್ಟ್ರೀಯವಾಗಿ ಮೂವರೂ ಕ್ಯೂಬಾ, ಪ್ಯಾಲೆಸ್ತೀನ್, ವೆನೆಜುವೆಲಾ ಮತ್ತು ಚೀನಾಕ್ಕೆ ಬೆಂಬಲ ನೀಡುತ್ತಿದ್ದಾರೆ.
ಇದನ್ನು ಓದಿ : ಪ್ರಜಾಪ್ರಭುತ್ವ ವಿರೋಧಿ’ ಕ್ರಿಮಿನಲ್ ಕಾನೂನುಗಳನ್ನು ತಡೆ ಹಿಡಿಯುವಂತೆ 3700 ಕ್ಕೂ ಹೆಚ್ಚಿನ ನಾಗರೀಕರಿಂದ ವಿಪಕ್ಷಗಳಿಗೆ ಮನವಿ ಪತ್ರ
ನಿರ್ದಿಷ್ಟ ಪಕ್ಷಗಳು ಅಥವಾ ಯೋಜನೆಗಳ ಪ್ರಾಮಾಣಿಕತೆ ಅಥವಾ ಕಾರ್ಯಸಾಧ್ಯತೆ ಪ್ರಶ್ನಾತೀತವಲ್ಲದಿರಬಹುದು. ಆದರೆ ದಕ್ಷಿಣ ಆಫ್ರಿಕಾದ ಬಹುಪಾಲು ಮತದಾರರು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸಾಮ್ರಾಜ್ಯಶಾಹಿ-ವಿರೋಧಿ ವಿಧಾನವನ್ನು ಅನುಸರಿಸುವ ಹಾಗೂ, ಬಡತನ ಮತ್ತು ವಸಾಹತುಶಾಹಿಯ ಪರಂಪರೆಯನ್ನು ಗಂಭೀರವಾಗಿ ಹಿಮ್ಮೆಟ್ಟಿಸುವ ನೀತಿಗಳನ್ನು ಹುಡುಕುತ್ತಿದ್ದಾರೆ.
ಆಳುವವರ ಜನರ ನಡುವಿನ ಹೊಸ ಬಲಾಬಲ
ಈ ನಡುವೆ 27% ರಷ್ಟು ಮತದಾರರು ಬಂಡವಾಳಶಾಹಿ-ಪರ, ಸಾಮ್ರಾಜ್ಯಶಾಹಿ-ಪರ ಪ್ರವೃತ್ತಿಯನ್ನು ಸ್ಪಷ್ಟವಾಗಿ ಪ್ರತಿನಿಧಿಸುವ ರಾಜಕೀಯ ಪಕ್ಷಗಳನ್ನು ಬೆಂಬಲಿಸಿದ್ದಾರೆ. ಇದು 2019 ರ ಚುನಾವಣೆಗಿಂತ ಸರಿಸುಮಾರು 3-4% ಹೆಚ್ಚಳವಾಗಿದೆ.
ಏರುತ್ತಿರುವ ಬಲಪಂಥೀಯ ಶಕ್ತಿಗಳು ANC ಆಳ್ವಿಕೆಯ ಅಡಿಯಲ್ಲಿ ಬಂಡವಾಳ ಮತ್ತು ಪ್ರಭುತ್ವ ನಡುವಿನ ವೈರುಧ್ಯಗಳನ್ನು ಪರಿಹರಿಸಲು ಆಳುವ ವರ್ಗಗಳ ಪ್ರಯತ್ನವನ್ನು ಪ್ರತಿನಿಧಿಸುತ್ತವೆ. ವರ್ಣಭೇದ ನೀತಿಯ ಶಾಂತಿಯುತ ಅಂತ್ಯದ ಬೆಲೆಯಾಗಿ ಬಿಳಿಯ ಶ್ರೀಮಂತರ ಆರ್ಥಿಕ ಬಲವನ್ನು ಹಾಗೆ ಬಿಡಬೇಕಾಯಿತು. ಆದಾಗ್ಯೂ ಇದು ಬಿಳಿಯ ಶ್ರೀಮಂತರಿಗೆ ಸೂಕ್ತ ಪರಿಸ್ಥಿತಿಯಾಗಿರಲಿಲ್ಲ. ಅವರು ಹಲವು ಒತ್ತಡಗಳಿಗೆ ಮಣಿಯಬೇಕಾಯಿತು. “ಗಣ್ಯ” ಮತ್ತು “ಮಧ್ಯಮ ವರ್ಗ” ಹಂತಗಳಲ್ಲಿ ಕರಿಯರ ಸೇರ್ಪಡೆಗಾಗಿ ಬೇಡಿಕೆ, ಮತ್ತು ANC ಆಂತರಿಕ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುವ ಬಡವರು, ಕಾರ್ಮಿಕ ಸಂಘಗಳು ಮತ್ತು ಕಮ್ಯುನಿಸ್ಟರ ಕನಿಷ್ಠ ಕೆಲವು ಬೇಡಿಕೆಗಳನ್ನು ಪರಿಹರಿಸುವ ಅಗತ್ಯತೆಗಳಿಗೆ ಮಣಿಯಬೇಕಾಯಿತು.
ANC ಯ ರಾಜಕೀಯ ಪ್ರಾಬಲ್ಯವು ಹದಗೆಟ್ಟಂತೆ, “ಗಣ್ಯ” ಶಕ್ತಿಗಳು ತಮ್ಮ ಪರವಾಗಿ ಅಧಿಕಾರದ ಸಮತೋಲನವನ್ನು ಹೆಚ್ಚು ಬದಲಾಯಿಸುವ ಪ್ರಯತ್ನದಲ್ಲಿ ವಿರೋಧ ಪಕ್ಷಗಳ ಒಂದು ವಿಭಾಗಕ್ಕೆ ಹೆಚ್ಚು ಹಣವನ್ನು ನೀಡಿವೆ. ಇದರ ಕೇಂದ್ರದಲ್ಲಿ DA ಪಕ್ಷ ಇದೆ. ಇದಕ್ಕೆ ಆಡಳಿತ ವರ್ಗದ ಕುಟುಂಬಗಳು, ಜೂಜಿನ “ಹೊಸ” ಹಣ ಮತ್ತು, ಜರ್ಮನಿ ಮತ್ತು ಡೆನ್ಮಾರ್ಕ್ನ ಕೆಲವು ದೊಡ್ಡ ವ್ಯಾಪಾರ-ಪರ ರಾಜಕೀಯ ಪಕ್ಷಗಳಿಂದ ಧನಸಹಾಯ ಹರಿಯುತ್ತಿದೆ.
ಇದೇ ರೀತಿಯ ದಾನಿಗಳು ActionSA ಮತ್ತು ‘ಬಿಲ್ಡ್ ಒನ್ ಸೌತ್ ಆಫ್ರಿಕಾ’ ದಂತಹ ಪಕ್ಷಗಳಿಗೆ ಬೆಂಬಲವಾಗಿ ಅದ್ದೂರಿಯಾಗಿ ಖರ್ಚು ಮಾಡಿದ್ದಾರೆ. ಅದು DA-ತರಹದ ನೀತಿಗಳ ಮೇಲೆ ಹೆಚ್ಚು “ಕರಿಯ” ಮುಖವನ್ನು ಪ್ರಸ್ತುತ ಪಡಿಸಲು ಪ್ರಯತ್ನಿಸುತ್ತದೆ. ‘ದೇಶಭಕ್ತ ಒಕ್ಕೂಟ’ ದಂತಹ ಇತರರು, ವ್ಯಾಪಾರ ಸಮುದಾಯದ ಬೆಂಬಲದಿಂದ ಹೊರಹೊಮ್ಮುತ್ತಾರೆ, ಹೆಚ್ಚು ಬಲಪಂಥೀಯ “ಜನಮರುಳು” ವಿಧಾನದಲ್ಲಿ ಬೇರೂರಿದ್ದಾರೆ, ಕಪ್ಪು ಬಡವರಿಗೆ ಹೆಚ್ಚು ಮನವಿ ಮಾಡಲು ವಿನ್ಯಾಸಗೊಂಡ ನಿರ್ದಿಷ್ಟವಾಗಿ ವಲಸೆ-ವಿರೋಧಿ ರಾಜಕೀಯವನ್ನು ಒತ್ತಿ ಹೇಳುತ್ತಾರೆ.
ಈ ಬಂಡವಾಳಶಾಹಿ-ಪರ ಪ್ರವಾಹಗಳು ANC ಯ ಅವನತಿ ಮತ್ತು ವಿಭಜನೆಯನ್ನು ಬಳಸಿಕೊಳ್ಳಲು ANC ಅನ್ನು ಆಳುವ ವರ್ಗಗಳ ಜತೆ ಸಮಜಾಯಿಷಿಗೆ ಪ್ರಯತ್ನಿಸುತ್ತಿವೆ. ಅವರನ್ನು “ಮಾರುಕಟ್ಟೆ”ಯ ಬೇಡಿಕೆಗಳಿಗೆ ಸ್ಪಂದಿಸುವಂತೆ ಮತ್ತು ಭವಿಷ್ಯದಲ್ಲಿ ಚುನಾವಣೆಗಳಲ್ಲಿ .ಹಿಂದಿಕ್ಕಲು ವೇದಿಕೆಯನ್ನು ಸಿದ್ಧಪಡಿಸುತ್ತಿವೆ.
ಜಾಗತಿಕ ಸಾಮ್ರಾಜ್ಯಶಾಹಿ ಆರ್ಥಿಕತೆಯೊಂದಿಗೆ ದಕ್ಷಿಣ ಆಫ್ರಿಕಾದ ಆರ್ಥಿಕತೆ ಹೆಣೆದುಕೊಂಡಿರುವುದು ಮತ್ತು ಆರ್ಥಿಕ ರೂಪಾಂತರವನ್ನು ತ್ವರಿತವಾಗಿ ವೇಗಗೊಳಿಸಲು ಅದರ ಸದಸ್ಯರ, ಬೆಂಬಲಿಗರ ಬಯಕೆಯ ನಡುವೆ ತನ್ನದೇ ಆದ ಸಮತೋಲನ ಪ್ರಕ್ರಿಯೆಯಲ್ಲಿ ANC ತೊಡಗಿದೆ. ANC, ದಕ್ಷಿಣ ಆಫ್ರಿಕಾದ ಕಮ್ಯುನಿಸ್ಟ್ ಪಕ್ಷ ಮತ್ತು ಟ್ರೇಡ್ ಯೂನಿಯನ್ ಕೇಂಧ್ರ COSATU ಗಳ ತ್ರಿಪಕ್ಷೀಯ ಕೂಟ ಈ ಬಂಡವಾಳಶಾಹಿ-ಪರ ಶಕ್ತಿಗಳ ಪ್ರಯತ್ನಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿವೆ.
‘ರಾಷ್ಟ್ರೀಯ ಸರಕಾರ’ ದ ರಾಜಕೀಯ ಭವಿಷ್ಯ
ಇದು ಈಗ ಅಧಿಕಾರ ವಹಿಸಿಕೊಂಡಿರುವ ANC ಯ ‘ರಾಷ್ಟ್ರೀಯ ಸರಕಾರ’ ರಚನೆಯ ರಾಜಕೀಯ ಸನ್ನಿವೇಶವಾಗಿದೆ. “ಮಾರುಕಟ್ಟೆಗಳು”ಮತ್ತು ಉದ್ಯಮಗಳು ANC ಮತ್ತು DA ನಡುವೆ ಸಮ್ಮಿಶ್ರ ಸರ್ಕಾರವನ್ನು ಬಯಸುತ್ತದೆ. ಇದು ಬಲಪಂಥೀಯತೆಯತ್ತ ನಿರ್ಣಾಯಕ ಬದಲಾವಣೆಯಾಗಿದ್ದು ಅದು ನಿಸ್ಸಂದೇಹವಾಗಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಮತ್ತಷ್ಟು ಖಾಸಗೀಕರಣ, ಕಠಿಣ ಬಜೆಟ್ ಗಳ ಅನುಷ್ಠಾನ, ಹಾಗೆಯೇ BRICS, ಕ್ಯೂಬಾ ಮತ್ತು ಪ್ಯಾಲೆಸ್ಟೈನ್ ಜತೆಗಿನ ಸಂಬಂಧಗಳನ್ನು ಸಡಿಲಿಸುವತ್ತ ಹೋಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, 60% ಕ್ಕಿಂತ ಹೆಚ್ಚು ಮತದಾರರು ದೇಶ ಎಲ್ಲಿಗೆ ಹೋಗಬೇಕೆಂದು ಬಯಸುತ್ತಾರೋ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಕೊಂಡೊಯ್ಯುವ ಸಾಧ್ಯತೆಯಿದೆ.
EFF ಮತ್ತು MK ಎರಡೂ ANC ಯಿಂದ ಬೇರ್ಪಟ್ಟ ಪಕ್ಷಗಳು. ANC ಯಲ್ಲಿನ ಬಂಡವಾಳಶಾಹಿ-ಪರ ಶಕ್ತಿಗಳು ಎರಡೂ ಪಕ್ಷಗಳೊಂದಿಗಿನ ಮೈತ್ರಿಯು ಸರ್ಕಾರದಲ್ಲಿ ಸಮಾಜವಾದಿ ವಿಚಾರಗಳ ಕೈಯನ್ನು ಬಲಪಡಿಸುತ್ತದೆ ಎಂದು ಭಯಪಡುತ್ತಾರೆ. ಈ ಪಕ್ಷಗಳ ನಡುವೆ ಇರುವ ವೈಷಮ್ಯ ‘ರಾಷ್ಟ್ರೀಯ ಸರಕಾರ’ ದ ಜತೆ ಅಸಹಕಾರ ತೋರಿಸುವ ಮೂಲಕ DA ಮೇಲಿನ ANC ಯ ಅವಲಂಬನೆ ಹೆಚ್ಚಿಸಬಹುದು.
ಹಲವಾರು ANC ನಾಯಕರು ಮತ್ತು ಕಮ್ಯುನಿಸ್ಟ್ ಪಕ್ಷವು DA ಯೊಂದಿಗಿನ ಮೈತ್ರಿಗೆ ಸಾರ್ವಜನಿಕವಾಗಿ ವಿರುದ್ಧವಾಗಿದೆ ಮತ್ತು ಅಂತಹ ಒಪ್ಪಂದವು ಸಂಘಟನೆಯಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಸುವ ಸಾಧ್ಯತೆಯಿದೆ.
ಹೀಗಾಗಿ ದಕ್ಷಿಣ ಆಫ್ರಿಕಾವು ಬಡತನ ಮತ್ತು ಅಸಮಾನತೆಯ ತೊಡೆದು ಹಾಕಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತದೆಯೇ ಮತ್ತು ಏಕಧ್ರುವೀಯ US ಪ್ರಾಬಲ್ಯವನ್ನು ಕೊನೆಗೊಳಿಸುವ ಹೋರಾಟವನ್ನು ಮುನ್ನಡೆಸುವ ಪಾತ್ರವನ್ನು ವಹಿಸುತ್ತದೆಯೇ ಅಥವಾ ಬಿಳಿಯ ಬಲಪಂಥೀಯ ಶಕ್ತಿಗಳ, ಪಾಶ್ಚಿಮಾತ್ಯ ಒತ್ತಡಕ್ಕೆ ಸಿಲುಕಿ ಬಹುಸಂಖ್ಯಾತ ಕರಿಯರ ಹಿತಾಸಕ್ತಿ ಕಾಪಾಡುವಲ್ಲಿ ಸೋಲುತ್ತದೆಯೆ – ಎಂಬ ಕೂಡುದಾರಿಯಲ್ಲಿ ಇಂದು ನಿಂತಿದೆ.
ಇದನ್ನು ನೋಡಿ : ಸ್ಪೀಕರ್ ಹುದ್ದೆಯ ಮೇಲೆ ಎಲ್ಲರ ಕಣ್ಣು – ಸ್ಪೀಕರ್ ಯಾರಾಗ್ತಾರೋ ಅವರದ್ದೆ ಸರ್ಕಾರ! Janashakthi Media