ಬೆಂಗಳೂರು: ಭಾಷಣ ಮತ್ತು ಬರಹಗಳ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾರುವ ಕಾರ್ಯಕ್ಕಾಗಿ ನಾಗರಿಕ ಹಕ್ಕುಗಳ ಹೋರಾಟಗಾರ ಮತ್ತು ಶಿಕ್ಷಣತಜ್ಞ ಆನಂದ್ ತೇಲ್ತುಂಬ್ಡೆ ಅವರಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಂಗಳೂರಿನಲ್ಲಿ ಬಸವ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ತೇಲ್ತುಂಬ್ಡೆ, “ನಿಮ್ಮ ರಾಜ್ಯಕ್ಕಿಂತ ಮೊದಲು ನಮ್ಮ ರಾಜ್ಯವೇ ನಿಮಗೆ ಪ್ರಶಸ್ತಿ ನೀಡಿ ಗೌರವಿಸುತ್ತದೆ ಎಂದು ಕನ್ನಡಿಗ ಗೆಳೆಯರೊಬ್ಬರು ನಿನ್ನೆ ಹೇಳಿದ್ದರು. ನನ್ನನ್ನು ಜೈಲಿಗೆ ಹಾಕುವ ಮೂಲಕ ನನ್ನ ರಾಜ್ಯ (ಮಹಾರಾಷ್ಟ್ರ) ದೊಡ್ಡ ಗೌರವ ನೀಡಿದೆ ಎಂದು ನಾನು ಹೇಳಿದೆ. ನನಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಕ್ಕಾಗಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಸರ್ಕಾರಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣಾ ಪೂರ್ವದ ಪ್ರಚಾರ ತಂತ್ರದ ಬಜೆಟ್ ಮಹಿಳೆ ಎದುರಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಸೂಚಿಸಿಲ್ಲ – AIDWA
“ಇದು ಕೇವಲ ನನ್ನ ಮಾತ್ರ ಪ್ರಶಸ್ತಿಯಲ್ಲ. ಜನರು ಬದುಕಿಗಾಗಿ ಈ ಜಗತ್ತನ್ನು ಉತ್ತಮಗೊಳಿಸಲು ಹೋರಾಡುತ್ತಿರುವ ಎಲ್ಲಾ ಗುರುತಿಸಲ್ಪಡದ ಮತ್ತು ಅಸಂಖ್ಯಾತ ಹೋರಾಟಗಾರರಿಗೆ ನೀಡುತ್ತಿರುವ ಗೌರವವಾಗಿದೆ” ಎಂದು ಆನಂದ್ ತೇಲ್ತುಂಬ್ಡೆ ಹೇಳಿದ್ದಾರೆ. ಆನಂದ್ ಅವರು ಭೀಮಾ ಕೋರೆಗಾಂವ್ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ಪ್ರಶಸ್ತಿ ಸ್ವೀಕರಿಸುವುದಕ್ಕಾಗಿ ಎರಡು ದಿನಗಳ ಕಾಲ ಬೆಂಗಳೂರಿಗೆ ಭೇಟಿ ನೀಡಲು ಅವರಿಗೆ ಎನ್‌ಐಎ ಅನುಮತಿ ನೀಡಿದೆ.
ಬಸವಣ್ಣನವರ ವಚನಗಳು ಪ್ರಗತಿಪರವಾಗಿದ್ದು, 12 ನೇ ಶತಮಾನದ ಈ ತತ್ವಜ್ಞಾನಿ ಎಲ್ಲಾ ರೀತಿಯ ಸಾಮಾಜಿಕ ತಾರತಮ್ಯವನ್ನು ತಿರಸ್ಕರಿಸಿದ್ದಾರೆ. ಅಲ್ಲದೆ, ದೇವರುಗಳನ್ನು ಮತ್ತು ದೇವಾಲಯದ ಪೂಜೆಯನ್ನು ಸಹ ಅವರು ತಿರಸ್ಕರಿಸಿದ್ದರು ಎಂದು ತೇಲ್ತುಂಬ್ಡೆ ಅವರು ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣೆ ಗೆಲ್ಲಲು ಬಿಜೆಪಿ ಎಲ್ಲರನ್ನೂ ಜೈಲಿಗೆ ಹಾಕುತ್ತಿದೆ; ಎನ್‌ಆರ್‌ಸಿಗೆ ಅವಕಾಶ ನೀಡಲ್ಲ – ಮಮತಾ ಬ್ಯಾನರ್ಜಿ
“ನಾನು ಬಸವಣ್ಣನವರ ವಚನಗಳನ್ನು ಓದಿದ್ದೇನೆ ಮತ್ತು ಅದು ತುಂಬಾ ಪ್ರಗತಿಪರ ಧ್ವನಿಯನ್ನು ಹೊಂದಿದೆ ಎಂದು ನಾನು ಅದರ ಬಗ್ಗೆ ತುಂಬಾ ಪ್ರಭಾವಿತನಾಗಿದ್ದೆ. ಅವರು ಚಾರ್ವಾಕ, ಬುದ್ಧ ಮತ್ತು ಮಾರ್ಕ್ಸ್‌ನ ಪರಂಪರೆಯನ್ನು ಒಯ್ಯುತ್ತಾರೆ ಎಂಬುವುದನ್ನು ಕಂಡುಕೊಂಡಿದ್ದೇನೆ. ಆಗ ಇದ್ದ ಎಲ್ಲಾ ರೀತಿಯ ಆಚರಣೆಗಳನ್ನು ಮತ್ತು ಸಾಮಾಜಿಕ ತಾರತಮ್ಯಗಳನ್ನು ಅವರು ತಿರಸ್ಕರಿಸಿದ್ದರು” ಎಂದು ತೇಲ್ತುಂಬ್ಡೆ ಹೇಳಿದ್ದಾರೆ.
2020-21, 2021-22, 2022-23 ಮತ್ತು 2023-24 ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ 75 ಗಣ್ಯ ವ್ಯಕ್ತಿಗಳಲ್ಲಿ ತೇಲ್ತುಂಬ್ಡೆ ಕೂಡ ಒಬ್ಬರಾಗಿದ್ದಾರೆ. ಬಸವ ರಾಷ್ಟ್ರೀಯ ಪುರಸ್ಕಾರವು ಸಾಮಾಜಿಕ ಸುಧಾರಣೆಗಳು ಮತ್ತು ಕೋಮು ಸೌಹಾರ್ದತೆಗಾಗಿ ಕೆಲಸ ಮಾಡಿರುವ ವ್ಯಕ್ತಿಗಳಿಗೆ ನೀಡುವ ಪ್ರಶಸ್ತಿಯಾಗಿದೆ.
ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್ Janashakthi Media