ಜೆಡಿಎಸ್ ಗೆ ಮತ್ತೊಂದು ಹೊಡೆತ: ತೆನೆ ಇಳಿಸಿ ಕಮಲ ಸೇರ್ಪಡೆಗೆ ಮುಂದಾದ ಆನಂದ್ ಅಸ್ನೋಟಿಕರ್?

ಕಾರವಾರ: ವಿಧಾನಪರಿಷತ್ ಸಭಾಪತಿ, ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಇದೀಗ ಜೆಡಿಎಸ್ ಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದ್ದು, ಮಾಜಿ ಸಚಿವ, ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ನಾಯಕ ಆನಂದ್ ಅಸ್ನೋಟಿಕರ್ ಕೂಡ ಬಿಜೆಪಿ ಸೇರ್ಪಡೆಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ತಿಂಗಳ ಅಂತ್ಯದೊಳಗೆ ಜೆಡಿಎಸ್ ತೊರೆಯುವ ಬಗ್ಗೆ ಆನಂದ್ ಅಸ್ನೋಟಿಕರ್ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಆನಂದ್ ಅಸ್ನೋಟಿಕರ್ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರೊಬ್ಬರನ್ನು ಭೇಟಿಯಾಗಿದ್ದು, ಪಕ್ಷ ಸೇರುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಆದರೆ ಕಾರವಾರದಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕ್ ಬಿಜೆಪಿಯಲ್ಲಿ ಸಾಕಷ್ಟು ಪ್ರಭಾವಿ ನಾಯಕಿಯಾಗಿದ್ದು ಅಸ್ನೋಟಿಕರ್ ಪಕ್ಷ ಸೇರ್ಪಡೆಗೆ ಸುಲಭವಾಗಿ ಬಿಟ್ಟುಕೊಡಲ್ಲ ಎಂಬ ಮಾತಿದೆ. ಒಂದು ವೇಳೆ ಅಸ್ನೋಟಿಕರ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರೆ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ರಾಜಕೀಯವಾಗಿ ಸಾಕಷ್ಟು ಬದಲಾವಣೆಯಾಗುವ ನಿರೀಕ್ಷೆ ಇದೆ.

ಆನಂದ್ ಅಸ್ನೋಟಿಕರ್ ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಾಲಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಇದೀಗ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಆನಂದ್ ಅಸ್ನೋಟಿಕರ್ ಹಾಗೂ ಅನಂತ್ ಕುಮಾರ್ ಹೆಗಡೆ ಎದುರಾಳಿಗಳಾಗಿದ್ದರು. ಬಳಿಕ ಆನಂದ್ ಅಸ್ನೋಟಿಕರ್ ತಾಯಿ ಶುಭಲತಾ ಅಸ್ನೋಟಿಕರ್ ಅಧ್ಯಕ್ಷರಾಗಿದ್ದ ಸಹಕಾರಿ ಬ್ಯಾಂಕ್ ಅನಂತ್ ಕುಮಾರ್ ಹೆಗಡೆಯವರ ಕದಂಬ ಸಂಸ್ಥೆಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಆನಂದ್ ಅಸ್ನೋಟಿಕರ್ ಹಾಗೂ ಅನಂತ್ ಕುಮಾರ್ ಹೆಗಡೆ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿದ್ದು, ಆನಂದ್ ಅಸ್ನೋಟಿಕರ್ ಬಿಜೆಪಿ ಸೇರ್ಪಡೆಗೆ ಸಂಸದರು ಸಮ್ಮತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *