ಜನಮತ 2023 : ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ತೀರದ ಗೊಂದಲ!

                                                                                                                                                      ಕೆ.ಶಶಿಕುಮಾರ್‌, ಮೈಸೂರು

ಈ ಬಾರಿಯ ಚುನಾವಣೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲರ ನಿರೀಕ್ಷೆಯಂತೆ ಗಮನ ಸೆಳೆಯುವ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ದಟ್ಟವಾಗಿದ್ದರೂ ಅಂತಿಮವಾಗಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗುವ ನಿರೀಕ್ಷೆಯಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಲಾಗಿದೆ. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಸಿದ್ದರಾಮಯ್ಯ ಅವರಂತಹ ಹಿರಿಯ ನಾಯಕರನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿಯ ರಾಷ್ಟ್ರೀಯ ನಾಯಕರು ಅದಕ್ಕಾಗಿ ಸೋಮಣ್ಣ ಅವರನ್ನು ಸ್ಪರ್ಧಾಳುವಾಗಿಸಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ನಿಲ್ಲಿಸಿ ಯುವ ಮತದಾರರ ಬೆಂಬಲ ಗಿಟ್ಟಿಸಿ ಗೆಲುವು ಸಾಧಿಸಬಹುದು ಎಂದು ಬಿಜೆಪಿ ನಾಯಕರು ಭಾವಿಸಿದ್ದರು. ಆದರೆ ಸ್ವತಃ ಯಡಿಯೂರಪ್ಪ ಅವರು ಈ ಕಾರ್ಯತಂತ್ರಕ್ಕೆ ಒಪ್ಪದೇಹೋದರು. ತಾವು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದು ತಮ್ಮ ಪುತ್ರನಿಗೆ ಶಿಕಾರಿಪುರ ಕ್ಷೇತ್ರದ ಟಿಕೆಟ್‌ ಕೊಟ್ಟರೆ ಸಾಕು ಎಂದು ಅವರು ಪಟ್ಟು ಹಿಡಿದರು.

ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರನ್ನು ದೆಹಲಿಯಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಮಿತಿಯ ಸಭೆಯಿಂದ ಹೊರಗಿಡಲಾಯಿತು. ಹಾಗೆ ಸಭೆಯಿಂದ ಹೊರಬಂದ ಯಡಿಯೂರಪ್ಪ ಸೀದಾ ಬೆಂಗಳೂರಿಗೆ ಹಿಂದಿರುಗಿ ಸುಮ್ಮನೆ ಕುಳಿತುಬಿಟ್ಟರು. ಬಿಜೆಪಿಯಲ್ಲಿ ರಾಜಾಹುಲಿ ಎಂದೇ ಕರೆಸಿಕೊಳ್ಳುತ್ತಿದ್ದ ಯಡಿಯೂರಪ್ಪ ಅವರನ್ನು ಸಭೆಯಿಂದ ಹೊರಗಿಟ್ಟ ಬಿಜೆಪಿ ರಾಷ್ಟ್ರೀಯ ನಾಯಕರ ನಡೆಯನ್ನು ಯಡಿಯೂರಪ್ಪ ಅವರ ಬೆಂಬಲಿಗರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಯಡಿಯೂರಪ್ಪ ಅವರಿಗೆ ಅವಮಾನ ಮಾಡಲಾಗಿದೆ ಎಂಬುದೇ ಅವರ ಹಿಂದಿರುವ ಸ್ವಾಭಿಮಾನಿ ಅಭಿಮಾನಿಗಳ ನಿಲುವಾಗಿದೆ. ಯಡಿಯೂರಪ್ಪ ಅವರ ಬೆಂಬಲಿಗರ ಅಸಮಾಧಾನ ವರುಣ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರತಿಕೂಲ ಪರಿಸ್ಥಿತಿ ನಿರ್ಮಾಣ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ವಿ.ಸೋಮಣ್ಣ ಲಿಂಗಾಯತ ಸಮುದಾಯದ ಪ್ರಬಲ ನಾಯಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರೆ ಆ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಅಭಿಮಾನಿಗಳು, ಬೆಂಬಲಿಗರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಅಪಾರ ಮತಗಳು ಅಲ್ಲಿ ಯಾರದೇ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಬಲ್ಲವು. ಹೀಗಿರುವಾಗಿ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲು ತಂತ್ರ ಹೆಣೆದಿರುವ ಬಿಜೆಪಿಯ ಕೆಲವು ನಾಯಕರು ಈಗ ಅವರನ್ನು ಅವಮಾನಿಸಿ ಕಳುಹಿಸಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿರುವ ಆ ಮತದಾರರು ಬಿಜೆಪಿಯ ರಾಷ್ಟ್ರೀಯ ನಾಯಕರ ವಿರುದ್ಧದ ತಮ್ಮ ಸಿಟ್ಟನ್ನು ಮತದಾನದ ಸಂದರ್ಭದಲ್ಲಿ ತೋರಿಸಿದರೆ ಅದು ಬಿಜೆಪಿ ಅಭ್ಯರ್ಥಿಯ ಭವಿಷ್ಯವನ್ನು ಮಣ್ಣು ಮಾಡಬಹುದು ಎಂಬ ಆತಂಕ ಸೃಷ್ಟಿಯಾಗಿರುವುದು ಸುಳ್ಳೇನೂ ಅಲ್ಲ.

ಇದನ್ನೂ ಓದಿ : ಜನಮತ 2023 : ವಿಧಾನಸಭೆ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ

ಜೊತೆಗೆ ವಿ.ಸೋಮಣ್ಣ ಅವರಿಗೆ ವರುಣ ಕ್ಷೇತ್ರದ ಜೊತೆಗೆ ಚಾಮರಾಜನಗರ ಕ್ಷೇತ್ರದಲ್ಲೂ ಸ್ಪರ್ಧೆಗೆ ಬಿಜೆಪಿ ವರಿಷ್ಠರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಹೀಗಿರುವಾಗ ಸೋಮಣ್ಣ ಎರಡೂ ಕ್ಷೇತ್ರಗಳ ಕಡೆಗೆ ಸಮಾನ ಗಮನ ನೀಡುವುದು ಅಸಾಧ್ಯ ಎಂಬುದೇ ಈಗಿನ ಲೆಕ್ಕಾಚಾರ. ಸೋಮಣ್ಣ ಸಹ ತಮಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ತಮಗೆ ಒದಗಿಬಂದಿರುವ ಅವಕಾಶವನ್ನು ಗೆಲ್ಲುವ ಸಾಧನವಾಗಿ ಪರಿಗಣಿಸಿಲ್ಲ. ಬದಲಿಗೆ ಎರಡೂ ಕ್ಷೇತ್ರಗಳನ್ನು ನಿಭಾಯಿಸುವುದು ಹೇಗೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ ಎಂಬುದು ಅವರ ಆಪ್ತ ವಲಯ ನೀಡಿರುವ ಮಾಹಿತಿ. ಇಷ್ಟೇ ಅಲ್ಲದೆ ಸೋಮಣ್ಣ ಅವರು ʻಸಿದ್ದರಾಮಯ್ಯ ವಿರುದ್ಧ ನಾನೇಕೆ ಸ್ಪರ್ಧಿಸಲಿ?ʼ ಎಂಬ ಹೇಳಿಕೆಯೊಂದನ್ನು ಕೆಲವು ದಿನಗಳ ಹಿಂದೆಯಷ್ಟೇ ನೀಡಿದ್ದರು. ಜೊತೆಗೆ ʻನಾನು ವರುಣ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲʼ ಎಂದೂ ಹೇಳಿದ್ದರು. ಆದರೆ ಸೋಮಣ್ಣ ಅವರು ಸ್ಪರ್ಧಿಸಲು ಇಷ್ಟವೇ ಇಲ್ಲದ ಕ್ಷೇತ್ರದಲ್ಲೇ ಅವರನ್ನು ಬಿಜೆಪಿ ತನ್ನ ಹುರಿಯಾಳನ್ನಾಗಿ ಕಣಕ್ಕಿಳಿಸಿದೆ. ಹೀಗಾಗಿ ಸ್ವತಃ ಬಿಜೆಪಿ ಅಭ್ಯರ್ಥಿಯೇ ಗೊಂದಲಕ್ಕೀಡಾಗಿರುವಾಗ ವರುಣ ಕ್ಷೇತ್ರದಲ್ಲಿ ಅಂತಿಮವಾಗಿ ಸಿದ್ದರಾಮಯ್ಯ ಅವರಿಗೆ ಗೆಲುವು ಒಲಿಯಲಿದೆ ಎಂಬ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಕಳೆದ ಬಾರಿಯ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಅವರನ್ನು ಸೋಲಿಸಲು ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿಯಿಂದ ಸ್ಪರ್ಧೆಗಿಳಿಸಲಾಗುವುದು ಎಂದು ಹೇಳಲಾಗುತ್ತಿತ್ತು. ಆದರೆ ಕೊನೇ ಘಳಿಗೆಯಲ್ಲಿ ಯಡಿಯೂರಪ್ಪ ಅವರ ಸಲಹೆಯ ಮೇರೆಗೆ
ವಿಜಯೇಂದ್ರ ಸ್ಪರ್ಧೆಗಿಳಿಯಲಿಲ್ಲ. ಹೀಗಾಗಿ ಯತೀಂದ್ರ ಅವರಿಗೆ ನಿರಾಯಾಸದ ಗೆಲುವು ಲಭ್ಯವಾಯಿತು. ಅಂದು ನಡೆದ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಿದ್ದರಾಮಯ್ಯ ಎಂಬ ರಾಜಕೀಯ ಮುತ್ಸದ್ಧಿಯನ್ನು ವಿರೋಧಿಸಲು ಅವರ ವಿರೋಧಿಗಳಿಗೂ ಮನಸ್ಸಿಲ್ಲ ಎಂಬುದು ನಿಚ್ಚಳವಾಗುತ್ತದೆ. ಈ ಸಂದರ್ಭದಲ್ಲಿ ಇದು ಗಮನಿಸಬೇಕಾದ ಬಹುಮುಖ್ಯ ಅಂಶ.

Donate Janashakthi Media

Leave a Reply

Your email address will not be published. Required fields are marked *