ಮಂಗಳೂರು: ಕರ್ತವ್ಯನಿರತ ಮಹಿಳಾ ಪಿಎಸ್ಐ ಒಬ್ಬರು ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಬ್ ಇನ್ಸ್ಪೆಕ್ಟರ್ ಜ್ಯೋತಿ ಬಾಯಿ (33) ಅವರು ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಬುಧವಾರ ಮುಂಜಾನೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಜ್ಯೋತಿ ಅವರು 2010ನೇ ತಂಡದ ಅಧಿಕಾರಿ. ಅವರ ಪತಿ ಓಂಬೀರ್ ಸಿಂಗ್ ಪರ್ಮಾರ್ ಅವರು ಮಂಗಳೂರು ರಿಫೈನರೀಸ್ ಆ್ಯಂಡ್ ಪೆಟ್ರೊ ಕೆಮಿಕಲ್ಸ್ (ಎಂಆರ್ಪಿಎಲ್) ಸಂಸ್ಥೆಯಲ್ಲಿ ಸಹಾಯಕ ಕಮಾಂಡಂಟ್ ಆಗಿದ್ದಾರೆ. ಅವರಿಬ್ಬರೂ ರಾಜಸ್ತಾನದ ಭರತಪುರ ಜಿಲ್ಲೆಯವರು.
ಗುಂಡೇಟಿನಿಂದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಜ್ಯೋತಿಬಾಯಿ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಕೌಟುಂಬಿಕ ಕಾರಣದಿಂದಾಗಿ ಜ್ಯೋತಿ ಅವರು ಬುಧವಾರ ಬೆಳಿಗ್ಗೆ 6ರಿಂದ 6.15ರ ನಡುವೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.
‘ಆತ್ಮಹತ್ಯೆಗೆ ಯತ್ನಿಸುವ ಮುನ್ನ ಜ್ಯೋತಿ ಅವರು ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ, ‘ಕ್ಷಮಿಸು ಅಮ್ಮಾ. ನಾನು ಸ್ವಇಚ್ಛೆಯಿಂದಲೇ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದೇನೆ. ಯಾರೂ ನನಗೆ ಒತ್ತಡ ಹಾಕಿಲ್ಲ’ ಎಂದು ಹಿಂದಿಯಲ್ಲಿ ಬರೆದು ದಿನಾಂಕವನ್ನೂ ನಮೂದಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.