ನಾ ದಿವಾಕರ
ಭವಿಷ್ಯದ ಪೀಳಿಗೆಗೆ ಸ್ವಸ್ಥ ಪರಿಸರ ಉಳಿಸುವ ನಿಟ್ಟಿನಲ್ಲಿ ಜರ್ಮನಿಯ ದಿಟ್ಟ ಹೆಜ್ಜೆ
ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಯ ಸುತ್ತ ವಿಶ್ವದಾದ್ಯಂತ ಪರಿಸರವಾದಿಗಳ ಹಾಗೂ ಬಂಡವಾಳಶಾಹಿ ಅಭಿವೃದ್ಧಿ ಪಥದ ಸಮರ್ಥಕರ ನಡುವೆ ಚರ್ಚೆ ಸಂವಾದಗಳು ನಡೆಯುತ್ತಲೇ ಇವೆ. ನ್ಯೂಕ್ಲಿಯರ್ ಶಕ್ತಿಯ ಉತ್ಪಾದನೆಗಾಗಿ ಸ್ಥಾಪಿಸಲಾಗುವ ಪರಮಾಣು ಸ್ಥಾವರಗಳು ಪರಿಸರ ವಿನಾಶಕ್ಕೆ ಕಾರಣವಾಗುತ್ತವೆ ಎಂಬ ಪರಿಸರವಾದಿಗಳ ಆರೋಪಗಳ ನಡುವೆಯೇ ಈ ವಾದ, ಸಂವಾದ, ಸಂಕಥನಗಳು ಜಾಗತಿಕ ವಲಯದಲ್ಲಿ ಪ್ರಕಟವಾಗುತ್ತಿವೆ. ವಿಶ್ವದಾದ್ಯಂತ ಪರಿಸರವಾದಿಗಳು ನ್ಯೂಕ್ಲಿಯರ್ ಸ್ಥಾವರಗಳ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸುತ್ತಲೇ ಇದ್ದಾರೆ. ನ್ಯೂಕ್ಲಿಯರ್ ರಿಯಾಕ್ಟರ್‌ಗಳು ಮತ್ತು ಮುಚ್ಚಿಹಾಕಲಾಗುವ ರಿಯಾಕ್ಟರ್‌ಗಳಷ್ಟೇ ಅಲ್ಲದೆ, ಈ ರಿಯಾಕ್ಟರ್‌ಗಳಿಂದ ಹೊರಬೀಳುವ ನ್ಯೂಕ್ಲಿಯರ್ ತ್ಯಾಜ್ಯ ಹಾಗೂ ಹೊರಸೂಸುವ ವಿಕಿರಣಗಳು ಪರಿಸರಕ್ಕೆ ಅಪಾರ ಹಾನಿ ಉಂಟುಮಾಡುತ್ತವೆ ಎಂದು ಪರಿಸರವಾದಿಗಳು ವಾದಿಸುತ್ತಲೇ ಬಂದಿದ್ದಾರೆ.
ಜರ್ಮನಿಯ ವಿವೇಕಯುತ ನಡೆ :
ಈ ನಡುವೆಯೇ ವಿಶ್ವ ಪರಿಸರ ಹೋರಾಟಕ್ಕೆ ಉತ್ತೇಜನ ನೀಡುವಂತೆ ಜರ್ಮನಿ ತನ್ನ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದು ಪರಿಸರವಾದಿಗಳ ಗೆಲುವು ಎಂದೇ ಹೇಳಬಹುದು. “ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳಿಂದ ಉಂಟಾಗುವ ಪರಿಸರ ನಾಶವನ್ನು ತಡೆಗಟ್ಟಲಾಗಲೀ, ನಿಯಂತ್ರಿಸಲಾಗಲೀ ಸಾಧ್ಯವಿಲ್ಲ, ಹಾಗಾಗಿ ಜರ್ಮನಿಯ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರವನ್ನು ಸ್ಥಗಿತಗೊಳಿಸುವ ಮೂಲಕ ಜರ್ಮನಿಯ ಪರಿಸರವನ್ನು ರಕ್ಷಿಸಲಾಗುತ್ತದೆ, ಇದರಿಂದ ನ್ಯೂಕ್ಲಿಯರ್ ತ್ಯಾಜ್ಯದ ಪ್ರಮಾಣವನ್ನೂ ಕಡಿಮೆ ಮಾಡಲು ಸಾಧ್ಯವಾಗುತ್ತದೆ ” ಎಂದು ಜರ್ಮನಿಯ ಗ್ರೀನ್ ಪಕ್ಷದ ಸಂಸದರಾದ ಸ್ಟೆಫಿ ಲೆಮ್‌ಕೆ ಅವರು ಹೇಳಿರುವುದು ವಾಸ್ತವವೇ ಆಗಿದೆ. ಜರ್ಮನಿಯ ಆಡಳಿತಾರೂಢ ಪಕ್ಷಗಳಾದ ಎಸ್‌ಡಿಪಿ, ಗ್ರೀನ್ಸ್ ಪಾರ್ಟಿ ಮತ್ತು ಎಫ್‌ಡಿಪಿ ಪಕ್ಷಗಳು ಹಲವು ವರ್ಷಗಳ ಹಿಂದೆಯೇ ದೇಶದಲ್ಲಿ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಗೆ ಅಂತ್ಯ ಹಾಡಲು ಒಪ್ಪಂದ ಮಾಡಿಕೊಂಡಿದ್ದವು. 2011ರಲ್ಲೇ ಅಂದಿನ ಚಾನ್ಸಲರ್ ಅಂಗೆಲಾ ಮಾರ್ಕಲ್ ಅವರ ಆಳ್ವಿಕೆಯಲ್ಲಿ ಈ ಒಪ್ಪಂದಕ್ಕೆ ಸರ್ಕಾರದ ಅನುಮೋದನೆಯೂ ದೊರೆತಿತ್ತು.
ಈ ಒಪ್ಪಂದದ ಅನುಸಾರ 2022ರ ಅಂತ್ಯದ ವೇಳೆಗೆ ಜರ್ಮನಿಯ ಕಟ್ಟಕಡೆಯ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರವನ್ನು ಸ್ಥಗಿತಗೊಳಿಸಬೇಕಿತ್ತು. ಆದರೆ ಉಕ್ರೇನ್ ಯುದ್ಧದಿಂದ ಉಂಟಾದ ಬದಲಾದ ಸನ್ನಿವೇಶದಲ್ಲಿ ರಷ್ಯಾದಿಂದ ಇಂಧನ ಪೂರೈಕೆಗೆ ಅಡ್ಡಿಯಾಗುವ ಆತಂಕವೂ ಎದುರಾಗಿತ್ತು. ಈ ಆತಂಕಗಳ ನಡುವೆಯೂ ಜರ್ಮನಿಯ ಚಾನ್ಸಲರ್ ಒಲಾಲ್ ಸ್ಕೋಲ್ಜ್ ದೇಶದ ಕಡೆಯ ನ್ಯೂಕ್ಲಿಯರ್ ಸ್ಥಾವರದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದು, ಏಪ್ರಿಲ್ 15ರಂದು ಈ ಸ್ಥಾವರವನ್ನು ಬಂದ್ ಮಾಡಲಾಗಿದೆ. ಜರ್ಮನಿಯಲ್ಲಿ ನ್ಯೂಕ್ಲಿಯರ್ ಶಕ್ತಿ ಉತ್ಪಾದನೆಯ ಬಗ್ಗೆ 1961ರಿಂದಲೇ ವಾದ ವಿವಾದಗಳು ನಡೆಯುತ್ತಲೇ ಇವೆ. ಈ ಆರು ದಶಕಗಳಲ್ಲಿ ಜರ್ಮನಿ 19 ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿದ್ದು, ಕಟ್ಟಕಡೆಯದಾಗಿ 2002ರಲ್ಲಿ ಸ್ಥಾವರ ನಿರ್ಮಾಣವಾಗಿತ್ತು. 1970- 80ರ ದಶಕಗಳಲ್ಲಿ ಜರ್ಮನಿಯ ಏಕೀಕರಣಕ್ಕೂ ಮುನ್ನ ಪಶ್ಚಿಮ ಜರ್ಮನಿಯಲ್ಲಿ ಯುವ ಪೀಳಿಗೆಯ ಲಕ್ಷಾಂತರ ಜನರು ನ್ಯೂಕ್ಲಿಯರ್ ಸ್ಥಾವರಗಳ ವಿರುದ್ಧ ಪ್ರತಿಭಟನೆ ನಡೆಸಿದ್ದೇ ಅಲ್ಲದೆ ರಸ್ತೆಗಿಳಿದು ಹೋರಾಟಗಳನ್ನು ನಡೆಸಿದ್ದರು. 1986ರಲ್ಲಿ ಸೋವಿಯತ್ ರಷ್ಯಾದ ಚರ್ನೋಬಿಲ್‌ನ ನ್ಯೂಕ್ಲಿಯರ್ ರಿಯಾಕ್ಟರ್‌ನಲ್ಲಿ ಸಂಭವಿಸಿದ ಭೀಕರ ದುರಂತವು, ನ್ಯೂಕ್ಲಿಯರ್ ಸ್ಥಾವರಗಳಿಂದ ಮನುಕುಲಕ್ಕೆ ಉಂಟಾಗಬಹುದಾದ ಅಪಾಯ ಮತ್ತು ಪರಿಸರ ನಾಶದ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಿತ್ತು. ಆದರೂ ಜರ್ಮನಿಯ ಅಂದಿನ ಆಡಳಿತ ಪಕ್ಷಗಳು ನ್ಯೂಕ್ಲಿಯರ್ ಇಂಧನ ಉತ್ಪಾದನೆಯನ್ನು ಸಮರ್ಥಿಸಿದ್ದವು.
ಜರ್ಮನಿಯಲ್ಲಿ ನ್ಯೂಕ್ಲಿಯರ್ ವಿದ್ಯುತ್ ಬಳಕೆಯನ್ನು ಕ್ರಮೇಣವಾಗಿ ಕಡಿಮೆಮಾಡುವ ನೀತಿಗೆ 2002ರಲ್ಲೇ ಚಾಲನೆ ನೀಡಿದವರು ಗ್ರೀನ್ ಪಕ್ಷದ ಸಂಸದ, ಪರಿಸರ ಸಚಿವರಾಗಿದ್ದ ಜರ್ಗನ್ ಟ್ರಿಟಿನ್ ಅವರು. ಇವರ ಮೂಲಕವೇ ದೇಶದಲ್ಲಿ ನ್ಯೂಕ್ಲಿಯರ್ ವಿದ್ಯುತ್ ಸಮಾಪ್ತಿ ಮಾಡುವ ಮೊಟ್ಟಮೊದಲ ಯೋಜನೆ ಜಾರಿಯಾಗಿತ್ತು. ತದನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಕೊಂಚ ಮೃದು ಧೋರಣೆಯನ್ನು ಅನುಸರಿಸಿದ್ದವು. ಆದರೆ 2011ರಲ್ಲಿ ಜಪಾನ್‌ನ ಫುಕುಷಿಮಾ ನ್ಯೂಕ್ಲಿಯರ್ ರಿಯಾಕ್ಟರ್‌ನಲ್ಲಿ ಸಂಭವಿಸಿದ ದುರಂತವು ಜರ್ಮನಿಯ ಸ್ಥಾವರಗಳಿಗೆ ಅಂತ್ಯ ಹಾಡಲು ಕಾರಣವಾಗಿ ಪರಿಣಮಿಸಿತ್ತು. ಅಂದಿನ ಚಾನ್ಸಲರ್ ಆಂಗೆಲಾ ಮರ್ಕಲ್ ದೇಶದಲ್ಲಿ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಯನ್ನು ಸಮಾಪ್ತಿಗೊಳಿಸುವ ದೃಢ ನಿರ್ಧಾರ ಕೈಗೊಂಡಿದ್ದರು. 2002ರಲ್ಲಿ ಸಚಿವರಾಗಿದ್ದ ಟ್ರಿಟಿನ್ ಈಗಲೂ ಗ್ರೀನ್ ಪಾರ್ಟಿ ಸದಸ್ಯರಾಗಿ, ಬಂಡಸ್ಟಾಗ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಜರ್ಮನಿ ಸರ್ಕಾರದ ನಿರ್ಧಾರದ ಬಗ್ಗೆ ಹೀಗೆ ಹೇಳುತ್ತಾರೆ : “ ಇದು ಬಹಳ ಮುಖ್ಯವಾದ ದಿನ. ಏಕೆಂದರೆ ಇದು ಒಂದು ಕತೆಗೆ , ಅಂದರೆ ನ್ಯೂಕ್ಲಿಯರ್ ವಿದ್ಯುತ್ತನ್ನು ನಾಗರಿಕ ಬಳಕೆಗೆ ಒಳಪಡಿಸುವ ಕತೆಗೆ, ಅಂತ್ಯ ಹಾಡಿದ ದಿನ ” ಎಂದು ಹೇಳುತ್ತಾರೆ. ಜರ್ಮನಿಯ ಕೊನೆಯ ನ್ಯೂಕ್ಲಿಯರ್ ಸ್ಥಾವರವನ್ನು ಸ್ಥಗಿತಗೊಳಿಸಿರುವುದನ್ನೇ ಜರ್ಮನಿಯಲ್ಲಿ ನ್ಯೂಕ್ಲಿಯರ್ ವಿದ್ಯುತ್ ಬಳಕೆಯ ಸಂಪೂರ್ಣ ಅಂತ್ಯ ಎಂದು ಹೇಳಲಾಗುವುದಿಲ್ಲ. ನಾವು ಇನ್ನೂ ಲಕ್ಷಾಂತರ ವರ್ಷಗಳ ಕಾಲ ಅಪಾಯಕಾರಿ ನ್ಯೂಕ್ಲಿಯರ್ ತ್ಯಾಜ್ಯವನ್ನು ಸುರಕ್ಷಿತವಾಗಿ ದಾಸ್ತಾನು ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಟ್ರಿಟಿನ್ ಹೇಳುತ್ತಾರೆ.
ಯೂರೋಪ್-ಏಷ್ಯಾದ ಸನ್ನಿವೇಶ :
ಚರ್ನೋಬಿಲ್ ದುರಂತದ ಪರಿಣಾಮ ಇತರ ಐರೋಪ್ಯ ದೇಶಗಳಲ್ಲಿ ನ್ಯೂಕ್ಲಿಯರ್ ಸ್ಥಾವರಗಳನ್ನು ಶೀಘ್ರಗತಿಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಸ್ವೀಡನ್ ಈ ನಿಟ್ಟಿನಲ್ಲಿ ಮುಂಚೂಣಿ ರಾಷ್ಟ್ರವಾಗಿತ್ತು. ದುರಂತ ಸಂಭವಿಸಿದ ಕೂಡಲೇ ಸ್ವೀಡನ್ ನ್ಯೂಕ್ಲಿಯರ್ ವಿದ್ಯುಚ್ಚಕ್ತಿಗೆ ವಿದಾಯ ಹೇಳಿತ್ತು. ಇಟಲಿ ತನ್ನ ಎರಡು ಸ್ಥಾವರಗಳನ್ನು ಬಂದ್ ಮಾಡಿತ್ತು. ಆದಾಗ್ಯೂ ಒಂದು ದಶಕದ ನಂತರ ಎರಡೂ ದೇಶಗಳು ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಯನ್ನು ಪುನಾರಂಭಿಸಿದ್ದವು. ಇಂದು ಸ್ವೀಡನ್ನಿನಲ್ಲಿ ನ್ಯೂಕ್ಲಿಯರ್ ಸ್ಥಾವರಗಳು ದೇಶದ ಶೇ 30ರಷ್ಟ ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತವೆ. ನೆದರ್‌ಲೆಂಡ್, ಪೋಲೆಂಡ್, ಬೆಲ್ಜಿಯಂ ಮುಂತಾದ ದೇಶಗಳೂ ಸಹ ಇದೇ ಹಾದಿಯನ್ನು ಅನುಸರಿಸುವ ಸಾಧ್ಯತೆಗಳಿವೆ. 57 ನ್ಯೂಕ್ಲಿಯರ್ ಸ್ಥಾವರಗಳನ್ನು ಹೊಂದಿರುವ ಫ್ರಾನ್ಸ್ ವಿಶ್ವದ ಅತಿದೊಡ್ಡ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದಕ ರಾಷ್ಟ್ರವಾಗಿದೆ. ಯೂರೋಪಿನ 27 ದೇಶಗಳ ಪೈಕಿ 13ರಲ್ಲಿ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ.
ಜರ್ಮನಿ ಸರ್ಕಾರದ ಈ ನಿರ್ಧಾರ ಪರಿಸರವಾದಿಗಳ ಗೆಲುವು ಎಂದು ಹೇಳಬಹುದಾದರೂ, ಕೆಲವು ಜಾಗತಿಕ ಸಂಘಟನೆಗಳು ಈ ನಿಲುವನ್ನು ಖಂಡಿಸಿವೆ. ಜಾಗತಿಕ ಹವಾಮಾನ ನೀತಿಯ ದೃಷ್ಟಿಯಿಂದ ಹಾಗೂ ಸ್ವಚ್ಚ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಯನ್ನು ಸ್ವಾಗತಿಸುವ ಹಲವು ಸಂಘಟನೆಗಳು, ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಾಗುತ್ತಿರುವುದರಿಂದ ನ್ಯೂಕ್ಲಿಯರ್ ಸ್ಥಾವರಗಳು ಹೆಚ್ಚು ಲಾಭದಾಯಕವೂ , ಉಪಯುಕ್ತವೂ ಆಗಿರುತ್ತವೆ ಎಂದು ವಾದಿಸುತ್ತವೆ. ಅಂತಾರಾಷ್ಟ್ರೀಯ ಪರಮಾಣು ಇಂಧನನ ಸಂಸ್ಥೆ (IAEA) ವರದಿಯ ಪ್ರಕಾರ ವಿಶ್ವದಾದ್ಯಂತ 422 ನ್ಯೂಕ್ಲಿಯರ್ ರಿಯಾಕ್ಟರುಗಳು ಕಾರ್ಯಾಚರಣೆಯಲ್ಲಿದ್ದು ಇವುಗಳ ಸರಾಸರಿ ಜೀವಿತಾವಧಿ 31 ವರ್ಷಗಳು. 1996ರಲ್ಲಿ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆ ಶೇ 17.5ರಷ್ಟಿದ್ದು, 2021ರಲ್ಲಿ ಶೇ 10ಕ್ಕೆ ಕುಸಿದಿರುವುದು ಇದರ ವಿರುದ್ಧ ಜಾಗೃತಿ ಮೂಡಿರುವುದರ ಸಂಕೇತವಾಗಿಯೇ ಕಾಣುತ್ತದೆ. ಜರ್ಮನಿಯ ಸಂಸದ ಜರ್ಗನ್ ಟ್ರಿಟಿನ್ ಅವರು ಹೇಳುವಂತೆ “ ನ್ಯೂಕ್ಲಿಯರ್ ವಿದ್ಯುತ್ ಕ್ಷೇತ್ರದಲ್ಲಿ ಬೃಹತ್ ಬಂಡವಾಳವನ್ನು ಹೂಡಲು ಹೆಚ್ಚಿನ ಉತ್ಸಾಹ ಕಾಣದಿರಲು ಕಾರಣವೇನೆಂದರೆ ಇದು ಸ್ಪರ್ಧಾತ್ಮಕ ಉದ್ದಿಮೆಯಲ್ಲ. ಹೊಸ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರ ಸ್ಥಾಪನೆಯು ದುಬಾರಿಯಾಗುತ್ತದೆ. ಇದಕ್ಕೆ ಸಾರ್ವಜನಿಕರ ಹಣವನ್ನೂ ಬಳಸಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಸ್ಥಾವರದ ನಿರ್ಮಾಣದಲ್ಲಿ ವಿಳಂಬವಾಗುವುದೇ ಅಲ್ಲದೆ ಹೊಸ ಸ್ಥಾವರಗಳ ವಿರುದ್ಧ ಸ್ಥಳೀಯರ ವಿರೋಧವನ್ನೂ ಎದುರಿಸಬೇಕಾಗುತ್ತದೆ. ”
ಈ ಪರ ವಿರೋಧ ಚರ್ಚೆಗಳ ನಡುವೆಯೂ ಚೀನಾ, ರಷ್ಯಾ ಮತ್ತಿತರ ದೇಶಗಳು ನ್ಯೂಕ್ಲಿಯರ್ ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಮುಂದಾಗುತ್ತಿವೆ. ಚೀನಾದಲ್ಲಿ ಹೊಸ ಸ್ಥಾವರಗಳನ್ನು ವಿರೋಧಿಸುವ ನಾಗರಿಕ ಪ್ರತಿರೋಧವೇ ಇಲ್ಲದಿರುವುದರಿಂದ 47 ಸ್ಥಾವರಗಳ ನಿರ್ಮಾಣಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಚೀನಾ ಫ್ರಾನ್ಸ್‌ಗಿಂತಲೂ ಹೆಚ್ಚು ನ್ಯೂಕ್ಲಿಯರ್ ವಿದ್ಯುತ್ ಉತ್ಪಾದಿಸುತ್ತಿದೆ. ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಯಲ್ಲಿ ಇಂಗಾಲ ಹೊರಸೂಸುವಿಕೆಯೇ ಇಲ್ಲದಿರುವುದರಿಂದ, ಇದು ಹವಾಮಾನ ಸಂರಕ್ಷಣೆಗೆ ಪೂರಕವಾಗಿರುತ್ತದೆ ಎಂಬ ವಾದವನ್ನು ಮಂಡಿಸಲಾಗುತ್ತದೆ. 2001ರ ಭೀಕರ ಭೂಕಂಪದಲ್ಲಿ ಹಲವಾರು ಪರಮಾಣು ರಿಯಾಕ್ಟರುಗಳು ನಾಶವಾಗಿದ್ದರೂ, 2011ರ ಫುಕುಷಿಮಾ ದುರಂತದ ಹೊರತಾಗಿಯೂ ಜಪಾನ್ ಇಂದು ಹೆಚ್ಚಿನ ನ್ಯೂಕ್ಲಿಯರ್ ವಿದ್ಯುತ್ ಬಳಕೆಗೆ ಮತ್ತೊಮ್ಮೆ ಮುಂದಾಗುತ್ತಿದೆ. ಆ ಸಂದರ್ಭದಲ್ಲಿ ಜಪಾನ್ ಹಲವು ರಿಯಾಕ್ಟರುಗಳನ್ನು ಮುಚ್ಚಿಹಾಕಿತ್ತು. ಜಪಾನ್‌ನಲ್ಲಿ ನ್ಯೂಕ್ಲಿಯರ್ ಸ್ಥಾವರಗಳನ್ನು 70 ವರ್ಷಗಳವರೆಗೂ ಬಳಸಿಕೊಳ್ಳುವ ನೀತಿಯನ್ನೂ ಜಾರಿಗೊಳಿಸಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕ ಮನ್ನಣೆಯೂ ದೊರೆಯುತ್ತಿರುವುದು ವಿಡಂಬನೆಯಾದರೂ ವಾಸ್ತವ. ಭಾರತದಲ್ಲೂ 22 ನ್ಯೂಕ್ಲಿಯರ್ ರಿಯಾಕ್ಟರುಗಳು ಕಾರ್ಯೋನ್ಮುಖವಾಗಿದ್ದು 6780 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ಇಷ್ಟೇ ಅಲ್ಲದೆ ಇನ್ನೂ 8 ರಿಯಾಕ್ಟರುಗಳು ನಿರ್ಮಾಣ ಹಂತದಲ್ಲಿದ್ದು 6000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಅಂದಾಜು ಇದೆ.
ಪರಿಸರ ಹಾನಿಯ ಆತಂಕಗಳು :
ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಯಿಂದ ಉಂಟಾಗುವ ಪರಿಸರ ಹಾನಿಯ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಇಂಗಾಲ ಡೈ ಆಕ್ಸೈಡ್ (CO2) ಆಧಾರಿತ ಘಟಕಗಳಿಗೆ ಹೋಲಿಸಿದರೆ ನ್ಯೂಕ್ಲಿಯರ್ ಸ್ಥಾವರಗಳು ಪರಿಸರದ ದೃಷ್ಟಿಯಿಂದ ಶುದ್ಧ ಇಂಧನ ಉತ್ಪಾದಿಸುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇದು ಅರ್ಧಸತ್ಯ ಮಾತ್ರ. ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆ ಮತ್ತು ರಿಯಾಕ್ಟರುಗಳು ಪರಿಸರದ ಮೇಲೆ ಉಂಟು ಮಾಡುವ ದೀರ್ಘಕಾಲಿಕ ಅಪಾಯಗಳನ್ನು, ದುಷ್ಪರಿಣಾಮಗಳನ್ನು ವೈಜ್ಞಾನಿಕ ನೆಲೆಯಲ್ಲಿ ಪರಾಮರ್ಶೆ ಮಾಡಬೇಕಿದೆ. ನ್ಯೂಕ್ಲಿಯರ್ ಸ್ಥಾವರಗಳು ಹಸಿರುಮನೆ ಅನಿಲ (Greenhouse Gasses) ಹೊರಸೂಸುವುದಿಲ್ಲ ಹಾಗಾಗಿ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುವುದಿಲ್ಲ ಎನ್ನುವುದು ದಿಟವೇ ಆದರೂ, ನ್ಯೂಕ್ಲಿಯರ್ ತ್ಯಾಜ್ಯವನ್ನು ನಿರ್ವಹಿಸುವುದು ಕಷ್ಟಕರವಾಗಿರುವುದು, ರಿಯಾಕ್ಟರುಗಳಲ್ಲಿ ಸಂಭವಿಸುವ ಅಪಘಾತಗಳು (ಚರ್ನೋಬಿಲ್-ಫುಕುಷಿಮಾ ಇತ್ಯಾದಿ) ಮತ್ತು ಜಾಗತಿಕ ಭಯೋತ್ಪಾದನೆಯ ದೃಷ್ಟಿಯಿಂದ ಇವು ಅಪಾಯಕಾರಿಯಾಗಿ ಸಂಭವಿಸುತ್ತವೆ.
ತಮ್ಮ ಕಾರ್ಯಾಚರಣೆಯಲ್ಲಿ ನ್ಯೂಕ್ಲಿಯರ್ ಸ್ಥಾವರಗಳು ಇಂಗಾಲ ಡೈಆಕ್ಸೈಡ್ ಹೊರಸೂಸದೆ ಇರಬಹುದು ಆದರೆ ಸ್ಥಾವರಗಳನ್ನು ನಿರ್ಮಿಸುವ ಹಾಗೂ ನಿರ್ವಹಿಸುವ ಪ್ರಕ್ರಿಯೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಇಂಗಾಲವನ್ನು ಹೊರಸೂಸುತ್ತವೆ. ನ್ಯೂಕ್ಲಿಯರ್ ಸ್ಥಾವರಗಳು ಯರೇನಿಯಂ ಇಂಧನವನ್ನು ಬಳಸುತ್ತವೆ , ಹಾಗಾಗಿ ಯುರೇನಿಯಂ ಗಣಿಗಾರಿಕೆಯಿಂದ ಹೆಚ್ಚಿನ ಇಂಗಾಲ ಡೈಆಕ್ಸೈಡ್ ವಾತಾವರಣವನ್ನು ಕಲುಷಿತಗೊಳಿಸುತ್ತದೆ. ವಿಕಿರಣಶೀಲ (Radioactive) ತ್ಯಾಜ್ಯದ ಸಾಗಾಣಿಕೆಯ ಸಂದರ್ಭದಲ್ಲೂ ಇಂಗಾಲದ ಹೊರಸೂಸುವಿಕೆ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಅಷ್ಟೇ ಅಲ್ಲದೆ ನ್ಯೂಕ್ಲಿಯರ್ ಸ್ಥಾವರಗಳು ಚಾಲನೆಯಲ್ಲಿರುವಾಗ ವಿಕಿರಣಗಳು ವಾತಾವರಣವನ್ನು ಸಣ್ಣ ಪ್ರಮಾಣದಲ್ಲಾದರೂ ಪ್ರವೇಶಿಸುತ್ತಲೇ ಇರುತ್ತವೆ. ಇದರಿಂದ ಸ್ಥಾವರದ ಸಮೀಪ ವಾಸಿಸುವ ಜನರಲ್ಲಿ ಕ್ಯಾನ್ಸರ್ ರೋಗಲಕ್ಷಣಗಳು ಹೆಚ್ಚಾಗಿರುವುದನ್ನು ಅನೇಕ ವೈಜ್ಞಾನಿಕ, ವೈದ್ಯಕೀಯ ಸಂಶೋಧನೆಗಳು ಸಾಬೀತುಪಡಿಸಿವೆ. ಕಡಿಮೆಸ್ತರದ ವಿಕಿರಣಕ್ಕೆ ದೀರ್ಘಕಾಲ ತುತ್ತಾಗುವುದರಿಂದ ಡಿಎನ್‌ಎ ಸಹ ಹಾನಿಯಾಗುತ್ತದೆ ಎಂದೂ ಸಂಶೋಧನೆಗಳು ಹೇಳುತ್ತವೆ. ವನ್ಯಜೀವಿಗಳ ಮೇಲೆ, ಸಸ್ಯ ಸಂಕುಲಗಳ ಮೇಲೆ ಹಾಗೂ ಓಜೋನ್ ಪದರದ ಮೇಲೆ ವಿಕಿರಣದ ಪರಿಣಾಮಗಳ ಬಗ್ಗೆ ನಿಖರವಾಗಿ ಸೂಚನೆ ನೀಡುವ ಸಂಶೋಧನೆಗಳು ಇನ್ನೂ ನಡೆಯುತ್ತಲೇ ಇವೆ.
ಇದನ್ನೂ ಓದಿ : 19.20.21. – ಸಮಕಾಲೀನ ವಾಸ್ತವಗಳ ಹೃದಯಸ್ಪರ್ಶಿ ಅನಾವರಣ
ನ್ಯೂಕ್ಲಿಯರ್ ಸ್ಥಾವರಗಳಿಂದ ಅತಿ ಹೆಚ್ಚು ಪರಿಸರ ನಾಶವಾಗುವುದು ವಿಕಿರಣ ತ್ಯಾಜ್ಯದಿಂದ ಮತ್ತು ಅದರ ವಿಲೇವಾರಿ ಪ್ರಕ್ರಿಯೆಯಿಂದ. ಈ ತ್ಯಾಜ್ಯಗಳು ಭೂಮಿಯೊಳಗೆ ಆಳದಲ್ಲಿ ಹುದುಗಿಟ್ಟರೂ ನೂರಾರು ವರ್ಷಗಳ ಕಾಲ ವಿಕಿರಣಗಳನ್ನು ಸೂಸುತ್ತಾ ಪರಿಸರಕ್ಕೆ ಹಾನಿ ಉಂಟುಮಾಡುತ್ತಲೇ ಇರುತ್ತವೆ. ಬಹುಮಟ್ಟಿಗೆ ವಿಕಿರಣ ತ್ಯಾಜ್ಯಗಳನ್ನು ನ್ಯೂಕ್ಲಿಯರ್ ವಿದ್ಯುತ್ ಸ್ಥಾವರದಲ್ಲೇ ದಾಸ್ತಾನು ಮಾಡಲಾಗುತ್ತದೆ. ಜಾಗದ ಕೊರತೆ ಇದ್ದಾಗ ಸ್ಥಳಾಂತರಿಸಬೇಕಾಗುತ್ತದೆ. ಸ್ಥಳಾಂತರದ ವೇಳೆ ಅಪಘಾತ ಸಂಭವಿಸಿದರೆ, ಸೋರಿಕೆಯಾದರೆ ಭೀಕರ ಅವಘಡ ಸಂಭವಿಸುತ್ತದೆ. ಇಂದು ದೀರ್ಘಕಾಲಿಕ ದಾಸ್ತಾನು ಅಗತ್ಯವಿರುವ ವಿಕಿರಣ ತ್ಯಾಜ್ಯವು ಅಮೆರಿಕದ ಕ್ಯಾಲಿಫೋರ್ನಿಯಾದಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಯುಕ್ಕಾ ಪರ್ವತಗಳಲ್ಲಿ ತುಂಬಿಸುವಷ್ಟಿದೆ. ಒಟ್ಟು 70 ಮೆಟ್ರಿಕ್ ಟನ್ ವಿಕಿರಣ ತ್ಯಾಜ್ಯವನ್ನು ದೇಶದ 77 ರಿಯಾಕ್ಟರುಗಳಲ್ಲಿ ಶೇಖರಣೆ ಮಾಡಿರುವ ಅಮೆರಿಕ ಸರ್ಕಾರ ಯುಕ್ಕಾ ಪರ್ವತಗಳಲ್ಲಿ ಇದನ್ನು ಶೇಖರಿಸಲು ಯೋಚಿಸಿದ್ದು, ಇದರ ವಿರುದ್ಧವೂ ಸಾರ್ವಜನಿಕರ, ವಿಜ್ಞಾನಿಗಳ ಪ್ರತಿರೋಧ ವ್ಯಕ್ತವಾಗಿದೆ.
ಕಾರಣ ಯುಕ್ಕಾ ಪರ್ವತಗಳಲ್ಲಿ ಗರಿಷ್ಟ ಎಂದರೆ 77 ಮೆಟ್ರಿಕ್ ಟನ್ ವಿಕಿರಣ ತ್ಯಾಜ್ಯ ಸಂಗ್ರಹಿಸಬಹುದಾಗಿದೆ. ಆದರೆ ಅಮೆರಿಕದಲ್ಲಿ ಪ್ರತಿವರ್ಷ 2000 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಅಂದರೆ 2036ರ ವೇಳೆಗೆ ಯುಕ್ಕಾ ಪರ್ವತ ಪೂರ್ಣ ಭರ್ತಿಯಾದರೂ, ಅಷ್ಟೇ ಪ್ರಮಾಣದ ವಿಕಿರಣ ತ್ಯಾಜ್ಯ ವಿಲೇವಾರಿಗಾಗಿ ಸಿದ್ಧವಾಗಿರುತ್ತದೆ. ಇನ್ನೂ ಆತಂಕಕಾರಿ ಸಂಗತಿ ಎಂದರೆ ಯುಕ್ಕಾ ಪರ್ವತಗಳಿಗೆ ವಿಕಿರಣ ತ್ಯಾಜ್ಯವನ್ನು ಸಾಗಾಣಿಕೆ ಮಾಡಬೇಕಾದ ಹಾದಿಯಲ್ಲಿ ಹಲವಾರು ದೇಶಗಳ 44 ರಾಜ್ಯಗಳೂ ಬರುತ್ತವೆ, ಈ ಮಾರ್ಗದಲ್ಲೇ 123 ದಶಲಕ್ಷ ಜನರೂ ವಾಸ ಮಾಡುತ್ತಾರೆ. ಒಂದು ಅಪಘಾತ ಸಂಭವಿಸಿದರೂ ಅದರಿಂದ ಸಾವಿರಾರು ಅಮಾಯಕ ಜನರು ಸಾವಿಗೀಡಾಗುತ್ತಾರೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಾರೆ. ಮತ್ತೊಂದು ಅಘಾತಕಾರಿ ಅಂಶವೆಂದರೆ, ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳ ಶಾಖವನ್ನು ಕಡಿಮೆ ಮಾಡುವ ಸಲುವಾಗಿ ಶೀಥಲೀಕರಣದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಈ ಶೀಥಲಘಟಕಗಳು ಸಮುದ್ರಗಳಿಂದ ಅಥವಾ ನದಿಗಳಿಂದ ನೀರನ್ನು ಎಳೆದುಕೊಳ್ಳುತ್ತವೆ. ಈ ಪ್ರಕ್ರಿಯೆಯಲ್ಲಿ ಅಸಂಖ್ಯಾತ ಜಲಚರಗಳು ಅಪಾಯಕ್ಕೀಡಾಗುತ್ತವೆ. ನೀರಿನ ಬಳಕೆಯಾದ ನಂತರ ಮರಳಿ ಅದೇ ಬಿಸಿ ನೀರನ್ನು ಸಮುದ್ರಕ್ಕೆ ಅಥವಾ ನದಿಗೆ ಹರಿಸಲಾಗುತ್ತದೆ. ಈ ನೀರು ಸರಾಸರಿ ಶೇ 25ರಷ್ಟು ಹೆಚ್ಚು ಶಾಖ ಹೊಂದಿರುವುದರಿಂದ ಪುನಃ ಜಲಚರಗಳು ಅಪಾಯಕ್ಕೀಡಾಗುತ್ತವೆ.
ಭವಿಷ್ಯಕ್ಕಾಗಿ ಪರಿಸರ ರಕ್ಷಣೆ :
ಪರಿಸರ ಮಾಲಿನ್ಯ ಹಾಗೂ ಹವಾಮಾನ ನಾಶವನ್ನು ತಡೆಗಟ್ಟುವ ಉದ್ದೇಶದಿಂದ ಪರಿಸರ ಶುದ್ಧ ವಿದ್ಯುತ್ ಉತ್ಪಾದನೆ ವರ್ತಮಾನದ ತುರ್ತು ಅವಶ್ಕಯತೆಯಾಗಿದೆ. ಆದರೆ ಶುದ್ಧ ವಿದ್ಯುತ್ ಅಥವಾ ಶಕ್ತಿಯನ್ನು ನಿರ್ವಚಿಸುವ ನಿಟ್ಟಿನಲ್ಲಿ ಪರಿಸರದ ಮೇಲೆ ಉಂಟಾಗಬಹುದಾದ ದೀರ್ಘಕಾಲಿಕ ಪರಿಣಾಮಗಳನ್ನೂ ಯೋಚಿಸಬೇಕಾಗುತ್ತದೆ. ಜಲವಿದ್ಯುತ್ ಘಟಕಗಳಿಂದ ಅರಣ್ಯ ಸಂಪತ್ತು ನಾಶವಾಗುತ್ತದೆ, ಕಲ್ಲಿದ್ದಲು ಆಧಾರಿತ ಉಷ್ಣನ ವಿದ್ಯುತ್ ಸ್ಥಾವರಗಳೂ ಪರಿಸರವನ್ನು ನಾಶ ಮಾಡುತ್ತವೆ. ಈ ಎರಡು ಮೂಲಗಳಿಗೆ ಹೋಲಿಸಿದರೆ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆ ಕಡಿಮೆ ಹಾನಿಕಾರಕ ಎಂದು ಮೇಲ್ನೋಟಕ್ಕೆ ಕಾಣುವುದು ಸಹಜ. ಆದರೆ ದೀರ್ಘಕಾಲಿಕ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇವು ಭವಿಷ್ಯದ ಮನುಕುಲಕ್ಕೆ ಇನ್ನೂ ಹೆಚ್ಚು ಹಾನಿಕಾರಕವಾಗುತ್ತವೆ. ಸೌರ ಶಕ್ತಿ, ಪವನ ಶಕ್ತಿ ಜಿಯೋ ಥರ್ಮಲ್ (ಭೂಶಾಖ) ಶಕ್ತಿಯ ಮೂಲಕವೂ ವಿದ್ಯುತ್ ಉತ್ಪಾದನೆ ಸಾಧ್ಯವಿದೆ.
ಮೂಲತಃ ಔದ್ಯೋಗಿಕ ಚಟುವಟಿಕೆಗಳಿಗೆ ಮತ್ತು ವಾಣಿಜ್ಯ, ಉದ್ಯಮ ಹಾಗೂ ಕೈಗಾರಿಕಾ ಉತ್ಪಾದನೆಗಳಿಗೆ ಅತಿ ಹೆಚ್ಚು ಅವಶ್ಯಕವಾಗಿರುವ ವಿದ್ಯುತ್ ಪೂರೈಕೆಯನ್ನು ಸುಗಮಗೊಳಿಸಲು ಸರ್ಕಾರಗಳು ಹೆಚ್ಚು ಪರಿಸರ ಸ್ನೇಹಿ ವಿಧಾನಗಳನ್ನು ಅನುಸರಿಸಬೇಕಿದೆ. ಸ್ಥಳೀಯ ಮಟ್ಟದಲ್ಲೇ ಅವಶ್ಯವಿರುವ ಪ್ರಮಾಣದ ಸೌರ ಶಕ್ತಿ ಉತ್ಪಾದನೆ ಮತ್ತು ಮಿತವ್ಯಯದ ಬಳಕೆ ಹಾಗೂ ಮಿತವಾದ ವಿದ್ಯುತ್ ಬಳಕೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಸರ್ಕಾರಗಳು ಭವಿಷ್ಯದಲ್ಲಿ ಉಂಟಾಗಲಿರುವ ಪರಿಸರ ನಾಶವನ್ನು ತಪ್ಪಿಸಲು ಸಾಧ್ಯವಿದೆ. ಬಂಡವಾಳಶಾಹಿ ಆರ್ಥಿಕತೆಯು ಉತ್ತೇಜಿಸುವ ಹಿತಕರ-ಐಷಾರಾಮಿ ಜೀವನ ಶೈಲಿಯೂ ಸಹ ಹೆಚ್ಚಿನ ವಿದ್ಯುತ್ ಗಳಕೆಗೆ ಒಂದು ಕಾರಣವಾಗಿದೆ. ಈ ಸನ್ನಿವೇಶದಲ್ಲೂ ಬಂಡವಾಳಶಾಹಿ ದೇಶವಾದ ಜರ್ಮನಿ ಈ ನಿಟ್ಟಿನಲ್ಲಿ ಒಂದು ಪರಿಸರ ಸ್ನೇಹಿ ಹೆಜ್ಜೆ ಮುಂದಿಟ್ಟಿದೆ. ಭಾರತವನ್ನೂ ಸೇರಿದಂತೆ, ವಿಶ್ವದ ಪ್ರಜ್ಞಾವಂತ ನಾಗರಿಕರೂ, ವಿಶಾಲ ಸಮಾಜವೂ ಹೀಗೆಯೇ ಯೋಚಿಸುವುದೇ ಕಾದುನೋಡಬೇಕಿದೆ.
(ಜರ್ಮನಿಯ ಬೆಳವಣಿಗೆಗಳಿಗೆ ಆಧಾರ ಇಂಡಿಯನ್ ಎಕ್ಸ್‌ಪ್ರೆಸ್ ವರದಿ -16 ಏಪ್ರಿಲ್ 2023)