ಕನಿಷ್ಟ ಬೆಂಬಲ ಬೆಲೆ: ಕೇಂದ್ರ ಸಚಿವರ ವಿಲಕ್ಷಣ ತರ್ಕ & ರೈತ ಕೃಷಿಯನ್ನು ದುರ್ಬಲಗೊಳಿಸುವ ಧೋರಣೆ

                                                                                                        ಪ್ರೊ. ಪ್ರಭಾತ್ ಪಟ್ನಾಯಕ್
                                                                                                              ಅನು:ಕೆ.ಎಂ.ನಾಗರಾಜ್

ರಬ್ಬರ್ ಮಾರುಕಟ್ಟೆಯಲ್ಲಿ ತಮ್ಮ ಸರ್ಕಾರವು ಹಸ್ತಕ್ಷೇಪ ಮಾಡದಿರುವ ಕ್ರಮವನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರದ ಹಿರಿಯ ಸಚಿವರೊಬ್ಬರು ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಏಕೆ? ಏಕೆಂದರೆ ಕಾರ್ಪೊರೇಟ್-ಹಿಂದುತ್ವ ಮೈತ್ರಿಯನ್ನು ಅವಲಂಬಿಸಿರುವ ಈ ಸರ್ಕಾರವು, ತನ್ನ ವರ್ಗಗುಣಕ್ಕೆ ಅನುಗುಣವಾಗಿ ರೈತ-ಕೃಷಿಯನ್ನು ದುರ್ಬಲಗೊಳಿಸಿ ಅದನ್ನು ಕೃಷಿ ಕಾರ್ಪೊರೇಟ್‌ಗಳಿಗೆ ಅಧೀನಗೊಳಿಸಲು ಉತ್ಸುಕವಾಗಿದೆ. ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ ಅಗತ್ಯದ ಬಗ್ಗೆ ಈಗ ಮಾತನಾಡುತ್ತಿರುವ ಈ ಸರಕಾರವೇ ಕೆಲವು ತಿಂಗಳ ಹಿಂದಷ್ಟೇ ಕುಖ್ಯಾತ ಮೂರು ಕೃಷಿ ಕಾನೂನುಗಳ ಮೂಲಕ ಆಹಾರ ಧಾನ್ಯಗಳಿಗೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ರದ್ದುಪಡಿಸಲು ಯೋಜಿಸುತ್ತಿತ್ತು. ಆ ಕಾನೂನುಗಳನ್ನು ಹಿಂಪಡೆಯುವವರೆಗೂ ರೈತರು ಇಡೀ ವರ್ಷ ಪೂರ್ತಿ ಹೋರಾಟ ಮಾಡಿದರು. ಈಗ ಅದೇ ಮಂದಿ ವಾಣಿಜ್ಯ ಬೆಳೆಗಳಿಗೆ ಅದರ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಇತ್ತ ಕೇರಳದ ಎಲ್‌ಡಿಎಫ್ ಸರಕಾರ ಕಿಲೋಗೆ 170 ರೂ.ಗಳ ಕನಿಷ್ಠ ಬೆಲೆಯನ್ನು ನಿಗದಿಪಡಿಸಿ ರಬ್ಬರ್ ಬೆಬೆಳೆಗಾರರಿಗೆ ಪರಿಹಾರ ಪ್ರಕಟಿಸಿದೆ.

 

ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ರಬ್ಬರ್ ಬೆಲೆಗಳು ಕುಸಿದಿದ್ದವು. ನಂತರ ಸ್ವಲ್ಪ ಏರಿದವು. ಈಗ ಮತ್ತೆ ಕುಸಿದಿವೆ. ದೇಶದಲ್ಲಿ ಶೇ. 80ರಷ್ಟು ರಬ್ಬರನ್ನು ಬೆಳೆಯುವ ಕೇರಳದ ರೈತರು ಬೆಲೆ ಕುಸಿತದಿಂದಾಗಿ ಅಪಾರ ಕಷ್ಟ-ನಷ್ಟಗಳನ್ನು  ಅನುಭವಿಸುತ್ತಿದ್ದಾರೆ. ರಬ್ಬರ್ ಬೆಳೆಗಾರರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದೆ. ಈ ನಿರಾಕರಣೆಯನ್ನು ಸಮರ್ಥಿಸಲು ಅದು ಮುಂದಿಡುವ ವಾದಗಳನ್ನು ಒಪ್ಪಲಾಗದು. ರಬ್ಬರ್ ಬೆಲೆಗಳ ಕುಸಿತದ ಸಂಬಂಧವಾಗಿ ಸಿಪಿಐ(ಎಂ) ಎಂ.ಪಿಗಳು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್
ಗೋಯೆಲ್ ಅವರನ್ನು ಬೆಳೆಗಾರರ ಪರವಾಗಿ ಭೇಟಿ ಮಾಡಿ, ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆಯನ್ನು ಕೊಡುವ ವ್ಯವಸ್ಥೆ ಮಾಡುವಂತೆ ಕೋರಿದರು. ಈ ಕೋರಿಕೆಯನ್ನು ಸಚಿವರು ಸಾರಾಸಗಟಾಗಿ ತಿರಸ್ಕರಿಸಿದರು. ವಾಣಿಜ್ಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ನಿಗದಿಪಡಿಸುವುದು ಕೇಂದ್ರದ ನೀತಿಯಲ್ಲ ಎಂಬುದು ಅವರ ವಾದ. ತಮ್ಮ ವಾದವನ್ನು ಸಚಿವರು ಹೀಗೆ ವಿವರಿಸಿದರು (ನ್ಯೂಸ್ ಕ್ಲಿಕ್ ಮಾರ್ಚ್ 28): "ಕನಿಷ್ಠ ಬೆಂಬಲ ಬೆಲೆ ಪದ್ಧತಿಯ ಅಡಿಯಲ್ಲಿ ಸಾಮಾನ್ಯವಾಗಿ ವ್ಯಾಪಕವಾಗಿ ಬೆಳೆಯುವ ಮತ್ತು ಆಹಾರ ಭದ್ರತೆಗೆ ಅವಶ್ಯಕವಾಗಿರುವ ಮತ್ತು ಹೆಚ್ಚು ಹೆಚ್ಚು ಜನರು ಬಳಸುವ ಮತ್ತು ಸಾಕಷ್ಟು ದೀರ್ಘ ಬಾಳಿಕೆ ಬರುವ ಬೆಳೆಗಳನ್ನು ಮಾತ್ರ ಪರಿಗಣಿಸಲಾಗುವುದು". ವಾಣಿಜ್ಯ ಬೆಳೆಗಳು ಈ ಮಾನದಂಡಗಳಿಗೆ ಒಳಪಡುವುದಿಲ್ಲ ಎಂದು ಅವರು ಹೇಳಿದರು.

ಎಂಎಸ್‌ಪಿಯ ಆವಶ್ಯಕತೆ :
ಸಚಿವರ ಈ ಹೇಳಿಕೆಯು ಒಂದು ವಿಲಕ್ಷಣ ತರ್ಕವೇ ಸರಿ. ಕನಿಷ್ಠ ಬೆಂಬಲ ಬೆಲೆ ಪದ್ಧತಿಯನ್ನು ಜಾರಿಗೊಳಿಸಿದ ಹಿನ್ನೆಲೆ ಮತ್ತು ಅದರ ಅವಶ್ಯಕತೆ ಈಗಲೂ ಇದೆ, ಏಕೆ ಎಂಬುದು ಸಚಿವರಿಗೆ ತಿಳಿದಿಲ್ಲ. ಒಂದು ಸರಕಿನ ಬೆಲೆಯು ಬಹಳ ದಿನಗಳ ಕಾಲ ಹೆಚ್ಚು ಕಡಿಮೆ ಸ್ಥಿರವಾಗಿ ಉಳಿದರೆ, ಆಗ ಕನಿಷ್ಠ ಬೆಂಬಲ ಬೆಲೆಯ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಆದರೆ, ಒಂದು ನಿರ್ದಿಷ್ಟ ಪೈರಿನ(ಬೆಳೆಯ) ಬೆಲೆಯು ಆಗಾಗ ಏರಿಳಿತಗಳಿಗೆ ಒಳಗಾಗುತ್ತಲೇ ಇದ್ದರೆ, ಆ ನಿರ್ದಿಷ್ಟ ಪೈರಿಗೆ ಒಂದು ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವ ಅವಶ್ಯಕತೆ ಉದ್ಭವಿಸುತ್ತದೆ. ಏಕೆಂದರೆ, ಈ ಏರಿಳಿತಗಳಿಂದಾಗಿ ರೈತರಿಗೆ ಹೆಚ್ಚಿನ ತೊಂದರೆಗಳನ್ನು ಉಂಟುಮಾಡುವ ಬೆಲೆ ಕುಸಿತವನ್ನು ತಪ್ಪಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಬೆಲೆಗಳ ಏರಿಳಿತಗಳು ರೈತರಿಗೆ ಉಂಟುಮಾಡುವ ತೊಂದರೆಗಳಿಂದ ಅವರನ್ನು ರಕ್ಷಿಸುವ ಸಲುವಾಗಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕಾದ ಅವಶ್ಯಕತೆ ಇದೆಯೇ ವಿನಃ, ಯಾವುದೇ ಒಂದು ಬೆಳೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದಕ್ಕೂ ಮತ್ತು ಕನಿಷ್ಠ ಬೆಂಬಲ ಬೆಲೆಗೂ ಯಾವ ಸಂಬಂಧವೂ ಇಲ್ಲ. ಮತ್ತು ವಾಣಿಜ್ಯ ಬೆಳೆಗಳ ಬೆಲೆ ಏರಿಳಿತಗಳ ಸಾಧ್ಯತೆ-ಸಂದರ್ಭಗಳು
ಸಾಮಾನ್ಯವಾಗಿ ಆಹಾರ ಧಾನ್ಯಗಳಿಗಿಂತಲೂ ಹೆಚ್ಚಿಗೆ ಇರುತ್ತವೆ.  ಬೆಲೆ ಕುಸಿತದ ಕಾರಣವನ್ನು ಹೀಗೆ ವಿವರಿಸಬಹುದು: ಕನಿಷ್ಠ ಬೆಂಬಲ ಬೆಲೆಯ ರೂಪದಲ್ಲಿ ಒಂದು ವೇಳೆ ಸರ್ಕಾರದ ಬೆಂಬಲವಿಲ್ಲದಿದ್ದರೆ, ಆಗ ಒಂದು ಅಧಿಕ ಪೂರೈಕೆಯ ಪರಿಸ್ಥಿತಿಯಲ್ಲಿ ಆ ಪೈರಿನ/ಬೆಳೆಯ ಬೆಲೆ ಕುಸಿಯುತ್ತಲೇ ಹೋಗುತ್ತದೆ. ಎಲ್ಲಿಯವರೆಗೆ ಬೆಲೆಗಳು ಕುಸಿಯುತ್ತವೆ ಎಂದರೆ, ಯಾವ ನಿರ್ದಿಷ್ಟ ಬೆಲೆ ಮಟ್ಟದಲ್ಲಿ ಮಾರುಕಟ್ಟೆಯಲ್ಲಿರುವ ಅಧಿಕ ಪೂರೈಕೆಯ ದಾಸ್ತಾನನ್ನು ಖಾಸಗಿ ದಾಸ್ತಾನುದಾರರು ಹಿಡಿದಿಟ್ಟುಕೊಳ್ಳುವುದು ಲಾಭದಾಯಕವೆಂದು ಕಂಡುಕೊಳ್ಳುವ ಮಟ್ಟವನ್ನು ತಲುಪುವ ವರೆಗೆ. ಈ ಮಟ್ಟವು, ಭವಿಷ್ಯದಲ್ಲಿ ಅದರ ಬೆಲೆಯು ಅದರ ಪ್ರಸ್ತುತ ಬೆಲೆಗಿಂತ ಎಷ್ಟು ಪಟ್ಟು ಹೆಚ್ಚು ಇರಬೇಕೆಂದು ಖಾಸಗಿ ದಾಸ್ತಾನುದಾರರು ನಿರೀಕ್ಷಿಸುತ್ತಾರೋ, ಅದನ್ನು ಅವಲಂಬಿಸಿರುತ್ತದೆ. ಪ್ರಸ್ತುತ ಬೆಲೆಯು ಕುಸಿಯುತ್ತಿರುವಾಗ, ಅದು ಯಾವ ಮಟ್ಟದಲ್ಲಿ ನಿಲ್ಲಬಹುದೆಂದು ಇಟ್ಟುಕೊಂಡ ನಿರೀಕ್ಷೆಯ ಮಟ್ಟದಲ್ಲಿ (ಅಥವಾ ಅದಕ್ಕಿಂತಲೂ ಕೆಳಗಿನ ಮಟ್ಟದಲ್ಲಿ) ಮಾತ್ರ ಅವರು ಹೆಚ್ಚು ದಾಸ್ತಾನುಗಳನ್ನು ಹಿಡಿದಿಟ್ಟುಕೊಳ್ಳಲು ಮುಂದಾಗುತ್ತಾರೆ. ಆಗ, ಪ್ರಸ್ತುತ ಬೆಲೆಯ ಕುಸಿತವು ನಿಲ್ಲುತ್ತದೆ. ಹಾಗಾಗಿ, ಕುಸಿತದ ನಂತರದ ಬೆಲೆಯ ನಿರೀಕ್ಷೆಯು ಎಷ್ಟು ಜಿಗುಟಾಗಿರುತ್ತದೆಯೋ ಅಷ್ಟು
ಮಟ್ಟಿಗೆ ಪ್ರಸ್ತುತ ಬೆಲೆ ಕುಸಿತವು ಕಡಿಮೆಯಾಗುತ್ತದೆ. ಬಹುಪಾಲು ಜನರಿಗೆ ಜೀವನಾಶ್ಯಕವಾಗಿರುವ ಬೆಳೆಗಳ ವಿಷಯದಲ್ಲಿ, ಅಂದರೆ, ಪಿಯೂಷ್ ಗೋಯೆಲ್ ಉಲ್ಲೇಖಿಸಿದ ಗುಣಲಕ್ಷಣಗಳನ್ನು ಹೊಂದಿರುವ ಬೆಳೆಗಳ ವಿಷಯದಲ್ಲಿ, ಬೆಲೆ ನಿರೀಕ್ಷೆಯು ಹೆಚ್ಚು ಜಿಗುಟಾಗಿರುತ್ತದೆ: ಹೀಗಾಗುತ್ತದೆ ಏಕೆಂದರೆ, ಅಂತಹ ಅಗತ್ಯ ಸರಕುಗಳಿಗೆ ಒಂದು ವೇಳೆ ಕನಿಷ್ಠ ಬೆಂಬಲ ಬೆಲೆ ಇಲ್ಲದಿದ್ದರೂ ಸಹ, ಬಹುಶಃ ನಿರ್ದಯ ವಸಾಹತುಶಾಹಿಯನ್ನು ಹೊರತುಪಡಿಸಿದರೆ, ಯಾವ ಸಮಾಜವೂ ಅತಿಯಾದ ಬೆಲೆ ಏರಿಳಿತಗಳನ್ನು ಸಹಿಸುವುದಿಲ್ಲ. ಆದರೆ ರಫ್ತಾಗುವ ಅಥವಾ ಕಡಿಮೆ ಅವಶ್ಯಕವೆನಿಸಿದ ಮತ್ತು ಅವುಗಳ ಬೇಡಿಕೆಯೇ ಏರು-ಪೇರಾಗುವ ಹಾಗೂ ಸರಕುಗಳ ಉತ್ಪಾದನೆಯಲ್ಲಿ ಆಂತರಿಕ ಲಾಗುವಾಡುಗಳಾಗಿ ಬಳಕೆಯಾಗುವ ವಾಣಿಜ್ಯ ಬೆಳೆಗಳ ವಿಷಯದಲ್ಲಿ, ಬೆಲೆ ನಿರೀಕ್ಷೆಯ ಸಮಸ್ಯೆಯು ಜಿಗುಟಾಗಿರುವುದಿಲ್ಲ. ವಾಣಿಜ್ಯ ಬೆಳೆಗಳ ಬೆಲೆಗಳು ಆಹಾರ ಧಾನ್ಯಗಳ ಬೆಲೆಗಳಿಗಿಂತಲೂ ಹೆಚ್ಚು ವ್ಯಾಪಕ ಏರಿಳಿತಗಳಿಗೆ ಒಳಗಾಗಲು ಇದು ಒಂದು ಕಾರಣವಾಗಿದೆ.

ಈ ಅಂಶವು ರಬ್ಬರ್ ಬೆಲೆಗಳಿಗೆ ಸಂಬಂಧಿಸಿದ ದತ್ತಾಂಶಗಳಿAದ ಸ್ಪಷ್ಟವಾಗುತ್ತದೆ. 2014ರಲ್ಲಿ ಒಂದು ಕಿಲೋ ನೈಸರ್ಗಿಕ ರಬ್ಬರ್‌ನ ಬೆಲೆಯು ಶೇ. 70ರಷ್ಟು ಇಳಿಕೆಯಾಗಿತ್ತು. 245 ರೂ.ಗಳಿಂದ 77 ರೂ.ಗಳಿಗೆ ಇಳಿದಿತ್ತು. ಅದೊಂದು ದುರಂತಮಯ ಇಳಿಕೆಯಾಗಿತ್ತು. ಇತ್ತೀಚೆಗೆ ಕೂಡ ಬೆಲೆಗಳು ಇಳಿದಿವೆ. 2021ರ ನವೆಂಬರ್‌ನಲ್ಲಿ ಸುಮಾರು 200 ರೂ.ಗಳ ಮಟ್ಟದಲ್ಲಿದ್ದ ಪ್ರತಿ ಕಿಲೋ ನೈಸರ್ಗಿಕ ರಬ್ಬರ್‌ನ ಬೆಲೆಯು ಈಗ 120 ರೂ.ಗೆ ಅಥವಾ ಶೇ. 40 ರಷ್ಟು ಇಳಿದಿದೆ. ಏರಿಳಿತಗಳು ಇಂತಹ ಹುಚ್ಚಾಬಟ್ಟೆ ಮಟ್ಟದಲ್ಲಿದ್ದಾಗ ಕನಿಷ್ಠ ಬೆಂಬಲ ಬೆಲೆಯ ರೂಪದಲ್ಲಿ ಕೇಂದ್ರ ಸರ್ಕಾರವು ಹಸ್ತಕ್ಷೇಪ ಮಾಡುವ ಅಗತ್ಯವಿರುತ್ತದೆ. ಏಕೆಂದರೆ ಈ ಕ್ರಮವು ಬೆಲೆ ಕುಸಿತಕ್ಕೆ ಒಂದು ಮಿತಿ ಹಾಕುವುದು ಮಾತ್ರವಲ್ಲದೆ, ಬೆಲೆ ಏರಿಳಿತಗಳ ಹರವಿಗೂ ಒಂದು ಮಿತಿ ಹಾಕುತ್ತದೆ.

ಸರಕು ಮಂಡಳಿಗಳು ಮತ್ತು ಬೆಲೆ ಸ್ಥಿರೀಕರಣ: 
ನಿಯಂತ್ರಣಗಳ (ಡಿರಿಜಿಸ್ಟ್) ವ್ಯವಸ್ಥೆಯಿದ್ದ ಅವಧಿಯಲ್ಲಿ ವಿವಿಧ ಸರಕು ಮಂಡಳಿಗಳು ನಿಜಕ್ಕೂ ಈ ಕಾರ್ಯವನ್ನೇ ನಿರ್ವಹಿಸುತ್ತಿದ್ದವು. ಒಂದು ನಿಗದಿಪಡಿಸಿದ ಕನಿಷ್ಠ ಬೆಲೆಯಲ್ಲಿ ಈ ಮಂಡಳಿಗಳು ವಾಣಿಜ್ಯ ಬೆಳೆಗಳನ್ನು ಸಂಗ್ರಹಿಸುತ್ತಿದ್ದವು ಮತ್ತು ಬೆಲೆ ಕುಸಿತದ ಸಾಧ್ಯತೆ ಇದ್ದಾಗಲೆಲ್ಲಾ ಜೋರಾಗಿ ಮಧ್ಯಪ್ರವೇಶ ಮಾಡುತ್ತಿದ್ದವು. ಆ ಮೂಲಕ ಆಂತರಿಕ ಬೆಲೆ ಏರಿಳಿತಗಳ ವ್ಯಾಪ್ತಿಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡಿದವು. ಆದರೆ ನವ ಉದಾರವಾದಿ ಆಳ್ವಿಕೆಯ ಜಾರಿಯೊಂದಿಗೆ, ಈ ಮಂಡಳಿಗಳು ಅಸ್ತಿತ್ವದಲ್ಲಿವೆಯಾದರೂ, ಅವುಗಳ ಸಂಗ್ರಹಣಾ ಮತ್ತು ಮಾರಾಟದ ಕಾರ್ಯವನ್ನು ಕೊನೆಗೊಳಿಸಲಾಗಿದೆ. ಇದರರ್ಥವೆಂದರೆ, ಬೆಲೆಗಳನ್ನು ಸ್ಥಿರಗೊಳಿಸಲು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡುವ ಆದೇಶವನ್ನು ಈ ಮಂಡಳಿಗಳು ಈಗ ಹೊಂದಿಲ್ಲ. ಈಗ, ಪಿಯೂಷ್ ಗೋಯೆಲ್ ಅವರು ಉಲ್ಲೇಖಿಸಿದ ಎರಡನೇ ಅಂಶವನ್ನು ನೋಡೋಣ. ಆಹಾರ ಧಾನ್ಯಗಳ ಬೆಲೆಗಳ ಸ್ಥಿರತೆಯು ಆಹಾರ ಭದ್ರತೆಯ ದೃಷ್ಟಿಯಲ್ಲಿ ಅತ್ಯಗತ್ಯ ಎಂದು ಅವರು ಹೇಳುತ್ತಾರೆ. ಆದರೆ ವಾಣಿಜ್ಯ ಬೆಳೆಗಳ ಬೆಲೆಗಳ ಸ್ಥಿರತೆಯು ಆಹಾರ ಭದ್ರತೆಯ ದೃಷ್ಟಿಯಲ್ಲಿ ಅಪ್ರಸ್ತುತವೆಂದು ಅವರು ಹೇಳುತ್ತಾರೆ. ಅವರ ಈ ವಾದವೂ ಅಸಂಬದ್ಧವೇ. ಆಹಾರ ಭದ್ರತೆಗಾಗಿ ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಅವಶ್ಯಕ ಎಂಬ ಅಂಶದ ಬಗ್ಗೆ ಎರಡು ಮಾತಿಲ್ಲ. ಆದರೆ ಒಟ್ಟು ಬೇಡಿಕೆಯನ್ನು ಹೆಚ್ಚಿಸುವ ಸಲುವಾಗಿ ವಾಣಿಜ್ಯ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನೀಡಬೇಕಾದುದೂ ಅಷ್ಟೇ ಮುಖ್ಯವಾಗುತ್ತದೆ. ಏಕೆಂದರೆ, ರಬ್ಬರ್‌ನಂತಹ ಒಂದು ವಾಣಿಜ್ಯ ಬೆಳೆಯ ಬೆಲೆ ಕುಸಿತವು ರಬ್ಬರ್ ಬೆಳೆಗಾರರ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅಂದರೆ, ಆಹಾರ ಧಾನ್ಯಗಳ ಬೆಲೆಗಳು ಸರಾಸರಿ ಲೆಕ್ಕದಲ್ಲಿ ಬದಲಾಗದಿದ್ದರೂ ಸಹ ಅವರು ಸಾಮಾನ್ಯವಾಗಿ ಕೊಳ್ಳುತ್ತಿದ್ದ ಪ್ರಮಾಣದ ಆಹಾರ ಧಾನ್ಯಗಳನ್ನು ರಬ್ಬರ್ ಬೆಲೆಗಳು ಕುಸಿದ ನಂತರ ಕೊಳ್ಳುವುದು ಅವರಿಗೆ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ : ಏಪ್ರಿಲ್ 11 ರಿಂದ 17 – ಕನಿಷ್ಟ ಬೆಂಬಲ ಬೆಲೆ ಖಾತರಿ ಸಪ್ತಾಹ ಆಚರಣೆ: ಎಸ್‍ಕೆಎಂ ಕರೆ

ವಿಷಯ ಅದಷ್ಟೇ ಅಲ್ಲ. ವಾಣಿಜ್ಯ ಬೆಳೆಗಳ ಬೆಲೆ ಕುಸಿತದ ಹೊರತಾಗಿಯೂ, ಬೆಳೆಗಾರರು ಸಾಮಾನ್ಯವಾಗಿ ಕೊಳ್ಳುವ ಅದೇ ಪ್ರಮಾಣದ ಆಹಾರ ಧಾನ್ಯಗಳನ್ನು ಖರೀದಿಸುತ್ತಾರೆ ಎಂದು ಒಂದು ಕ್ಷಣ ಊಹಿಸಿಕೊಳ್ಳೋಣ. ಇದರ ಅರ್ಥವೆಂದರೆ, ಅವರು ಆಹಾರ ಧಾನ್ಯಗಳನ್ನು ಹೊರತುಪಡಿಸಿ ಇತರ ಕೆಲವು ಸರಕುಗಳ ಖರೀದಿಯನ್ನು ಇಳಿಕೆ ಮಾಡಬೇಕಾಗುತ್ತದೆ. ಇದರ ಅರ್ಥವೆಂದರೆ, ಈ ಕೆಲವು ಸರಕುಗಳ ಉತ್ಪಾದಕರು ಬೆಲೆ ಕುಸಿತವಾಗುವ ಮೊದಲು ಎಷ್ಟು ಕೊಳ್ಳುವ ಶಕ್ತಿಯನ್ನು ಹೊಂದಿದ್ದರೋ, ಅದಕ್ಕಿಂತಲೂ ಕಡಿಮೆ ಕೊಳ್ಳುವ ಶಕ್ತಿಯನ್ನು ಈಗ ಹೊಂದಿದವರಾಗುತ್ತಾರೆ. ಅವರ ಕೊಳ್ಳುವ ಶಕ್ತಿಯ ಈ ಇಳಿಕೆಯು ಅವರು ಆಹಾರ ಧಾನ್ಯಗಳನ್ನು ಕೊಳ್ಳುವಾಗ ಅವರನ್ನು ಕೈ ಬಿಗಿ ಹಿಡಿಯುವಂತೆ ಮಾಡುತ್ತದೆ. (ಅಥವಾ ಅವರು ಹಾಗೆ ಕೈ ಬಿಗಿ ಹಿಡಿಯದಿದ್ದರೆ, ಅವರು ಕೊಳ್ಳುವ ಇತರ ಸರಕುಗಳ ಮೇಲಿನ ಖರ್ಚುನ್ನು ಕಡಿಮೆ ಮಾಡಬೇಕಾಗುತ್ತದೆ. ಅದರಿಂದಾಗಿ ಆ ಇತರ ಸರಕುಗಳನ್ನು ಮಾರುವ ಜನರು ತಮ್ಮ ಆಹಾರ ಧಾನ್ಯಗಳ ಖರೀದಿಯನ್ನು ಇಳಿಕೆ ಮಾಡಬೇಕಾಗುತ್ತದೆ. ಈ ಸರಣಿಯು ಹೀಗೆ ಸಾಗುತ್ತದೆ).

ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಆಹಾರ ಭದ್ರತೆಗಾಗಿ ಸಾಕಷ್ಟು ಆಹಾರದ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ, ಆಹಾರ ಧಾನ್ಯಗಳಿಗೆ ಸಾಕಷ್ಟು ಬೇಡಿಕೆ ಇರುವಂತಾಗಲು ಜನರ ಕೈಯಲ್ಲಿ ಸಾಕಷ್ಟು ಕೊಳ್ಳುವ ಶಕ್ತಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ಹಾಗಾಗಿ, ವಾಣಿಜ್ಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಒದಗಿಸುವ ಕ್ರಮವೂ ಸಹ ಜನರ ಬಳಿ ಸಾಕಷ್ಟು ಕೊಳ್ಳುವ ಶಕ್ತಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಒಂದು ಸಾಧನವಾಗುತ್ತದೆ. ಆಹಾರ ಭದ್ರತೆಯನ್ನು ಕೇವಲ ಸಾಕಷ್ಟು ಪ್ರಮಾಣದ ಆಹಾರ ಧಾನ್ಯಗಳನ್ನು ಬೆಳೆಯುವ ದೃಷ್ಟಿಯಲ್ಲಿ ನೋಡುವ ಕ್ರಮವು ಒಂದು ಅವಿವೇಕದ ಕೆಲಸವಾಗುತ್ತದೆ. ಆಹಾರ ಭದ್ರತೆ ಎಂದರೆ, ಆಹಾರ ಧಾನ್ಯಗಳಿಗೆ ಅರ್ಥವ್ಯವಸ್ಥೆಯಲ್ಲಿ ಸಾಕಷ್ಟು ಬೇಡಿಕೆ ಮತ್ತು ಸಾಕಷ್ಟು ಪೂರೈಕೆ ಇರುವಂತಹ ಪರಿಸ್ಥಿತಿಯೇ. ಅಂತಹ ಒಂದು ಪರಿಸ್ಥಿತಿಯನ್ನು, ಆಹಾರ ಧಾನ್ಯಗಳು ಮತ್ತು ವಾಣಿಜ್ಯ ಬೆಳೆಗಳು ಈ ಎರಡನ್ನೂ ಒಳಗೊಳ್ಳುವ ಕನಿಷ್ಠ ಬೆಂಬಲ ಬೆಲೆ ಆಳ್ವಿಕೆಯ ಮೂಲಕ ಮಾತ್ರ ಖಚಿತಪಡಿಸಿಕೊಳ್ಳಬಹುದು.

ಏಕೆ ಈ ಅಸಂಬದ್ಧ ತರ್ಕಗಳು?
ರಬ್ಬರ್ ಮಾರುಕಟ್ಟೆಯಲ್ಲಿ ತಮ್ಮ ಸರ್ಕಾರವು ಹಸ್ತಕ್ಷೇಪ ಮಾಡದಿರುವ ಕ್ರಮವನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರದ ಹಿರಿಯ ಸಚಿವರೊಬ್ಬರು ಇಂತಹ ಅಸಂಬದ್ಧ ಹೇಳಿಕೆಗಳನ್ನು ಏಕೆ ನೀಡುತ್ತಾರೆ ಎಂದು ಕೇಳಬಹುದು. ಈ ಸರ್ಕಾರವು ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ ಅಗತ್ಯದ ಬಗ್ಗೆ ಈಗ ಮಾತನಾಡುತ್ತಿದೆ. ವಾಣಿಜ್ಯ ಬೆಳೆಗಳಿಗೆ ಅಗತ್ಯವಿಲ್ಲ ಎಂದು ಹೇಳುತ್ತಿದೆ. ಆದರೆ, ಕೆಲವು ತಿಂಗಳ ಹಿಂದಷ್ಟೇ ಕುಖ್ಯಾತ ಮೂರು ಕೃಷಿ ಕಾನೂನುಗಳ ಮೂಲಕ ಕನಿಷ್ಠ ಬೆಂಬಲ ಬೆಲೆ ಆಳ್ವಿಕೆಯನ್ನು ಆಹಾರ ಧಾನ್ಯಗಳಿಗೂ ರದ್ದುಪಡಿಸಲು ಯೋಜಿಸುತ್ತಿತ್ತು. ಆ ಕಾನೂನುಗಳನ್ನು ಹಿಂಪಡೆಯುವ ವರೆಗೂ ರೈತರು ಇಡೀ ವರ್ಷ ಪೂರ್ತಿ ಹೋರಾಟ ಮಾಡಿದರು ಎಂಬುದನ್ನು ಜ್ಞಾಪಿಸಿಕೊಳ್ಳಬೇಕಾಗುತ್ತದೆ. ಕಾರ್ಪೊರೇಟ್-ಹಿಂದುತ್ವ ಮೈತ್ರಿಯನ್ನು ಅವಲಂಬಿಸಿರುವ ಈ ಸರ್ಕಾರವು ಕೃಷಿಯಲ್ಲಿ ಕಾರ್ಪೊರೇಟ್‌ಗಳ ಪ್ರವೇಶವನ್ನು ಉತ್ತೇಜಿಸಲು ಉತ್ಸುಕವಾಗಿದೆ. ಕಾರ್ಪೊರೇಟ್‌ಗಳು ರೈತರೊಂದಿಗೆ ನೇರ ಸಂಬಂಧವನ್ನು ಏರ್ಪಡಿಸಿಕೊಳ್ಳುವ ಮೂಲಕ ಕೃಷಿಯನ್ನು ಕಾರ್ಪೊರೇಟ್ ಬೇಡಿಕೆಗಳಿಗೆ ಅನುಗುಣವಾಗಿ ರೂಪಿಸಲಾಗುವುದು. ದೇಶೀಯ ಮತ್ತು ವಿದೇಶಿ ಕೃಷಿ- ವ್ಯವಹಾರೋದ್ಯಮಗಳಿಗೆ ರೈತಾಪಿಯು ಅಧೀನವಾಗಿರಬೇಕು ಎಂದು ನವ ಉದಾರವಾದಿ ಆಳ್ವಿಕೆಯು ಬಯಸುತ್ತದೆ. ಕೇಂದ್ರ ಸರ್ಕಾರವು ರಾಷ್ಟ್ರದ ಹಿತಾಸಕ್ತಿಗಳನ್ನು ಎತ್ತಿಹಿಡಿಯುವುದಾಗಿ ಎಷ್ಟೇ ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದರೂ ಸಹ, ವಿಶ್ವ ವ್ಯಾಪಾರ ಸಂಘಟನೆಯ ಸೂಚನೆಯ ಅನುಸಾರವಾಗಿ ಅದು ಕೃಷಿ ವಲಯದಲ್ಲಿ ನವ ಉದಾರವಾದಿ ಕಾರ್ಯಸೂಚಿಯನ್ನು ಮುಂದುವರಿಸುತ್ತಿದೆ.

ವಿಶ್ವ ವ್ಯಾಪಾರ ಸಂಘಟನೆಯು(ಡಬ್ಲ್ಯುಟಿಒ)ಸರ್ಕಾರವು ಕೃಷಿಗೆ ಕೊಡುವ ಬೆಂಬಲದಲ್ಲಿ ಮಾರುಕಟ್ಟೆ-ವಿರೂಪಗೊಳಿಸುವ ಬೆಂಬಲ ಮತ್ತು ಮಾರುಕಟ್ಟೆ-ವಿರೂಪಗೊಳಿಸದ ಬೆಂಬಲ ಎಂಬ ಒಂದು ಅಸಂಬದ್ಧ ವ್ಯತ್ಯಾಸವನ್ನು ಮಾಡುತ್ತದೆ. ಕನಿಷ್ಠ ಬೆಂಬಲ ಬೆಲೆ ಮತ್ತು ಧಾನ್ಯಗಳ ಖರೀದಿಯನ್ನು ಒಳಗೊಂಡಿರುವ ಪದ್ಧತಿಯನ್ನು ಮಾರುಕಟ್ಟೆ ವಿರೂಪಗೊಳಿಸುವ ಕ್ರಮವೆಂಬ ನೆಲೆಯಲ್ಲಿ ವಿರೋಧಿಸುತ್ತದೆ. ಆದರೆ ಅಮೆರಿಕದ ಮತ್ತು ಯೂರೋಪಿನ ಸರ್ಕಾರಗಳು ತಮ್ಮ ರೈತರಿಗೆ ನೀಡುವ ಬಿಲಿಯನ್‌ಗಟ್ಟಲೆ ಡಾಲರ್‌ಗಳ ನೇರ ಆದಾಯ ಬೆಂಬಲವನ್ನು ಮಾರುಕಟ್ಟೆಯೇತರ-ವಿರೂಪಗೊಳಿಸುವ ಕ್ರಮ ಎಂಬ ನೆಲೆಯಲ್ಲಿ ಅನುಮತಿಸುತ್ತದೆ. ಒಂದು ಪರಿಪೂರ್ಣ ಸ್ಪರ್ಧಾತ್ಮಕ ಮಾರುಕಟ್ಟೆ ಇದ್ದಾಗ ಮಾತ್ರ ಬೆಲೆ ವಿರೂಪಗಳು  ದಕ್ಷತೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಅದಕ್ಕಾಗಿಯೇ ಅವುಗಳನ್ನು ದೂರವಿಡಲಾಗುತ್ತದೆ. ಆದರೆ, ಏಕಸ್ವಾಮ್ಯಗಳು ಮತ್ತು ಕೆಲ ಮಂದಿಯ ಒಡೆತನದ ಸಂಸ್ಥೆಗಳು (oligopoly) ಇವುಗಳ ಅಸ್ತಿತ್ವ ಇಂದಿನ ಜಗತ್ತಿನ ವಾಸ್ತವ ಲಕ್ಷಣ. ಕೃಷಿ- ಕಾರ್ಪೊರೇಟ್‌ಗಳೇ ಇದರ ಪ್ರಮುಖ ಉದಾಹರಣೆ, ಹಾಗಾಗಿ, ಕೃಷಿಗೆ ಕೊಡುವ ಬೆಂಬಲವನ್ನು ಮಾರುಕಟ್ಟೆ-ವಿರೂಪಗೊಳಿಸುವ ಅಥವಾ ಮಾರುಕಟ್ಟೆ-ವಿರೂಪಗೊಳಿಸದ  ಎಂಬುದಾಗಿ ವ್ಯತ್ಯಾಸಗೊಳಿಸುವ ಕ್ರಮವು ಅಸಂಬದ್ಧವಾಗುತ್ತದೆ.

ಪ್ರಸ್ತುತ ಸರ್ಕಾರವು ತನ್ನ ವರ್ಗ ಸ್ವರೂಪಕ್ಕೆ ಅನುಗುಣವಾಗಿ, ರೈತ-ಕೃಷಿಯನ್ನು ಕಾರ್ಪೊರೇಟ್‌ಗಳು ದುರ್ಬಲಗೊಳಿಸಬೇಕು ಎಂದು ಬಯಸುತ್ತದೆ. ಆದ್ದರಿಂದ, ರಬ್ಬರ್ ಬೆಳೆಗಾರರನ್ನು ಬೆಂಬಲಿಸಲು ನಿರಾಕರಿಸುತ್ತದೆ. ಆದರೆ ಕೇರಳ ಸರ್ಕಾರವು ಹೊಂದಿರುವ ಸಂಪನ್ಮೂಲಗಳು ಸೀಮಿತವಿದ್ದರೂ ಸಹ ಅದು ಈ ಬೆಳೆಗಾರರನ್ನು ರಕ್ಷಿಸಲು ಮುಂದೆ ಬಂದಿದೆ. ಕೇರಳವು 2014ರಲ್ಲಿ ರಬ್ಬರ್ ಬೆಲೆ ಸ್ಥಿರೀಕರಣ ನಿಧಿಯನ್ನು ಸ್ಥಾಪಿಸಿತ್ತು. ಅದರ ಮೊತ್ತವನ್ನು ಇತ್ತೀಚಿನ ಬಜೆಟ್‌ನಲ್ಲಿ 600 ಕೋಟಿ ರೂ.ಗಳಿಗೆ ಏರಿಸಿದೆ ಮತ್ತು ಪ್ರತಿ ಕಿಲೋಗೆ 170 ರೂ.ಗಳ ಕನಿಷ್ಠ ಬೆಲೆಯನ್ನು ನಿಗದಿಪಡಿಸಿದೆ. ರೈತರು ಮಾರುಕಟ್ಟೆಯಲ್ಲಿ ಪಡೆಯುವ ಬೆಲೆ ಮತ್ತು ತಾನು ನಿಗದಿಪಡಿಸಿದ ಕನಿಷ್ಠ ಬೆಲೆ, ಇವುಗಳ ನಡುವೆ ವ್ಯತ್ಯಾಸವಾಗುವ ಮೊತ್ತವನ್ನು ಪರಿಹಾರವಾಗಿ ಕೇರಳ ಸರ್ಕಾರ ಕೊಡುತ್ತದೆ.

Donate Janashakthi Media

Leave a Reply

Your email address will not be published. Required fields are marked *