ಟ್ರಂಪ್ ಸುಂಕದ ದಾಳಿ ಒಂದು ಎಚ್ಚರಿಕೆಯ ಗಂಟೆ. ಇಂದು ಜಗತ್ತಿನಲ್ಲಿ ನವ ಉದಾರವಾದೀ ಆರ್ಥಿಕತೆ ವಿಫಲವಾಗಿರುವುದು ಸ್ಪಷ್ಟ. ಜಗತ್ತಿನ ಅತಿ ಪ್ರಬಲ ರಾಷ್ಟ್ರ ಇಂದು ಬಿಕ್ಕಟ್ಟಿನಲ್ಲಿದೆ. ಟ್ರಂಪ್ ಅದನ್ನು ಮತ್ತೆ ಮಹಾನ್ ಮಾಡುತ್ತೇನೆ ಅಂತ ಹೇಳುತ್ತಿದ್ದಾನೆ. ಅಮೇರಿಕೆಯ ಬಂಡವಾಳಶಾಹಿ ವ್ಯವಸ್ಥೆಸೋತಿದೆ. ಟ್ರಂಪ್ ಅದಕ್ಕೆ ಸಾಮರ್ಥ್ಯ ತುಂಬಿ ಅದನ್ನು ಮತ್ತೆ ಸಮರ್ಥರಾಷ್ಟ್ರವನ್ನಾಗಿ ಮಾಡುತ್ತೇನೆ ಅನ್ನುತ್ತಿದ್ದಾನೆ. ಅದಕ್ಕಿಂತ ಹೆಚ್ಚಾಗಿ ಅವನಿಗೆ ತನ್ನ ಆಪ್ತ ಬಿಲಿಯ ನೇರುಗಳ ಹಿತವನ್ನು ಕಾಪಾಡಬೇಕಾಗಿದೆ. ತನ್ನ ಯೋಜನೆಯ ಮೇಲ್ವಿಚಾರಣೆಗೆ ಈ ದೊಡ್ಡ ಉದ್ಯಮಪತಿಗಳನ್ನು ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸಿದ್ದಾನೆ. ಅವರು ತಮಗೆ ಬೇಕಾದ ಆರ್ಥಿಕ ನೀತಿಗಳನ್ನು ಜಾರಿಗೆ ತರುವುದರ ಜೊತೆಗೆ ಅದಕ್ಕೆ ಅಡ್ಡಿಯಾಗುವ ನೀತಿಗಳನ್ನು ತಡೆಯುವುದಕ್ಕೂ ಉತ್ಸುಕರಾಗಿದ್ದಾರೆ.ಅದಕ್ಕಾಗಿ ಜನಕಲ್ಯಾಣ ಕಾರ್ಯಕ್ರಮಗಳನ್ನು ಅನಾವಶ್ಯಕ ಖರ್ಚುಗಳೆಂದು, ಆರ್ಥಿಕ ಬೆಳವಣಿಗೆಗೆ ಮಾರಕವೆಂದು ಬಿಂಬಿಸುತ್ತಿದ್ದಾರೆ. ದೊಡ್ಡ ಪ್ರಚಾರವನ್ನೇ ಮಾಡುತ್ತಿದ್ದಾರೆ. ಬದಲಿಗೆ ಶ್ರೀಮಂತರ ಮೇಲಿನ ತೆರಿಗೆಯ ಕಡಿತಕ್ಕೆ ಶಿಫಾರಸ್ಸು ಮಾಡುತ್ತಿದ್ದಾರೆ. ಅವರು ಉದಾರವಾದೀ ನೀತಿಯನ್ನು ಆತು ಕೊಳ್ಳುತ್ತಿರುವುದಾಗಲೀ, ಮತೀಯ ಫ್ಯಾಸಿಸ್ಟ್ ದಾರಿಯನ್ನು ಹಿಡಿಯುತ್ತಿರುವುದಾಗಲಿ ಕಾಕತಾಳೀಯವಲ್ಲ.
-ಟಿ. ಎಸ್ ವೇಣುಗೋಪಾಲ್
ಉದ್ಯೋಗ ಸೃಷ್ಟಿಸುತ್ತೇನೆ, ಹಣದುಬ್ಬರ ಇಳಿಸುತ್ತೇನೆ, ಇತ್ಯಾದಿ ಆಶ್ವಾಸನೆಗಳ ಮೂಲಕ ಅಧಿಕಾರಕ್ಕೆ ಬಂದ ಟ್ರಂಪ್ ನಂತಹ ಎಲ್ಲಾ ಸರ್ಕಾರಗಳು ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಸೋತಿವೆ. ಅದು ಸಾಧ್ಯವೂಇಲ್ಲ.ಇವರು ಪೋಷಿಸುತ್ತಿರುವ ವ್ಯವಸ್ಥೆತೀರಾ ಶ್ರೇಣೀಕೃತವಾದದ್ದು. ಅದರಿಂದ ಸಂಪತ್ತು ಹೆಚ್ಚೆಚ್ಚು ಕೇಂದ್ರೀಕರಣಗೊಳ್ಳುತ್ತಾ ಹೋಗುತ್ತದೆ. ಜನರು ಇನ್ನಷ್ಟು ಬಡವಾಗುತ್ತಾರೆ. ಆರ್ಥಿಕ ಬೆಳವಣಿಗೆ ಕೂಡ ಸಾಧ್ಯವಾಗುವುದಿಲ್ಲ. ಹಾಗಾಗಿ ಜನರ ನಿರಾಶೆಯನ್ನು ಬೇರೆಕಡೆಗೆ ತಿರುಗಿಸುವುದಕ್ಕೆ ರಾಷ್ಟ್ರೀಯವಾದ, ಧಾರ್ಮಿಕ ಮತಾಂಧತೆ ಇವೆಲ್ಲಾ ನೆರವಾಗುತ್ತದೆ. ಅಮೇರಿಕೆಯ ಸಮಸ್ಯೆಗಳಿಗೆ ಟ್ರಂಪ್ ವಿದೇಶಗಳನ್ನು ದೂರುತ್ತಿದ್ದಾನೆ. ಬೇರೆ ದೇಶಗಳು ಅಮೇರಿಕೆಯನ್ನು ಲೂಟಿ ಮಾಡುತ್ತಿವೆ, ಅತ್ಯಾಚಾರ ಮಾಡುತ್ತಿವೆ, ಇತ್ಯಾದಿ ಆರೋಪಗಳ ದೊಡ್ಡ ಪಟ್ಟಿಯೇ ಇದೆ. ಬೆಳವಣಿಗೆ
ಅದಕ್ಕೆ ಟ್ರಂಪ್ ಬಳಿ ಇರುವ ಪುರಾವೆ ಅಂದರೆ ಅಮೇರಿಕೆ ಅನುಭವಿಸುತ್ತಿರುವ ವ್ಯಾಪಾರದ ಕೊರತೆ. ಅದಕ್ಕೆ ಪರಿಹಾರ ಆ ದೇಶಗಳಿಂದ ಅಮೇರಿಕಾಕ್ಕೆಆಮದಾಗುವ ಪದಾರ್ಥಗಳ ಮೇಲೆ ಪ್ರತಿ ಸುಂಕ ಹಾಕಿ ಅಲ್ಲಿಯ ಸರಕುಗಳು ಅಮೇರಿಕಾಕ್ಕೆ ಬಾರದಂತೆ ತಡೆಯುವುದು. ಅದರಿಂದ ವ್ಯಾಪಾರದ ಕೊರತೆ ಇಲ್ಲವಾಗುತ್ತದೆ. ಇದು ಟ್ರಂಪ್ ತರ್ಕ. ಬೆಳವಣಿಗೆ
ಇದನ್ನೂ ಓದಿ: ಕುಡಿಯುವ ನೀರಿನ ವ್ಯವಸ್ಥೆ ಮಾಡದ ಪಂಚಾಯಿತಿ ಅಧಿಕಾರಿಗಳು; ಗ್ರಾಮಸ್ಥರು ಆಕ್ರೋಶ
ವ್ಯಾಪಾರದಕೊರತೆಅಮೇರಿಕಾಕ್ಕೆ ಹೊಸದೇನೂಅಲ್ಲ. 1995ರಿಂದಲೇ ಅದು ಪ್ರಾರಂಭವಾಗಿದೆ. ಪ್ರತಿವರ್ಷಜಿಡಿಪಿಯ ಶೇಕಡ ಮೂರರಿಂದ ನಾಲ್ಕರಷ್ಟು ಅದು ಏರುತ್ತಾ ಹೋಗುತ್ತಿದೆ. 2024ರಲ್ಲಿ ಅದು 1.2 ಲಕ್ಷ ಕೋಟಿ ಡಾಲರ್ ಮುಟ್ಟಿತ್ತು. ಥಾಮಸ್ ಪಿಕೆಟ್ಟಿಗುರುತಿಸುವಂತೆ ಇಂತಹದ್ದೇ ಪರಿಸ್ಥಿತಿಯನ್ನು ಯುರೋಪಿನ ವಸಾಹತುಶಾಹಿ ದೇಶಗಳು (ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ನೆದರ್ ಲ್ಯಾಂಡ್) 1880 ಹಾಗೂ 1914ರ ನಡುವೆ ಅನುಭವಿಸಿದ್ದವು. ಆದರೆ ಒಂದು ಮುಖ್ಯ ವ್ಯತ್ಯಾಸವೆಂದರೆ ಐರೋಪ್ಯ ದೇಶಗಳು ವಿದೇಶಗಳಲ್ಲಿ ದೊಡ್ಡ ಪ್ರಮಾಣದ ಆಸ್ತಿಯನ್ನು ಮಾಡಿಟ್ಟುಕೊಂಡಿದ್ದವು. ಅದರಿಂದ ಬಡ್ಡಿ ಹಾಗೂ ಲಾಭ ಯಥೇಚ್ಛವಾಗಿ ಸಿಗುತ್ತಿತ್ತು. ಹಾಗಾಗಿ ಅ ರಾಷ್ಟ್ರಗಳಿಗೆ ವ್ಯಾಪಾರದ ಕೊರತೆಯನ್ನು ನಿಭಾಯಿಸುವುದಕ್ಕೆ ಕಷ್ಟವಾಗುತ್ತಿರಲಿಲ್ಲ. ಬೆಳವಣಿಗೆ
ಪಿಕೆಟ್ಟಿ ಗುರುತಿಸುವಂತೆ ಟ್ರಂಪ್ ಕೂಡ ಅಂತಹುದೇ ವಸಾಹತು ಶಾಹಿ ನಾಯಕ. ಆದರೆ ಆ ದೇಶಗಳಿಗಿದ್ದ ಸವಲತ್ತುಗಳು ಟ್ರಂಪ್ಗೆ ಇಲ್ಲ. ಜಗತ್ತೆಲ್ಲಾ ನೆರವು ನೀಡಿ ಅಮೇರಿಕೆಯನ್ನು ವ್ಯಾಪಾರದ ಕೊರತೆಯಿಂದ ರಕ್ಷಿಸಬೇಕು ಎಂದು ಭಾವಿಸಿದ್ದಾನೆ. ಆದರೆ ಅಮೇರಿಕೆಯ ಪ್ರಾಬಲ್ಯ ಕುಸಿಯುತ್ತಿದೆ. ಯುರೋಪ್ ನಡೆಸಿದ ಮಾದರಿಯ ಕ್ರೂರವಾದ, ಎಗ್ಗಿಲ್ಲದ ವಸಾಹತುಶಾಹಿ ಆಳ್ವಿಕೆ ಈಗ ಸಾಧ್ಯವಿಲ್ಲ. ಜೊತೆಗೆ ಅಮೇರಿಕೆ ರೂಪುಗೊಂಡಿದ್ದು ಬೇರೆಯದೇ ಆದ ಆರ್ಥಿಕ ಬೆಳವಣಿಗೆಯ ಮಾದರಿಯ ಮೇಲೆ. 1945ರಲ್ಲಿ ಐರೋಪ್ಯ ವಸಾಹತುಶಾಹಿ ವ್ಯವಸ್ಥೆ ಕುಸಿದಿತ್ತು. ಅಮೇರಿಕೆ ಪ್ರಜಾಸತ್ತಾತ್ಮಕ ಸಿದ್ಧಾಂತಗಳನ್ನು ನೆಚ್ಚಿಕೊಂಡು ಬೆಳೆಯಿತು. ಆ ವೇಳೆಗೆ ಅಮೇರಿಕೆಯಲ್ಲಿ ಹೆಚ್ಚಿನ ಶೈಕ್ಷಣಿಕ ಸಾಧನೆ ಸಾಧ್ಯವಾಗಿತ್ತು. ಇವೆಲ್ಲಾ ಅಮೇರಿಕೆಯ ಆರ್ಥಿಕ ಪ್ರಗತಿಗೆ ನೆರವಾಗಿತ್ತು. ಇಪ್ಪತ್ತನೇ ಶತಮಾನದಲ್ಲಿ ಯುರೋಪಿಗಿಂತ ದುಪ್ಪಟ್ಟು ಉತ್ಪಾದಕತೆಯನ್ನು ಸಾಧಿಸುವುದಕ್ಕೆ ಅಮೇರಿಕೆಗೆ ಸಾಧ್ಯವಾಗಿತ್ತು. ಅಂತಹ ಒಂದು ಪ್ರಜಾಸತ್ತಾತ್ಮಕ, ನೈತಿಕ ಬುನಾದಿಯನ್ನೇ ಟ್ರಂಪ್ ಶಿಥಿಲಗೊಳಿಸುತ್ತಿದ್ದಾನೆ. ಬೆಳವಣಿಗೆ
ನಿರಂತರವಾಗಿ ಏರುತ್ತಿರುವ ವ್ಯಾಪಾರದ ಕೊರತೆಯಿಂದ ಅಮೇರಿಕೆಯ ಖಾಸಗಿ ಹಾಗೂ ಸಾರ್ವಜನಿಕ ಸಾಲ ವಿಪರೀತ ಏರುತ್ತಿದೆ. ಈಗ ಅದು ರಾಷ್ಟ್ರದ ಜಿಡಿಪಿಯ ಶೇಕಡ 70ರಷ್ಟಾಗಿದೆ. ಬೇರೆ ದೇಶಗಳಿಗೆ ಪಾವತಿಸಬೇಕಾದ ಬಡ್ಡಿಯ ಪ್ರಮಾಣವೂ ದಿನೇ ದಿನೇ ಏರುತ್ತಿದೆ. ಇಲ್ಲಿಯವರೆಗೂ ಹೇಗೋ ನಿಭಾಯಿಸಿಕೊಂಡು ಬಂದಿತ್ತು. ಈಗ ಕಷ್ಟವಾಗುತ್ತಿದೆ. ಹಣ ಕ್ರೋಡೀಕರಿಸಲು ಹಲವು ದಾರಿಗಳನ್ನು ಹುಡುಕುತ್ತಿದೆ. ಆಮದಿನ ಮೇಲಿನ ಸುಂಕದಿಂದ ಸಾಕಷ್ಟು ಹಣ ಬರಬಹುದು ಅನ್ನುವ ಲೆಕ್ಕಾಚಾರದಲ್ಲಿದೆ. ಇನ್ನೂ ಮುಂದುವರಿದು ಯುಕ್ರೇನ್ನಿಂದ ಖನಿಜಗಳನ್ನು ಕಸಿದುಕೊಂಡು, ಅಷ್ಟೇ ಅಲ್ಲ ಗ್ರೀನ್ ಲ್ಯಾಂಡ್ ಹಾಗೂ ಪನಾಮಗಳನ್ನು ವಶಪಡಿಸಿಕೊಂಡು ಈ ಮುಗ್ಗಟ್ಟಿನಿಂದ ಹೊರಬರಲು ಟ್ರಂಪ್ ಗೆಳೆಯರು ಯೋಚಿಸುತ್ತಿದ್ದಾರೆ.
ಒಟ್ಟಿನಲ್ಲಿ ಅಮೇರಿಕ ಇಂದು ಹತಾಶವಾಗಿರುವುದು ಸತ್ಯ. ಅದು ದುರ್ಬಲವಾಗುತ್ತಿದೆ. ಜಗತ್ತಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ. ದೇಶದ ಆರ್ಥಿಕ, ವಿತ್ತೀಯ ಹಾಗೂ ರಾಜಕೀಯ ಬುನಾದಿಯೇ ಸಡಿಲವಾಗಿದೆ. ಅಮೆರಿಕೆಯ ಡಾಲರ್ ಪ್ರಮಾಣವನ್ನು ನೋಡಿ ಅದು ಪ್ರಬಲ ಶಕ್ತಿ ಅಂತ ಅಂದುಕೊಳ್ಳುತ್ತಿದ್ದೇವೆ. ಅಲ್ಲಿ ಕೆಲವು ಏಕಸ್ವಾಮ್ಯ ಶಕ್ತಿಗಳು ಬೃಹತ್ತಾಗಿ ಬೆಳೆದಿರುವುದರಿಂದ ಅದು ಪ್ರಬಲವಾಗಿ ಕಾಣುತ್ತಿದೆ. ಅಮೇರಿಕೆಯ ಜಿಡಿಪಿ ಬೇರೆ ದೇಶಗಳಿಗಿಂತ ಹೆಚ್ಚಿರಬಹುದು. ಅದರೆ ದೇಶದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಸರಕು ಹಾಗೂ ಸೇವೆಯನ್ನು ಗಮನಿಸಿದರೆ ಚೀನಾ ಅಮೇರಿಕೆಯನ್ನು 2016ರಲ್ಲೇ ಹಿಂದೆ ಹಾಕಿಯಾಗಿತ್ತು. ಈಗ ಚೀನಾದಲ್ಲಿ ಅಮೇರಿಕೆಗಿಂತ ಶೇಕಡ 30 ರಷ್ಟು ಹೆಚ್ಚು ಉತ್ಪಾದನೆಯಾಗುತ್ತಿದೆ. 2035ರ ವೇಳೆಗೆ ಅದು ದುಪ್ಪಟವಾಗಬಹುದು ಅನ್ನುವ ಅಂದಾಜಿದೆ. ಉತ್ಪಾದನೆಯಲ್ಲಿ ಮಾತ್ರವಲ್ಲ ಚೀನಾ ಇನ್ನೂ ಹಲವು ಕ್ಷೇತ್ರಗಳಲ್ಲಿ ಅಮೇರಿಕೆಗಿಂತ ಮುಂದಿದೆ. ಬೆಳವಣಿಗೆ
ತಂತ್ರಜ್ಞಾನದಲ್ಲೂ ಮುಂದಿದೆ. ಹಡಗು ನಿರ್ಮಾಣದಲ್ಲಿ ಅಮೇರಿಕೆಗಿಂತ 200 ಪಟ್ಟು ಹೆಚ್ಚು ಸಾಮರ್ಥ್ಯ ಪಡೆದುಕೊಂಡಿದೆ .ಮಿಲಿಟರಿ ಸಾಮರ್ಥ್ಯದಲ್ಲೂ ಸಾಕಷ್ಟು ಪ್ರಗತಿಯಾಗಿದೆ. ಈಗ ಚೀನಾದಲ್ಲಿಆರ್ಥಿಕ ಬೆಳವಣಿಗೆ ನಿಧಾನವಾಗಿದೆ. ಹಲವು ಸಮಸ್ಯೆಗಳು ತೀವ್ರವಾಗಿಕಾಡುತ್ತಿವೆ. ಆದರೂ ಅದರ ಪ್ರಾಬಲ್ಯ ಕುಗ್ಗಿಲ್ಲ. ಯುರೋಪ್ ಕೂಡ ಅಮೇರಿಕಾಕ್ಕೆ ಹೋಲಿಸಿದರೆ ಕೆಟ್ಟ ಸ್ಥಿತಿಯಲ್ಲೇನೂ ಇಲ್ಲ. ಅದಕ್ಕೆ ಪಾವತಿ ಶಿಲ್ಕಿನ ಕೊರತೆಯ ಸಮಸ್ಯೆಯಿಲ್ಲ. ಉಳಿತಾಯವೂ ಹೆಚ್ಚೇ ಇದೆ. ಕೆಲವು ಐರೋಪ್ಯ ದೇಶಗಳು ಜಿಡಿಪಿಯ ಶೇಕಡ 5ರಷ್ಟು ಉಳಿತಾಯ ಮಾಡುತ್ತಿವೆ. ಆದರೆ ಯುರೋಪಿನ ಸಮಸ್ಯೆ ಅಂದರೆ ಅಲ್ಲಿನ ಹೆಚ್ಚಿನ ಬಂಡವಾಳವೆಲ್ಲಾ ಬೇರೆ ದೇಶಗಳ ಸ್ವತ್ತಿನ ಮೇಲೆ ಹೂಡಿಕೆಯಾಗಿದೆ. ಪಿಕೆಟ್ಟಿ ಗುರುತಿಸುವಂತೆ ಯುರೋಪ್ ದೇಶಗಳ ಇನ್ನೊಂದು ಸಮಸ್ಯೆ ಅಂದರೆ ಅಲ್ಲಿಯ ಪ್ರತಿಯೊಂದು ದೇಶವೂ ಪಕ್ಕದ ದೇಶವನ್ನು ಅನುಮಾನಿಸುತ್ತವೆ. ತಮ್ಮನ್ನು ದೋಚುತ್ತವೆ ಎಂಬ ದಿಗಿಲಿನಿಂದ ಜೋಪಾನ ಮಾಡುತ್ತಿವೆ. ಬೆಳವಣಿಗೆ
ಅವು ಅನುಭವಿಸಿದ ಬಿಕ್ಕಟ್ಟುಗಳು ಇಂತಹ ಮನಸ್ಥಿತಿಯನ್ನು ತೀವ್ರಗೊಳಿಸಿರಬಹುದು. ಇವೆಲ್ಲಕ್ಕಿಂತ ಹೆಚ್ಚಾಗಿ ಇಂದು ಯುರೋಪಿಗೆ ಸಂಪತ್ತನ್ನುಖರ್ಚು ಮಾಡುವ ಬಗ್ಗೆಯಾಗಲಿ ಅಥವಾ ಇನ್ಯಾವುದೇ ವಿಷಯದಲ್ಲಾಗಲಿ ಒಂದು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಬೇಕಾದ ಒಂದು ಪ್ರಜಾಸತ್ತಾತ್ಮಕ ಚೌಕಟ್ಟು ಅಲ್ಲಿಲ್ಲ. ಕೆಲವು ಕಾರ್ಪೋರೇಟ್ ಜನ ಅಥವಾ ಶೇರುದಾರರು ಬಹುತೇಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಯುರೋಪ್ ನಿಜವಾದ ಅರ್ಥದಲ್ಲಿ ಇನ್ನೂ ಒಂದಾಗಿಲ್ಲ. ಬಹುಶಃ ಟ್ರಂಪ್ ಇಂದು ಯುರೋಪ್ ಒಟ್ಟಿಗೆ ಬರುವುದಕ್ಕೆ ನೆರವಾಗುತ್ತಿದ್ದಾನೆ. ಬೆಳವಣಿಗೆ
ಜಾಗತಿಕ ವ್ಯಾಪಾರದಲ್ಲಿ ವಿಪರೀತ ಅಸಮತೋಲನ ಇದೆ. ಇದರಲ್ಲಿ ಯುರೋಪಿನ ಪಾಲೂ ಸಾಕಷ್ಟೇ ಇದೆ. ಅದೂ ಕೂಡ ಅಂತರಿಕವಾಗಿ ಬಳಸುತ್ತಿರುವುದು ಕಡಿಮೆಯೇ. ಹೂಡಿಕೆಯೂ ಕಡಿಮೆ. 2014 ಹಾಗೂ 2024ರ ಆವಧಿಯಲ್ಲಿಅದು ಆಮದಿಗಿಂತ ರಫ್ತು ಮಾಡಿದ್ದೇ ಹೆಚ್ಚು. ಸುಮಾರು 350 ಬಿಲಿಯನ್ ಡಾಲರ್ ನಷ್ಟು ಹೆಚ್ಚುವರಿ ವ್ಯಾಪಾರ ಮಾಡಿತ್ತು. ಸುಮಾರಾಗಿ ಚೀನಾ, ಜಪಾನ್, ಕೊರಿಯಾ, ತೈವಾನ್ ದೇಶಗಳ ಒಟ್ಟಾರೆ ವ್ಯಾಪಾರದ ಹೆಚ್ಚಳವೂ ಇಷ್ಟೇ ಆಗುತ್ತದೆ. ಇದನ್ನು ಯುರೋಪ್ ಒಪ್ಪಿಕೊಳ್ಳಬೇಕು. ಚೀನಾವನ್ನು ದೂಷಿಸುವುದು ಸುಲಭ. ಪಾಶ್ಚಾತ್ಯ ದೇಶಗಳು ಮಾಡಿಕೊಂಡು ಬಂದಿದ್ದನ್ನೇ ಚೀನಾ ಕೂಡ ಮಾಡುತ್ತಿದೆ. ಅಗ್ಗದ ಕಚ್ಚಾಮಾಲನ್ನು ಬಳಸಿಕೊಂಡು ತಾನು ಉತ್ಪಾದಿಸಿದ ಸರಕುಗಳಿಂದ ಜಗತ್ತಿನ ಮಾರುಕಟ್ಟೆಯನ್ನು ತುಂಬುತ್ತಿದೆ. ಅದರಿಂದ ಚೀನಾದ ಜನರಿಗೇನು ಅನುಕೂಲವಾಗುತ್ತಿಲ್ಲ .ಜನರಿಗೆ ನಿಜವಾಗಿ ಬೇಕಿರುವುದು ಹೆಚ್ಚಿನ ಕೂಲಿ, ಸಾಮಾಜಿಕ ಸುರಕ್ಷತೆ. ಬೆಳವಣಿಗೆ
ಜಾಗತಿಕ ವ್ಯಾಪಾರದಲ್ಲಿ ಅಸಮಾನತೆಯಿಂದ ಸಬ್ ಸಹರನ್ ಆಫ್ರಿಕಾ ಅಂತಹ ದೇಶಗಳು ಹೆಚ್ಚು ಸಂಕಷ್ಟದಲ್ಲಿವೆ. ತಮ್ಮ ಜನರಿಗೆ ಮೂಲಸೌಕರ್ಯ, ಶಿಕ್ಷಣ ಹಾಗೂ ಆರೋಗ್ಯ ಒದಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ವರ್ಷಕ್ಕೆತಲಾ 60 ಯುರೋವನ್ನು ಖರ್ಚು ಮಾಡುವುದಕ್ಕೂ ಅಲ್ಲಿಯ ಸರ್ಕಾರಗಳಿಗೆ ಕಷ್ಟವಾಗುತ್ತಿದೆ. ಅಮೇರಿಕೆಯಲ್ಲಿ ಮಕ್ಕಳಿಗೆ ತಲಾ 10000 ಯುರೋ ಖರ್ಚು ಮಾಡಲಾಗುತ್ತಿದೆ. ಯುರೋಪಿನಲ್ಲಿ 8000 ಯುರೋ ಖರ್ಚು ಮಾಡಲಾಗುತ್ತಿದೆ. ಖರ್ಚು ಹೊಂಚುವುದಕ್ಕೆ ಜಿ20 ದೇಶಗಳು ತೆರಿಗೆ ಹಾಕುವ ಸಲಹೆ ಮುಂದಿಟ್ಟಾಗ ಯುರೋಪ್ ವಿರೋಧಿಸಿತ್ತು. ಅಮೇರಿಕೆಯ ಮಾತನ್ನು ಕೇಳಿಕೊಂಡು ಅಮೇರಿಕೆಯ ಏಕಸ್ವಾಮ್ಯ ಉದ್ದಿಮೆದಾರರ ಬೆಂಬಲಕ್ಕೆ ನಿಂತುಕೊಂಡಿತು. ಯುರೋಪ್ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕು. ದಕ್ಷಿಣ ರಾಷ್ಟ್ರಗಳ ಅವಶ್ಯಕತೆಯನ್ನು ಬೆಂಬಲಿಸಬೇಕು. ಬೆಳವಣಿಗೆ
ಜಗತ್ತುಅಮೇರಿಕೆಯ ಮಾರುಕಟ್ಟೆಯನ್ನು ನೆಚ್ಚಿಕೊಂಡಿದೆಅನ್ನುವ ನಂಬಿಕೆಯಿಂದ ಟ್ರಂಪ್ ಈ ಸಾಹಸಕ್ಕೆ ಕೈಹಾಕಿದ್ದಾನೆ. ಒತ್ತಡಕ್ಕೆ ಮಣಿದು ಎಲ್ಲಾ ದೇಶಗಳು ಅಮೇರಿಕೆಯ ಉತ್ಪನ್ನಗಳಿಗೆ ತಮ್ಮ ಮಾರುಕಟ್ಟೆಯನ್ನು ತೆರೆಯುತ್ತವೆ, ತಮ್ಮೆಲ್ಲಾ ಷರತ್ತುಗಳಿಗೆ ಒಪ್ಪಿಕೊಳ್ಳುತ್ತವೆ ಅನ್ನುವ ಭಾವನೆ ಟ್ರಂಪ್ಗೆ ಇದೆ.ಆದರೆ ಆ ದೇಶಗಳೂ ಬಿಕ್ಕಟ್ಟನ್ನು ಎದುರಿಸುತ್ತಿವೆ. ಅವುಗಳಿಗೂ ತಮ್ಮಆರ್ಥಿಕತೆಯನ್ನು ರಕ್ಷಿಸಿಕೊಳ್ಳಬೇಕಾದ ಒತ್ತಡವಿರುತ್ತದೆ. ಹಾಗಾಗಿಪ್ರತಿಕ್ರಮ ತೆಗೆದುಕೊಳ್ಳುವುದು ಅವುಗಳಿಗೆ ಅನಿವಾರ್ಯವಾಗುತ್ತದೆ. ಹಿಂದೆಅಮೇರಿಕಾ ಸುಂಕ ಹಾಕಿದಾಗ, ಚೀನಾ ಪ್ರತಿಸುಂಕ ಹಾಕಿತ್ತು. ಅಮೇರಿಕೆಯ ಸೋಯಾ ಬೀನ್ ರೈತರು ಬಿಲಿಯನ್ ಗಟ್ಟಲೆ ಹಣ ಕಳೆದುಕೊಂಡರು. 2016ರಲ್ಲಿ 5520 ಲಕ್ಷ ಕೋಟಿ ಇದ್ದ ವ್ಯಾಪಾರದ ಕೊರತೆ 2020ರಲ್ಲಿ 6790 ಲಕ್ಷ ಕೋಟಿಯಾಗಿತ್ತು. ಸುಂಕದಿಂದ ಆಮದು ಮಾತ್ರವಲ್ಲ ರಫ್ತು ಕೂಡ ಕಡಿಮೆಯಾಗುತ್ತದೆ. ಹಾಗಾಗಿ ವ್ಯಾಪಾರದ ಕೊರತೆ ಕಡಿಮೆಯಾಗುವ ಸಾಧ್ಯತೆಯಿಲ್ಲ.
ಈಗ ಅಮೇರಿಕೆಗೆ ಬಹುಪಕ್ಷೀಯ ಒಪ್ಪಂದಗಳು, ಮುಕ್ತ ಮಾರುಕಟ್ಟೆಯ ನೀತಿ ಬೇಕಾಗಿಲ್ಲ. ಹಾಗಾಗಿ ಹಿಂದೆ ಎರಡನೇ ಮಹಾ ಯುದ್ಧದ ನಂತರ ಮಾಡಿಕೊಂಡಿದ್ದ ಬಹುರಾಷ್ಟ್ರೀಯ ಒಪ್ಪಂದಗಳಿಂದ ಹೊರಬರುತ್ತಿದೆ. ಟ್ರಂಪ್ ತನ್ನ ಮೊದಲ ಅವಧಿಯಲ್ಲೇ ಚೀನಾದ ಮೇಲೆ ಸುಂಕ ಹಾಕುವ ಮೂಲಕ ಮುಕ್ತ ಮಾರುಕಟ್ಟೆ ನೀತಿಯನ್ನು ಕೈ ಬಿಟ್ಟಿದ್ದ. ಬೈಡೆನ್ ಇದೇ ನೀತಿಯನ್ನು ಮುಂದುವರಿಸಿದ್ದ. ಈಗ ಟ್ರಂಪ್ ಅದನ್ನು ಅತಿಗೆ ಒಯ್ಯುತ್ತಿದ್ದಾನೆ. ದ್ವಿಪಕ್ಷೀಯ ಒಪ್ಪಂದಗಳ ಮೂಲಕ ತಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಈ ಪ್ರಕ್ರಿಯೆಯಲ್ಲಿ ಡಬ್ಲ್ಯೂಟಿಒ ಇತ್ಯಾದಿ ಬಹುರಾಷ್ಟ್ರೀಯ ಸಂಸ್ಥೆಗಳು ದುರ್ಬಲವಾಗುತ್ತಿವೆ. ಅವುಗಳನ್ನು ಬಲಗೊಳಿಸುವುದರ ಜೊತೆಗೆ ಅದರಲ್ಲಿ ಬದಲಾವಣೆಯನ್ನೂ ತರಬೇಕಾಗಿದೆ. ಬ್ರೆಜಿಲ್, ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ಅಂತಹ ದೇಶಗಳಿಗೆ ನ್ಯಾಯಯುತ ಸ್ಥಾನ ಸಿಗುವಂತಾಗಬೇಕು. ಈವರೆಗೂ ಯುರೋಪ್ ರಾಷ್ಟ್ರಗಳು ಅಮೇರಿಕೆಯ ಜೊತೆ ಸೇರಿಕೊಂಡು ಬಡರಾಷ್ಟ್ರಗಳಿಗೆ ಅನುಕೂಲವಾಗುವ ಎಲ್ಲಾ ಸುಧಾರಣೆಗಳನ್ನು ವಿರೋಧಿಸಿತ್ತು. ಆದರೆ ದಕ್ಷಿಣ ರಾಷ್ಟ್ರಗಳನ್ನು ಬೆಂಬಲಿಸುವುದರಲ್ಲಿ ತನ್ನ ಹಿತವೂ ಇದೆ ಅನ್ನುವುದನ್ನು ಯುರೋಪ್ ಅರ್ಥಮಾಡಿಕೊಳ್ಳಬೇಕು. ಇಲ್ಲದೇ ಹೋದರೆ ಚೀನಾ ನಾಯಕತ್ವದಲ್ಲಿ ಬ್ರಿಕ್ಸ್ ದೇಶಗಳು ಪರ್ಯಾಯ ಅಂತರರಾಷ್ಟ್ರೀಯ ವ್ಯವಸ್ಥೆ ಕಟ್ಟಿದರೆ ಆಶ್ಚರ್ಯವಿಲ್ಲ. ಬೆಳವಣಿಗೆ
ಬಂಡವಾಳಶಾಹಿ ವ್ಯವಸ್ಥೆ ನಿರಂತರವಾಗಿ ಬಿಕ್ಕಟ್ಟಿನಲ್ಲಿ ಸಿಲಕುತ್ತಿದೆ. ಅದರಿಂದ ಹೊರಬರುವ ಅವುಗಳ ಪ್ರಯತ್ನದಲ್ಲಿ ಬಡರಾಷ್ಟ್ರಗಳು, ಬಡವರು ಇನ್ನಷ್ಟು ಸೊರಗುತ್ತಿದ್ದಾರೆ. ಪರ್ಯಾಯ ಬೆಳವಣಿಗೆಯ ಮಾದರಿಯ ಬಗ್ಗೆ ಜಗತ್ತುಇಂದು ತುರ್ತಾಗಿ ಯೋಚಿಸಬೇಕಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಪರಿಹಾರವಲ್ಲ ಎನ್ನುವುದು ಸ್ಪಷ್ಟ. ದಕ್ಷಿಣದ ರಾಷ್ಟ್ರಗಳು ಒಂದು ಪರಿಸರದ ಬಗ್ಗೆ ಕಾಳಜಿ ಇರುವ ಸಮಾಜವಾದೀ ಪ್ರಜಾಸತ್ತಾತ್ಮಕ ಮಾದರಿಯನ್ನುಕುರಿತು ಯೋಚಿಸಬೇಕಾಗಿದೆ. ಸ್ವಾಭಾವಿಕವಾಗಿಯೇ ಪರ್ಯಾಯ ಆರ್ಥಿಕತೆಯ ಮಾದರಿ ಮಾನವನ ಒಳಿತು, ತಾಳಿಕೆಯ ಬೆಳವಣಿಗೆ ಹಾಗೂ ಸಾಮುದಾಯಿಕ ಮೂಲ ಸೌಕರ್ಯವನ್ನು ಆದ್ಯತೆಯ ವಿಷಯವನ್ನಾಗಿ ಮಾಡಿಕೊಳ್ಳಬೇಕು. ಆರೋಗ್ಯ, ಸಾರಿಗೆ, ಇಂಧನ, ಹವಾಮಾನ, ಉತ್ಪಾದಕತೆ ಇವೆಲ್ಲವನ್ನು ಸುಧಾರಿಸುವುದರ ಕಡೆ ನಿಗಾ ಕೊಡಬೇಕು.
ಉದಾರವಾದೀ ಆರ್ಥಿಕತೆಯ ಪ್ರತಿಪಾದಕರು ಇದನ್ನು ದುಂದು ಅಂತ ಪ್ರಚಾರ ಮಾಡುತ್ತಿದ್ದಾರೆ. ಇಲಾನ್ ಮಸ್ಕ್ ಗೆಳೆಯರಿಗೆ ಇದರಲ್ಲಿ ಕಡಿತ ಮಾಡಿ ಅಮೇರಿಕೆಯನ್ನು ಉಳಿಸುವುದಕ್ಕೆ ಹೊರಟಿದ್ದಾರೆ. ಸಮೃದ್ಧಿ ನಿರಂತರವಾಗಿ ಸಾಧ್ಯವಾಗಬೇಕಾದರೆ ಎಲ್ಲರಿಗೂ ಅನುಕೂಲವಾದ ಶೈಕ್ಷಣಿಕ, ಸಾಮಾಜಿಕ ಹಾಗೂ ಪರಿಸರದ ಮೇಲೆ ಹೂಡಿಕೆ ಮಾಡಬೇಕು. ಬೆಳವಣಿಗೆ
ಆದರೆ ಬಹುತೇಕ ರಾಷ್ಟ್ರಗಳು ಮಿಲಿಟರಿಯ ಮೇಲೆ ವಿಪರೀತ ಹಣ ಹೂಡುತ್ತಿವೆ. ಜರ್ಮನಿ ಮಿಲಿಟರಿಯ ಮೇಲೆ ಖರ್ಚು ಮಾಡುವುದಕ್ಕಾಗಿಯೇ ವಿತ್ತೀಯ ಕೊರತೆಯ ಮಿತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಂಡಿದೆ. ಈವರೆಗೆ ಅಮೇರಿಕೆತನ್ನ ಮಿತ್ರ ರಾಷ್ಟ್ರಗಳಿಗೆ ಸಂಕಷ್ಟದಲ್ಲಿ ಮಿಲಿಟರಿ ನೆರವು ನೀಡುವುದಕ್ಕೆ ಬದ್ಧವಾಗಿತ್ತು. ಈಗ ಟ್ರಂಪ್ ಅದರಿಂದ ಹಿಂದೆ ಸರಿದುಕೊಂಡಿದ್ದಾನೆ. ಪ್ರತಿಯೊಂದು ದೇಶವೂ ತನ್ನ ಜಿಡಿಪಿಯ ಶೇಕಡ 5ರಷ್ಟು ಮಿಲಿಟರಿಗಾಗಿ ಖರ್ಚು ಮಾಡಬೇಕೆಂದು ಸೂಚಿಸಿದ್ದಾನೆ. ವಾಸ್ತವದಲ್ಲಿ ಮಿಲಿಟರಿಗೆ ಸಂಬಂಧಿಸಿದಂತೆ ಯುರೋಪ್ ರಾಷ್ಟ್ರಗಳ ಒಟ್ಟಾರೆ ಖರ್ಚನ್ನು ನೋಡಿದರೆ ಅದು ಅಮೇರಿಕೆಗಿಂತ ಹೆಚ್ಚಾಗಿಯೇ ಖರ್ಚು ಮಾಡುತ್ತಿದೆ. ಒಟ್ಟಾಗಿ ಯೋಚಿಸಿದರೆ, ನಿರ್ಧಾರಗಳನ್ನು ತೆಗೆದುಕೊಂಡರೆ ಯುಕ್ರೇನನ್ನು ರಕ್ಷಿಸುವುದು ಯುರೋಪಿಗೆ ಕಷ್ಟವಾಗಬಾರದು.
ಯುರೋಪಿನಲ್ಲಿ ರಷ್ಯಾದ ಸರ್ಕಾರದ ಸ್ವತ್ತು 210 ಬಿಲಿಯನ್ನಿ ನಷ್ಟಿದೆ. ಖಾಸಗಿಯದ್ದು 1 ಟ್ರಿಲಿಯನ್ ಯುರೋ ವರೆಗೂ ಇದೆ. ಇದನ್ನು ವಶಪಡಿಸಿಕೊಂಡರೆ ಸಾಕಾಗುತ್ತದೆ. ಯುಕ್ರೇನಿಗೆ ರಕ್ಷಣೆ ನೀಡುವುದು ಕಷ್ಟವಾಗಬಾರದು. ಅದಕ್ಕಿಂತ ಮುಖ್ಯವಾಗಿ ಯುದ್ಧವಿಲ್ಲದ ವ್ಯವಸ್ಥೆಗೆ ನಾವು ಒತ್ತಾಯಿಸಬೇಕಾಗಿದೆ. ಈ ಯುದ್ಧದಿಂದ ಯುಕ್ರೇನ್ ನಲುಗಿಹೋಗಿದೆ. ತನ್ನ ರಷ್ಯಾ ದ್ವೇಷವನ್ನು ತೀರಿಸಿಕೊಳ್ಳುವುದಕ್ಕೆ ಯುಕ್ರೇನನ್ನು ಯುದ್ಧಕ್ಕೆ ಹಚ್ಚುವುದು ಒಳ್ಳೆಯದಲ್ಲ. ಬದಲಿಗೆಶಾಂತಿಗಾಗಿ ಪ್ರಯತ್ನಿಸುವುದು ಒಳ್ಳೆಯದು. ಬೆಳವಣಿಗೆ
ಸಾಮಾಜಿಕ ಸುರಕ್ಷತೆ, ಉತ್ಪಾದಕತೆ ಹಾಗೂ ಜನರ ಕೊಳ್ಳುವ ಶಕ್ತಿಯನ್ನುಉತ್ತಮಪಡಿಸುವಕಡೆ ಗಮನ ಕೊಡಬೇಕು. ಇಂದು ಪ್ರತಿಯೊಂದು ದೇಶವೂ ತನ್ನ ದೇಶಕ್ಕೆ ಸೂಕ್ತವಾಗುವ ರೀತಿಯಲ್ಲಿ ಹೂಡಿಕೆಯನ್ನು ಯೋಜಿಸಬೇಕು. ದೇಶದೊಳಗೆ ಬೇಡಿಕೆಯನ್ನು, ಬಳಕೆಯನ್ನು ಹೆಚ್ಚಿಸಬೇಕಾಗಿದೆ. ಹೂಡಿಕೆಗೆ ಬೇಕಾದ ಹಣವನ್ನು ಸಂಪತ್ತು ಹಾಗೂ ಆದಾಯದ ಮೇಲೆ ತೆರಿಗೆ ಹಾಕಿ ಕ್ರೋಡೀಕರಿಸಿಕೊಳ್ಳಬೇಕು. ರಫ್ತುಆಧಾರಿತ ಆರ್ಥಿಕತೆ ತಾಳಿಕೆಯ ಕ್ರಮವಲ್ಲ. ನಮ್ಮ ದೇಶದ ಸಮಸ್ಯೆಯನ್ನು ಇನ್ನೊಂದು ದೇಶಕ್ಕೆ ವರ್ಗಾಯಿಸುವುದಕ್ಕೆ ಸಾಧ್ಯವಿಲ್ಲ. ಜಾಗತಿಕ ಮಟ್ಟದ ಸಹಕಾರ ಸಹಾಯಕವಾಗಬಲ್ಲದು. ಆದರೆ ಟ್ರಂಪ್ ಭಾವಿಸಿರುವಂತೆ ಜಗತ್ತನ್ನು ವಸಾಹತುಗಳನ್ನಾಗಿ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ಟ್ರಂಪ್ ದಾರಿ ಅಮೇರಿಕೆಯ ಬಿಕ್ಕಟ್ಟನ್ನು ಪರಿಹರಿಸುವುದಿಲ್ಲ. ಬದಲಿಗೆ ತೀವ್ರಗೊಳಿಸಬಹುದು. ಅದರ ಪರಿಣಾಮ ಜಗತ್ತಿನ ಉಳಿದ ರಾಷ್ಟ್ರಗಳ ಮೇಲೂ ಆಗುತ್ತದೆ. ಅಸಮಾನತೆಯನ್ನು ದೂರಮಾಡುವ, ಪರಿಸರವನ್ನು ಕಾಪಾಡಿಕೊಳ್ಳುವ, ಜನರ ಒಳಿತನ್ನು ಹೆಚ್ಚಿಸುವ ತಾಳಿಕೆಯ ಆರ್ಥಿಕತೆಗಾಗಿ ಪರ್ಯಾಯ ಪ್ರಜಾಸತ್ತಾತ್ಮಕ ಸಮಾಜವಾದೀ ವ್ಯವಸ್ಥೆಯನ್ನು ಕುರಿತು ಗಂಭೀರವಾದ ಚರ್ಚೆ ಜರೂರಾಗಿ ಆಗಬೇಕಾಗಿದೆ. ಬೆಳವಣಿಗೆ
ಇದನ್ನೂ ನೋಡಿ: ಪಹಲ್ಗಾಮ್ ದಾಳಿ : ಸಂಜೆ ರಾಜ್ಯಕ್ಕೆ ಆಗಮಿಸಲಿದೆ ಮಂಜುನಾಥ್ ಮೃತದೇಹ Janashakthi Media