ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತಿರುವನಂತಪುರ ವಿಮಾನ ನಿಲ್ದಾಣ ಚಿನ್ನ ಕಳ್ಳಸಾಗಣೆಯ ವಾಹಿನಿಯಾದದ್ದು ಹೇಗೆ?
ತಿರುವನಂತಪುರಂ ವಿಮಾನ ನಿಲ್ದಾಣ ಕೇಂದ್ರ ಸರಕಾರದ ಸಂಪೂರ್ಣ ಹತೋಟಿಯಲ್ಲಿ ಇದೆಯಲ್ಲವೇ? ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅದು ಚಿನ್ನ ಕಳ್ಳಸಾಗಾಣಿಕೆಯ ಸಂಪರ್ಕ ಸಾಧನವಾದದ್ದು ಹೇಗೆ? ಇದಕ್ಕೆ ಉತ್ತರಿಸಬೇಕಾದವರು ಕೇರಳದ ಮುಖ್ಯಮಂತ್ರಿಯಲ್ಲ, ಬದಲಿಗೆ ಅಮಿತ್ ಷಾರವರ ಮೇಲೆ ಈ ಹೊಣೆಯಿದೆ. ಇದು ಮಾರ್ಚ್ 7ರಂದು ತನಗೆ ಹಲವು ಪ್ರಶ್ನೆಗಳನ್ನೆಸೆದ ಬಿಜೆಪಿಯ ಹಿಂದಿನ ಅಧ್ಯಕ್ಷರು ಮತ್ತು ಈಗಲೂ ಆ ಪಕ್ಷದ ಇಬ್ಬರು ಅತ್ಯುನ್ನತ ಮುಖಂಡರಲ್ಲಿ ಒಬ್ಬರಾಗಿರುವ, ಕೇಂದ್ರ ಸರಕಾರದ ಗೃಹಮಂತ್ರಿಗಳಿಗೆ ಕೇರಳದ ಮುಖ್ಯಮಂತ್ರಿಗಳು ಕೇಳಿರುವ ಪ್ರತಿ-ಪ್ರಶ್ನೆಗಳು.
“ತಿರುವನಂತಪುರ ವಿಮಾನ ನಿಲ್ದಾಣದ ವಿವಿಧ ಹುದ್ದೆಗಳಲ್ಲಿ ಸಂಘಪರಿವಾರದ ಹಲವರನ್ನು ನೇಮಿಸಲಾಗಿದೆ. ಇದು ಚಿನ್ನ ಕಳ್ಳಸಾಗಣೆಯನ್ನು ನಿರಾತಂಕಗೊಳಿಸಲಿಕ್ಕಾಗಿಯೇ ಅಲ್ಲವೇ? ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದಿದ್ದ ಕೆಲವು ಅಧಿಕಾರಿಗಳನ್ನು ಮತ್ತೆ ಡೆಪ್ಯುಟೇಶನ್ ಮೇಲೆ ಇಲ್ಲಿಗೆ ವಾಪಾಸು ತಂದವರು ಯಾರು? ಸರಿಯಾದ ದಿಕ್ಕಿನಲ್ಲಿ ಸಾಗಿದ್ದ ತನಿಖೆಯ ದಿಕ್ಕು ಬದಲಾದದ್ದೇಕೆ? ಅದೇ ದಿಕ್ಕಿನಲ್ಲಿ ಮುಂದುವರೆದರೆ ನಿಮ್ಮ ಪಕ್ಷದ ಒಬ್ಬ ಚಾನೆಲ್ ಮುಖ್ಯಸ್ಥ ಮತ್ತು ನಿಮ್ಮ ಒಬ್ಬ ಮಂತ್ರಿಯನ್ನು ತಲುಪುತ್ತದೆ ಎಂದು ಖಚಿತವಾದಾಗ ತಾನೇ ಹೀಗೆ ಮಾಡಿದ್ದು?” ಇದು ಪಿಣರಾಯಿ ವಿಜಯನ್ ಕೇಳಿದ ಇನ್ನು ಕೆಲವು ಪ್ರಶ್ನೆಗಳು.
ಚಿನ್ನ ಕೊಟ್ಟವರು ಯಾರು ಎಂದು ಗೊತ್ತಿರುವ ತನಿಖಾ ಏಜೆನ್ಸಿ 8 ತಿಂಗಳು ಕಳೆದರೂ ಪ್ರಮುಖ ಆರೋಪಿಯನ್ನು ಪ್ರಶ್ನಿಸಿಯೇ ಇಲ್ಲವೇ? ಕಳ್ಳತನದಿಂದ ಬಂದ ಚಿನ್ನವನ್ನು ಖರೀದಿಸಿದವರ ಸಮೀಪಕ್ಕೆ ತನಿಖೆ ತಲುಪಿದೆಯೇ? ಸಂಘ ಪರಿವಾರದವರ ಸಂಬಂಧದಿಂದಾಗಿ ಅವರನ್ನು ತಲುಪದಂತೆ ಮಾಡಿರುವುದು ಕೇಂದ್ರ ಸರಕಾರವೇ ಅಲ್ಲವೇ? ಆ ಚಿನ್ನ ಸಿಕ್ಕಿದೆಯೇ ಎಂಬ ಪ್ರಶ್ನೆಗಳನ್ನೂ ವಿಜಯನ್ ಕಣ್ಣೂರು ಜಿಲ್ಲೆಯಲ್ಲಿರುವ ತಮ್ಮ ಸ್ವಂತ ವಿಧಾನಸಭಾ ಕ್ಷೇತ್ರ ಧರ್ಮದಂನಲ್ಲಿ ಚುನಾವಣಾ ಪ್ರಚಾರ ಆರಂಭಿಸುತ್ತ ಕೇಳಿದರು.
ಕೇರಳದಲ್ಲಿ ನಡೆಯದು
ಈ ಕಳ್ಳಸಾಗಣೆ ಹಗರಣದಲ್ಲಿ ಒಬ್ಬ ಸಾಕ್ಷಿ ರಹಸ್ಯಮಯ ರೀತಿಯಲ್ಲಿ ಸತ್ತಿದ್ದಾರೆ ಎಂಬ ಅಮಿತ್ ಷಾ ಅಪಾದನೆಯ ಬಗ್ಗೆ ಮಾತಾಡುತ್ತ, ರಾಜ್ಯ ಸರಕಾರಕ್ಕೆ ವಿವರಗಳು ಸಿಕ್ಕರೆ ಈ ಬಗ್ಗೆ ತನಿಖೆ ನಡೆಸಲು ಸಿದ್ಧ, ಆದರೆ ರಹಸ್ಯಮಯ ಸಾವಿನ ಬಗ್ಗೆ ಮಾತಾಡುವಾಗ ಸೊಹ್ರಬುದ್ದಿನ್ ಶೇಖ್, ಕೌಸರ್ ಬೀ, ತುಲ್ಸೀರಾಮ್ ಪ್ರಜಾಪತಿ ಕೊಲೆ ಪ್ರಕರಣದ ಆರೋಪಕ್ಕೊಳಗಾದ ವ್ಯಕ್ತಿಯ ಹೆಸರನ್ನು ನೆನಪಿಸಿಕೊಳ್ಳಬೇಕಾಗುತ್ತದೆ ಎಂದು ವಿಜಯನ್ ಹೇಳಿದರು.
ಗುಜರಾತಿನ ಈ ಎನ್‍ಕೌಂಟರ್ ಕೊಲೆ ಪ್ರಕರಣವನ್ನು ನೆನಪಿಸುತ್ತ, ಈ ಬಗ್ಗೆ ಪಿತೂರಿಯ ಚಾರ್ಜ್‍ಶೀಟಿನಲ್ಲಿ ಹೆಸರಿಸಲ್ಪಟ್ಟವರು ಈಗ ನಮಗೆ ನ್ಯಾಯದ ಭಾವನೆಯನ್ನು ಕಲಿಸಲು ಕೇರಳಕ್ಕೆ ಬಂದಿದ್ದಾರೆ ಎಂದು ವಿಜಯನ್ ಲೇವಡಿ ಮಾಡಿದರು. ಇದರ ವಿಚಾರಣೆ ನಡೆಸುತ್ತಿದ್ದ ಸಿಬಿಐ ಕೋರ್ಟಿನ ನ್ಯಾಯಾಧೀಶರ ಸಾವು ಇಂದೂ ಕೂಡ ರಹಸ್ಯವಾಗಿಯೇ ಉಳಿದಿದೆ ಎಂದೂ ಅವರು ನೆನಪಿಸಿದರು. ಸತ್ಯ ಹೇಳಿದವರ ಬಾಯಿ ಮುಚ್ಚಿಸಲು ಷಾ ಪ್ರಯತ್ನಿಸಿದ್ದಾರೆ. ಆದರೆ ಇಂತಹ ಕುತಂತ್ರಗಳು ಕೇರಳದಲ್ಲಿ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರು.
ಮುಂದುವರೆದು ಅವರು ಕೋಮುವಾದದ ಮಾನವ ಸಾಕಾರ ರೂಪವೇನಾದರೂ ಇದ್ದರೆ ಅದು ಅಮಿತ್ ಷಾ, ಅದನ್ನು ಪೋಷಿಸಲು ಏನು ಮಾಡಲೂ ಇವರು ಸಿದ್ಧ ಎಂದು ಬಲವಾಗಿ ಟೀಕಿಸಿದರು.
ಯೇನಕೇನ ಪ್ರಕಾರೇಣ
ಇತ್ತೀಚೆಗೆ ಎಬಿಪಿ ಹಿಂದಿ ಸುದ್ದಿ ವಾಹಿವಿ ಸಿ-ವೋಟರ್ ಜತೆಗೆ ನಡೆಸಿದ ಮತದಾರರ ಸರ್ವೆಯ ಆಧಾರದಲ್ಲಿ ಎಲ್.ಡಿ.ಎಫ್. 140 ಸೀಟುಗಳಲ್ಲಿ 83ರಿಂದ 91 ಗೆಲ್ಲಬಹುದು ಎಂದಿತ್ತು. ನಂತರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಕೇರಳದಲ್ಲಿ ಬಿಜೆಪಿ ಚುನಾವಣಾ ಸಭೆಯಲ್ಲಿ ಮಾತಾಡುತ್ತ ಕೇರಳದ ಮೂಲರಚನೆ ಹೂಡಿಕೆ ಮಂಡಳಿ ಕೆ.ಐ.ಐ.ಎಫ್.ಬಿ. ವಿರುದ್ಧ ಮತ್ತು ಎಲ್.ಡಿ.ಎಫ್. ಸರಕಾರದ ವಿರುದ್ಧ ಆಪಾದನೆಗಳನ್ನು ಮಾಡಿದರು. ಇದನ್ನು ಅನುಸರಿಸಿ ಕೇಂದ್ರ ಸರಕಾರದ ಅಡಿಯಲ್ಲಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಕೆ.ಐ.ಐ.ಎಫ್.ಬಿ ವಿರುದ್ಧ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(ಎಫ್.ಇ.ಎಂ.ಎ.) ನಿಯಮಗಳ ಉಲ್ಲಂಘನೆಯ ಕೇಸನ್ನು ಈಗ ದಾಖಲಿಸಿದೆ ಮತ್ತು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿ.ಇ.ಒ.) ಮತ್ತು ಡೆಪ್ಯುಟಿ ಮೆನೇಜಿಂಗ್ ಡೈರೆಕ್ಟರ್ ನ್ನು ವಿಚಾರಣೆಗೆ ಬರಲು ಆದೇಶ ನೀಡಿದೆ.
ಇದಾದ ನಂತರ ಕೇಂದ್ರ ಸರಕಾರದ ಅಡಿಯಲ್ಲಿರುವ ಇನ್ನೊಂದು ಸಂಸ್ಥೆಯಾದ ಕಸ್ಟಮ್ಸ್ ನ ಅಧಿಕಾರಿಗಳು ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಮೂವರು ಮಂತ್ರಿಗಳು ಮತ್ತು ವಿಧಾನಸಭಾ ಅಧ್ಯಕ್ಷರನ್ನು ಸಿಕ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಇದರ ಬಗ್ಗೆ ಅವರು ತೋರಿಸುತ್ತಿರುವ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿ ಇರುವ ಒಬ್ಬ ಆರೋಪಿಯ ಒಂದು ಅಫಿಡವಿಟ್ ನ ದಿನಾಂಕ ವಾಸ್ತವವಾಗಿ ನವಂಬರ್ 2020ರದ್ದು, ಆದರೆ ಅದನ್ನು ಮೂರು ತಿಂಗಳ ನಂತರ ಚುನಾವಣಾ ದಿನಾಂಕಗಳು ಪ್ರಕಟವಾದ ಮೇಲೆ ಸಲ್ಲಿಸಲಾಗಿದೆ ಎಂಬುದೇ ಈ ನಡೆಯ ಹಿಂದಿರುವ ರಾಜಕೀಯ ಆಟವನ್ನು ತೋರಿಸುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.