ಅಮಿತ್ ಶಾ ಭೇಟಿ: ʻವಿಐಪಿ ಬಂದ್ರೆ ನಮಗೇನ್ರೀʼ ವಾಹನ ಸವಾರರ ಹಿಡಿಶಾಪ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಭೇಟಿಯ ಹಿನ್ನೆಲೆಯಲ್ಲಿ ಇಂದು ಸಂಚಾರ ದಟ್ಟಣೆ ಉಂಟಾದ ಪ್ರಸಂಗಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಬೆಂಗಳೂರು ನಗರದ ಪ್ರಮುಖ ಭಾಗವಾದ ಮೇಖ್ರಿ ಸರ್ಕಲ್ ಸೇರಿದಂತೆ ಹಲವೆಡೆ ಟ್ರಾಫಿಕ್ ಸಮಸ್ಯೆಯಿಂದಾಗಿ ಜನರು ಸಂಕಷ್ಟ ಅನುಭವಿಸುವಂತಾಯಿತು.

ಮೇಖ್ರಿ ಸರ್ಕಲ್ ಬಳಿ ಗಂಟೆಗಟ್ಟಲೆ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರಿಂದ ಬೇಸತ್ತ ಸವಾರರು ಅಡ್ಡದಾರಿಗಳ ಮೂಲಕ ಟ್ರಾಫಿಕ್‌ ಉಲ್ಲಂಘನೆ ಮಾಡಿರುವುದು ನಡೆದಿದೆ. ಹೀಗೆ ಬಂದವರಿಗೆ ಮುಂದೆ ಚಲಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸರೊಂದಿಗೆ ವಾಹನ ಸವಾರರು ಮಾತಿನ ಚಕಮಕಿಗಿಳಿದರು. ಎಲ್ಲ ವಾಹನ ಸವಾರರು ಒಮ್ಮೆಲೆ ಹಾರ್ನ್ ಹೊಡೆಯುವ ಮೂಲಕ ಆಕ್ರೋಶ ಹೊರಗೆ ಹಾಕಿದರು.

ಅಂಬುಲೆನ್ಸ್​ ಸಂಚಾರಕ್ಕೂ ದಾರಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೆಬ್ಬಾಳದಿಂದ ಪ್ಯಾಲೇಸ್ ರಸ್ತೆಯುಉದ್ದಕ್ಕೂ ವಾಹನಗಳ ದಟ್ಟಣೆ ಹೆಚ್ಚಾಗಿದ್ದವು.

ಯಲಹಂಕದ ನ್ಯಾಟ್ ಗ್ರೀಡ್ ಕೇಂದ್ರಕ್ಕೆ ಭೇಟಿ ನೀಡಿದ ಅಮಿತ್ ಶಾ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರಿದ್ದ ಕಾರು ಸಂಚರಿಸುವ ಮಾರ್ಗದುದ್ದಕ್ಕೂ ಬ್ಯಾರಿಕೇಡ್​ಗಳನ್ನು ಹಾಕಿ ಪೊಲೀಸರು ವಾಹನಗಳನ್ನು ತಡೆದಿದ್ದರು.

ಇದಕ್ಕೂ ಮುನ್ನ ಜೆ.ಸಿ.ನಗರ ಠಾಣೆಯಿಂದ ಮೇಖ್ರಿ ವೃತ್ತದವರೆಗೆ ಟ್ರಾಫಿಕ್ ​ಜಾಮ್​ ಉಂಟಾಗಿತ್ತು. ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಬಸ್, ಕಾರು, ಬೈಕ್​ಗಳು ನಿಂತಿದ್ದವು. ರೇಸ್​ಕೋರ್ಸ್​ ರಸ್ತೆಯಲ್ಲಿ ವಾಹನ ಸಂಚಾರವನ್ನು ಒಂದು ಬದಿ ನಿಷೇಧಿಸಲಾಗಿತ್ತು. ಇದನ್ನು ವಿರೋಧಿಸಿದ ಸವಾರರು ಒಂದೇ ಸಮ ಹಾರ್ನ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.

‘ಅಮಿತ್ ಶಾ ವಿಐಪಿ ಆದರೆ ನಮಗೇನು ಆಗಬೇಕು’ ಎಂದು ಪ್ರಶ್ನಿಸಿದರು. ಅದ್ಯಾರೋ ಬಂದಿದ್ದಾರೆಂದು ನಮಗ್ಯಾಕೆ ತೊಂದರೆ ಕೊಡುತ್ತೀರಿ. ನಮ್ಮ ಕೆಲಸ ಹೋದರೆ ಅವರು ಕೊಡುತ್ತಾರಾ ಎಂದು ರೇಸ್​ಕೋರ್ಸ್​ ರಸ್ತೆಯ ಸಿಗ್ನಲ್​ ಬಳಿ ವಾಹನ ಸವಾರರು ಪೊಲೀಸರ ಎದುರು ಆಕ್ರೋಶ ತೋಡಿಕೊಂಡರು. ವಾಹನ ಸಂಚಾರಕ್ಕೆ ಅವಕಾಶವಾಗದೆ ಉರಿಬಿಸಿಲಿನಲ್ಲಿ ಕಾದುಕಾದು ಸುಸ್ತಾದರು.

Donate Janashakthi Media

Leave a Reply

Your email address will not be published. Required fields are marked *