ಮಂಡ್ಯ : ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಲಾಗಿದೆ. ಹಲವು ಸಮುದಾಯಗಳಿಗೆ ಮೀಸಲಾತಿ ಘೋಷಣೆ ಮಾಡಲಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಮತ್ತೆ ಬಿಜೆಪಿಯನ್ನು ಗೆಲ್ಲಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.
ಮಂಡ್ಯದ ವಿವಿ ಮೈದಾನದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯಾಗುತ್ತಿದೆ. 2019ರಲ್ಲಿ ಮೋದಿ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂತು. ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲಿಯೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದರು.
ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಭ್ರಷ್ಟಾಚಾರ ನಡೆಸಿವೆ. ಈ ಮೂಲಕ ಕರ್ನಾಟಕ ಅಭಿವೃದ್ಧಿಗೆ ತಡೆ ನೀಡಿವೆ. ಕಾಂಗ್ರೆಸ್, ಜೆಡಿಎಸ್ ನಲ್ಲಿ ಜಾತಿವಾದಿ, ಭ್ರಷ್ಟಾಚಾರಿಗಳು ಇದ್ದಾರೆ. ಅನೇಕ ಕ್ರಿಮಿನಲ್ಸ್ ಗಳು ಇದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೆಹಲಿ ಹೈಕಮಾಂಡ್ ಗೆ ಎಟಿಎಂ ಆಗುತ್ತೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಂದು ಕುಟುಂಬಕ್ಕೆ ಎಟಿಎಂ ಆಗುತ್ತೆ. ಸಿದ್ದರಾಮಯ್ಯ ಸರ್ಕಾರ ಪಿ ಎಫ್ ಐ ವಿರುದ್ಧ ಕೇಸ್ ಗಳನ್ನು ವಾಪಸ್ ಪಡೆದಿತ್ತು. ಆದರೆ ಪಿ ಎಫ್ ಐ ಭಯೋತ್ಪಾಧಕ ಸಂಘಟನೆಯಾಗಿದ್ದರಿಂದ ಪ್ರಧಾನಿ ಮೋದಿ ಅವರು ಈ ಸಂಘಟನೆಯನ್ನೇ ನಿಷೇಧ ಮಾಡಿದ್ದಾರೆ ಎಂದರು.
ಈ ಸಾರಿ ಬಿಜೆಪಿ ಗೆಲ್ಲಲ್ಲ : ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿಯಲ್ಲಿ ಮಾಧ್ಯಮಜೊತೆ ಮಾತನಾಡಿದ ಅವರು, ಎಲೆಕ್ಷನ್ ಟೈಮ್‌ನಲ್ಲಿ ಬರ್ತಾರೆ, ಎಲೆಕ್ಷನ್ ನಂತರ ಹೋಗ್ತಾರೆ. ಈ ಮಧ್ಯೆ ಏನಾದರೂ ನ್ಯಾಯ ಒದಗಿಸಿಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಏನೇ ಸಾಹಸ ಮಾಡಿದ್ರು ಈ ಸಾರಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದರು.
ಅಮಿತ್ ಶಾ ಬಂದು ಇಲ್ಲಿ ಮಾಯ-ಮಂತ್ರ ಮಾಡ್ತಾರಾ? ಕೇಂದ್ರ ಗೃಹ ಸಚಿವ ಅಂತ ಕರೆದಿದ್ದಾರೆ, ಅದಕ್ಕೆ ಬಂದಿದ್ದಾರೆ. ಅವರೇನು ಮಾಯ-ಮಂತ್ರ ತಂಡ ಇಟ್ಕೊಂಡಿದಾರಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮಂಡ್ಯಕ್ಕೆ ಅಮಿತ್ ಶಾ ಬಂದಿರುವ ವಿಚಾರವಾಗಿ ದಾವಣಗೆರೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಹಿಮಾಚಲ ಪ್ರದೇಶಕ್ಕೂ ಹೋಗಿದ್ದರು. ಅಲ್ಲಿ ಏನಾಗಿದೆ? ಅವರು ಬಂದ ಕೂಡಲೇ ಚುನಾವಣೆ ಗೆದ್ದು ಬಿಡ್ತಾರಾ? ಅಮಿತ್ ಶಾ ಅಲ್ಲ, ನರೇಂದ್ರ ಮೋದಿ ಬಂದರೂ ಗೆಲ್ಲಲ್ಲ ಎಂದು ಟಾಂಗ್ ನೀಡಿದ್ದಾರೆ.