ಭೂಪಾಲ್: ಬಾಲಿವುಡ್ ಚಿತ್ರರಂಗದ ಪ್ರಮುಖರಾದ ಅಮಿತಾಭ್ ಬಚ್ಚನ್ ಹಾಗೂ ನಟ ಅಕ್ಷಯ್ ಕುಮಾರ್ ಅವರ ಪ್ರತಿಕೃತಿ ದಹಿಸಿದ ಮಧ್ಯಪ್ರದೇಶ ಕಾಂಗ್ರೆಸ್ ಕಾರ್ಯಕರ್ತರು ನಿರಂತರವಾಗಿ ಬೆಲೆಗಳು ಏರುತ್ತಿದ್ದರೂ ಮೌನವಾಗಿರುವ ಬಗ್ಗೆ ಆಕ್ರೋಶವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ಹಾಗೂ ಹಣದುಬ್ಬರ ವಿರುದ್ದ ಸತತ ಟ್ವೀಟ್ ಗಳನ್ನು ಮಾಡುತ್ತಿದ್ದ ಈ ನಟರು, ಇದೀಗ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ನಿರಂತರವಾಗಿ ಏರಿಕೆ ಮಾಡಲಾಗುತ್ತಿದ್ದರೂ ಸಹ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನು ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಮಹಾಧಿವೇಶನದ ಕರೆ
ಅಡುಗೆ ಅನಿಲ ಬೆಲೆ 1 ಸಾವಿರ ರೂಪಾಯಿಯಷ್ಟು ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100 ರಿಂದ 120 ರೂ. ಆಗಿದೆ. ಆದಾಗ್ಯೂ, ಇವರಿಗೆ ಸಾಮಾನ್ಯ ಜನರ ಪರ ಕಾಳಜಿ ಇಲ್ಲ ಎಂದು ಕಾಂಗ್ರೆಸ್ ಎಂಎಲ್‌ಸಿ ಪಿ.ಸಿ. ಶರ್ಮಾ ಆರೋಪಿಸಿದರು.
ನಾಲ್ಕುವರೆ ತಿಂಗಳು ಸ್ಥಿರವಾಗಿದ್ದ ಪೆಟ್ರೋಲ್ ಡೀಸೆಲ್ ಬೆಲೆಗಳು ಮಾರ್ಚ್ 22ರಂದು ದರ ಪರಿಷ್ಕರಣೆಯೊಂದಿಗೆ ಇದುವರೆಗೆ ಸತತ 18 ದಿನದಲ್ಲಿ 14 ಬಾರಿ ದರ ಹೆಚ್ಚಳವಾಗಿದೆ.
2012ರ ಯುಪಿಎ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ ರೂ. 300 ರಿಂದ 4000 ಹಾಗೂ ಲೀಟರ್ ಪೆಟ್ರೋಲ್ ಬೆಲೆ 60 ರೂ. ಇತ್ತು. ಅಂತಹ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದ ಅಮಿತಾಭ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್, ವಾಹನಗಳನ್ನು ಖರೀದಿಸಬಹುದು ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ಸಾಲದ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದರು.