ಅಮೆರಿಕದ ‘ಸುಂಕ ಯುದ್ಧ’ – ಎಲ್ಲಿ ಹೋಯಿತು ‘ಮುಕ್ತ ವ್ಯಾಪಾರ’ದ ಕಲ್ಪನೆ?

ಅಧ್ಯಕ್ಷ ಟ್ರಂಪ್ ಇತರ ದೇಶಗಳಿಂದ ಅಮೆರಿಕಕ್ಕೆ ಅನ್ಯಾಯವಾಗಿದೆ ಎಂಬ ಒಂದು ಅಸಮಾಧಾನವನ್ನು ಅಮೆರಿಕದ ಜನರಲ್ಲಿ ಉಂಟುಮಾಡಿದ್ದಾರೆ. ಆದರೆ ಇದು ನಿಜವಲ್ಲ. ವಿಶ್ವ ವ್ಯಾಪಾರ ಸಂಸ್ಥೆಯ ಮೂಲಕ ಹೇರಿದ ಜಾಗತೀಕರಣ ಅದಕ್ಕೆ ಬಹಳಷ್ಟು ಲಾಭಗಳನ್ನು ತಂದಿದೆ. ಅಧ್ಯಕ್ಷ ಟ್ರಂಪ್ ಗಮನಿಸದಿರುವ ವಿಷಯವೆಂದರೆ, ಅಮೆರಿಕವು ತನ್ನ ಗಡಿಯೊಳಗೆ ಹೆಚ್ಚು ವಸ್ತುಗಳನ್ನು ಉತ್ಪಾದಿಸಲು ಪ್ರಯತ್ನಿಸಿದರೆ, ಇತರ ರಾಷ್ಟ್ರಗಳು ಸಹ ಅದನ್ನೇ ಮಾಡುತ್ತವೆ.. ಇದು ಅಮೆರಿಕಕ್ಕೆ ದೊರಕುತ್ತಿದ್ದ ಅನೇಕ ಪ್ರಯೋಜನಗಳನ್ನು ತಪ್ಪಿಸುತ್ತದೆ. ಡಾಲರೀಕರಣವು ಅಮೆರಿಕಕ್ಕೆ ತನ್ನ ವರಮಾನವನ್ನು ಮೀರಿ ಬದುಕಲು ಅನುವು ಮಾಡಿಕೊಟ್ಟಿರುವ ಸನ್ನಿವೇಶವನ್ನೂ ಬದಲಿಸುತ್ತದೆ. ಇದು ಜಗತ್ತಿಗೆ ನಿಜಕ್ಕೂ ಒಂದು ಸವಾಲು. ಇತರ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತದೆಯೇ? ಜಗತ್ತು ಎಂದಿಗೂ ‘ಮುಕ್ತ ವ್ಯಾಪಾರ’ ಸನ್ನಿವೇಶದಲ್ಲಿ ಇರಲಿಲ್ಲ ಮತ್ತು ಈಗ ಒಂದು ವಿಭಿನ್ನ ಸನ್ನಿವೇಶ ತೆರೆದುಕೊಳ್ಳುತ್ತಿದೆ. ಸುಂಕ

-ಪ್ರೊ. ಅರುಣ್ ಕುಮಾರ್

-ಅನುವಾದ: ಕೆ.ಎಂ.ನಾಗರಾಜ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿನನಿತ್ಯವೂ ಸುಂಕ ವಿಧಿಸುವ ಬೆದರಿಕೆ ಹಾಕುತ್ತಾರೆ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಟ್ರಂಪ್ ಮಾಡಬಯಸುವ ಬದಲಾವಣೆಗಳು ದೇಶ ದೇಶಗಳನ್ನು ಮತ್ತು ಹಣಕಾಸು ಮಾರುಕಟ್ಟೆಗಳನ್ನು ಪ್ರಕ್ಷುಬ್ಧಗೊಳಿಸಿವೆ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿವೆ. ಈ ಬದಲಾವಣೆಗಳಿಂದ ತೊಂದರೆಗೊಳಗಾಗುವ ದೇಶಗಳು ಈ ಬದಲಾವಣೆಗಳು ಕಾರ್ಯಗತವಾಗುತ್ತವೆಯೋ ಅಥವಾ ಇಲ್ಲವೋ? ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಬೇಕೇ ಅಥವಾ ಕಾಯಬೇಕೇ? ಎಂಬುದರ ಬಗ್ಗೆ ಗೊಂದಲದಲ್ಲಿವೆ. ಪ್ರತೀಕಾರದ ಕ್ರಮಗಳನ್ನು ಕೈಗೊಂಡರೆ, ಸುಂಕಗಳನ್ನು ಮತ್ತಷ್ಟು ಏರಿಸುವುದಾಗಿ ಟ್ರಂಪ್ ಒತ್ತಿ ಹೇಳುತ್ತಾರೆ. ಕಾದು ನೋಡುವ ನಿಲುವು ತಳೆದರೆ, ಅವರನ್ನು ಟ್ರಂಪ್ ಭಯಪಡಿಸುವಲ್ಲಿ ಯಶಸ್ವಿಯಾದಂತಾಗುತ್ತದೆ. ಆದರೆ, ಈ ಬಗ್ಗೆ ಭಾರತದ ಅಧಿಕಾರಿಗಳು ಮೌನವಾಗಿದ್ದಾರೆ. ಮಾತ್ರವಲ್ಲ, ಅಮೆರಿಕ ಆಸಕ್ತಿ ಹೊಂದಿರುವ ಸರಕುಗಳ ಮೇಲಿನ ಸುಂಕವನ್ನು ಭಾರತ ಅದಾಗಲೇ ಇಳಿಕೆ ಮಾಡಿಯಾಗಿದೆ.

ಯುಎಸ್ ಕಾಂಗ್ರೆಸ್‌ನ ಜಂಟಿ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಟ್ರಂಪ್ ತಮ್ಮ ಕಾರ್ಯತಂತ್ರವನ್ನು ವಿವರಿಸಿದ್ದಾರೆ. ಸ್ನೇಹಿತರೇ ಇರಲಿ ಅಥವಾ ಶತ್ರುಗಳೇ ಇರಲಿ ಎಲ್ಲರ ಮೇಲೂ ಅವರುಗಳು ವಿಧಿಸುವಷ್ಟೇ ಪ್ರಮಾಣದ ಸುಂಕಗಳನ್ನು ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ. ಎರಡು ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ ಅವರು ಭಾರತವನ್ನು ‘ಸುಂಕಗಳ ರಾಜ’ ಎಂದು ಕರೆದಿದ್ದಾರೆ. “ಇತರ ದೇಶಗಳು ನಮ್ಮ ಮೇಲೆ ಎಷ್ಟು ಸುಂಕ ವಿಧಿಸುತ್ತಾರೋ, ಅವರ ಮೇಲೆ ನಾವೂ ಸಹ ಅಷ್ಟೇ ಸುಂಕ ವಿಧಿಸುತ್ತೇವೆ”. “ದಶಕಗಳಿಂದಲೂ ಇತರ ದೇಶಗಳು ನಮ್ಮ ವಿರುದ್ಧ ಸುಂಕಗಳನ್ನು ವಿಧಿಸುತ್ತಿವೆ. ಈಗ ಅವುಗಳ ಮೇಲೆ ಸುಂಕ ವಿಧಿಸುವ ಸರದಿ ನಮ್ಮದು” .

ಸುಂಕಎಂಬುದು “ಒಂದು ಸುಂದರವಾದ ಪದ” ಎಂದರು.

ಮಾರ್ಚ್ 4 ರಂದು, ಅಮೆರಿಕದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶಗಳಾದ ಮೆಕ್ಸಿಕೊ, ಕೆನಡಾ ಮತ್ತು ಚೀನಾದ ಮೇಲೆ ಸುಂಕಗಳನ್ನು ವಿಧಿಸಲಾಗಿದೆ. ಚೀನಾ ಮತ್ತು ಕೆನಡಾ, ಅಮೆರಿಕಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಸುಂಕ ವಿಧಿಸುವ ಮೂಲಕ ತಮ್ಮ ಪ್ರತೀಕಾರವನ್ನು ತೀರಿಸಿಕೊಂಡವು.

ಫೆಬ್ರವರಿಯಲ್ಲಿ ಸುಂಕಗಳನ್ನು ವಿಧಿಸುವುದಾಗಿ ಘೋಷಿಸಿದಾಗ, ರಿಯಾಯಿತಿಗಳನ್ನು ಪಡೆಯಲು ಅದೊಂದು ಬೆದರಿಕೆಯ ತಂತ್ರವೆಂದು ಪರಿಗಣಿಸಲಾಯಿತು. ಎಲ್ಲರಿಗೂ ಸುಂಕಗಳು ಉಂಟುಮಾಡಬಹುದಾದ ಪ್ರತಿಕೂಲ ಪರಿಣಾಮವನ್ನು ಪರಿಗಣಿಸಿ, ಸುಂಕ ನೀತಿಯು ಅಂತಿಮವಾಗಿ ಜಾರಿಯಾಗುವುದಿಲ್ಲ ಎಂದು ಕೆಲವರು ಭಾವಿಸಿದರು. ಆದಾಗ್ಯೂ, ಮಾರ್ಚ್ 6 ರಂದು, ಒಂದು ತಿಂಗಳ ವಿರಾಮದ ನಂತರ, ಕೆನಡಾ ಮತ್ತು ಮೆಕ್ಸಿಕೊದಿಂದ ಆಮದುಮಾಡಿಕೊಳ್ಳುವ ಸರಕುಗಳ ಮೇಲೆ ಸುಂಕಗಳನ್ನು ಘೋಷಿಸಲಾಯಿತು. ಮಾರ್ಚ್ 11 ರಂದು, ಉಕ್ಕು ಮತ್ತು ಅಲ್ಯೂಮಿನಿಯಂ ಸೇರಿದಂತೆ ಎಲ್ಲಾ ಆಮದುಗಳ ಮೇಲೂ ಸುಂಕಗಳನ್ನು ವಿಧಿಸಲಾಯಿತು. ಈ ಬಗ್ಗೆ ಸ್ಪಷ್ಟತೆಯ ಬದಲಿಗೆ ಅನಿಶ್ಚಿತತೆಯೇ ಮುಂದುವರೆದಿದೆ.

ಇದನ್ನೂ ಓದಿ: ವಿ.ವಿ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ – ಲಿಂಗಯ್ಯ ಬಿ. ಹಿರೇಮಠ

ಆದರೆ, ಕೆನಡಾ ಮತ್ತು ಮೆಕ್ಸಿಕೋ ದೇಶಗಳು ಅಮೆರಿಕದೊಂದಿಗಿನ ಒಂದು ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿರುವುದರಿಂದ ಸುಂಕಗಳು ಈವರೆಗೆ ಸಮಸ್ಯೆಯಾಗಿರಲಿಲ್ಲ. ಕೃತಕ ಔಷಧ ಫೆಂಟನಿಲ್ ಕೆನಡಾ ಮತ್ತು ಮೆಕ್ಸಿಕೋ ದೇಶಗಳಿಂದ ಬರುತ್ತಿದೆ ಎಂಬುದು ಅಧ್ಯಕ್ಷ ಟ್ರಂಪ್ ಅವರ ಆಪಾದನೆ. ಆದರೆ, ಕೆನಡಾದಿಂದ ಅಮೆರಿಕಕ್ಕೆ ಪ್ರವೇಶಿಸುವ ಈ ಔಷಧವು ಒಂದು ಕ್ಷುಲ್ಲಕ ಪ್ರಮಾಣದಲ್ಲಿರುವುದರಿಂದ, ಕೆನಡಾದ ಅರ್ಥವ್ಯವಸ್ಥೆಯನ್ನು ಕುಸಿಯುವಂತೆ ಮಾಡುವುದೇ ಟ್ರಂಪ್ ಅವರ ನಿಜ ಉದ್ದೇಶವಾಗಿರುವುದರಿಂದ, ಅಧಿಕ ಸುಂಕ ಹೇರುವ ಕ್ರಮವು ಕೇವಲ ಒಂದು ತಂತ್ರ ಎಂದು ಕೆನಡಾದ ಪ್ರಧಾನಿ ವಾದಿಸಿದ್ದಾರೆ. ಅದೇ ಪ್ರಮಾಣದ ಸುಂಕಗಳನ್ನು ಘೋಷಿಸುವಾಗ, ಅಮೆರಿಕ ಮತ್ತು ಕೆನಡಾ ಎರಡೂ ದೇಶಗಳ ನಾಗರಿಕರಿಗೆ ತೊಂದರೆಯಾಗುತ್ತದೆಯಾದ್ದರಿAದ ಅಮೆರಿಕದ ನಡೆಯನ್ನು “ಮೂಕ ಕ್ರಮ” ಎಂದು ಕೆನಡಾದ ಪ್ರಧಾನಿ ಕರೆದರು.

ಚೀನಾ ಕೂಡ ಫೆಂಟನಿಲ್ ಡ್ರಗ್ ವಾದವನ್ನು ಒಪ್ಪಲಿಲ್ಲ. ಅಮೆರಿಕದ ಸುಂಕಗಳನ್ನು ಬೆದರಿಕೆಯ ಮೂಲಕ ಒತ್ತಡಕ್ಕೊಳಪಡಿಸುವ ಒಂದು ಕ್ರಮ (ಬ್ಲ್ಯಾಕ್‌ಮೇಲ್) ಎಂದು ಹೇಳಿರುವ ಚೀನಾ, ವಿಶ್ವ ಉತ್ಪಾದನೆಯಲ್ಲಿ 90% ಪಾಲು ಹೊಂದಿರುವ ಅಪರೂಪದ ಲೋಹಗಳ ರಫ್ತಿನ ಮೇಲೆ ಗಮನಾರ್ಹ ನಿಯಂತ್ರಣಗಳನ್ನು ಹೇರುವ ಮೂಲಕ ತನ್ನ ಪ್ರತೀಕಾರವನ್ನು ತೀರಿಸಿಕೊಂಡಿತು. ಆದರೆ, ಅಮೆರಿಕ ಸುಂಕ ವಿಧಿಸುವ ಬಗ್ಗೆ ಮೀನ-ಮೇಷ ಎಣಿಸುತ್ತಿದ್ದಾಗ ಮೆಕ್ಸಿಕೋ ತನ್ನ ಪ್ರತಿಸುಂಕದ ಕ್ರಮವನ್ನು ಘೋಷಿಸುವಲ್ಲಿ ವಿಳಂಬ ಮಾಡಿತು.

ಭಾರತ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿದೆ. ಟ್ರಂಪ್ “ಅವರು ಈಗ ತಮ್ಮ ಸುಂಕಗಳನ್ನು ಕಡಿತಗೊಳಿಸಲು ಬಯಸುತ್ತಾರೆ ಏಕೆಂದರೆಕೊನೆಗೂ ಯಾರೋ ಒಬ್ಬರು ಅವುಗಳನ್ನು ಬಹಿರಂಗಪಡಿಸಿದ್ದಾರೆ” ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಇದನ್ನು ಭಾರತ ಅಧಿಕೃತವಾಗಿ ನಿರಾಕರಿಸಿದೆ. ಭಾರತಕ್ಕೆ ಆಮದಾಗುವ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಕಡಿತಗೊಳಿಸುವುದರಿಂದ ಭಾರತದ ಕೃಷಿ ಮತ್ತು ಕೈಗಾರಿಕೆಗಳಿಗೆ ಹಾನಿಯಾಗುತ್ತದೆ. 2025-26ರ ಬಜೆಟ್‌ನಲ್ಲಿ, ಅಮೆರಿಕದ ಆಸಕ್ತಿಯ ವಸ್ತುಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲಾಗಿದೆ.

ಸುಂಕ ಯುದ್ಧ’ದ ಉದ್ದೇಶ ಮತ್ತು ವೈರುಧ್ಯಮಯ ಪ್ರವೃತ್ತಿಗಳು

ಇತರ ದೇಶಗಳು ಒಟ್ಟಿಗೆ ಸೇರದಂತೆ ಮಾಡುವ ಉದ್ದೇಶದಿಂದ ಒಂದೊಂದು ದೇಶದೊಂದಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಟ್ರಂಪ್ ವ್ಯವಹರಿಸುತ್ತಿದ್ದಾರೆಯೇ? ಅಮೆರಿಕಕ್ಕೆ ರಿಯಾಯಿತಿಗಳನ್ನು ಪಡೆಯಲು ಅವರು ಸುಂಕಗಳ ಬೆದರಿಕೆಯನ್ನು ಬಳಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ, ಅದು ಅಮೆರಿಕಕ್ಕೆ ತಿರುಗುಬಾಣವೇ ಆಗಬಹುದು. ಸುಂಕಗಳನ್ನು ವಿಧಿಸುವ ಅಮೆರಿಕದ ಕ್ರಮವನ್ನು ವಾರೆನ್ ಬಫೆಟ್ “ಯುದ್ಧ ಕೃತ್ಯ” ಎಂದು ಬಣ್ಣಿಸಿದ್ದಾರೆ.

ಉದ್ದಿಮೆಗಳು ಮತ್ತೆ ಅಮೆರಿಕಕ್ಕೆ ವಾಪಸಾಗುವಂತೆ ಬಲವಂತಪಡಿಸುವ ಉದ್ದೇಶದಿಂದ ಸುಂಕ ವಿಧಿಸುವ ಬೆದರಿಕೆಯನ್ನು ಟ್ರಂಪ್ ಬಳಸುತ್ತಿದ್ದಾರೆ. ಅಮೆರಿಕ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಸುಂಕಗಳನ್ನು ವಿಧಿಸುವ ಟ್ರಂಪ್ ಅವರ ಕ್ರಮವು ಈ ಸರಕುಗಳ ಮಾರಾಟದ ಬೆಲೆಗಳನ್ನು ಏರಿಸುತ್ತದೆ. ಆಮದು ಸರಕುಗಳ ಬೆಲೆಗಳು ಬಲು ತುಟ್ಟಿಯಾಗುವುದರಿಂದ, ಬೇಡಿಕೆಯು ಅಮೆರಿಕದಲ್ಲೇ ಉತ್ಪಾದಿಸಿದ ಸರಕುಗಳಿಗೆ ಬದಲಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ, ವಿಷಯ ಅಷ್ಟು ಸರಳವಲ್ಲ. ಸರಕುಗಳ ಉತ್ಪಾದನೆಯನ್ನು ಆಂತರಿಕವಾಗಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಅಮೆರಿಕದಲ್ಲಿ ಕೂಲಿ/ವೇತನಗಳು ಉನ್ನತವಾಗಿರುವುದರಿಂದ ಆ ಮಟ್ಟದ ಕೂಲಿ ನೀಡಿದಾಗ ಸರಕು ಬೆಲೆಗಳು ಬಲು ದುಬಾರಿಯಾಗುತ್ತವೆ. ಈ ಸರಕುಗಳನ್ನು ಇತರ ದೇಶಗಳಿಂದಲೂ ಆಮದು ಮಾಡಿಕೊಳ್ಳಬಹುದು. ಆದರೆ, ಅದೂ ಕೂಡ ಸಮಯ ತೆಗೆದುಕೊಳ್ಳುತ್ತದೆ ಮಾತ್ರವಲ್ಲ ದುಬಾರಿಯೂ ಆಗುತ್ತದೆ. ಆದ್ದರಿಂದ, ಈ ಪೂರೈಕೆ ಮಾರ್ಗಗಳು ಅಡಚಣೆಗೊಳಗಾಗುತ್ತವೆ, ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ, ಬೆಲೆಗಳು ದುಬಾರಿಯಾಗುತ್ತವೆ ಮತ್ತು ಬೇಡಿಕೆ ಇಳಿಕೆಯಾಗುತ್ತದೆ.

ಈ ಎಲ್ಲ ಕ್ರಮಗಳೂ ಅರ್ಥವ್ಯವಸ್ಥೆಯ ಸ್ಥಗಿತತೆ-ಹಣದುಬ್ಬರದ ಪರಿಸ್ಥಿತಿಗಳಿಗೆ ಕಾರಣವಾಗುತ್ತವೆ. ಸರ್ಕಾರದ ವ್ಯಾಪ್ತಿಯನ್ನು ಮೊಟಕುಗೊಳಿಸುವ ಟ್ರಂಪ್ ಅವರ ಬಯಕೆಯಿಂದ ಅವು ಉಲ್ಬಣಗೊಳ್ಳುತ್ತವೆ. ಇದು ಬಲಪಂಥೀಯ ಕಾರ್ಯಸೂಚಿಯೂ ಹೌದು. ಈ ಕಾರ್ಯಸೂಚಿಯನ್ನು ಸಕ್ರಿಯಗೊಳಿಸಲು ಎಲೋನ್ ಮಸ್ಕ್ ನೇತೃತ್ವದಲ್ಲಿ ‘ಸರ್ಕಾರ ದಕ್ಷತಾ ಇಲಾಖೆ’(ಎಂಒಜಿಇ)ಯನ್ನು ಸ್ಥಾಪಿಸಲಾಗಿದೆ. ಸರ್ಕಾರದ ಸಿಬ್ಬಂದಿಯನ್ನು ವಜಾಗೊಳಿಸುವ ಮೂಲಕ ಮತ್ತು ಅಮೆರಿಕ ನೆರವು ಸಂಸ್ಥೆ(ಯುಎಸ್‌ಏಡ್) ಮತ್ತು ಶಿಕ್ಷಣದಂತಹ ಇಲಾಖೆಗಳನ್ನು ಮುಚ್ಚುವ ಮೂಲಕ ಸರ್ಕಾರಿ ವೆಚ್ಚವನ್ನು ಕಡಿತಗೊಳಿಸುತ್ತಿದ್ದಾರೆ. ಇದು ಬೇಡಿಕೆಯನ್ನು ಇಳಿಕೆ ಮಾಡುತ್ತದೆ ಮತ್ತು ಸಾರ್ವಜನಿಕ ಸೇವೆಗಳನ್ನು ಮೊಟಕುಗೊಳಿತ್ತದೆ. ಇವೆಲ್ಲವೂ ಅಮೆರಿಕದ ಅರ್ಥವ್ಯವಸ್ಥೆಯನ್ನು ಒಂದು ಆರ್ಥಿಕ ಹಿಂಜರಿತಕ್ಕೆ ತಳ್ಳಬಹುದು. ಇಲ್ಲಿ ಎರಡು ವೈರುಧ್ಯಮಯ ಪ್ರವೃತ್ತಿಗಳಿವೆ: ಒಂದು, ಸರ್ಕಾರದ ವ್ಯಾಪ್ತಿಯನ್ನು ಮೊಟಕುಗೊಳಿಸುವ ಮೂಲಕ ಸರ್ಕಾರದ ಮಧ್ಯಪ್ರವೇಶÀದಿಂದ ಮಾರುಕಟ್ಟೆಯನ್ನು ಮುಕ್ತಗೊಳಿಸುವುದು. ಮತ್ತೊಂದು, ಸರ್ಕಾರದ ಬಲವನ್ನು ಬಳಸಿಕೊಂಡು ಕೈಗಾರಿಕೆಗಳು ಮರಳಿ ಅಮೆರಿಕಕ್ಕೆ ಸ್ಥಳಾಂತರಿಸುವAತೆ ಬಲವಂತಪಡಿಸುವುದು.

ಅಮೆರಿಕಕ್ಕೆ ನಿಜವಾಗಿಯೂ ಅನ್ಯಾಯವಾಗಿದೆಯೇ?

ಅಮೆರಿಕದಿಂದ ಚೀನಾ, ಭಾರತ ಮತ್ತು ಮೆಕ್ಸಿಕೊ ದೇಶಗಳಿಗೆ ಹೊರಹೋದ ಉದ್ಯೋಗಗಳನ್ನು ಮರಳಿ ತರಲು ಟ್ರಂಪ್ ಬಯಸುತ್ತಾರೆ. ಆಧರೆ ಹಾಗೆ ಮಾಡಿದಾಗ, ಅಮೆರಿಕದಲ್ಲಿ ದೈನಂದಿನ ಅಗತ್ಯ ವಸ್ತುಗಳ ಬೆಲೆಗಳು ಏರುತ್ತಾ ಹೊಗುತ್ತವೆ. ಆದರೆ, ಅಧ್ಯಕ್ಷ ಟ್ರಂಪ್ ಇತರ ದೇಶಗಳಿಂದ ಅಮೆರಿಕಕ್ಕೆ ಅನ್ಯಾಯವಾಗಿದೆ ಎಂಬ ಒಂದು ಅಸಮಾಧಾನವನ್ನು ಅಮೆರಿಕದ ಜನರಲ್ಲಿ ಉಂಟುಮಾಡಿದ್ದಾರೆ. ಆದರೆ ಇದು ನಿಜವೇ?

1991ರ ವೇಳೆಗೆ ಸೋವಿಯತ್ ಒಕ್ಕೂಟವು ಪತನವಾದ ನಂತರ, ಅಮೆರಿಕವು ಇಡೀ ವಿಶ್ವದ ರಾಜಕೀಯ, ಆರ್ಥಿಕ ಮತ್ತು ವ್ಯಾಪಾರ ವಲಯಗಳ ಮೇಲೆ ತನ್ನ ಪ್ರಾಬಲ್ಯವನ್ನು ಚಲಾಯಿಸಿದೆ. ಅಭಿವೃದ್ಧಿಶೀಲ ದೇಶಗಳಿಗೆ ಅಮೆರಿಕ ನೇತೃತ್ವದ ಮುಂದುವರಿದ ಬಂಡವಾಳಶಾಹಿ ದೇಶಗಳ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ.

ಈ ‘ಸುಂಕ ಯುದ್ಧ’ವು, 1990ರ ದಶಕದ ಮಧ್ಯಭಾಗದಲ್ಲಿ ವಿಶ್ವ ವ್ಯಾಪಾರ ಸಂಘಟನೆಯು ರಚನೆಯಾದ ನಂತರದ ಕಾಲಮಾನದಲ್ಲಿ ಚಾಲ್ತಿಯಲ್ಲಿದ್ದ ಜಾಗತಿಕ ವ್ಯಾಪಾರ ವ್ಯವಸ್ಥೆಗೆ ಒಂದು ದೊಡ್ಡ ಹಿನ್ನಡೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಗ್ಯಾಟ್ ವ್ಯವಸ್ಥೆಯನ್ನು ವಿಶ್ವ ವ್ಯಾಪಾರ ಸಂಸ್ಥೆಯೊಂದಿಗೆ ಬದಲಾಯಿಸುವ ಕ್ರಮವು 1980ರ ದಶಕದ ಆರಂಭದಲ್ಲಿ ಸೋವಿಯತ್ ಒಕ್ಕೂಟದುರ್ಬಲಗೊಳ್ಳಲಾರಂಭಿಸಿದಾಗ ಪ್ರಾರಂಭವಾಯಿತು. 1987ರಲ್ಲಿ ಪುಯೆಂಟಾ ಡೆಲ್ ಎಸ್ಟೆಯಲ್ಲಿ ನಡೆದ ಉರುಗ್ವೆ ಸುತ್ತಿನ ಗ್ಯಾಟ್ ಮಾತುಕತೆಗಳಲ್ಲಿ ಹೊಸ ವಿಷಯಗಳನ್ನು ಪ್ರಸ್ತಾಪಿಸಲಾಯಿತು. ಮುಂದುವರಿದ ದೇಶಗಳ ಹಿತಾಸಕ್ತಿಗಳನ್ನು ಬಹಳವಾಗಿ ಆಧರಿಸಿದ ಡಂಕೆಲ್ ಕರಡು ಪ್ರಸ್ತಾಪಗಳು 1990ರಲ್ಲಿ ಜಾರಿಗೆ ಬಂದವು ಮತ್ತು ವಿಶ್ವ ವ್ಯಾಪಾರ ಸಂಸ್ಥೆಯನ್ನು ಸಂಘಟಿಸುವ ಒಪ್ಪಂದಕ್ಕೆ ಏಪ್ರಿಲ್ 15, 1994 ರಂದು ಮರ್ರಕೇಶ್‌ನಲ್ಲಿ ಸಹಿ ಮಾಡಲಾಯಿತು ಮತ್ತು ವಿಶ್ವ ವ್ಯಾಪಾರ ಸಂಸ್ಥೆಯು ಜನವರಿ 1, 1995 ರಂದು ಅಸ್ತಿತ್ವಕ್ಕೆ ಬಂದಿತು. ಗ್ಯಾಟ್ ಒಪ್ಪಂದವು ಕೈಗಾರಿಕಾ ಸರಕುಗಳ ವ್ಯಾಪಾರಕ್ಕೆ ಮಾತ್ರ ಸಂಬAಧಿಸಿದ್ದರೂ, ವಿಶ್ವ ವ್ಯಾಪಾರ ಸಂಸ್ಥೆಯು ಕೃಷಿ, ಸೇವೆಗಳು, ಬೌದ್ಧಿಕ ಆಸ್ತಿ ಹಕ್ಕುಗಳು ಇತ್ಯಾದಿಗಳನ್ನು ವ್ಯಾಪಾರ ಮಾತುಕತೆಗಳ ವ್ಯಾಪ್ತಿಗೆ ತಂದಿತು.

ಇದು ಒಂದು ಸಮಗ್ರ ವ್ಯಾಪಾರ ಒಪ್ಪಂದವಾಗಿದ್ದು, ಮುಂದುವರಿದ ಬಂಡವಾಳಶಾಹಿ ದೇಶಗಳು ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವ ಮೂಲಕ ಅವರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿತು. ಅಭಿವೃದ್ಧಿಶೀಲ ದೇಶಗಳು ಡಂಕೆಲ್ ಕರಡು ಪ್ರಸ್ತಾಪಗಳನ್ನು ವಿರೋಧಿಸಿದವು. ಅವರಿಗೆ “ಒಪ್ಪಿಕೊಳ್ಳಿ ಅಥವಾ ಬಿಟ್ಟುಬಿಡಿ”, ಅಂದರೆ ವಿಶ್ವ ವ್ಯಾಪಾರ ಸಂಸ್ಥೆಗೆ ಸೇರಿಕೊಳ್ಳಿ ಅಥವಾ ಬಿಟ್ಟುಬಿಡಿ ಎಂದು ಹೇಳಲಾಯಿತು. ಅಭಿವೃದ್ಧಿಶೀಲ ದೇಶಗಳ ಅತಿ ದೊಡ್ಡ ವ್ಯಾಪಾರ ಪಾಲುದಾರರು ಮುಂದುವರಿದ ಬಂಡವಾಳಶಾಹಿ ದೇಶಗಳೇ ಆಗಿರುವುದರಿಂದ ಮತ್ತು ಅಭಿವೃದ್ಧಿಶೀಲ ದೇಶಗಳು ಅವರೊಂದಿಗೆ ದ್ವಿಪಕ್ಷೀಯವಾಗಿ ಚೌಕಾಶಿ ಮಾಡಿದ ನಂತರವೂ ಅವರು ಹೇಳಿದ್ದನ್ನೇ ಒಪ್ಪಿಕೊಳ್ಳುವುದು ಅನಿವಾರ್ಯವಾಗಿದ್ದುದರಿಂದ ಅಭಿವೃದ್ಧಿಶೀಲ ದೇಶಗಳಿಗೆ ವಿಶ್ವ ವ್ಯಾಪಾರ ಸಂಸ್ಥೆಯನ್ನು ಸೇರದಿರುವುದು ಒಂದು ಆಯ್ಕೆಯೇ ಆಗಿರಲಿಲ್ಲ. ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಬಲವಂತವೇ ಅವರ ಆಯ್ಕೆಯಾಗಿತ್ತು. ಅಭಿವೃದ್ಧಿಶೀಲ ದೇಶಗಳು ಬಹುಪಕ್ಷೀಯತೆಯನ್ನು ಆಯ್ಕೆಮಾಡಿಕೊಂಡು ಮರ್ರಕೇಶ್‌ನಲ್ಲಿ ಸಹಿ ಹಾಕಿದವು

ತನಗೆ ಬೇಕಾದ್ದನ್ನು ಪಡೆದ ಅಮೆರಿಕ

ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ನಡೆಯುತ್ತಿದ್ದ ಅಮೆರಿಕ ನೇತೃತ್ವದ ಮಾತುಕತೆಗಳಲ್ಲಿ ತನಗೆ ಏನು ಬೇಕಿತ್ತೋ ಅದನ್ನು ಅಮೆರಿಕ ಪಡೆಯಿತು. ಆದರೆ, ವಿಶ್ವ ವ್ಯಾಪಾರ ಸಂಘಟನೆ ಸುತ್ತಿನ ಮಾತುಕತೆಗಳಲ್ಲಿ ಏನು ನಡೆಯುತ್ತಿವೆ ಎಂಬುದು ಅಭಿವೃದ್ಧಿಶೀಲ ದೇಶಗಳಿಗೆ ಗೊತ್ತಾಗುತ್ತಲೇ ಇರಲಿಲ್ಲ. ಮುಂದುವರಿದ ದೇಶಗಳು ಅವುಗಳ ಮಾರುಕಟ್ಟೆಗಳನ್ನು ಪ್ರವೇಶಿಸುವ ಅವಕಾಶವನ್ನು ಪಡೆದವು ಮಾತ್ರವಲ್ಲದೆ, ತಮ್ಮ ಹೂಡಿಕೆಗಳಿಗೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೂ ರಕ್ಷಣೆ ಪಡೆದವು. ತಮಗೆ ದೊರೆತ ಮಾರುಕಟ್ಟೆಯ ಅವಕಾಶಗಳಿಗೆ ಪ್ರತಿಯಾಗಿ, ಮುಂದುವರಿದ ದೇಶಗಳು ಅಭಿವೃದ್ಧಿಶೀಲ ದೇಶಗಳಿಗೆ ಅವರ ನಿರ್ಣಾಯಕ ಉತ್ಪಾದನೆಗೆ ರಕ್ಷಣೆ ಮತ್ತು ಕೆಲವು ಸರಕುಗಳಿಗೆ ತಮ್ಮ ಮಾರುಕಟ್ಟೆಯನ್ನು ಪ್ರವೇಶಿಸುವಂಥಹ ಕೆಲವು ರಿಯಾಯಿತಿಗಳನ್ನು ನೀಡಿದವು. ಉದಾಹರಣೆಗೆ, ಭಾರತದ ಬಹುಪಾಲು ರೈತರು ಬಡವರಾಗಿರುವುದರಿಂದ ಭಾರತವು ತನ್ನ ಕೃಷಿಗೆ ರಕ್ಷಣೆಯನ್ನು ಕೋರಿತು. ಹಾಗಾಗಿ, ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ನಡೆದ ಚೌಕಾಶಿಗಳು ಅಸಮಾನರ ನಡುವೆಯೇ ನಡೆದಿದ್ದವು.

ಅಭಿವೃದ್ಧಿ ಹೊಂದಿದ ಜಗತ್ತು ಉನ್ನತ ತಂತ್ರಜ್ಞಾನದ ಮೇಲೆ ಏಕಸ್ವಾಮ್ಯವನ್ನು ಹೊಂದಿದೆ. ಆದರೆ, ಅಭಿವೃದ್ಧಿಶೀಲ ಜಗತ್ತು ಕೆಳ ಮತ್ತು ಮಧ್ಯಮ ತಂತ್ರಜ್ಞಾನಗಳೊಂದಿಗೆ ಹೊಂದಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಅಭಿವೃದ್ಧಿ ಹೊಂದಿದ ಜಗತ್ತು ಏಕಸ್ವಾಮ್ಯ ಬೆಲೆಗಳನ್ನು ವಿಧಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ಅವರು ಕಂಪ್ಯೂಟರ್ ಚಿಪ್‌ಗಳನ್ನು, ವಿಮಾನಗಳನ್ನು ಉತ್ಪಾದಿಸುತ್ತಾರೆ. ಹಣಕಾಸು ಸೇವೆಗಳನ್ನು ಒದಗಿಸುತ್ತಾರೆ ಮತ್ತು ಅವುಗಳಿಗೆ ಏಕಸ್ವಾಮ್ಯ ಬೆಲೆಗಳನ್ನು ವಿಧಿಸುತ್ತಾರೆ. ಹಾಗಾಗಿ, ವಿಶ್ವದ ಅತ್ಯಂತ ಶ್ರೀಮಂತ ಕಂಪನಿಗಳು ತಂತ್ರಜ್ಞಾನ ಕಂಪನಿಗಳೇ ಆಗಿವೆ. ಅದರಲ್ಲಿ ಆಶ್ಚರ್ಯವೇನಿಲ್ಲ.

ಅಭಿವೃದ್ಧಿಶೀಲ ದೇಶಗಳು ಜಾಗತಿಕವಾಗಿ ಮಾರಾಟ ಮಾಡಲು ಪರಸ್ಪರ ಸ್ಪರ್ಧಿಸಬೇಕಾಗುತ್ತದೆ. ಹಾಗಾಗಿ, ಅವರು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಗ್ಗವಾಗಿ ಮಾರಾಟ ಮಾಡುತ್ತಾರೆ. ಉದಾಹರಣೆಗೆ, ಜವಳಿ, ಬಟ್ಟೆ ಬರೆಗಳನ್ನು ಚೀನಾ, ಭಾರತ, ಬಾಂಗ್ಲಾದೇಶ, ವಿಯೆಟ್ನಾಂ ಮುಂತಾದ ದೇಶಗಳು ಉತ್ಪಾದಿಸುತ್ತವೆ. ಅವು ಪರಸ್ಪರ ಸ್ಪರ್ಧಿಸಿ ಅಗ್ಗವಾಗಿ ಮಾರಾಟ ಮಾಡುತ್ತವೆ. ಆದ್ದರಿಂದ, ವ್ಯಾಪಾರದ ನಿಯಮಗಳು ಅಭಿವೃದ್ಧಿಶೀಲ ದೇಶಗಳ ಹಿತಕ್ಕೆ ವಿರುದ್ಧವಾಗಿವೆ ಮತ್ತು ಮುಂದುವರಿದ ದೇಶಗಳಿಗೆ ಪ್ರಯೋಜನಕಾರಿಯಾಗಿವೆ. ಇದೇ ರೀತಿಯಲ್ಲಿ ಮುಂದುವರಿದ ದೇಶಗಳು ತಮ್ಮ ದಿನನಿತ್ಯದ ಬಳಕೆಯ ವಸ್ತುಗಳನ್ನೂ ಅಗ್ಗವಾಗಿಯೇ ಪಡೆಯುತ್ತಾರೆ. ಹಾಗಾಗಿ, ಅವರ ಹಣದುಬ್ಬರ ದರವು ಕೆಳ ಮಟ್ಟದಲ್ಲಿ ಇರುತ್ತದೆ.

ಉನ್ನತ ತಂತ್ರಜ್ಞಾನ ಮತ್ತು ಮಧ್ಯಮ ತಂತ್ರಜ್ಞಾನ ಉತ್ಪಾದನೆಯ ಕಾರ್ಮಿಕರ ನಡುವೆ ಒಂದು ವಿಭಜನೆ ಹೊರಹೊಮ್ಮಿತು. ಇದು ಮುಂದುವರಿದ ದೇಶಗಳ ಅರ್ಥವ್ಯವಸ್ಥೆಗಳಿಗೆ ಪ್ರಯೋಜನಕಾರಿಯಾಗಿದ್ದರೂ ಸಹ, ಮಧ್ಯಮ ತಂತ್ರಜ್ಞಾನದ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆಗಳನ್ನು ಮುಂದುವರಿದ ದೇಶಗಳಿಂದ ಅಭಿವೃದ್ಧಿಶೀಲ ದೇಶಗಳಿಗೆ ಸ್ಥಳಾಂತರಿಸಲಾಯಿತು. ಈ ವಿದ್ಯಮಾನವನ್ನೇ ಟ್ರಂಪ್, ನಮ್ಮ ಉದ್ಯೋಗಗಳನ್ನು ಅಭಿವೃದ್ಧಿಶೀಲ ದೇಶಗಳು ಕದ್ದಿವೆ ಎಂದು ಹೇಳುತ್ತಿರುವುದು. ಈ ಉದ್ಯೋಗಗಳನ್ನು ಚೀನಾದಿಂದ, ಭಾರತದಿಂದ ಮತ್ತು ಮೆಕ್ಸಿಕೋದಿಂದ ಮರಳಿ ತರುವುದಾಗಿ ಟ್ರಂಪ್ ಹೇಳುತ್ತಾರೆ. ಆದರೆ, ಈ ನಡುವೆ ಅಮೆರಿಕದಲ್ಲಿ ದೈನಂದಿನ ಅಗತ್ಯ ವಸ್ತುಗಳ ಬೆಲೆಗಳು ದಿನ ದಿನವೂ ಏರುತ್ತಾ ಹೊಗುತ್ತವೆ ಮತ್ತು ಅಮೆರಿಕದಲ್ಲಿ ಕೂಲಿ ದರಗಳು ಉನ್ನತವಾಗಿರುವುದರಿಂದ ಆ ಉನ್ನತ ಮಟ್ಟದ ಕೂಲಿಯಿಂದಾಗಿ ಸರಕು ಬೆಲೆಗಳು ದುಬಾರಿಯಾಗುತ್ತವೆ. ‘ಅಕ್ರಮ ವಲಸಿಗರು’ ಎಂದು ಕರೆಯಲ್ಪಡುವವರನ್ನು ಬಲವಂತವಾಗಿ ಅವರವರ ದೇಶಕ್ಕೆ ವಾಪಸ್ ಕಳುಹಿಸುವುದರಿಂದ ಅಮೆರಿಕದಲ್ಲಿ ಶ್ರಮ ವೆಚ್ಚಗಳು ಮತ್ತಷ್ಟು ಏರಿಕೆಯಾಗುತ್ತವೆ. ಅದರ ಪರಿಣಾಮವಾಗಿ ಹಣದುಬ್ಬರವೂ ಏರುತ್ತದೆ.

ಮುಕ್ತಿತಾರದ ‘ಮುಕ್ತ ವ್ಯಾಪಾರ’

2001ರ ಡಿಸೆಂಬರ್ 17ರಂದು ಚೀನಾ ವಿಶ್ವ ವ್ಯಾಪಾರ ಸಂಸ್ಥೆಯನ್ನು ಸೇರಿತು. ತಂತ್ರಜ್ಞಾನ ರಂಗದಲ್ಲಿ ಅದು ಸಾಧಿಸಿದ ಕ್ಷಿಪ್ರ ಪ್ರಗತಿಯಿಂದಾಗಿ, ಮಾರುಕಟ್ಟೆಗಳನ್ನು ತ್ವರಿತವಾಗಿ ಅದು ವಶಪಡಿಸಿಕೊಂಡಿತು. ವ್ಯಾಪಾರದ ಮಿಗುತೆಯನ್ನು ಬೃಹತ್ ಪ್ರಮಾಣದಲ್ಲಿ ಸಂಪಾದಿಸಿತು ಮತ್ತು ವಿದೇಶಿ ವಿನಿಮಯದ ಬೃಹತ್ ಮೀಸಲುಗಳನ್ನು ನಿರ್ಮಿಸಿಕೊಂಡಿತು. ಸುಧಾರಿತ ತಂತ್ರಜ್ಞಾನವನ್ನು ಚೀನಾ ಹೊಂದುವ ಅವಕಾಶವನ್ನು ನಿರ್ಬಂಧಿಸುವ ಸಲುವಾಗಿ ಸುಂಕಗಳನ್ನು ವಿಧಿಸುವ ಮೂಲಕ ಒಂದು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿರುವ ಚೀನಾದ ಏರು ಗತಿಯನ್ನು ತಡೆಯಲು ಅಮೆರಿಕ ಪ್ರಯತ್ನಿಸುತ್ತಿದೆ.

ವಿಶ್ವ ವ್ಯಾಪಾರ ಸಂಸ್ಥೆಯಡಿಯಲ್ಲಿ, ಮಾರುಕಟ್ಟೆಗಳನ್ನು ತೆರೆದಿಡುವ ವಾದವು ‘ಮುಕ್ತ ವ್ಯಾಪಾರ’ವೇ ಶ್ರೇಷ್ಠ ಎಂದು ನಂಬುತ್ತದೆ. ತುಲನಾತ್ಮಕ ಪ್ರಯೋಜನದಿಂದಾಗಿ, ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಾರೆ ಎಂದು ಭಾವಿಸಲಾಗಿದೆ. ಆದರೆ, ಈ ವಾದವು ‘ಮೊದಲ ಅತ್ಯುತ್ತಮ’ ಪರಿಸ್ಥಿತಿ ಎಂದು ಕರೆಯಲ್ಪಡುವ ಆದರ್ಶ ಪರಿಸ್ಥಿತಿಗಳಲ್ಲಿ ಮಾತ್ರ ಅನ್ವಯಿಸುತ್ತದೆ. ವಾಸ್ತವದಲ್ಲಿ ಮಾರುಕಟ್ಟೆಗಳು ವಿರೂಪಗಳಿಂದಾಗಿ ವಿಫಲಗೊಳ್ಳುತ್ತವೆ. ಆದ್ದರಿಂದ, ಜಗತ್ತು ‘ಎರಡನೇ ಅತ್ಯುತ್ತಮ’ ಪರಿಸ್ಥಿತಿಯೊಂದಿಗೇ ತೃಪ್ತಿ ಹೊಂದಬೇಕಾಗುತ್ತದೆ. ಮುಕ್ತ ಮಾರುಕಟ್ಟೆಗಳು ಅತ್ಯುತ್ತಮ ಪರಿಸ್ಥಿತಿಯನ್ನು ತಲುಪುವುದಿಲ್ಲ. ಅದಕ್ಕೆ ಸರ್ಕಾರದ ಹಸ್ತಕ್ಷೇಪದ ಅಗತ್ಯವಿದೆ.

ಮುಂದುವರಿದ ತಂತ್ರಜ್ಞಾನ ಮತ್ತು ಬಂಡವಾಳದ ಕೊರತೆಯಿರುವ ಅಭಿವೃದ್ಧಿಶೀಲ ದೇಶಗಳಿಗೆ, ಅರ್ಥವ್ಯವಸ್ಥೆಯನ್ನು ತೆರೆದಿಡುವ ಕ್ರಮವು ತಮ್ಮ ದುರ್ಬಲ ಅರ್ಥವ್ಯವಸ್ಥೆಗಳು ವಿದೇಶಿ ಸರಕುಗಳಿಂದ ಮುಳುಗಿ ಹೋಗಲು ಕೊಟ್ಟ ಆಹ್ವಾನವಾಗುತ್ತದೆ. ಭಾರತವು ಸಹಿ ಮಾಡಿರುವ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ಸೋಲನ್ನು ಅನುಭವಿಸಿದೆ. ಅಗ್ಗವಾಗಿ ಉತ್ಪಾದಿಸಲು ಮತ್ತು ರಫ್ತುಗಳನ್ನು ಹೆಚ್ಚಿಸಲು ಹೆಚ್ಚಿನ ಆಮದುಗಳು ಸಹಾಯಕವಾಗುತ್ತವೆ ಎಂಬ ನಂಬಿಕೆಯು 1989ರಲ್ಲಿ ಒಂದು ತೀವ್ರ ಪಾವತಿ ಶೇಷದ ಬಿಕ್ಕಟ್ಟನ್ನು ಉಂಟುಮಾಡಿತು. ವಾಸ್ತವವಾಗಿ, ಮುಕ್ತ ವ್ಯಾಪಾರವು ಅಭಿವೃದ್ಧಿಶೀಲ ಜಗತ್ತಿನ ಹೆಚ್ಚಿನ ಭಾಗಗಳಿಗೆ ಪ್ರಯೋಜನಕಾರಿಯಾಗಿಲ್ಲ.

ಅಸಮಾನರನ್ನು ಸಮಾನವಾಗಿ ಪರಿಗಣಿಸಲಾಗದು ಎಂದು ಪರಿಗಣಿಸುವ ಬಂಡವಾಳಶಾಹಿಯ ಉದಾರ ಮುಖವನ್ನು ವಿಶ್ವ ವ್ಯಾಪಾರ ಸಂಸ್ಥೆಯು ಪ್ರತಿನಿಧಿಸುತ್ತದೆ. ಹಾಗಾಗಿ, ದುರ್ಬಲರಿಗೆ ಕೆಲವು ವಿಶೇಷ ಸವಲತ್ತುಗಳನ್ನು ಒದಗಿಸಲಾಯಿತು. ಇದರಲ್ಲಿ ಅಮೆರಿಕವೂ ಒಂದು ಪಕ್ಷವಾಗಿತ್ತು ಮತ್ತು ವಿಶ್ವ ವ್ಯಾಪಾರ ಸಂಸ್ಥೆಯಿAದ ಲಾಭ ಪಡೆಯಿತು. ಮಾರುಕಟ್ಟೆಗಳು ತೆರೆದುಕೊಂಡವು. ಜಾಗತಿಕವಾಗಿ ಜಿಡಿಪಿಯಲ್ಲಿ ವ್ಯಾಪಾರದ ಪಾಲು ಏರಿತು.

ಬೆದರಿಸಲು ಏಕಸ್ವಾಮ್ಯದ ಬಳಕೆ

ಈಗ ನಿರ್ದಾಕ್ಷಿಣ್ಯವಾಗಿ ಮತ್ತು ಕಡಿವಾಣವಿಲ್ಲದ ಶೋಷಣೆ ನಡೆಯುತ್ತಿದೆ. ಇದು ಜಾಗತಿಕ ಬಲಪಂಥೀಯ ಚಲನೆಗೆ ಅನುಗುಣವಾಗಿದೆ. ಮಿತ್ರ ದೇಶಗಳೂ ಸೇರಿದಂತೆ ಇತರ ದೇಶಗಳನ್ನು ಬೆದರಿಸಲು ಆರ್ಥಿಕ ಬಲ ಮತ್ತು ಮಿಲಿಟರಿ ಶಕ್ತಿ ಮತ್ತು ಉನ್ನತ ತಂತ್ರಜ್ಞಾನದ ಮೇಲೆ ಹೊಂದಿರುವ ಏಕಸ್ವಾಮ್ಯವನ್ನು ಬಳಸಲಾಗುತ್ತಿದೆ.

ಕೆನಡಾದ ಅರ್ಥವ್ಯವಸ್ಥೆಯು ಒಂದು ವೇಳೆ ಕುಸಿದರೆ, ಅಮೆರಿಕದ 51ನೇ ರಾಜ್ಯವಾಗುವುದನ್ನು ಅದು ಒಪ್ಪಿಕೊಳ್ಳಬಹುದು. ಅಮೆರಿಕವು ಯೂರೋಪ್ ಒಕ್ಕೂಟದಿಂದ ರಿಯಾಯಿತಿಗಳನ್ನು ಪಡೆಯಲು ಬಯಸುತ್ತದೆ ಮತ್ತು ತಾನು ನ್ಯಾಟೋಗೆ ಒದಗಿಸುತ್ತಿರುವ ರಕ್ಷಣಾ ನೆರವನ್ನು ಕಡಿತ ಮಾಡಬಯಸುತ್ತದೆ. ಇದು ಹೆಚ್ಚು ಖರ್ಚು ಮಾಡುವಂತೆ ಯುರೋಪಿಯನ್ ದೇಶಗಳ ಮೇಲೆ ಒತ್ತಡ ಹೇರುತ್ತದೆ. ಈ ಕಾರಣದಿಂದಾಗಿ ಅಮೆರಿಕದ ಮಿಲಿಟರಿ-ಕೈಗಾರಿಕಾ ಸಂಕೀರ್ಣವು ಕುಸಿಯುತ್ತದೆ.

ಅಧ್ಯಕ್ಷ ಟ್ರಂಪ್ ಗಮನಿಸದಿರುವ ವಿಷಯವೆಂದರೆ, ಅಮೆರಿಕವು ತನ್ನ ಗಡಿಯೊಳಗೆ ಹೆಚ್ಚು ವಸ್ತುಗಳನ್ನು ಉತ್ಪಾದಿಸಲು ಪ್ರಯತ್ನಿಸಿದರೆ, ಇತರ ರಾಷ್ಟ್ರಗಳು ಸಹ ಅದನ್ನೇ ಮಾಡುತ್ತವೆ. ಜಾಗತೀಕರಣವು ತಲೆ ಕೆಳಗಾಗುತ್ತದೆ. ಈ ಅಪ-ಜಾಗತೀಕರಣದ ಪರಿಣಾಮವಾಗಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ಅಮೆರಿಕಕ್ಕೆ ದೊರಕುತ್ತಿದ್ದ ಅನೇಕ ಪ್ರಯೋಜನಗಳನ್ನು ತಪ್ಪಿಸುತ್ತದೆ. ಡಾಲರೀಕರಣವು ಅಮೆರಿಕಕ್ಕೆ ತನ್ನ ವರಮಾನವನ್ನು ಮೀರಿ ಬದುಕಲು ಅನುವು ಮಾಡಿಕೊಟ್ಟಿದೆ. ಆದ್ದರಿಂದ, ಅಮೆರಿಕಾದ ವ್ಯಾಪಾರವು ಕುಸಿಯುತ್ತಿದ್ದಂತೆಯೇ ಅಮೆರಿಕವೂ ಕುಸಿಯುತ್ತದೆ ಮತ್ತು ಅದು ಅಲ್ಲಿನ ಜನರ ಜೀವನಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಅಮೆರಿಕದ ಅತಿದೊಡ್ಡ ವ್ಯಾಪಾರ ಪಾಲುದಾರರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಅಮೆರಿಕದಿಂದ ಆಮದಾಗುವ ಸರಕುಗಳ ಮೇಲೆ ಸುಂಕಗಳನ್ನು ವಿಧಿಸುವುದಾಗಿ ಘೋಷಿಸುತ್ತಿದ್ದಾರೆ. ಅಮೆರಿಕವು ರಫ್ತು ಮಾಡುವುದಕ್ಕಿಂತ ಹೆಚ್ಚಿನ ಸರಕು-ಸೇವೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದ್ದರಿಂದ, ಅಮೆರಿಕವು ಕುಸಿದರೆ ಜಾಗತಿಕ ವ್ಯಾಪಾರವೂ ಕುಗ್ಗುತ್ತದೆ ಮತ್ತು ಅದು ವ್ಯಾಪಾರ ಪಾಲುದಾರರ ಮೇಲೆ ಪರಿಣಾಮ ಬೀರುತ್ತದೆ. ಅಮೆರಿಕದೊಂದಿಗಿನ ವ್ಯಾಪಾರದ ನಷ್ಟವನ್ನು ಸರಿದೂಗಿಸುವ ಸಲುವಾಗಿ ದೇಶ ದೇಶಗಳು ಒಟ್ಟಾಗಿ ನಿಲ್ಲಬೇಕಾಗುತ್ತದೆ ಮತ್ತು ತಮ್ಮ ನಡುವೆ ವ್ಯಾಪಾರವನ್ನು ಹೆಚ್ಚಿಸುವ ಮೂಲಕ ತಮ್ಮ ನಷ್ಟವನ್ನು ಭಾಗಶಃ ತಗ್ಗಿಸಿಕೊಳ್ಳಬಹುದು. ಇದು ಜಗತ್ತಿಗೆ ನಿಜಕ್ಕೂ ಒಂದು ಸವಾಲು. ಇತರ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತದೆಯೇ?

ಜಗತ್ತು ಎಂದಿಗೂ ‘ಮುಕ್ತ ವ್ಯಾಪಾರ’ದ ಸನ್ನಿವೇಶದಲ್ಲಿ ಇರಲಿಲ್ಲ ಮತ್ತು ಈಗ ಒಂದು ವಿಭಿನ್ನ ಸನ್ನಿವೇಶ ‘ನಿಭಾಯಿಸಿದ ವ್ಯಾಪಾರ’ದ ಸನ್ನಿವೇಶ ತೆರೆದುಕೊಳ್ಳುತ್ತಿದೆ.

ಕೃಪೆ: ನ್ಯೂಸ್‌ಕ್ಲಿಕ್

ಇದನ್ನೂ ನೋಡಿ: ಉಗಾದಿ – ರಂಜಾನ್‌ ಸಾಮರಸ್ಯ ಕವಿ ಸಮ್ಮಿಲನ Janashakthi Media

Donate Janashakthi Media

Leave a Reply

Your email address will not be published. Required fields are marked *