ಬೆಂಗಳೂರು: ಈ ಹಿಂದೆ ಇದ್ದಂತೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿರುವ 108-ಆರೋಗ್ಯ ಕವಚ ಯೋಜನೆಯ ಆಯಂಬುಲೆನ್ಸ್ ನೌಕರರು, ಬೇಡಿಕೆ ಈಡೇರಿಸದಿದ್ದರೆ ಆಗಸ್ಟ್ 1ರಿಂದ ಮುಷ್ಕರ ಕೈಗೊಳ್ಳುವುದಾಗಿ ಜುಲೈ 25ರಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬೇಡಿಕೆ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಮಾತನಾಡಿ, ಯೋಜನೆಯಡಿ 3,500 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಆದೇಶಾನುಸಾರ ಈ ಹಿಂದೆ ಇದ್ದ 12 ಗಂಟೆಗಳ ಅವಧಿಯ ಎರಡು ಪಾಳಿಯನ್ನು ರದ್ದುಗೊಳಿಸಿ, ಜನವರಿ 1ರಿಂದ 8 ಗಂಟೆಗಳ ಅವಧಿಯ ಮೂರು ಪಾಳಿ ನಿಗದಿ ಮಾಡಿ ವೇತನ ಕಡಿತ ಮಾಡಲಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಅಕ್ರಮ: ರಾಹುಲ್ ಗಾಂಧಿ ಪ್ರೂವ್ ಮಾಡುತ್ತಾರೆ – ಜಿ ಪರಮೇಶ್ವರ್
ಇದರಿಂದ ಬೆಳಿಗ್ಗೆ 6 ಗಂಟೆ ಮತ್ತು ರಾತ್ರಿ 10 ಗಂಟೆಯ ಪಾಳಿಗೆ ಹಾಜರಾಗುವ ನೌಕರರು ಸಾರಿಗೆ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಅವಧಿ ಕಡಿಮೆ ಎಂದು ಹೇಳಿ ವೇತನ ಕಡಿತ ಮಾಡಿರುವುದರಿಂದ ಆರ್ಥಿಕ ಸಮಸ್ಯೆಯೂ ಎದುರಾಗಿದೆ ಎಂದು ಹೇಳಿದರು.
ಯೋಜನೆಯಡಿ ಶೇ.33 ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಜತೆಗೆ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಮೂರು ಪಾಳಿಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾರಿಗೆ ವ್ಯವಸ್ಥೆ ಹಾಗೂ ಮೂಲಸೌಕರ್ಯವನ್ನು ಒದಗಿಸುವ ಜತೆಗೆ ವೇತನ ಹೆಚ್ಚಿಸಬೇಕು ಎಂದರು.
ಅದು ಸಾಧ್ಯವಾಗದಿದ್ದಲ್ಲಿ ಈ ಮೊದಲಿನಂತೆ ಎರಡು ಪಾಳಿಯಲ್ಲಿ ಸಮಯ ನಿಗದಿ ಮಾಡಬೇಕು. ಈ ಬಗ್ಗೆ ಜುಲೈ 31ರೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಆ.1ರಿಂದ ಕೆಲಸಕ್ಕೆ ಗೈರಾಗುವ ಮೂಲಕ ಮುಷ್ಕರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ನೋಡಿ: ಪರಿಸರ ಜಾಗೃತಿ | ‘ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗೆ ಅಪಾಯ‘ Janashakthi Media
