ಕಲಬುರಗಿ: ನಗರದ ಲುಂಬಿನಿ ಪಾರ್ಕ್‌ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ವಿರೋಧಿಸಿ ಹಾಗೂ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಮುಖಂಡರು ಹಾಗೂ ಅಂಬೇಡ್ಕರ್ ಅನುಯಾಯಿಗಳು ನಗರದ ಹಲವೆಡೆ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಸೋಮವಾರ ರಾತ್ರಿ ಕೃತ್ಯ ನಡೆದಿದ್ದು, ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ನಗರದಲ್ಲಿ ಜಮಾಯಿಸಿದ ಹಲವು ಸಂಘಟನೆಗಳ ಹೋರಾಟಗಾರರು ರಾಮಮಂದಿರ ವೃತ್ತ, ನಾಗನಹಳ್ಳಿ ರಿಂಗ್ ರಸ್ತೆ, ಲುಂಬಿನಿ ಪಾರ್ಕ್ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ‘ಕಾಶಿ ಮಥುರಾ ಬಾಕಿ ಹೈ’ | ಬೆಂಗಳೂರು – ರಾಜಧಾನಿಯ ಬೀದಿಗಳಲ್ಲಿ ಮಸೀದಿ ಒಡೆಯುವ ದ್ವೇಷದ ಕೂಗು
ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಿಡಿಗೇಡಿಗಳು ಪಟಾಕಿ ಸಿಡಿಸಿದ್ದಾರೆ. ಘಟನೆ ನಡೆದು ಹಲವು ಗಂಟೆಗಳು ಕಳೆದಿವೆ. ಆದರೆ, ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅವರು ಯಾರು ಎಂಬುದನ್ನು ಪತ್ತೆ ಹಚ್ಚಿ ಎನ್‌ಕೌಂಟರ್ ಮಾಡಿ. ಇಲ್ಲವೇ ಅವರನ್ನು ನಮಗೆ ಒಪ್ಪಿಸಿ ನಾವು ಶಿಕ್ಷೆ ಕೊಡುತ್ತೇವೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಭೇಟಿ ನೀಡಿ, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಲುಂಬಿನಿ ಪಾರ್ಕ್‌ಗೆ ಬಂದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರಕರಣದ ತನಿಖೆ ಮುಗಿದ ನಂತರ ನೂತನ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ಪ್ರತಿಭಟನೆ ನಡೆದ ರಸ್ತೆಗಳಲ್ಲಿ ಗಂಟೆಗಳ ಕಾಲ ಬಸ್, ಕಾರು, ಸರಕು ವಾಹನಗಳು ನಿಂತಿದ್ದು, ಪ್ರಯಾಣಿಕರು ಪರದಾಡಿದರು ಎಂದು ಪ್ರಜಾವಾಣಿ ಹೇಳಿದ್ದು, ರಾಮ ಮಂದಿರ ವೃತ್ತದಲ್ಲಿ ಟೈಯರ್‌ಗೆ ಬೆಂಕಿ ಹಚ್ಚಲಾಯಿತು ಎಂದು ಉಲ್ಲೇಖಿಸಿದೆ.
ವಿಡಿಯೊ ನೋಡಿ: ದೇಶವೆಂದರೆ “ಅಂಕಿ – ಅಂಶಗಳ ಆಟವಲ್ಲ”, – ಎಸ್ ವರಲಕ್ಷ್ಮಿ Janashakthi Media