‘ಅಂಬೇಡ್ಕರ್ ಮತ್ತು ಪ್ರಜಾಪ್ರಭುತ್ವ’ ಪುಸ್ತಕದ ಪ್ರಸ್ತಾವನೆಯ ಆಯ್ದ ಭಾಗ-1

ಮೂಲ: ಜೆಫರ್‌ಲಾಟ್, ನರೇಂದರ್ ಕುಮಾರ್
ಅನುವಾದ: ಬಿ. ಶ್ರೀಪಾದ ಭಟ್

ಭೀಮರಾವ್ ಅಂಬೇಡ್ಕರ್ 14, ಎಪ್ರಿಲ್ 1891ರಂದು ಇಂದೋರ್ ಬಳಿಯ ಮ್ಹೊವ್‌ನಲ್ಲಿ ಜನಿಸಿದರು. ಅವರ ಕುಟುಂಬವು ಮೂಲ ಮಹರಾಷ್ಟ್ರದಿಂದ ಬಂದವರು. ಮಹರಾಷ್ಟ್ರದ ಕೊಂಕಣ ಭಾಗದ ಅಂಬವಾಡೆ ಅಂಬೇಡ್ಕರ್ ಅವರ ಊರು. ಅಂಬೇಡ್ಕರ್ ಅವರ ನಿಜವಾದ ಹೆಸರು ಅಂಬಾವಾಡೇಕರ್ ಎಂದು ಈ ಊರಿನ ಕಾರಣಕ್ಕೆ ಬಂದಿತು. 1900ರಲ್ಲಿ ಅವರ ಹೆಸರು ಅಂಬೇಡ್ಕರ್ ಎಂದು ಬದಲಾಯಿತು.

ಬ್ರಿಟೀಶ್ ಇಂಡಿಯನ್ ಸೇನೆಯಲ್ಲಿ ಸೈನಿಕರಾಗಿ ಕೆಲಸ ಮಾಡುತ್ತಿದ್ದ ಅಂಬೇಡ್ಕರ್ ಅವರ ತಂದೆ ಇಂದೋರ್ ಬಳಿ ಗ್ಯಾರಿಸನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಅಂಬೇಡ್ಕರ್‌ರವರಿಗೆ ತಾರತಮ್ಯಗಳ ಬಿಸಿ ತಟ್ಟಿರಲಿಲ್ಲ. ಆದರೆ ಕ್ರಮೇಣ ದಿನಕಳೆದಂತೆ ಜಾತಿ ತಾರತಮ್ಯದ ಅನುಭವವಾಗತೊಡಗಿತು. ಕ್ಷೌರಿಕರು ಕೂದಲು ಕಟ್ ಮಾಡುವುದಿಲ್ಲ ಎನ್ನುವುದು ಬಾಲಕ ಅಂಬೇಡ್ಕರ್‌ಗೆ ಬಗೆಹರಿಯದ ಪ್ರಶ್ನೆಯಾಗಿತ್ತು. ಒಮ್ಮೆ ತನ್ನ ಸಹೋದರ ಮತ್ತು ಸಹೋದರಿಯವರೊಡನೆ ತನ್ನ ತಂದೆಯವರನ್ನು ಬೇಟಿ ಮಾಡಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದರು. ಆಗ ಅಲ್ಲಿನ ಸ್ಟೇಶನ್ ಮಾಸ್ಟರ್ ಇವರ ಜಾತಿಯನ್ನು ಕೇಳಿ ಐದು ಅಡಿ ಹಿಂದೆ ಸರಿದು ನಿಂತ. ಇದನ್ನು ಕಂಡು ಅಂಬೇಡ್ಕರ್ ಅವರಿಗೆ ತುಂಬಾ ಅವಮಾನವಾಯಿತು. ಟಾಂಗಾ ಗಾಡಿಯವರ ಹೊರತಾಗಿ ಬೇರೆ ಯಾರೂ ಸಹ ಅವರ ತಂದೆಯ ಹಳ್ಳಿಗೆ ಕರೆದೊಯ್ಯಲು ಒಪ್ಪಲಿಲ್ಲ. ಒಬ್ಬನಂತೂ ನೀವೇ ಟಾಂಗಾ ಹೊಡೆದುಕೊಂಡು ಹೋಗುವುದಾದರೆ ನನ್ನ ಬಂಡಿ ಕೊಡುತ್ತೇನೆ’ ಎಂದ. ದಾರಿಯ ಮಧ್ಯದಲ್ಲಿ ಹೋಟೆಲ್ ಬಳಿ ಅಂಬೇಡ್ಕರ್ ಕುಟುಂಬವನ್ನು ಹೊರಗೆ ನಿಲ್ಲಿಸಿ ಮಣ್ಣಿನ ಪಾತ್ರೆಯಲ್ಲಿ ತಿಂಡಿ ಕೊಡುತ್ತಾರೆ. ಆದರೆ ಅಂಬೇಡ್ಕರ್ ಅವರು ಸೂಕ್ಷ್ಮ ಮನಸ್ಸಿನವರಾಗಿದ್ದರಿಂದ ಸಣ್ಣ ವಯಸ್ಸಿನಿಂದಲೇ ಅವರಿಗೆ ಈ ಬೇಧಬಾವಗಳು ಬಲು ಬೇಗ ಅರ್ಥವಾಗುತ್ತಿತ್ತು.

ಓದಿನಲ್ಲಿ ತುಂಬಾ ಚುರುಕಾಗಿದ್ದ ಅಂಬೇಡ್ಕರ್ ಅವರು 1907ರಲ್ಲಿ ಎಲ್ಫಿನ್ಸ್‌ಟೊನ್ ಹೈಸ್ಕೂಲ್‌ನಿಂದ  ಮೆಟ್ರಿಕ್ಯುಲೇಶನ್ ಪಾಸು ಮಾಡುತ್ತಾರೆ. 1912ರಲ್ಲಿ ಎಲ್ಫಿನ್ಸ್‌ಟೊನ್ ಕಾಲೇಜ್‌ನಿಂದ ಬಿ.ಎ. ಪದವಿ ಪಡೆಯುತ್ತಾರೆ. ಅಮೇರಿಕಾದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಸ್ಕಾಲರ್‌ಶಿಪ್ ದೊರಕುತ್ತದೆ. ಅಲ್ಲಿಯವರೆಗೂ ಅಸ್ಪೃಶ್ಯ ಸಮುದಾಯದಿಂದ ಯಾರಿಗೂ ಈ ಅವಕಾಶ ದೊರಕಿರುವುದಿಲ್ಲ. ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಪಿಎಚ್‌ಡಿ ಪದವಿಗಳನ್ನು ಪಡೆಯುತ್ತಾರೆ. ನಂತರ ಕಾನೂನು ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳುವ ಅಂಬೇಡ್ಕರ್ ಅವರು, ಆ ಮೇಲೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಆರ್ಥಿಕ ವಿಷಯದಲ್ಲಿ ಅಧ್ಯಯನ ಮಾಡುತ್ತಾರೆ. ಆದರೆ 1917ರಲ್ಲಿ ಅವರ ಸ್ಕಾಲರ್‌ಶಿಪ್ ಮುಗಿಯುವುದರಿಂದ ಭಾರತಕ್ಕೆ ಮರಳುತ್ತಾರೆ.

ಶೈಕ್ಷಣಿಕವಾಗಿ ಅಂಬೇಡ್ಕರ್ ಅವರ ಈ ಸಾಧನೆಯು ಬ್ರಿಟೀಶರ ಗಮನ ಸೆಳೆಯುತ್ತದೆ. ಬಾಬಾ ಸಾಹೇಬರು ದಮನಿತ ಸಮುದಾಯಗಳಿಗೆ ಸೂಕ್ತ ಪ್ರತಿನಿಧಿ ಎಂದು ಮನವರಿಕೆಯಾಗುತ್ತದೆ. 1919ರಲ್ಲಿ ದೆಹಲಿ ಪ್ರಾಂತದಲ್ಲಿ ಸ್ಥಾಪಿಸಲ್ಪಟ್ಟ ಅಸೆಂಬ್ಲಿಗಳಿಗೆ ಸಾಧ್ಯವಾದಷ್ಟು ಭಾರತೀಯರಿಗೆ ವೋಟು ಮಾಡಲು ಅವಕಾಶ ಕಲ್ಪಿಸಲು  ಬ್ರಿಟೀಶ್ ಸರಕಾರ ರಚಿಸಿದ್ದ ಸೌತ್‌ಬರ‍್ಹೋ ಸಮಿತಿಯು ಅಂಬೇಡ್ಕರ್ ಅವರೊಂದಿಗೆ ಸಮಾಲೋಚನೆ ನಡೆಸುತ್ತದೆ. 1919ರ ಸಮಿತಿಯ ಈ ಸುಧಾರಣೆಗಳ ಶಿಫಾರಸ್ಸುಗಳು ಸರಕಾರಗಳಿಗೆ ಮತ್ತು ವಿಧಾನ ಮಂಡಳಗಳಿಗೆ ಹೆಚ್ಚಿನ ಅಧಿಕಾರವನ್ನು ಕೊಡುವುದರಿಂದ ಅದು ಮುಖ್ಯವಾಗಿರುತ್ತದೆ.

1920ರಲ್ಲಿ ಅಂಬೇಡ್ಕರ್ ಅವರು ‘ಮೂಕನಾಯಕ’ ಪತ್ರಿಕೆಯನ್ನು ಶುರು ಮಾಡುತ್ತಾರೆ. ಇದಕ್ಕೆ ಕೊಲ್ಹಾಪುರದ ಶಾಹು ಮಹರಾಜರು ಆರ್ಥಿಕ ನೆರವು ನೀಡುತ್ತಾರೆ. ಶಾಹು ಮಹಾರಾಜರ ನೆರವಿನಿಂದ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳುತ್ತಾರೆ. ಅಲ್ಲಿಂದ ಮರಳಿದ ನಂತರ 1921ರಲ್ಲಿ ವಿಜ್ಞಾನದಲ್ಲಿ ಸ್ನಾತಕ್ಕೋತ್ತರ ಪದವಿ ಪಡೆಯುತ್ತಾರೆ ಮತ್ತು ಮುಂದಿನ ವರ್ಷದಲ್ಲಿ ‘ದ ಪ್ರಾಬ್ಲಮ್ ಆಫ್ ರುಪೀ’ ಎನ್ನುವ ಥೀಸಿಸ್ ಮಂಡಿಸುತ್ತಾರೆ.

ಭಾರತಕ್ಕೆ ಮರಳಿದ ನಂತರ ನ್ಯಾಯವಾದಿಯಾಗಿ ಮುಂದುವರೆಯಲು ಬಯಸುತ್ತಾರೆ. ಆದರೆ ಅಂಬೇಡ್ಕರ್‌ರವರ ಜಾತಿಯ ಕಾರಣಕ್ಕೆ ಕಕ್ಷಿದಾರರು ಅವರ ಬಳಿ ಬರುವುದಿಲ್ಲ. ಇದರಿಂದ ನೊಂದುಕೊಂಡ ಅಂಬೇಡ್ಕರ್ ಶೋಷಿತ ಸಮುದಾಯದ ಸಬಲೀಕರಣ ಮತ್ತು ವಿಮೋಚನೆಗೆ ಮತ್ತು ಜಾತಿ ವ್ಯವಸ್ಥೆಯ ವಿರುದ್ದದ ಹೋರಾಟಕ್ಕೆ ತಮ್ಮ ಬದುಕನ್ನು ಮುಡಿಪಾಗಿಡಲು ನಿರ್ಧರಿಸುತ್ತಾರೆ. ಈ ಹಿನ್ನೆಲೆಯಲ್ಲಿ 1924ರಲ್ಲಿ ‘ಬಹಿಷ್ಟೃತ ಹಿತರಕ್ಷಣಾ ಸಭಾ’ ಸಂಘಟನೆ ಸ್ಥಾಪಿಸುತ್ತಾರೆ ಮತ್ತು 1928ರವರೆಗೆ ಅದರ ಮುಂದಾಳತ್ವ ವಹಿಸಿಕೊಳ್ಳುತ್ತಾರೆ. 1923ರಲ್ಲಿ ಬ್ರಿಟೀಶರು ಅಂಬೇಡ್ಕರ್ ಅವರನ್ನು ಬಾಂಬೆ ಪ್ರೆಸಿಡೆನ್ಸಿಯ ವಿಧಾನ ಮಂಡಲಕ್ಕೆ ನಾಮಕರಣ ಮಾಡುತ್ತಾರೆ. ದಲಿತರ ದೇವಸ್ಥಾನ ಪ್ರವೇಶ ಮತ್ತು ಚೌಡಾರ್ ಕೆರೆ ನೀರು ಕುಡಿಯುವ ಮಹಾಡ್ ಸತ್ಯಾಗ್ರಹಗಳು ಅಂಬೇಡ್ಕರ್ ನಡೆಸಿದ ನಾಗರಿಕ ಹಕ್ಕುಗಳ ಹೋರಾಟ ಮತ್ತು ದಲಿತರ ಹಕ್ಕುಗಳ ಹೋರಾಟವಾಗಿರುತ್ತದೆ.

1930ರ ದಶಕದಲ್ಲಿ ಅಂಬೇಡ್ಕರ್ ಅವರು ರಾಜಕೀಯ ವಲಯದ ಕಡೆಗೆ ಗಮನ ಕೇಂದ್ರೀಕರಿಸುತ್ತಾರೆ. ಬ್ರಿಟೀಶರಿಗೆ ದಲಿತರಿಗಾಗಿ ಪ್ರತ್ಯೇಕ ಮತಕ್ಷೇತ್ರ ಬೇಕೆಂದು ಆಗ್ರಹಿಸುತ್ತಾರೆ. ಈ ಮೂಲಕ ದಲಿತರ ಸದೃಢ ರಾಜಕೀಯ ಶಕ್ತಿ ರೂಪುಗೊಳ್ಳುತ್ತದೆ ಎಂದು ಅಭಿಪ್ರಾಯಪಡುತ್ತಾರೆ. 1932ರಲ್ಲಿ ಬ್ರಿಟೀಶರು ಅಂಬೇಡ್ಕರ್‌ರ ಈ ಪ್ರಸ್ತಾವದ ಪರವಾಗಿರುವಂತೆ ಕಂಡುಬರುತ್ತದೆ. ಆದರೆ ಗಾಂಧಿಯವರು ಇದು ದೇಶದ ಹಿಂದೂಗಳ ಐಕ್ಯತೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಇದನ್ನು ಖಡಾಖಂಡಿತವಾಗಿ ವಿರೋಧಿಸುತ್ತಾರೆ.  ಆಗಿನ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಬರುವ ಪೂನಾದ ಯೆರವಾಡ ಜೈಲಿನಲ್ಲಿ ಉಪವಾಸ ಮುಷ್ಕರ ಆರಂಭಿಸುತ್ತಾರೆ. ಇದರಿಂದ ಭ್ರಮನಿರಸನಗೊಂಡ ಅಂಬೇಡ್ಕರ್ ಅವರು ಪ್ರತ್ಯೇಕ ಮತಕ್ಷೇತ್ರ ಬೇಡಿಕೆಯನ್ನು ಕೈಬಿಟ್ಟು 1932ರಲ್ಲಿ ಪೂನಾ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಈ ಪ್ರಕರಣ ಅಂಬೇಡ್ಕರ್ ಅವರಿಗೆ ಗಾಂಧಿಯವರ ಜೊತೆಗಿನ ಭಿನ್ನಾಭಿಪ್ರಾಯವನ್ನು ಹೆಚ್ಚಿಸುತ್ತದೆ.

1936ರಲ್ಲಿ ಅಂಬೇಡ್ಕರ್ ಅವರು ಮೊದಲ ರಾಜಕೀಯ ಪಕ್ಷ ‘ಸ್ವತಂತ್ರ ಲೇಬರ್ ಪಕ್ಷ’ ಸ್ಥಾಪಿಸುತ್ತಾರೆ. ಪ್ರಾಂತೀಯ ಸರಕಾರಗಳು ಮತ್ತು ವಿಧಾನಸಬೆಗಳಿಗೆ ಮತ್ತಷ್ಟು ಅಧಿಕಾರ ಕೊಡುವ 1935ರ ‘ಭಾರತೀಯ ಸರಕಾರದ ಕಾಯಿದೆ’ ಅನುಸಾರ 1937ರಲ್ಲಿ ನಡೆದ ಚುನಾವಣೆಗಳಲ್ಲಿ ‘ಸ್ವತಂತ್ರ ಲೇಬರ್ ಪಕ್ಷ’ ಸ್ಪರ್ಧಿಸುತ್ತದೆ ಮತ್ತು ಅನೇಕ ಕಡೆ ಯಶಸ್ಸನ್ನು ಗಳಿಸುತ್ತದೆ ಮತ್ತು ಬಾಂಬೆ ಪ್ರೆಸಿಡೆನ್ಸಿ ಮತ್ತು ಕೇಂದ್ರೀಯ ಪ್ರಾಂತಗಳಿಗೆ ಅಂಬೇಡ್ಕರ್ ಅವರು ಒಂಬತ್ತು ಶಾಸಕರ ಜೊತೆ ವಿಧಾನಸಭೆಗೆ ಆಯ್ಕೆಯಾಗುತ್ತಾರೆ.

ಎರಡನೆ ಮಹಾಯುದ್ದವು 1939ರ ನಂತರದ ಚಿತ್ರಣವನ್ನು ಬದಲಿಸುತ್ತದೆ. ಕಾಂಗ್ರೆಸ್ ನೊಂದಿಗೆ ಸಮಾಲೋಚಿಸದೆ ಬ್ರಿಟೀಶರು ಭಾರತೀಯರನ್ನು ಈ ಸಂಘರ್ಷದಲ್ಲಿ ಬಳಸಿಕೊಳ್ಳುತ್ತಾರೆ. ಇದನ್ನು ಪ್ರತಿಭಟಿಸಲು ಅದರ ಪ್ರತಿನಿಧಿಗಳು ಎಂಟು ಪ್ರಾಂತೀಯ ಸರಕಾರಗಳಿಗೆ ರಾಜಿನಾಮೆ ಕೊಡುತ್ತಾರೆ. ಈ ಬಿಕ್ಕಟ್ಟಿನಿಂದ ಹೊರಬರಲು ಸಣ್ಣ ಮಟ್ಟದ ಸಂಘಟನೆ, ಪಕ್ಷಗಳಾದ ಮುಸ್ಲಿಂ ಲೀಗ್, ಹಿಂದೂ ಮಹಾಸಭಾ, ಸ್ವತಂತ್ರ ಲೇಬರ್ ಪಕ್ಷಗಳನ್ನು ಬ್ರಿಟೀಶರು ಬಳಸಿಕೊಳ್ಳುತ್ತಾರೆ. 1941ರಲ್ಲಿ ಅಂಬೇಡ್ಕರ್ ಅವರು ‘ರಕ್ಷಣಾ ಸಲಹಾ ಸಮಿತಿ’ಯ ಸದಸ್ಯರಾಗುತ್ತಾರೆ ಮತ್ತು 1942ರಲ್ಲಿ ಕಾರ್ಮಿಕ ಮಂತ್ರಿಯಾಗಿ ಆಯ್ಕೆ ಆಗುತ್ತಾರೆ

1942ರಲ್ಲಿ ‘ಪರಿಶಿಷ್ಠ ಜಾತಿ ಒಕ್ಕೂಟ’ ಸ್ಥಾಪಿಸುತ್ತಾರೆ. ಅಸ್ಪೃಶ್ಯರು ‘ಅನುಸೂಚಿತ ಜಾತಿಗಳು’ ಎಂದು ಪರಿಷ್ಕರಿಸಿ ಸರಕಾರವು ಆಡಳಿತದಲ್ಲಿ ಮೀಸಲಾತಿ ಕೊಡುವ ಪರಿಕಲ್ಪನೆಯನ್ನು ಮಂದಿಡುತ್ತಾರೆ. ಆದರೆ ಮಾರ್ಚ್‌ 1946ರ ಚುನಾವಣೆಯಲ್ಲಿ ‘ಪರಿಶಿಷ್ಠ ಜಾತಿ ಒಕ್ಕೂಟ’ ಬಲಿಷ್ಠ ಕಾಂಗ್ರೆಸ್‌ನ ಎದುರು ಸೋಲನ್ನು ಅನುಭವಿಸುತ್ತದೆ ಮತ್ತು ಸ್ವತಃ ಅಂಬೇಡ್ಕರ್ ಸೋಲುತ್ತಾರೆ. ಆದರೆ ದಮನಿತರ, ವಂಚಿತ ಸಮುದಾಯಗಳ ಪ್ರತಿನಿದಿಯಾಗಿ, ನಾಯಕರಾಗಿ ಮತ್ತಷ್ಟು ಬೆಳೆಯುತ್ತಾರೆ. 3 ಜನವರಿ 1947ರಂದು ನೆಹರೂ ಅವರು ಅಂಬೇಡ್ಕರ್ ಅವರನ್ನು ಕಾನೂನು ಮಂತ್ರಿಯಾಗಿ ನೇಮಿಸುತ್ತಾರೆ. ನಂತರ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗುತ್ತಾರೆ ಮತ್ತು 1947-1950ರ ವರೆಗಿನ ಆ ಮೂರು ವರ್ಷಗಳು ಸಂವಿಧಾನ ರಚನೆಯಲ್ಲಿ ಕಳೆದುಹೋಗುತ್ತವೆ. ಜನವರಿ 1950ರಿಂದ ಹಿಂದೂ ಕೋಡ್ ಬಿಲ್‌ನ ಪರಿಷ್ಕಾರದ ಪರವಾಗಿ ಶ್ರಮಿಸುತ್ತಾರೆ. ಆದರೆ ತಮ್ಮ ಕಾಂಗ್ರೆಸ್ ಪಕ್ಷದೊಳಗಿನ ಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಳ್ಳಲು ಬಯಸದ ನೆಹರೂರವರು ಅಂಬೇಡ್ಕರ್ ರವರ ಶಿಫಾರಸ್ಸಗಳಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಇದರಿಂದ ಮನನೊಂದ ಅಂಬೇಡ್ಕರ್ ಅವರು ಸೆಪ್ಟೆಂಬರ್ 1951ರಂದು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಾರೆ. ವಿರೋಧ ಪಕ್ಷಕ್ಕೆ ಮರಳಿದ ಅಂಬೇಡ್ಕರ್ ಅವರು ಸಮಾಜವಾದಿಗಳೊಂದಿಗೆ ಹತ್ತಿರವಾಗುತ್ತಾರೆ. ಆದರೆ ಈ ಮೈತ್ರಿಕೂಟಕ್ಕೆ 1952ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗುತ್ತದೆ.

ನಂತರ ಅಂಬೇಡ್ಕರ್ ಬುದ್ಧಿಸಂ ಕಡೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ತಮ್ಮ ಅಧ್ಯಯನ, ಒಳನೋಟ ಮತ್ತು ಹುಡುಕಾಟವನ್ನು ಬಸಿದು ‘ಬುದ್ದ ಮತ್ತು ದಮ್ಮ’ ಪುಸ್ತಕ ಬರೆಯುತ್ತಾರೆ. ಅವರ ನಿಧನದ ನಂತರ 1957ರಲ್ಲಿ ಆ ಪುಸ್ತಕ ಪ್ರಕಟವಾಗುತ್ತದೆ. 1956ರಲ್ಲಿ ಹಿಂದೂಗಳ ಪವಿತ್ರ ದಿನವಾದ ದಸರಾ ಹಬ್ಬದಂದು ಅಕ್ಟೋಬರ್ 14ರಂದು ನಾಗಪುರದಲ್ಲಿ ಸಾವಿರಾರು ಅನುನಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. 30 ನವೆಂಬರ್ ರಂದು ದೆಹಲಿಗೆ ಮರಳಿದರು ಮತ್ತು 6 ಡಿಸೆಂಬರ್ 1956ರಂದು ನಿಧನರಾದರು.

Donate Janashakthi Media

Leave a Reply

Your email address will not be published. Required fields are marked *