ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಪ್ರದೇಶದಲ್ಲಿ ಮಹಾಸ್ಪೋಟ ಸಂಭವಿಸಿದ್ದು, ನಿನ್ನೆ(ಜುಲೈ 08) ಸಂಜೆ ಏಕಾಏಕಿ ಸೃಷ್ಟಿಯಾದ ಪ್ರವಾಹದಿಂದ ನದಿ ತಟದಲ್ಲಿ ಹಾಕಲಾಗಿದ್ದ ಶಿಬಿರಗಳು ಕೊಚ್ಚಿ ಹೋಗಿವೆ. ಸ್ಪೋಟದಿಂದಾಗಿ ಇಲ್ಲಿಯವರೆಗೆ ಸುಮಾರು 15 ಮಂದಿ ಮರಣಹೊಂದಿದ್ದು, 40ಕ್ಕೂ ಹೆಚ್ಚಿ ಜನರು ನಾಪತ್ತೆಯಾಗಿದ್ದಾರೆ.
ಮಹಾಸ್ಫೋಟದಿಂದಾಗಿ ಸುಮಾರು ಎರಡು ಸಾವಿರ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾತ್ರಾರ್ಥಿಗಳನ್ನು ರಕ್ಷಿಸಲು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಬಿಎಸ್‌ಎಫ್ ಸೇರಿದಂತೆ ಸೇನಾ ಸಹಾಯದಿಂದ 10 ತಂಡಗಳನ್ನು ರಚಿಸಲಾಗಿದ್ದು ಕ್ಷಿಪ್ರ ಕಾರ್ಯಚರಣೆಗೆ ಇಳಿದಿದ್ದಾರೆ. ಅಮರನಾಥ ಯಾತ್ರೆಗೆ ಜೂನ್ 30 ರಂದು ಚಾಲನೆ ಸಿಕ್ಕಿತ್ತು. ಮೊದಲ ತಂಡದಲ್ಲಿ 4,890 ಭಕ್ತರು ಯಾತ್ರೆ ಕೈಗೊಂಡಿದ್ದರು. 43 ದಿನಗಳ ಯಾತ್ರೆಯು ಕಳೆದ ಗುರುವಾರ ಆರಂಭವಾಗಿದ್ದು ಅಗಸ್ಟ್ 11 ರಂದು ಕೊನೆಗೊಳ್ಳಲಿದೆ.
ಸ್ಫೋಟದಿಂದ 25 ಬಿಡಾರಗಳು ಹಾಗೂ ಮೂರು ಸಾಮೂಹಿಕ ಆಹಾರ ಕೇಂದ್ರಗಳಿಗೆ ಹಾನಿಯಾಗಿದೆ. ಅಲ್ಲಿ ಯಾತ್ರಾರ್ಥಿಗಳಿಗೆ ಆಹಾರ ಪೂರೈಸಲಾಗುತಿತ್ತು. ದೇಶಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಣಿವೆ ತಟದಲ್ಲಿ ಹರಿಯುತ್ತಿದ್ದ ನದಿ ಒಂದೇ ಸಮನೆ ಉಕ್ಕಿ ಹರಿದಿದ್ದು ಅಮರನಾಥ ಯಾತ್ರೆ ಭಾಗದಲ್ಲಿನ ಜನರು ಸಿಲುಕಿಕೊಂಡು ಸಂಕಷ್ಟಕ್ಕೆ ಈಡಾಗಿದ್ದಾರೆ. ಗಾಯಗೊಂಡವರನ್ನು ಏರ್‌ಲಿಫ್ಟ್ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ನೂರಕ್ಕೂ ಹೆಚ್ಚು ಜನರು ಯಾತ್ರೆಗೆ ತೆರಳಿದ್ದಾರೆ. ಯಾತ್ರೆಗೆ ಹೋದ ಬಹುತೇಕ ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಹಿತಕರ ಘಟನೆ ಜರುಗಿರುವ ಬಗ್ಗೆ ಇದುವರೆಗೆ ಸುದ್ದಿ ಬಂದಿಲ್ಲ. ರಾಜ್ಯ ಸರ್ಕಾರದಿಂದ ಹೆಲ್ಪ್‌ಲೈನ್ ಆರಂಭಿಸಲಾಗಿದೆ. ಹೆಲ್ಪ್ಲೈನ್ಗೆ 15-20 ಜನ ಈಗಾಗಲೇ ಕರೆ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರದ ಜತೆ ಸಂಪರ್ಕ ಹೊಂದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದರು.
ಅಮರನಾಥ ಯಾತ್ರೆಗೆ ತೆರಳಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಸಹಾಯವಾಣಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. – 080-1070, 22340676 ಸಂಖ್ಯೆಗೆ ಫೋನ್ ಮಾಡಬಹುದು. ಇ-ಮೇಲ್: [email protected]ಗೆ ಸಂಪರ್ಕಿಸಬಹುದಾಗಿದೆ. ಕಾಶ್ಮೀರ ವಿಭಾಗದ ಹೆಲ್ಪ್‌ಲೈನ್ ಸಂಖ್ಯೆ-0194-2496240 ಅಮರನಾಥ ದೇಗುಲದ ಹೆಲ್ಪ್‌ಲೈನ್ ಸಂಖ್ಯೆ-0194-2313149 ಎನ್‌ಡಿಆರ್‌ಎಫ್-011-23438252, 011-23438253 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಸತತ 2 ವರ್ಷಗಳ ನಂತರ ಅಮರನಾಥ ಯಾತ್ರೆ ಪ್ರಾರಂಭವಾಗಿದ್ದು, ಸುಮಾರು 2,750 ಜನರ ಒಂದು ತಂಡ ನಿನ್ನೆ ಯಾತ್ರೆಯನ್ನು ಪ್ರಾರಂಭಿಸಿದರು. ಹಿಮಾಲಯದಲ್ಲಿ ಪ್ರಾಕೃತಿಕವಾಗಿ ಮಂಜುಗಡ್ಡೆಯಲ್ಲಿ ರೂಪುಗೊಳ್ಳುವ ಲಿಂಗವನ್ನು ದರ್ಶನ ಪಡೆಯಲು ಪ್ರತಿವರ್ಷ ನಿಗದಿತ ಅವಧಿಯಲ್ಲಿ ಯಾತ್ರೆ ಆಯೋಜಿಸಲಾಗುತ್ತದೆ.
ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿರುವ ನುನ್ವಾನ್ ಬಿಡಾರ ಕೇಂದ್ರದಿಂದ ಜಿಲ್ಲಾಧಿಕಾರಿ ಪಿಯೂಷ್ ಸಿಂಗ್ಲಾ ಅವರು ಯಾತ್ರೆಗೆ ಚಾಲನೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮು ಭಾಗದ ಬಿಡಾರ ಕೇಂದ್ರದಿಂದ 4,890 ಯಾತ್ರಾರ್ಥಿಗಳ ಮೊದಲ ತಂಡದ ಪ್ರಯಾಣಕ್ಕೆ ಚಾಲನೆ ನೀಡಿದ್ದರು.