ಲಿಂಗಸ್ಗೂರು : ನಾಳೆಯಿಂದ ಐಟಿಐ ಪರೀಕ್ಷೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಹಟ್ಟಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಖಾಸಗೀ ಕಾಲೇಜೊಂದು ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದೆ.
ಹೌದು ಲಿಂಗಸ್ಗೂರು ತಾಲ್ಲೂಕಿನ ಹಟ್ಟಿಗ್ರಾಮದಲ್ಲಿರುವ ಶ್ರೀ ಅಮರೇಶ್ವರ ಐಟಿಐ ಕಾಲೇಜ್ ನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಒಂದು ಆಫರ್ ನೀಡಿದ್ದಾರೆ. ಆ ಆಫರ್ ಏನು ಅಂದ್ರೆ ಪರೀಕ್ಷಾ ಕೇಂದ್ರ ದೇವದುರ್ಗದಲ್ಲಿದೆ, ನೀವು ಅಲ್ಲಿ ಅಟೆಂಡ್ ಮಾಡಿ ಬನ್ನಿ ಅಷ್ಟೆ, ಆದರೆ ಪ್ರಶ್ನೆಗಳಿಗೆ ಉತ್ತರ ಬರೆಯುವುದು ನಮ್ಮ ಕಾಲೇಜಿನಲ್ಲಿ, ಇದಕ್ಕೆ ಐದು ಸಾವಿರ ರೂಪಾಯಿ ಕೊಟ್ರೆ ಸಾಕು ಎಂದು ಆಫರ್ ನೀಡಿದ್ದಾರೆ.
ಪ್ರಾಂಶುಪಾಲರ ಈ ನಡೆಯನ್ನು ಹಲವು ವಿದ್ಯಾರ್ಥಿಗಳು ವಿರೋಧಿಸಿದ್ದು, ನಾವು ಈ ಮಾರ್ಗವನ್ನು ಒಪ್ಪುವುದಿಲ್ಲ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.
ಈ ಕುರಿತು SFI ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರ ಪ್ರತಿಕ್ರಿಯಿಸಿದ್ದು, ಈ ಕಾಲೇಜಿನ ಈ ರೀತಿಯ ಅಕ್ರಮ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಎಂಬಮಾತು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಅಧಿಕಾರಿಗಳಿಗೆ ಹಲವು ಬಾರಿ ಹೇಳಿದರು ಪ್ರಯೋಜನವಾಗಿಲ್ಲ. ಅಕ್ರಮ ಪರೀಕ್ಷೆಗೆ ಅವಕಾಶ ನೀಡುತ್ತಿರುವ ಪ್ರಾಂಶುಪಾಲರ ವಿರುದ್ಧ ಕ್ರಮಜರುಗಿಸಬೇಕು, ಇಲ್ಲದೆ ಹೋದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.