ಅಮಾನತುಗೊಂಡ ರಾಜ್ಯಸಭಾ ಸದಸ್ಯರಿಂದ ಅಹೋರಾತ್ರಿ ಧರಣಿ

ದೆಹಲಿ: ಕೃಷಿ ಮಸೂದೆ ಮಂಡನೆ ವೇಳೆ ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿದ ಕಾರಣಕ್ಕೆ ಕಲಾಪದ ಇನ್ನುಳಿದ ಅವಧಿಗೆ ಅಮಾನತುಗೊಂಡಿರುವ 8 ಸಂಸದರು, ಅಮಾನತು ವಿರೋಧಿಸಿ ಸೋಮವಾರ ಸಂಸತ್‌ ಭವನದ ಬಳಿ ಆರಂಭಿಸಿದ ಧರಣಿ ಸೋಮವಾರ ಇಡೀ ರಾತ್ರಿ ನಡೆಯಿತು.
ಧರಣಿನಿರತರಿಗೆ ಹೆಚ್ಚಿನ ಸಂಖ್ಯೆಯ ವಿರೋಧ ಪಕ್ಷದ ನಾಯಕರು ಬೆಂಬಲ ನೀಡಿದರು.

ಪ್ರತಿಭಟನಾ ನಿರತ ತಮ್ಮ ಸಹೋದ್ಯೋಗಿಗಳ ಪರ ಒಗ್ಗಟ್ಟು ಪ್ರದರ್ಶಿಸಲು ಪ್ರತಿಪಕ್ಷದ ಹಿರಿಯ ನಾಯಕರಾದ ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕ ಫಾರೂಖ್ ಅಬ್ದುಲ್ಲಾ, ಜೆಡಿಎಸ್‌ನ ಎಚ್‌.ಡಿ ದೇವೇಗೌಡ, ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಮತ್ತು ಎನ್‌ಸಿಪಿಯ ಪ್ರಫುಲ್ ಪಟೇಲ್ ಸ್ಥಳದಲ್ಲಿ ಹಾಜರಿದ್ದು, ಪ್ರತಿಭಟನೆ ಬೆಂಬಲಿಸಿದರು.

ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರು ಪ್ರತಿಭಟನೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಭಾಗವಹಿಸಿದ್ದರು. ಅಮಾನತುಗೊಂಡ ಸಂಸದರು ದೇಶಭಕ್ತಿ ಗೀತೆಗಳನ್ನು ಹಾಡಿದರು. ರೈತ ಪರ ಘೋಷಣೆ ಕೂಗಿ, ಫಲಕ ಪ್ರದರ್ಶನ ಮಾಡಿದರು. ಈ ಮೂಲಕ ಕೃಷಿ ಮಸೂದೆಯನ್ನು ವಿರೋಧಿಸಿದರು.

ಹಾಸಿಗೆ, ದಿಂಬು, ಸೊಳ್ಳೆಬತ್ತಿಯೊಂದಿಗೆ ಸಂಸದರು ಧರಣಿ ಕೈಗೊಂಡಿದ್ದರು. ‘ನಾವು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವುದಾಗಿ ಸರ್ಕಾರಕ್ಕೆ ತಿಳಿಯಬೇಕು,’ ಎಂದು ಟಿಎಂಸಿ ಸಂಸದ ಡೆರಿಕ್‌ ಒಬ್ರೆಯನ್‌ ಹೇಳಿದರು.

ಪ್ರತಿಭಟನಾ ನಿರತ ಸಂಸದರಲ್ಲಿ ಒಂದು ಆತಂಕವಿತ್ತು. ಕಾಂಗ್ರೆಸ್ ರಿಪುನ್ ಬೋರಾ ಮತ್ತು ಸಿಪಿಐಎಂ ಎಲರಾಮಂ ಕರೀಮ್ ಇಬ್ಬರೂ 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರು ಮೆಧುಮೇಹ ಕಾಯಿಲೆ ಹೊಂದಿದ್ದರು. ಅವರ ಆರೋಗ್ಯದ ಬಗ್ಗೆ ಪ್ರತಿಭಟನಾ ನಿರತ ಸಂಸದರಲ್ಲಿ ಭಯ ಕಾಡುತ್ತಿತ್ತು. ಹೀಗಾಗಿ ಆಂಬ್ಯುಲೆನ್ಸ್ ಒಂದನ್ನು ಸ್ಥಳದಲ್ಲೇ ನಿಯೋಜಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *