ಕಾರ್ಮಿಕರನ್ನು ಬಲಿ ಪಡೆಯುತ್ತಿರುವ ʻಅಲ್ಯೂಮಿನಿಯಂ ಏಣಿʼ

ಕೊಡಗು :  ಹಗುರ ಎಂಬ ಕಾರಣಕ್ಕೆ ಹೆಚ್ಚು ಬಳಸಲಾಗುತ್ತಿರುವ ಅಲ್ಯೂಮಿನಿಯಂ ಏಣಿಗಳ ಬಳಕೆ ಕೊಡಗಿನ ಕಾರ್ಮಿಕರ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದೆ.

ಕೊಡಗಿನಲ್ಲಿ ಕಾಫಿ ತೋಟ ಸಂಬಂಧಿ ಕೆಲಸಗಳು ಮತ್ತು ಕರಿಮೆಣಸು ಕೊಯ್ಲು ಮಾಡಲು ಸಾಮಾನ್ಯವಾಗಿ ಅಲ್ಯೂಮಿನಿಯಂ ಏಣಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ. ಬಳಸಲು ಸುಲಭ, ಹಗುರ, ಹೆಚ್ಚು ಬಾಳಿಕೆ ಬರುತ್ತದೆ, ಕಾರ್ಮಿಕ ಸ್ನೇಹಿ ಎನ್ನುವ ಕಾರಣಕ್ಕೆ ಕಾಫಿ ತೋಟ ಮಾಲೀಕರು ಇಂತಹ ಏಣಿಗಳನ್ನೇ ಉಪಯೋಗಿಸುತ್ತಾರೆ. ಮೊದಲೆಲ್ಲ ಬಿದಿರಿನ ಏಣಿಗಳಿಗೆ ಆದ್ಯತೆ ಕೊಡಲಾಗುತ್ತಿತ್ತು. ಆದರೆ ಈಚಿನ ವರ್ಷಗಳಲ್ಲಿ ಕಟ್ಟೆ ರೋಗ ಬಂದು ಬಿದಿರು ನಾಶವಾದ ಕಾರಣ ಬಿದಿರಿನ ಏಣಿಗಳು ಸಿಗುತ್ತಿಲ್ಲ. ಸಿಕ್ಕರೂ ಬೆಲೆ ಹೆಚ್ಚು, ತೂಕವೂ ಜಾಸ್ತಿ. ಬಾಳಿಕೆ ಕಡಿಮೆ, ಬೇಕಾದ ಎತ್ತರಕ್ಕೆ ಮಾರ್ಪಡಿಸಲು ಆಗುವುದಿಲ್ಲ. ಸಾಗಣೆ ಕಷ್ಟ ಮತ್ತಿತರ ಕಾರಣಗಳಿಂದ ಬಿದಿರಿನ ಏಣಿ ಜನಪ್ರಿಯತೆ ಕಳೆದುಕೊಂಡಿದೆ. ಕಾರ್ಮಿಕರು ಕೂಡ ಅಲ್ಯೂಮಿನಿಯಂ ಏಣಿಗೆ ಮನಸೋಲುವ ಮೂಲಕ ತಮ್ಮ ಸಮಾಧಿಯನ್ನು ತಾವೇ ತೋಡಿಕೊಂಡಂತಾಗಿದೆ.

ಕೊಡಗು ಜಿಲ್ಲೆ ಹೇಳಿ ಕೇಳಿ ಕಾಳುಮೆಣಸು ಪ್ರೊಡಕ್ಷನ್ ನಲ್ಲಿ ದೇಶ ವಿದೇಶಗಳಲ್ಲೂ ಫೇಮಸ್. ಕೊಡಗಿನಲ್ಲಿ ಬೆಳೆಯೋ ಗುಣಮಟ್ಟದ ಕಾಳುಮೆಣಸು ಬೇರೆಲ್ಲೆಡೆಯ ಮೆಣಸಿಗಿಂತ ಗುಣಮಟ್ಟದಿಂದ ಕೂಡಿದೆ. ಇಂತಹ ಗುಣಮಟ್ಟದ ಕಾಳುಮೆಣಸು ನಮ್ಮ ನಿಮ್ಮ ಅಡಿಗೆ ಮನೆ ಸೇರೋದ್ರೊಳಗೆ ಅದೆಷ್ಟೋ ಅಮಾಯಕ ಜೀವಗಳನ್ನ ಬಲೀ ಪಡೀತಿದೆ. ಆಶ್ಚರ್ಯ ಆದ್ರೂ ಇದು ಸತ್ಯ. ಕೊಡಗಿನ ಪೆಪ್ಪರ್ ಪ್ಲಾಂಟೇಶನ್‍ನಲ್ಲಿ ಹೊಟ್ಟೆ ಪಾಡಿಗೆ ದುಡಿಯೋ ಕಾರ್ಮಿಕರು ಪೆಪ್ಪರ್ ಕೊಯ್ಲಿಗೆ ಬಳಸೋ ಅಲ್ಯೂಮಿನಿಯಂ ಏಣಿಗಳಿಂದ ತಮ್ಮ ಪ್ರಾಣವನ್ನೇ ಒತ್ತೆ ಇಡ್ತಿದ್ದಾರೆ.

ಇದನ್ನೂ ಓದಿ : ವಿದ್ಯುತ್‌ ಸಂಪರ್ಕ ಇಲ್ಲ : ಆದರೆ ಬಿಲ್‌ ಮಾತ್ರ ತಪ್ಪದೆ ಬರುತ್ತೆ

ನಾಲ್ಕು ವರ್ಷದಲ್ಲಿ 42 ಕಾರ್ಮಿಕರ ಸಾವು :  ವರ್ಷಕ್ಕೆ ಸರಾಸರಿ 11 ರಂತೆ ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇದೆ. ವಿದ್ಯುತ್ ಲೈನಿಗೆ ತಗುಲಿ ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 42 ಕೂಲಿ ಕಾರ್ಮಿಕರು ತಮ್ಮ ಅಮೂಲ್ಯ ಜೀವ ಕಳೆದುಕೊಂಡಿದ್ದಾರೆ. ಮಾಲೀಕರ ಬೈಗುಳದ ಭಯ, ಬೇಗ ಕೆಲಸ ಮುಗಿಸಿ ಮನೆಗೆ ತೆರಳುವ ಧಾವಂತ ಹಾಗೂ ವಿದ್ಯುತ್‌ ವಾಹಕಗಳ ಬಗೆಗಿನ ಅಜ್ಞಾನದಿಂದಲೇ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಗಾಗ ಇಂತಹ ದುರಂತ ಸಂಭವಿಸುತ್ತಿದೆ.

ಬಿದಿರು, ಫೈಬರ್‌ ಪರ್ಯಾಯ : ಅಲ್ಯೂಮಿನಿಯಂ ಏಣಿಗಳನ್ನು ಬಳಸದಂತೆ ಕಾರ್ಮಿಕ ಇಲಾಖೆ ಕೂಡ ಸಾಕಷ್ಟು ಅರಿವು ಮೂಡಿಸಲು ಪ್ರಯತ್ನಿಸಿದೆ. ಅಲ್ಯೂಮಿನಿಯಂ ಏಣಿಗಳಿಗೆ ಬದಲಾಗಿ ಬಿದಿರು ಮತ್ತು ಫೈಬರ್ ಏಣಿಗಳನ್ನು ಬಳಸುವಂತೆ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದೆ. ಇಷ್ಟಾದರೂ ಅಲ್ಯೂಮಿನಿಯಂ ಏಣಿಗಳು ದೀರ್ಘಕಾಲ ಬಳಕೆಗೆ ಬರುತ್ತವೆ, ಸುಲಭವಾಗಿ ಮನೆ ಬಾಗಿಲಿಗೆ ಅವುಗಳು ಪೂರೈಕೆ ಆಗುತ್ತವೆ ಎಂಬ ಕಾರಣಕ್ಕೆ ತೋಟದ ಮಾಲೀಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಯೂಮಿನಿಯಂ ಏಣಿಗಳನ್ನೇ ಬಳಸುತ್ತಿದ್ದಾರೆ.

ಅಲ್ಯೂಮಿನಿಯಂಗೆ ಪರ್ಯಾಯವಾಗಿ ಬಿದಿರು ಅಥವಾ ಫೈಬರ್‌ ಏಣಿ ಬಳಸಬಹುದು. ಬಿದಿರು ಕೆಲಸಗಾರರು ಈಚಿನ ದಿನಗಳಲ್ಲಿ ಹೆಚ್ಚು ಬಾಳಿಕೆ ಬರುವ ರೀತಿಯಲ್ಲಿ ಬೆಳೆಗಾರರ ಅಗತ್ಯಕ್ಕೆ ತಕ್ಕಂತೆ ಏಣಿಗಳನ್ನು ತಯಾರಿಸಿ ಕೊಡುತ್ತಿದ್ದಾರೆ. ಚೆನ್ನಾಗಿ ಒಣಗಿದ ಬಿದಿರಿನಲ್ಲಿ ವಿದ್ಯುತ್‌ ಪ್ರವಹಿಸುವುದಿಲ್ಲ. ಫೈಬರ್‌ನ ವಿವಿಧ ಮಾದರಿಯ ಏಣಿಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇಷ್ಟಾಗಿಯೂ ಅಲ್ಯೂಮಿನಿಯಂ ಏಣಿ ಬಳಸಬೇಕೆಂದರೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅತ್ಯುತ್ತಮ ವಿದ್ಯುತ್‌ ವಾಹಕವಾದ ಅಲ್ಯೂಮಿನಿಯಂ ಲೋಹದಿಂದ ಮಾಡಿದ ಏಣಿಯನ್ನು ವಿದ್ಯುತ್‌ ತಂತಿ ಹಾದು ಹೋದಲ್ಲಿ ಬಳಸಲೇ ಬಾರದು. ಬಳಸಬೇಕಾದ ಅನಿವಾರ್ಯತೆ ಇದ್ದಲ್ಲಿ ಸಂಬಂಧಿಸಿದ ವಿದ್ಯುತ್‌ ಇಲಾಖೆ ಸಿಬ್ಬಂದಿ ಸಹಕಾರ, ಸಲಹೆ ಪಡೆದುಕೊಳ್ಳುವುದು ಉತ್ತಮ. ಕಾರ್ಮಿಕರು ಅಲ್ಯೂಮಿನಿಯಂ ಏಣಿ ಉಪಯೋಗಿಸುವ ಸಂದರ್ಭದಲ್ಲಿ ಸಂಬಂಧಿಸಿದ ತೋಟಗಳ ಮಾಲೀಕರು ಜತೆಯಲ್ಲಿದ್ದು ಮಾರ್ಗದರ್ಶನ ಮಾಡುವುದು ಒಳ್ಳೆಯದು.

Donate Janashakthi Media

Leave a Reply

Your email address will not be published. Required fields are marked *