ಅಲ್ಪಸಂಖ್ಯಾತರ ಮೇಲೆ ದಾಳಿ ಖಂಡಿಸಿ-ಸಂವಿಧಾನ ಬದ್ಧ ರಕ್ಷಣೆ ನೀಡಲು ಸಿಪಿಐ(ಎಂ) ರಾಜ್ಯವ್ಯಾಪಿ ಪ್ರತಿಭಟನೆ

ಬೆಂಗಳೂರು: ಧಾರ್ಮಿಕ ಅಲ್ಪಸಂಖ್ಯಾತ ಮೇಲೆ ನಡೆದಿರುವ ದಾಳಿಗಳನ್ನು ಖಂಡಿಸಿ, ಸಂವಿಧಾನ ಬದ್ಧ ರಕ್ಷಣೆ ನೀಡಬೇಕು. ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ವತಿಯಿಂದ ರಾಜ್ಯದ್ಯಂತ ಪ್ರತಿಭಟನಾ ಧರಣಿ ನಡೆದಿದೆ.

ಸಂಘ ಪರಿವಾರಕ್ಕೆ ಸಂಯೋಜಿತವಾಗಿರುವ ಸಂಸ್ಥೆಗಳಿಂದ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ವಿರುದ್ಧ ದಾಳಿ ನಡೆಯುತ್ತಿದೆ. ಇದು ದೇಶದ ಸಂವಿಧಾನದ ಮೇಲಿನ ಒಂದು ವ್ಯವಸ್ಥಿತ ದಾಳಿಯಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿಗಳು ನಿಲ್ಲಬೇಕು. ತ್ರಿಪುರಾದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಕೆಲ ಮಸೀದಿಗಳಿಗೂ ಹಾನಿ ಉಂಟು ಮಾಡಲಾಗಿದೆ.

ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿಸಿಕೊಂಡು ದೊಂಬಿ, ಹತ್ಯೆ, ಬಂಧನಗಳು, ಗೋರಕ್ಷಣೆ ಮತ್ತು ಲವ್ ಜಿಹಾದ್’ ಹೆಸರಿನಲ್ಲಿ ಹಿಂಸಾಚಾರದ ಪ್ರಕರಣಗಳು ಮುಂದುವರಿದಿವೆ. ಮಸೀದಿಗಳನ್ನ ಹಾಳುಗೆಡವುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳನ್ನು ಬೆದರಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಹ ಹೊಸ, ಹೊಸ ಸಮಸ್ಯೆಗಳನ್ನು ಬೇಕೆಂದೇ ಸೃಷ್ಟಿಸಲಾಗುತ್ತಿದೆ. ಅಲ್ಲದೇ ಸೌಹಾರ್ಧತೆಯ ಕೇಂದ್ರಗಳಾಗಬೇಕಾದ ಇವುಗಳನ್ನು ಕೋಮು ವಿಭಜನೆ ತರುವ, ಪರಸ್ಪರ ನಂಬಿಕೆ, ವಿಶ್ವಾಸಗಳು ಇಲ್ಲದಂತೆ ಪರಿವತಿಸಿ ಭಯ ನಿರ್ಮಾಣ ಮಾಡುವ ಕೇಂದ್ರಗಳನ್ನಾಗಿಸುತ್ತಿವೆ. ಇಂತಹ ಪ್ರಯತ್ನಗಳನ್ನು ನಿರ್ದಾಕ್ಷಿಣ್ಯವಾಗಿ ತಡೆಯಬೇಕಾಗಿದೆ ಎಂದು ಸಿಪಿಐ(ಎಂ) ಒತ್ತಾಯಿಸಿದೆ.

ಮಾನಕ ಹಕ್ಕು ಗುಂಪುಗಳ ಇತ್ತೀಚಿನ ವರದಿ ಪ್ರಕಾರ 2021ರಲ್ಲಿ ಕ್ರಿಶ್ಚಿಯನ್ ಸಮುದಾಯಗಳು ಮತ್ತು ಅವರ ಧಾರ್ಮಿಕ ಆರಾಧನಾ ಸ್ಥಳಗಳಾದ 300 ಹೆಚ್ಚಿನ  ಕಡೆಗಳಲ್ಲಿ ದಾಳಿಗಳು ಸಂಭವಿಸಿದೆ. ಇವುಗಳಿಗೆ ಗುರಿಯಾದವರು ಹೆಚ್ಚಿನವರು ಆದಿವಾಸಿ ಮತ್ತು ದಲಿತ ಸಮುದಾಯಗಳಿಗೆ ಸೇರಿದವರು. ಪ್ರಾರ್ಥನಾ ಸಭೆಗಳನ್ನು ನಿಯಮಿತವಾಗಿ ತಡೆಯಲಾಗುತ್ತಿದೆ ಮತ್ತು ಮತಾಂತರ ತಡೆಯುವ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಥಳಿಸಲಾಗುತ್ತಿದೆ.

ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕಾದ ಸರ್ಕಾರ, ಸ್ಥಳೀಯ ಆಡಳಿತ, ಪೊಲೀಸ್‌ ಇಲಾಖೆಯೂ ಸಹ ಸ್ಥಳೀಯ ಒತ್ತಡಗಳಿಗೆ ಒಳಗಾಗಿ ನಡೆದುಕೊಳ್ಳುತ್ತಿದ್ದಾರೆ. ಗಲಭೆ ಸೃಷ್ಠಿಸಲೆಂದು ಇರುವ ಈ ಗುಂಪುಗಳು ಮುಖ್ಯವಾಗಿ, ಇತ್ತೀಚನ ದಿನಗಳಲ್ಲಿ ತುಮಕೂರು, ಕೋಲಾರ, ಕೊಡಗು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಇಂತಹ ಪ್ರಕರಣಗಳು ನಡೆದಿವೆ. ದಾಳಿಗಳು ನಡೆದ ಕಡೆಗಳಲ್ಲೆಲ್ಲಾ ಶಾಂತಿ-ಸೌಹಾರ್ಧತೆಗೆ ಧಕ್ಕೆಯಾಗಿದೆ ಎಂದು ಸಿಪಿಐ(ಎಂ) ಪಕ್ಷವು ತಿಳಿಸಿದೆ.

ರಾಜ್ಯದ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರು, ದಲಿತರು ಮತ್ತಿತರರ ಆಹಾರದ ಹಾಗೂ ಬದುಕುವ ಹಕ್ಕುಗಳನ್ನು ಮತ್ತು ರಾಜ್ಯದ ಎಲ್ಲಾ ಹೈನುಗಾರರು, ಹೈನೋದ್ಯಮ ಹಾಗೂ ಮಾಂಸೋದ್ಯಮದ ಮೇಲೆ ಧಾಲಿ ನಡೆಸಲು ಕಾರ್ಪೋರೇಟ್‌ ಕಂಪನಿಗಳಿಗೆ ಅವಕಾಶ ನೀಡುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020ನ್ನು ಜಾರಿಗೊಳಿಸಬಾರದೆಂದು ಆಗ್ರಹಿಸಲಾಗಿದೆ. ಅಲ್ಲದೆ, ಉದ್ಯೋಗ  ಕಳೆದುಕೊಂಡ ಮತ್ತು ಆರ್ಥಿಕ ನಷ್ಠ ಹೊಂದಿದ ಲಕ್ಷಾಂತರ ಖುರೇಷಿಗಳಿಗೆ ಯಾವುದೇ ಪರಿಹಾರಗಳನ್ನು ನೀಡದಿರುವುದು ಸಿಪಿಐ(ಎಂ) ಪಕ್ಷವು ಖಂಡಿಸಿದೆ.

ಹಕ್ಕೊತ್ತಾಯಗಳು

  1. ಅಲ್ಪಸಂಖ್ಯಾತರ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು – ಅವರ ಮೇಲಿನ ಕೋಮು ಹಿಂಸಾಚಾರವನ್ನು ನಿಲ್ಲಿಸಲು ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
  2. ಕೋಮು ಹಿಂಸಾಚಾರವನ್ನು ಸೃಷ್ಠಿಸುವ ಪುಂಡಾಟಿಕೆಯ ಗುಂಪುಗಳ ಮೇಲೆ ಹದ್ದಿನ ಕಣ್ಣಿಟ್ಟು ಅವುಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣವಾಗಿ ಕ್ರಮ ವಹಿಸಬೇಕು.
  3. ಕೋಮುದ್ವೇಷದ ಹಿಂಸಾಚಾರದಲ್ಲಿ ಹಿಂಸೆಗೊಳಗಾದ ಎಲ್ಲರಿಗೂ ಸೂಕ್ತ ಪರಿಹಾರ ಮತ್ತು ಪ್ರಾಣ ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಸರಕಾರಿ ಉದ್ಯೋಗ ಒದಗಿಸಬೇಕು.
  4. ಡಾ. ರಾಜೇಂದ್ರ ಸಾಚಾರ್‌ ಸಮಿತಿಯ ಶಿಫಾರಸ್ಸಿನಂತೆ ಅಲ್ಪಸಂಖ್ಯಾತರ ಆರ್ಥಿಕ-ಸಾಮಾಜಿಕ, ಮತ್ತು ಶೈಕ್ಷಣಿಕ, ಅಭಿವೃದ್ಧಿಗೆ ಸರ್ಕಾರ ಸಮಗ್ರ ಯೋಜನೆ ರೂಪಿಸಬೇಕು. ರಾಜ್ಯ ಸರ್ಕಾರ ನಿಲ್ಲಿಸಿರುವ ವಿದ್ಯಾರ್ಥಿ ವೇತನವನ್ನು ಪುನರ್‌ ಆರಂಭಿಸಬೇಕು.
  5. ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020ನ್ನು ಕೂಡಲೇ ವಾಪಸ್ಸು ಪಡೆಯಬೇಕು. ಇದರಿಂದಾಗಿ ಉದ್ಯೋಗ ಕಳೆದುಕೊಂಡ ಹಾಗೂ ಆರ್ಥಿಕ ನಷ್ಠ ಹೊಂದಿದ ಖುರೇಷಿಗಳಿಗೆ ತಲಾ ಕನಿಷ್ಠ ಲಕ್ಷ ರೂ.ಗಳ ಪರಿಹಾರ ಮತ್ತು ಹೊಸ ಉದ್ಯೋಗದಲ್ಲಿ ತೊಡಗಲು ಸಹಾಯ ಧನದ ಆರ್ಥಿಕ ನೆರವನ್ನು ಪ್ರಕಟಿಸಬೇಕು.

ಮೇಲಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಿಪಿಐ(ಎಂ) ಪಕ್ಷದ ಕೇಂದ್ರ ಸಮಿತಿಯು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು. ಅದರ ಭಾಗವಾಗಿ ರಾಜ್ಯದಲ್ಲಿಯೂ ಹಲವು ಕಡೆಗಳನ್ನು ಧರಣಿಗಳು ನಡೆದಿವೆ. ಹಾಸನ, ತುಮಕೂರು, ರಾಯಚೂರು, ಬಳ್ಳಾರಿ, ಕಲಬುರಗಿ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳು ಹಾಗೂ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನಾ ಧರಣಿಯನ್ನು ನಡೆಸಲು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಕೋರರಿಗೆ ಕಠಿಣ ಶಿಕ್ಷೆ ಹಾಗೂ ಸಂವಿಧಾನಬದ್ಧ ರಕ್ಷಣೆಯನ್ನು ನೀಡಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಸಿಪಿಐ(ಎಂ) ಪಕ್ಷವು ಮನವಿಯನ್ನು ನೀಡಿದೆ.

Donate Janashakthi Media

Leave a Reply

Your email address will not be published. Required fields are marked *