ನವದೆಹಲಿ: ತಮಿಳುನಾಡಿನ ತೂತ್ತುಕುಡಿಯಲ್ಲಿರುವ ಆಕ್ಸಿಜನ್ ಘಟಕ ತೆರೆಯಲು ವೇದಾಂತ ಗಣಿಗಾರಿಕೆ ಕಂಪೆನಿಗೆ ಇಂದು ಸುಪ್ರೀಂಕೋರ್ಟ್ ಅನುಮತಿಸಿದೆ. ಕೋವಿಡ್ ನಿಯಂತ್ರಿಸಲು ತುರ್ತು ಅಗತ್ಯವಿರುವ ಆಮ್ಲಜನಕ ಉತ್ಪತ್ತಿಗಾಗಿ ರಾಷ್ಟ್ರೀಯ ಅಗತ್ಯದ ದೃಷ್ಟಿಯಿಂದ ಈ ಆದೇಶವನ್ನು ನೀಡಲಾಗಿದೆ. ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಆದರೆ ಈ ಆದೇಶದ ನೆಪದಲ್ಲಿ ವೇದಾಂತ ಕಂಪೆನಿ ತಾಮ್ರ ಸಂಸ್ಕರಣೆ ಘಟಕದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗದು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್ ಅವರಿದ್ದ ತ್ರಿಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಘಟಕದ ಮೇಲ್ವಿಚಾರಣೆಗಾಗಿ ತೂತ್ತುಕುಡಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪರಿಸರ ಎಂಜಿನಿಯರ್, ಉಪ ಜಿಲ್ಲಾಧಿಕಾರಿ, ವಾಣಿಜ್ಯ ಜ್ಞಾನ ಹೊಂದಿರುವ ಇಬ್ಬರು ಸರ್ಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಸರ್ಕಾರಕ್ಕೆ ನ್ಯಾಯಪೀಠ ಇದೇ ಸಂದರ್ಭದಲ್ಲಿ ನಿರ್ದೇಶಿಸಿತು.
ದೇಶ ರಾಷ್ಟ್ರೀಯ ಬಿಕ್ಕಟ್ಟನ್ನು ಎದುರಿಸುತ್ತಿರುವುದರಿಂದ ವೇದಾಂತ ಘಟಕದಿಂದ ಆಕ್ಸಿಜನ್ ಉತ್ಪಾದನೆ ವಿಚಾರದಲ್ಲಿ ರಾಜಕೀಯ ಗಲಾಟೆಗಳು ನಡೆಯಬಾರದು, ವೇದಾಂತ ಆಕ್ಸಿಜನ್ ಘಟಕ ಕಾರ್ಯನಿರ್ವಹಣೆಗೆ ಅನುವು ಮಾಡುವ ಈ ಆದೇಶ ಯಾರ ಪರವಾಗಿಯೂ ಇಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ನೆನ್ನೆಯ ವಿಚಾರಣೆ ವೇಳೆ ತಮಿಳುನಾಡು ಸರ್ಕಾರ “ಈ ಹಿಂದೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ರಚಿಸಲಾದ ಸಮಿತಿಯೊಂದು ಸ್ಥಾವರದ ಮೇಲ್ವಿಚಾರಣೆ ನಡೆಸಲಿದೆ. ಅಲ್ಲದೆ ವೇದಾಂತ ಕಂಪೆನಿಯ ತಾಮ್ರ ಸಂಸ್ಕರಣೆ, ಶಾಖ ವಿದ್ಯುತ್ ಉತ್ಪಾದನೆ ಅಥವಾ ಇನ್ನಾವುದೇ ಘಟಕಗಳಿಗೆ ಅನುಮತಿ ನೀಡುವುದಿಲ್ಲ” ಎಂದು ಅಫಿಡವಿಟ್ ಸಲ್ಲಿಸಿತ್ತು.
ಮಾಲಿನ್ಯ ಕಾರಣದಿಂದ ಮೇ 2018 ರಿಂದ ವೇದಾಂತ ಆಕ್ಸಿಜನ್ ಪ್ಲಾಂಟ್ ಮುಚ್ಚಲ್ಪಟ್ಟಿದ್ದು, ಜನ ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವಾಗ ಇನ್ನೂ ಏಕೆ ವೇದಾಂತ ಆಕ್ಸಿಜನ್ ಪ್ಲಾಂಟನ್ನು ವಶಕ್ಕೆ ಪಡೆದಿಲ್ಲ ಎಂದು ಏಪ್ರಿಲ್ 23 ರಂದು ತಮಿಳುನಾಡು ಸರ್ಕಾರವನ್ನು ಸುಪ್ರೀಂಕೋರ್ಟ್ ಕೇಳಿತ್ತು.
ಆಮ್ಲಜನಕ ಬಿಕ್ಕಟ್ಟು ಪರಿಹರಿಸಲು ಸ್ಥಾವರ ಪುನರಾರಂಭಕ್ಕೆ ವೇದಾಂತ ಕಂಪೆನಿ ಸುಪ್ರೀಂಕೋರ್ಟ್ ಕದ ತಟ್ಟಿದ ಬಳಿಕ ತಮಿಳುನಾಡು ಸರ್ಕಾರ ಅಫಿಡವಿಟ್ ಸಲ್ಲಿಸಿತ್ತು. ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರಬಹುದೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಸ್ಥಾವರ ತೆರೆಯುವುದನ್ನು ಮೊದಲು ವಿರೋಧಿಸಿತ್ತು. ಆದರೆ ಸರ್ಕಾರವೇ ಸ್ಥಾವರವನ್ನು ಸುಪರ್ದಿಗೆ ತೆಗೆದುಕೊಂಡು ಚಾಲನೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿತ್ತು.
ಸಮಿತಿಯಲ್ಲಿ ಇಬ್ಬರು ಸದಸ್ಯರನ್ನು ವೇದಾಂತ ಸಂಘರ್ಷ ಘಟನೆಯ ಸಂತ್ರಸ್ತರು 48 ಗಂಟೆಗಳ ಒಳಗೆ ನಾಮನಿರ್ದೇಶನ ಮಾಡಬಹುದು. ಅದು ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರವೇ ಸದಸ್ಯರ ನೇಮಕ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಆದೇಶ ಜುಲೈ 31, 2021 ರವರೆಗೆ ಚಾಲ್ತಿಯಲ್ಲಿರಲಿದ್ದು ಆ ಸಮಯದಲ್ಲಿ ಅದು ಕೋವಿಡ್ ಸ್ಥಿತಿಗತಿಯನ್ನು ನಿರ್ಣಯಿಸುತ್ತದೆ.