ಬೆಂಗಳೂರು : ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಐವರು ಸಚಿವರ ಆರೋಪ ಮಾಡಿದ್ದಾರೆ.
“ವಾಲ್ಮೀಕಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಿಎಂ, ಡಿಸಿಎಂ ಸೇರಿದಂತೆ ಸಚಿವರುಗಳ ಹೆಸರು ಹೇಳುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ” ಎಂದು ಐವರು ಸಚಿವರು ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಮತ್ತು ಸಂತೋಷ್ ಲಾಡ್ ಸುದ್ದಿಗೋಷ್ಟಿ ಉದ್ದೇಶಿಸಿ ಕೇಂದ್ರ ಸರ್ಕಾರ ಹಾಗು ಇಡಿ ವಿರುದ್ಧ ವಾಗ್ದಾಳಿ ನಡೆಸಿದರು.
“ಇಡಿಯನ್ನು ಬಳಸಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ವಾಲ್ಮೀಕಿ ನಿಗಮ ಹಗರಣದ ತನಿಖೆ ನಡೆಸಲಾಗುತ್ತದೆ. ತನಿಖೆಗೆ ಒಳಪಟ್ಟವರ ಮೇಲೆ ಒತ್ತಡ ತಂದು ಸರ್ಕಾರದ ಉನ್ನತ ಮಟ್ಟದಲ್ಲಿ ಇರುವವರ ಹೆಸರು ಹೇಳಬೇಕು ಎಂದು ಇಡಿ ಒತ್ತಡ ಹೇರುತ್ತಿದೆ. ಈ ಮೂಲಕ ಚುನಾಯಿತ ಸರ್ಕಾರವನ್ನು ಉರುಳಿಸುಲ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಧೇಯಕ ಮಂಡನೆ ಮುಂದೂಡಿಕೆ
“ತನಿಖೆಯ ಅಂಶಗಳು ಸೆಲೆಕ್ಟಿವ್ ಆಗಿ ಸೋರಿಕೆ ಆಗುತ್ತಿದೆ. ಇಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮುನ್ನವೇ ಮಾಹಿತಿ ಹೇಗೆ ಸೋರಿಕೆಯಾಯಿತು?. ಮಾಹಿತಿ ನೀಡುವುದು ಇಡಿ ಕೆಲಸ, ಮಾಡಲಿ. ತನಿಖೆ ಮಾಡಿ ಕೋರ್ಟ್ನಲ್ಲಿ ಆರೋಪಪಟ್ಟಿ ಸಲ್ಲಿಸಲಿ. ರಾಜಕೀಯ ಉದ್ದೇಶಕ್ಕಾಗಿ ಅವರು ತನಿಖಾ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ” ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
“ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ, ಡಿಸಿಎಂ, ಸಚಿವರುಗಳ ಹೆಸರನ್ನು ಹೇಳಿ. ನಾವು ನಿಮ್ಮನ್ನು ಕಾನೂನಾತ್ಮಕವಾಗಿ ರಕ್ಷಿಸುತ್ತೇವೆ ಎಂದು ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
“ಭೋವಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ನಿಗಮದಲ್ಲಿ ನಡೆದ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಆಗಿದೆ. ಕೋವಿಡ್ ಅಕ್ರಮದ ಬಗ್ಗೆ ಏಕೆ ತನಿಖೆ ಮಾಡಿಲ್ಲ?. ವಿರೋಧ ಪಕ್ಷದಲ್ಲಿದ್ದಾಗ ಕೇಸ್ ಹಾಕುತ್ತಾರೆ. ಬಿಜೆಪಿಗೆ ಬಂದರೆ ಅವರಿಗೆ ಕ್ಲೀನ್‌ಚಿಟ್ ನೀಡಲಾಗುತ್ತದೆ. ಐಟಿ, ಇಡಿ, ಸಿಬಿಐ ಬಳಸಿಕೊಂಡು ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ವಿರೋಧ ಪಕ್ಷದ ಮೇಲೆ ದಾಳಿ ಮಾಡುತ್ತಿದ್ದಾರೆ” ಎಂದು ಅಸಮಾಧಾನ ಹೊರಹಾಕಿದರು.