ನೀತಿ ಸಂಹಿತೆ ಉಲ್ಲಂಘನೆ ಆರೋಪ; ಜನಾರ್ದನ ರೆಡ್ಡಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಕೊಪ್ಪಳ : ಮೇ 10 ರಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ, ಈ ಹಿನ್ನೆಲೆ ಚುನಾವಣಾ ನೀತಿ ಸಂಹಿತೆಯೂ ಕೂಡ ಜಾರಿಯಾಗಿದ್ದರೂ ಕೂಡ ಇದನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಸೇರಿದಂತೆ ಐದು ಜನರ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ‌ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಇಂದು ಪ್ರಕರಣ ದಾಖಲಾಗಿದ್ದು, ಪಕ್ಷದ ಪೋಸ್ಟರ್ ಜೊತೆಗೆ ಉಚಿತ ಸೇವೆ ಎಂದು ಆಂಬುಲೆನ್ಸ್ ಮೇಲೆ ಬರೆಯಲಾಗಿತ್ತು. ಕನಕಗಿರಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಈ ವಾಹನವನ್ನು ಪೊಲೀಸರು ಎರಡು ದಿನಗಳ ಹಿಂದೆ ಜಪ್ತಿ ಮಾಡಿದ್ದರು.

ಇದನ್ನೂ ಓದಿ : ನೀತಿಸಂಹಿತೆ ಉಲ್ಲಂಘಿಸಿ ಕಾರ್ಯಕ್ರಮ ಆಯೋಜನೆ : ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲು

ಕನಕಗಿರಿ ಕ್ಷೇತ್ರದ ಪಕ್ಷದ ನಿಯೋಜಿತ ಅಭ್ಯರ್ಥಿ ವೆಂಕಟರಮಣ ದಾಸರಿ, ಆಂಬುಲೆನ್ಸ್ ವಾಹನದ ಮಾಲೀಕ ಜಿ. ನವೀನಕುಮಾರ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಿ ಅರುಣಾ ಮತ್ತು ಆಂಬುಲೆನ್ಸ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಾಹನದ ಮೇಲೆ ರೆಡ್ಡಿ, ಅರುಣಾ ಮತ್ತು ದಾಸರಿ ಭಾವಚಿತ್ರಗಳು ಇದ್ದವು ಎನ್ನಲಾಗಿದೆ.

ಅನುಮತಿ ಪಡೆಯದೇ ಕಲ್ಯಾಣ ಪ್ರಗತಿ ಪಕ್ಷಕ್ಕೆ ಸೇರಿದ ವಾಹನ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿತ್ತು. ಆದ್ದರಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *