• ಕೊಲೆ ಕೇಸ್‌ನಲ್ಲಿ ಅಮಾಯಕರ ಬಂಧಿಸಿ 15 ಲಕ್ಷ ವಸೂಲಿ ಆರೋಪ..!
• ಗೋಕಾಕ್ CPI ಗೋಪಾಲ್ ರಾಥೋಡ್, ಪಿಎಸ್ಐ, ಪೇದೆಗಳಿಬ್ಬರ ವಿರುದ್ಧ ದೂರು
• ನ್ಯಾಯಕ್ಕಾಗಿ ವೃದ್ಧ ದಂಪತಿ, ಕುಟುಂಬಸ್ಥರ ಕಣ್ಣೀರು
ಬೆಳಗಾವಿ: ಕೊಲೆ ಪ್ರಕರಣದಲ್ಲಿ ಅಮಾಯಕರ ಬಂಧಿಸಿ 15 ಲಕ್ಷ ಲಂಚ ಪಡೆದು ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಗೋಕಾಕ್ ಇನ್ಸ್‌ಪೆಕ್ಟರ್ ಗೋಪಾಲ್ ರಾಠೋಡ್ ಹಾಗೂ ಸಿಬ್ಬಂದಿ ವಿರುದ್ಧ ಬೆಳಗಾವಿ ಜಿಲ್ಲೆ ಗೋಕಾಕ್‌ನ ಸಿದ್ದಪ್ಪ ಬಬಲಿ ಕುಟುಂಬ ಗಂಭೀರ ಆರೋಪ ಮಾಡಿದೆ. ನ್ಯಾಯಕ್ಕಾಗಿ ಆಗ್ರಹಿಸಿ ವೃದ್ಧ ದಂಪತಿ, ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಇನ್ನು ಮತ್ತೊಂದೆಡೆ ಈ ಘಟನೆ ಸಂಬಂಧ ಕುಟುಂಬಸ್ಥರು ಸಿಎಂ ಬೊಮ್ಮಾಯಿ, ಗೃಹಸಚಿವರಿಗೂ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಗೋಕಾಕ್ ಇನ್ಸ್‌ಪೆಕ್ಟರ್, ಸಿಬ್ಬಂದಿ ವಿರುದ್ಧ ಲೋಕಾಯುಕ್ತ, ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ಜೈ ಭೀಮ ಸಿನೆಮಾ ಮಾದರಿ ಘಟನೆ : ತಮಿಳು ನಟ ಸೂರ್ಯ ಅಭಿನಯದ ‘ಜೈ ಭೀಮ್’ ಸಿನಿಮಾ ನೋಡಿದ್ರೆ ಅದರಲ್ಲಿ ಅಮಾಯಕರ ಮೇಲೆ ಪೊಲೀಸರು ಹೇಗೆಲ್ಲಾ ದೌರ್ಜನ್ಯ ಮಾಡಿ ಕೇಸ್ ಫಿಟ್ ಮಾಡ್ತಾರೆ ಅನ್ನೋದನ್ನ ಎಳೆ-ಎಳೆ ಯಾಗಿ ಬಿಚ್ಚಿಟ್ಟಿದ್ದನ್ನು ನೋಡಿರುತ್ತೀರಿ. ಇದೇ ಮಾದರಿಯಲ್ಲಿ ಸಿದ್ದಪ್ಪ ಬಬಲಿ ಕುಟುಂಬಕ್ಕೆ ಬೆದರಿಕೆ ಹಾಕಲಾಗುತ್ತಿದೆ. ದೌರ್ಜನ್ಯ ನಡೆಸಿದ್ದಲ್ಲದೆ ಲಕ್ಷ ಲಕ್ಷ ಹಣ ಪೀಕಿದ್ದಾರೆ. ಗೋಕಾಕ್ ಇನ್ಸ್‌ಪೆಕ್ಟರ್ ಗೋಪಾಲ್ ರಾಠೋಡ್ ಹಾಗೂ ಸಿಬ್ಬಂದಿ ಸಿದ್ದಪ್ಪ ಬಬಲಿ ಕುಟುಂಬಕ್ಕೆ ಕಿರುಕುಳ ನೀಡುತ್ತಾ ಬಂದಿದ್ದಾರೆ. ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ. ಮನಬಂದಂತೆ ಹೊಡೆಯುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ. ರಾತ್ರಿ ವೇಳೆ ಮನೆಗೆ ಬಂದು ಹಣ ಕೇಳುತ್ತಿದ್ದಾರೆ. ಇಲ್ಲವಾದರೆ ನಿಮ್ಮ ಮೇಲೂ ಕೇಸ್ ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ : 2021ರ ಜುಲೈ 17ರಂದು ಬೆಳಗಾವಿ ಜಿಲ್ಲೆಯ ಗೋಕಾಕ್‌ನ ಮಹಾಂತೇಶ ನಗರ ಬಡಾವಣೆಯಲ್ಲಿ ಮಂಜುನಾಥ ಮುರಕಿಭಾವಿ ಎಂಬುವರ ಕೊಲೆಯಾಗಿತ್ತು. ಕೊಲೆ ಪ್ರಕರಣದಲ್ಲಿ ಸಿದ್ದಪ್ಪ ಬಬಲಿ ಮಕ್ಕಳಾದ ಕೃಷ್ಣ,ಅರ್ಜುನ್ ಎಂಬುವರನ್ನು ಬಂಧಿಸಲಾಗಿತ್ತು. ಬಂಧಿತರ ಅಕ್ಕನ ಮಗಳನ್ನು ಕೊಲೆಯಾದ ಯುವಕ ಮಂಜುನಾಥ ಪ್ರೀತಿಸುತ್ತಿದ್ದ ಎಂಬ ಆರೋಪವಿದೆ. ಅಕ್ಕನ ಮಗಳ ಮದುವೆಯಾದ ಬಳಿಕವೂ ಮಂಜುನಾಥ ಸಂಪರ್ಕದಲ್ಲಿದ್ದ ಹಿನ್ನೆಲೆ ಆತನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು.
ಆದರೆ, ಬಂಧಿತರಿಗೂ ಹಾಗೂ ಕೊಲೆಯಾದ ಯುವಕನಿಗೂ ಯಾವುದೇ ಸಂಬಂಧ ಇಲ್ಲ. ಮಂಜು ಬಸಪ್ಪ ರಂಗನಕೊಪ್ಪ ಎಂಬುವರ ಹೇಳಿಕೆ ಮೇಲೆಯಷ್ಟೇ ನಮ್ಮ ಮಕ್ಕಳನ್ನ ಬಂಧಿಸಿದ್ದಾರೆ. ಕೊಲೆಯಲ್ಲಿ ಯಾವುದೇ ಸಾಕ್ಷ್ಯಾಧಾರ ಇಲ್ಲದೇ ತಮ್ಮ ಮಕ್ಕಳನ್ನು ಬಂಧಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಕಳ್ಳತನ ಪ್ರಕರಣ ಒಪ್ಪಿಕೊಳ್ಳುವಂತೆ ದಲಿತ ಮಹಿಳಿಗೆ ಪೊಲೀಸರಿಂದ ಚಿತ್ರಹಿಂಸೆ
15 ಲಕ್ಷ ರೂಪಾಯಿ ಲಂಚ ಪಡೆದರಾ ಪೊಲೀಸರು?
ಕುಟುಂಬಸ್ಥರ ಮೇಲಿನ ಕೇಸ್ ಹಾಕದಿರಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಹೀಗಾಗಿ ಪೊಲೀಸ್‌ರು ಕಿರುಕುಳ ನೀಡಿ 15 ಲಕ್ಷ ರುಪಾಯಿ ಹಣ ಪೊಲೀಸರು ಪಡೆದಿದ್ದಾರೆಂದು ಆರೋಪಿಸಿದ್ದಾರೆ. ಯುವಕರ ಕುಟುಂಬಸ್ಥರು ಜಮೀನು ಅಡವಿಟ್ಟು ಹಣ ನೀಡಿದ್ದೀವಿ ನ್ಯಾಯ ದೊರಕಿಸಿಕೊಡಿ ಅಂತಾ ಕುಟುಂಬಸ್ಥರ ಕಣ್ಣೀರು ಹಾಕಿದ್ದಾರೆ.
ತನಿಖೆಗೆ ಆದೇಶಿಸಿದ ಬೆಳಗಾವಿ ಎಸ್‌ಪಿ : ಬಬಲಿ ಕುಟುಂಬಸ್ಥರ ಆರೋಪ ಬಗ್ಗೆ ತನಿಖೆಗೆ ಬೆಳಗಾವಿ ಎಸ್‌ಪಿ ಆದೇಶ ಮಾಡಿದ್ದಾರೆ. ಎಸ್ಪಿ ಸೂಚನೆಯಂತೆ ಇಂದು ಎಎಸ್ಪಿ ನಂದಗಾವಿ ಗೋಕಾಕ ಠಾಣೆಗೆ ಭೇಟಿ ನೀಡಿ ನೊಂದ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ಇದರೊಂದಿಗೆ ಪಿಎಸ ಐ ನಾಗರಾಜರಿಂದಲೂ ಮಾಹಿತಿ ಪಡೆದಿದ್ದು, ಈ ವಿಚಾರಣೆಗೆ ಸಿಪಿಐ ಗೋಪಾಲ್ ರಾಠೋಡ್, ಪೇದೆಗಳಾದ ಕಸ್ತೂರಿ, ಪಾಟೀಲ್ ಮೂವರು ಗೈರಾಗಿದ್ದಾರೆ.
ಅತ್ತ ಬಬಲಿ ಕುಟುಂಬ ನ್ಯಾಯಕ್ಕಾಗಿ ಸಿಎಂ ಮೊರೆ ಹೋಗಿದ್ದು, ಇವರ ಪರವಾಗಿ ಹೈಕೋರ್ಟ್ ನ್ಯಾಯವಾದಿ ಸಿಂದೆ ಸಹ ಕಾನೂನು ಹೋರಾಟ ಮುಂದುವರೆಸಿದ್ದಾರೆ.. ಇತ್ತ ಬೆಳಗಾವಿ ಎಸ್ಪಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ಗೆ ತೀವ್ರಗೊಳಿಸಿದ್ದು, ಪೊಲೀಸ್ ತನಿಖೆಯಿಂದಲೇ ಎಲ್ಲಾ ಸತ್ಯಾಸತ್ಯತೆ ಹೊರಗೆ ಬರಬೇಕಿದೆ.