ಬೆಂಗಳೂರು: ನಮ್ಮ ಸರ್ಕಾರದ ಸಚಿವರು ಶಾಸಕರು ಲಂಚ ಕೇಳಿಲ್ಲ ಎಂದು ಕೇವಲ ಕೆಂಪಣ್ಣ ಮಾತ್ರವಲ್ಲ,ಗುತ್ತಿಗೆದಾರರ ಸಂಘದ ಇತರ ಪದಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕೇವಲ ಬಿಜೆಪಿ ಪ್ರಯೋಜಿತ ಗುತ್ತಿಗೆದಾರರು ಮಾತ್ರ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಕಮಿಷನ್ ಕೇಳಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂಬ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನಾವು ಭ್ರಷ್ಟಾಚಾರರಹಿತ ಆಡಳಿತ ನೀಡುವ ವಚನ ನೀಡಿ ಅಧಿಕಾರಕ್ಕೆ ಬಂದಿದ್ದು,ಪಾರದರ್ಶಕವಾಗಿ ಆಡಳಿತ ಮಾಡಲು ಬದ್ಧರಾಗಿದ್ದೇವೆ. ಕರ್ನಾಟಕವನ್ನು ದಕ್ಷ ಆಡಳಿತ ರಾಜ್ಯವಾಗಿ ಮಾಡುವುದು ನಮ್ಮ ಕನಸು. ಇದಕ್ಕಾಗಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಇದನ್ನೂ ಓದಿ:ಬ್ಲ್ಯಾಕ್‌ಮೇಲ್‌ಗಳಿಗೆ ಹೆದರಲ್ಲ,ಕೆಲಸ ಮಾಡಿದವರ ಬಿಲ್ ಪಾವತಿ ಆಗಲಿದೆ:ಡಿ.ಕೆ.ಶಿವಕುಮಾರ್
ನಾನು ಸಿದ್ದರಾಮಯ್ಯ ಅವರು ನಮ್ಮದೇ ಆದ ರಾಜಕೀಯ ಹಿನ್ನೆಲೆ ಹೊಂದಿದ್ದೇವೆ, ಕೆಂಪಣ್ಣ ಅವರು ಬಹಳ ಹಿರಿಯ. ಅವರು ಬಿಜೆಪಿ ಸರ್ಕಾರ ಬಾಕಿ ಉಳಿಸಿರುವ ಬಿಲ್ ಪಾವತಿ ಬಗ್ಗೆ ಮನವಿ ಮಾಡಲು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಸರ್ಕಾರ ಯಾಕೆ ಬಿಲ್ ಪಾವತಿ ಮಾಡಲಿಲ್ಲ ಎಂಬುದು ನನ್ನ ಪ್ರಶ್ನೆ ಎಂದರು.
ಮುಖ್ಯಮಂತ್ರಿಯ ನಿರ್ದೇಶನದಂತೆ ಕಾಮಗಾರಿಗಳ ತನಿಖೆ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಬಿಲ್ ಪಾವತಿ ಮಾಡಲಾಗುವುದು. ಯಾವುದೇ ಗುತ್ತಿಗೆದಾರರಿಗೆ ಕಿರುಕುಳ ನೀಡುವುದು ನಮ್ಮ ಉದ್ದೇಶವಲ್ಲ ಎಂದೂ ಹೇಳಿದರು. ಕೆಂಪಣ್ಣ ಮಾತ್ರ ಅಲ್ಲ, ಗುತ್ತಿಗೆದಾರರ ಸಂಘದ ಇತರ ಪದಾಧಿಕಾರಿಗಳು ಸರ್ಕಾರದ ಯಾವುದೇ ಸಚಿವರು ಲಂಚ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಆದರೆ, ಈ ವಿಚಾರ ರಾಜಕೀಯ ಮಾಡಿ, ಗುತ್ತಿಗೆದಾರರನ್ನು ಬಳಸಿಕೊಂಡು ಅಶೋಕ್, ಅಶ್ವತ್ಥನಾರಾಯಣ,ಗೋಪಾಲಯ್ಯ ಅವರು ತಮ್ಮ ತಿಮಿಂಗಗಳ ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.