ಲಖನೌ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕುರಿತು ಉತ್ತರ ಪ್ರದೇಶ ರಾಜ್ಯ ಸರ್ಕಾರದ ಕರಡು ಅಧಿಸೂಚನೆಯನ್ನು ರದ್ದುಗೊಳಿಸಿರುವ ಅಲಹಾಬಾದ್ ಕೋರ್ಟ್ ಲಕ್ನೋ ಪೀಠ, ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಮೀಸಲಾತಿಯಿಲ್ಲದೆಯೇ ಚುನಾವಣೆ ನಡೆಸುವಂತೆ ಆದೇಶ ನೀಡಿದೆ.
ಉತ್ತರಪ್ರದೇಶ ಸರ್ಕಾರ ಸುಪ‍್ರೀಂ ಕೋರ್ಟಿನ ತ್ರಿವಳಿ ಸೂತ್ರದ ಆದೇಶವನ್ನು ಪಾಲನೆ ಮಾಡದೇ ಒಬಿಸಿ ಮೀಸಲಾತಿಗೆ ಸಂಬಂಧಿಸಿದ ಕರಡು ಸಿದ್ಧಪಡಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಸೌರವ್ ಲಾವಾನಿಯಾ ಅವರ ವಿಭಾಗೀಯ ಪೀಠವು ಉತ್ತರ ಪ್ರದೇಶ ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಗೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಬಗ್ಗೆ ಡಿಸೆಂಬರ್ 5 ರಂದು ಹೊರಡಿಸಿದ ಕರಡು ಅಧಿಸೂಚನೆಯನ್ನು ರದ್ದುಗೊಳಿಸಿದೆ.
ಇದನ್ನು ಓದಿ: ಬಿ.ಬಿ.ಎಂ.ಪಿ ಚುನಾವಣೆ: ಹಾವು ಏಣಿ ಆಟ
ಹದಿನೈದು ದಿನಗಳ ಕಾಲ ತಡೆಹಿಡಿಯಲಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಷಯದ ಕುರಿತು ವಿಚಾರಣೆಯನ್ನು ನಡೆಸಿದಿ ನ್ಯಾಯಾಲಯ ಡಿಸೆಂಬರ್ 24ರಂದು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.
‘ರಾಜ್ಯ ಸರ್ಕಾರವು ಒಬಿಸಿಗೆ ಮೀಸಲಾತಿ ನಿಗದಿಪಡಿಸುವುದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ನ ಸೂತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು. ಇತರ ಹಿಂದುಳಿದ ವರ್ಗಗಳು ರಾಜಕೀಯವಾಗಿ ಹಿಂದುಳಿದಿವೆಯೇ ಇಲ್ಲವೇ ಎಂಬುದರ ಅಧ್ಯಯನಕ್ಕಾಗಿ ಆಯೋಗವೊಂದನ್ನು ರಚಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು.
17 ಮಹಾನಗರ ಪಾಲಿಕೆಗಳ ಮೇಯರ್, 200 ನಗರಸಭೆ ಹಾಗೂ 545 ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಗಳ ಮೀಸಲಾತಿಗೆ ಸಂಬಂಧಿಸಿದ ತಾತ್ಕಾಲಿಕ ಪಟ್ಟಿಯನ್ನು ಉತ್ತರ ಪ್ರದೇಶ ಸರ್ಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿತ್ತು. ಇದರ ಪ್ರಕಾರ ಒಬಿಸಿಗಳಿಗೆ 4 ಮೇಯರ್ ಸ್ಥಾನ, ನಗರಸಭೆಯ 54 ಮತ್ತು ಪಟ್ಟಣ ಪಂಚಾಯಿತಿಯ 147 ಅಧ್ಯಕ್ಷ ಸ್ಥಾನಗಳನ್ನು ಮೀಸಲಿಟ್ಟಿತ್ತು. ಇದರಲ್ಲಿ 49 ಒಬಿಸಿ ಮಹಿಳೆಯರು ಸೇರಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಸರ್ಕಾರದ ಪರ ವಾದ ಮಂಡಿಸಿದ ನ್ಯಾಯವಾದಿಗಳು ಸರ್ಕಾರವು ಮೀಸಲಾತಿಗೆ ಸಂಬಂಧಸಿದಂತೆ ಸಮೀಕ್ಷೆ ಕೈಗೊಂಡಿದ್ದು, ಅದು ತ್ರಿವಳಿ ಸೂತ್ರದಷ್ಟೇ ಉತ್ತಮವಾಗಿದೆ ವಾದಿಸಿದ್ದರು.
ಹೈಕೋರ್ಟ್ ಆದೇಶದ ಕುರಿತು ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ವಕ್ತಾರ ಸುನೀಲ್ ಸಿಂಗ್ ಸಜನ್, ಹಿಂದುಳಿದ ವರ್ಗಗಳ ಮೀಸಲಾತಿಯಿಂದ ವಂಚಿತರಾಗಲು ಬಿಜೆಪಿ ಸರ್ಕಾರದ ಪಿತೂರಿಯೇ ಕಾರಣ ಎಂದು ಆರೋಪಿಸಿದ್ದಾರೆ.