ಕೋಲ್ಕತ್ತ: ಆಲಾಪನ್ ಬಂದೋಪಾಧ್ಯಾಯರನ್ನು ದೆಹಲಿಗೆ ಕಳುಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದು, ಇಂದು ಆಲಾಪನ್ ಬಂದೋಪಾಧ್ಯಾಯ ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿದ್ದಾರೆ, ಅವರನ್ನು ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರಾಗಿ ನೇಮಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ಪತ್ರದ ಮೂಲಕ ತಿಳಿಸಿದ್ದಾರೆ.
ಈ ಮೂಲಕ ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವಿನ ಹಗ್ಗ-ಜಗ್ಗಾಟ ಮುಂದುವರಿದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು 5 ಪುಟಗಳ ಪತ್ರವನ್ನು ಪ್ರಧಾನಿಗೆ ಬರೆದಿರುವ ಸಿಎಂ ಮಮತಾರವರು, ಮೂರು ತಿಂಗಳ ವಿಸ್ತರಣೆ ನೀಡಿ ಮುಖ್ಯ ಕಾರ್ಯದರ್ಶಿಗಳ ಸೇವೆಯನ್ನು ವಿಸ್ತರಿಸಿ ಇದೀಗ ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಲಕ್ಷದ್ವೀಪದಲ್ಲಿ ಸರ್ವಾಧಿಕಾರಶಾಹೀ ಆಳ್ವಿಕೆ: ಹೆಚ್ಚುತ್ತಿರುವ ಪ್ರತಿರೋಧ ಆಡಳಿತಗಾರನನ್ನು ಹಿಂದಕ್ಕೆ ಕರೆಸಿಕೊಳ್ಳಲು ಆಗ್ರಹ
ಕೇಂದ್ರ ಸರ್ಕಾರದ ಈ ಏಕಪಕ್ಷೀಯ ಆದೇಶ ಒಂದು ಅವಿವೇಕದ ನಿರ್ಧಾರವಾಗಿದೆ. ನಿಮ್ಮ ಅವಿವೇಕತನದ ನಿರ್ಧಾರದಿಂದ ರಾಜ್ಯದ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ನಿಮ್ಮ ಆದೇಶವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಹಿಂತೆಗೆದುಕೊಳ್ಳುವಂತೆ ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಪಶ್ಚಿಮ ಬಂಗಾಳದ ಜನರ ಪರವಾಗಿ ನಿಮ್ಮ ಆತ್ಮಸಾಕ್ಷಿಗೆ ಮತ್ತು ಉತ್ತಮ ಪ್ರಜ್ಞೆಗೆ ನಾನು ಮನವಿ ಮಾಡುತ್ತೇನೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
I will not allow Alapan Banerjee to leave Nabanna. He is now the Chief Adviser to Chief Minister: West Bengal CM Mamata Banerjee pic.twitter.com/aXSOb9LD4w
— ANI (@ANI) May 31, 2021
ಇಂದು ಸೇವೆಯಿಂದ ನಿವೃತ್ತಿ: 1987ರ ವಿಭಾಗದ ಪಶ್ಚಿಮ ಬಂಗಾಳ ಕ್ಯಾಡರ್ ನ ಐಎಎಸ್ ಅಧಿಕಾರಿಯಾಗಿರುವ ಬಂಡೋಪಾಧ್ಯಾಯ ಅವರಿಗೆ 60 ವರ್ಷವಾಗಿದ್ದು ಇಂದು ಸೇವೆಯಿಂದ ನಿವೃತ್ತರಾಗಬೇಕಾಗಿತ್ತು. ಆದರೆ ಕೋವಿಡ್ ನಿರ್ವಹಣೆಗೆಂದು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿ ಮೂರು ತಿಂಗಳ ಸೇವಾವಧಿ ವಿಸ್ತರಣೆಗೆ ಕೇಂದ್ರ ಅನುಮತಿ ನೀಡಿತ್ತು.
ಮೇ 28ರಂದು ಸಿಬ್ಬಂದಿ ಸಚಿವಾಲಯವು ಭಾರತೀಯ ಆಡಳಿತ ಸೇವೆ (ಕೇಡರ್) ನಿಯಮಗಳು, 1954 ರ ನಿಬಂಧನೆ ಪ್ರಕಾರ, ತಕ್ಷಣವೇ ಜಾರಿಗೆ ಬರುವಂತೆ ಬಂಡೋಪಾಧ್ಯಾಯರ ಸೇವೆಗಳನ್ನು ಭಾರತ ಸರ್ಕಾರದೊಂದಿಗೆ ನಿಯೋಜಿಸಲು ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ಬೆಳಗ್ಗೆ 10 ಗಂಟೆಗೆ ಬಂಡೋಪಾಧ್ಯಾಯ ಅವರು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ದೆಹಲಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಕೂಡ ಕೇಂದ್ರ ಆದೇಶ ನೀಡಿತ್ತು.
ಇದನ್ನು ಓದಿ: ವಿಧ್ವಂಸದ ಎರಡು ಯಾತನಾಮಯ ವರ್ಷಗಳು
ಬಂಗಾಳವು ಕೋವಿಡ್ ನಿರ್ವಹಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಂದೋಪಾಧ್ಯಾಯರನ್ನು ಯಾವುದೇ ಕಾರಣಕ್ಕೂ ದೆಹಲಿಗೆ ಕಳಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬಂದೋಪಾಧ್ಯಾಯರ ನಿವೃತ್ತಿಯ ಬಳಿಕ ಹರಿಕೃಷ್ಣ ದ್ವಿವೇದಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆಂದು ಮಮತಾ ಘೋಷಿಸಿದ್ದಾರೆ.
“ಅವರು (ಕೇಂದ್ರ) ಯಾವುದೇ ಕಾರಣ ನೀಡದೆ ಇರುವುದು ನನಗೆ ಆಘಾತವಾಗಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆಲಾಪನ್ ರ ಸೇವೆಯು ಪಶ್ಚಿಮ ಬಂಗಾಳಕ್ಕೆ ಅಗತ್ಯವಾಗಿ ಬೇಕಾಗಿದೆ. ಕೋವಿಡ್ ಮತ್ತು ಯಾಸ್ ಚಂಡಮಾರುತದ ಈ ವಿಷಮ ಸಂದರ್ಭದಲ್ಲಿ ಅವರ ಸೇವೆಯ ಅಗತ್ಯವಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.