ಅಕ್ಷಯ್‌ ಕುಮಾರ್‌ ನಟನೆಯ ʻರಸ್ತೆ ಸುರಕ್ಷತೆʼ ಸರ್ಕಾರಿ ಜಾಹೀರಾತು ವರದಕ್ಷಿಣೆಗೆ ಬೆಂಬಲ ನೀಡುತ್ತಿದೆಯೇ?

ಮುಂಬೈ: ಕೇಂದ್ರ ಸರ್ಕಾರವು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ತಯಾರಿಸಲಾಗಿರುವ ಜಾಹೀರಾತಿನಲ್ಲಿ ವರದಕ್ಷಿಣೆಗೆ ಉತ್ತೇಜನ ನೀಡಲಾಗಿದೆ. ಈ ಸಂಬಂಧ ಜಾಹೀರಾತಿನ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಜಾಹೀರಾತು ಕುತೂಹಲಕಾರಿಯಾಗಿದ್ದರೂ ಸಹ ಅತ್ಯಂತ ವಿವರಣಾತ್ಮಕವಾಗಿ ವಿಶ್ಲೇಷಿಸಿದ್ದಲ್ಲಿ ಇದು ವರದಕ್ಷಿಣೆ ಪಿಡುಗನ್ನು ಪ್ರಚೋದಿಸುತ್ತದೆ ಎನ್ನಲಾಗಿದೆ.

ಒಂದು ನಿಮಿಷದ ಜಾಹೀರಾತು ಚಿತ್ರದಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮದುಮಗಳನ್ನು ಬೀಳ್ಕೊಡುವ ಸನ್ನಿವೇಶದಲ್ಲಿ ಮದುಮಗಳು ಕಣ್ಣೀರು ಸುರಿಸುತ್ತಾ ಗಂಡನೊಂದಿಗೆ ಕಾರಿನಲ್ಲಿ ಕುಳಿತಿರುತ್ತಾಳೆ. ತಂದೆ ಅವರಿಬ್ಬರಿಗೂ ವಿದಾಯ ಹೇಳುತ್ತಾ ಭಾವುಕರಾಗಿರುತ್ತಾರೆ.

ಅಕ್ಷಯ್​ ಕುಮಾರ್ ಬಂದು ‘ಇಂಥ ಕಾರ್​ನಲ್ಲಿ ಮಗಳು ಮತ್ತು ಅಳಿಯನನ್ನು ಕಳಿಸಿಕೊಟ್ಟರೆ ಕಷ್ಟ ಆಗುತ್ತದೆ. ಯಾಕೆಂದರೆ ಇದರಲ್ಲಿ ಎರಡೇ ಏರ್​ ಬ್ಯಾಗ್​ ಇರುವುದು. 6 ಏರ್​ ಬ್ಯಾಗ್​ ಇರುವ ಕಾರಿನಲ್ಲಿ ಕಳಿಸಿಕೊಟ್ಟರೆ ಚಿಂತೆ ಇರುವುದಿಲ್ಲ’ ಎಂದು ​ ಹೇಳುತ್ತಾರೆ. ಅದಕ್ಕೆ ತಂದೆ ಒಪ್ಪಿಕೊಳ್ಳುತ್ತಾರೆ.

ನಂತರ ಮದುಮಕ್ಕಳು 6 ಏರ್‌ ಬ್ಯಾಗ್‌ ಇರುವ ಕಾರಿನಲ್ಲಿ ಸಾಗುತ್ತಾರೆ. ಅವರಿಗೆ ಎಲ್ಲರೂ ಸಂತಸದಿಂದ ಬೀಳ್ಕೊಡುವುದು ಮುಂದಿನ ದೃಶ್ಯದಲ್ಲಿದೆ. ಕೊನೆಯಲ್ಲಿ ಅಕ್ಷಯ್‌ ರಸ್ತೆ ಸುರಕ್ಷತೆಯ ಸಂದೇಶ ಸಾರುತ್ತಾರೆ. ಮದುವೆಯಲ್ಲಿ ಹುಡುಗನಿಗೆ ಕಾರನ್ನು ವರದಕ್ಷಿಣೆ ರೂಪದಲ್ಲಿ ನೀಡುವುದನ್ನು ಈ ಜಾಹೀರಾತು ಪ್ರಚೋದಿಸುತ್ತದೆ ಎಂಬ ಆರೋಪ ಎದುರಾಗಿದೆ.

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಿದ್ಧಪಡಿಸಿರುವ ಈ ವಿಡಿಯೊವನ್ನು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹಂಚಿಕೊಂಡಿದ್ದು, 6 ಏರ್‌ ಬ್ಯಾಗ್ ಇರುವ ವಾಹನದಲ್ಲಿ ಸಂಚರಿಸುವ ಮೂಲಕ ಸುರಕ್ಷಿತ ಪ್ರಯಾಣ ಮಾಡಿ ಎಂದಿದ್ದಾರೆ.

ಇದು ವರದಕ್ಷಿಣೆ ಪಿಡುಗನ್ನು ಪ್ರೋತ್ಸಾಹಿಸುತ್ತದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಈ ವಿಚಾರವನ್ನು ಇಟ್ಟುಕೊಂಡು ಅಕ್ಷಯ್​ ಕುಮಾರ್​ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

ಕೇಂದ್ರ ಸಾರಿಗೆ ಸಚಿವಾಲಯದ ಸರ್ಕಾರಿ ಜಾಹೀರಾತಿಗೆ ನೆಟ್ಟಿಗರೂ ಆಕ್ಷೇಪ ವ್ಯಕ್ತಪಡಿಸಿದ್ದು, ರಸ್ತೆಗಳನ್ನು ಸರಿಪಡಿಸುವ ಬದಲು 6 ಏರ್ ಬ್ಯಾಗ್‌ಗಳನ್ನೊಳಗೊಂಡ ದುಬಾರಿ ಕಾರುಗಳನ್ನು ಉತ್ತೇಜಿಸುವುದು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಅದ್ಭುತ ಮಾರ್ಗ ಎಂದು ಕಿಡಿಕಾರಿದ್ದಾರೆ. ಇದು ವರದಕ್ಷಿಣೆಗೆ ಪ್ರಚೋದನೆ ನೀಡಲಾಗುತ್ತಿದೆ. ಇದರ ಬದಲು ರಸ್ತೆಗಳನ್ನು ಸರಿಪಡಿಸಿ ಎಂದು ಚಾಟಿ ಬೀಸಿದ್ದಾರೆ.

ಈ ಬಗ್ಗೆ ಸಚಿವರು ಅಥವಾ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ‘ಇದು ಸಮಸ್ಯಾತ್ಮಕ ಜಾಹೀರಾತು. ಸರ್ಕಾರ ಕಾರಿನ ಪ್ರಯಾಣದ ಸುರಕ್ಷತೆ ಉದ್ದೇಶದಿಂದ ಹಣ ವ್ಯಯಿಸುತ್ತಿದೆಯೇ? ಅಥವಾ ಈ ಜಾಹೀರಾತು ಮೂಲಕ ಕ್ರೂರ ಮತ್ತು ಅಪರಾಧ ಚಟುವಟಿಕೆಯಾದ ವರದಕ್ಷಿಣೆಗೆ ಉತ್ತೇಜನ ನೀಡುತ್ತಿದೆಯೇ?’ ಎಂದು ಟ್ವಿಟ್‌ ಮಾಡಿದ್ದಾರೆ.

ಟಿಎಂಸಿ ನಾಯಕ ಸಾಕೇತ್‌ ಗೋಖಲೆ,  ಟ್ವೀಟ್‌ ಮಾಡಿದ್ದು, ‘1. ಭಾರತ ಸರ್ಕಾರ ಅಧಿಕೃತವಾಗಿ ವರದಕ್ಷಿಣೆಗೆ ಉತ್ತೇಜನ ನೀಡುತ್ತಿರುವುದು ಅಸಹ್ಯಕರವಾಗಿದೆ. ಇದಕ್ಕಿಂತ ಅಚ್ಚರಿ ಇನ್ನೇನಿದೆ? 2. ಸೈರಸ್‌ ಮಿಸ್ತ್ರಿ ಅವರು ಮೃತಪಟ್ಟದ್ದು ದೋಷಪೂರಿತ ರಸ್ತೆ ವಿನ್ಯಾಸದಿಂದಾಗಿ. ದುರಂತ ಸಂಭವಿಸಿದ ಸ್ಥಳ ಅಪಘಾತ ವಲಯವಾಗಿತ್ತು ಎಂದಿದ್ದಾರೆ.

ಅಕ್ಷಯ್‌ ಕುಮಾರ್‌ ಅವರು ಇತ್ತೀಚೆಗೆ ಪಾನ್‌ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ತೀವ್ರ ವಿವಾದಕ್ಕೆ ಕಾರಣವಾಗಿ ಅದರ ಒಪ್ಪಂದದಿಂದ ಹೊರ ಬಂದಿದ್ದರು.

Donate Janashakthi Media

Leave a Reply

Your email address will not be published. Required fields are marked *