ನವದೆಹಲಿ: ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಭಾರತ ಸರಕಾರ ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಇಂದು ಪ್ರದಾನ ಮಾಡಲಾಯಿತು.

ಸಾಮಾನ್ಯರಲ್ಲಿ ಅತೀ ಸಾಮಾನ್ಯರಂತೆ ಇರುವ ಹರೇಕಳ ಹಾಜಬ್ಬರ ವ್ಯಕ್ತಿತ್ವಕ್ಕೆ ಎಲ್ಲರೂ ಮಾರುಹೋಗಿದ್ದಾರೆ. 2004ರಲ್ಲಿ ಹರೇಕಳ ಹಾಜಬ್ಬರ ಶಿಕ್ಷಣ ಪ್ರೀತಿಯನ್ನು ಮೊದಲ ಬಾರಿಗೆ ಗುರುತಿಸಲಾಯಿತು. ಆ ಬಳಿಕ ರಾಷ್ಟ್ರದ ವಿವಿಧ ಮಾಧ್ಯಮಗಳು ಹರೇಕಳ ಹಾಜಬ್ಬರನ್ನು ಗುರುತಿಸಿ ಗೌರವಿಸಿದೆ.
ಕಿತ್ತಳೆ ಹಣ್ಣಿನ ಬುಟ್ಟಿಯೊಳಗೆ ಮೊಳಕೆಯೊಡೆದ ಶಿಕ್ಷಣ : 2004ರಲ್ಲಿ ಕನ್ನಡ ಪತ್ರಿಕೆಯೊಂದು ಹಾಜಬ್ಬರನ್ನು ವರ್ಷದ ವ್ಯಕ್ತಿ ಎಂದು ಪ್ರಶಸ್ತಿ ನೀಡಿ ಗುರುತಿಸುವ ಮೂಲಕ ಹಾಜಬ್ಬ ಬೆಳಕಿಗೆ ಬಂದಿದ್ದರು. ಬಳಿಕ ದೆಹಲಿಯ ಸಿಎನ್‍ಎನ್- ಐಬಿಎನ್ ರಿಯಲ್ ಹೀರೋ ಪ್ರಶಸ್ತಿ ನೀಡಿ ಗೌರವಿಸಿತ್ತು.
ಮಂಗಳೂರಿನ ಹರೆಕಳದಲ್ಲಿ ಹುಟ್ಟಿದ ಹಾಜಬ್ಬನವರದ್ದು ಬಡ ಕುಟುಂಬ. ಮನೆಯಲ್ಲಿ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇದ್ದುದರಿಂದ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಸಾಧ್ಯವಾಗಲಿಲ್ಲ. ಬಾಲ್ಯದಿಂದಲೇ ಬೀಡಿ ಸುತ್ತಿ ಜೀವನ ನಡೆಸುತ್ತಿದ್ದ ಅವರು ಆಮೇಲೆ ಮಂಗಳೂರಿಗೆ ಹೋಗಿ ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ರಸ್ತೆ ಬದಿಯಲ್ಲಿ ಮಾರತೊಡಗಿದರು. ಮಂಗಳೂರು ಸಾಕಷ್ಟು ಅಭಿವೃದ್ಧಿ ಹೊಂದಿದ ನಗರವಾದ್ದರಿಂದ ಅಲ್ಲಿ ಎಲ್ಲ ಭಾಷಿಕರೂ ಇದ್ದಾರೆ. ಹಾಜಬ್ಬ ಯಾವಾಗ ಮಂಗಳೂರಿಗೆ ಹೋಗಿ ಹಣ್ಣು ವ್ಯಾಪಾರ ಶುರು ಮಾಡಿದರೋ ಆಗ ಅವರಿಗೆ ನಿಜ ಪ್ರಪಂಚದ ದರ್ಶನವಾಯಿತು. ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ವಿದೇಶಿ ಮಹಿಳೆಯ ಆಂಗ್ಲ ಭಾಷೆಯ ಪ್ರಶ್ನೆಗೆ ಉತ್ತರ ನೀಡಲಾಗದ ಹಾಜಬ್ಬರಿಗೆ ಶಿಕ್ಷಣದ ಮಹತ್ವ ಅರಿವಾಗಿತ್ತು. ಅಂದೇ ಶಾಲೆ ಕಟ್ಟುವ ನಿರ್ಣಯ ಮಾಡಿದರು ಹಾಜಬ್ಬ.
ಅಕ್ಷರ ಪ್ರೀತಿಯ ಅನಾವರಣ : ಮಂಗಳೂರು ವಿಶ್ವವಿದ್ಯಾನಿಲಯ ಇರುವ ಕೊಣಾಜೆ ಸಮೀಪದ ಹರೇಕಳದಲ್ಲಿ ಗ್ರಾಮೀಣ ಮಕ್ಕಳಲ್ಲಿ ಶಾಲೆಯ ಸೌಲಭ್ಯ ಇರಲಿಲ್ಲ. ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು.
ಶಾಲೆಯ ಕನಸಿನ ಸಾಕಾರಕ್ಕೆ ಅವರು ಪಟ್ಟ ಪಾಡು ಅಷ್ಟಿ ಷ್ಟಲ್ಲ. ಕಿತ್ತು ತಿನ್ನುವ ಬಡತನ ಲೆಕ್ಕಿಸದೆ ಕಿತ್ತಳೆ ಮಾರಾಟದ ಮಧ್ಯೆ ಶಾಲೆಗಾಗಿ ಕಚೇರಿಗಳಿಗೆ ಅಲೆದಾಡಿದರು. 2000ನೇ ಜೂ.17 ರಂದು ಹರೇಕಳ ನ್ಯೂಪಡು³ಗೆ ಸರಕಾರಿ ಶಾಲೆ ಮಂಜೂರು ಮಾಡುವಲ್ಲಿ ಯಶಸ್ವಿಯಾದರು. ಆದರೆ ಕಟ್ಟಡವಿಲ್ಲ. ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಪಕ್ಕದ ಬೋರಲುಗುಡ್ಡದ 40 ಸೆಂಟ್ಸ್ ಜಾಗ ಖರೀದಿಸಲು ಕಿತ್ತಳೆ ವ್ಯಾಪಾರ ಮಾಡಿ, ತೀರಾ ಕಷ್ಟದಲ್ಲಿ ಉಳಿತಾಯ ಮಾಡಿದ್ದ 25,000 ರೂ. ನೀಡಿದರು. ಇತರ ಹಣವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. ಶಾಲೆಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ದಾನಿಗಳ ನೆರವಿನೊಂದಿಗೆ ಶಾಲೆಗೆ ಹಾಜಬ್ಬರು ಒದಗಿಸಿದರು. ಅಂದಿನಿಂದ ಇಂದಿನ ತನಕ ತನ್ನನ್ನು ಶಾಲೆಗೆ ಅರ್ಪಿಸಿಕೊಂಡ ಭಗೀರಥ ಇವರು
ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಈ ದೇಶದ ಉತ್ತಮ ಪ್ರಶಸ್ತಿ ಬಂದಿರುವುದೂ ಬಹಳ ಸಂತಸದ ಸುದ್ದಿ. ಅವರ ನಿಸ್ವಾರ್ಥ ಸೇವೆಯ ಮುಂದೆ, ಅವರ ಸಾಮಾಜಿಕ ಬದ್ದತೆಯ ಈ ಕ್ರಿಯೆಯ ಮುಂದೆ ಈ ಪ್ರಶಸ್ತಿ ದೊಡ್ಡದೇನಲ್ಲ…ಯಾವುದೇ ರಾಜಕೀಯ ಕಾರಣಗಳಿಗಾದರೂ ಸರಿ, ಹಾಜಬ್ಬ ಅವರ ಸಾಮಾಜಿಕ ಕರ್ತವ್ಯ ವನ್ನು ಇಂತಹ ಸರ್ಕಾರಗಳೂ ಗುರುತಿಸಿರುವುದು ಮುಖ್ಯ ವಾಗುತ್ತದೆ.
ನಿಮ್ಮ ಮಾದ್ಯಮದ ಮುಖಾಂತರ ಇದನ್ನು ಜನತೆಗೆ, ಸಾಮಾನ್ಯ ಜನರಿಗೆ ತಲುಪಿಸಿರುವ ನಿಮಗೂ ಧನ್ಯವಾದಗಳು…
ಆದರೆ, ನಿಮ್ಮ ಮಾಧ್ತಮದ ಹೆಸರು, ಲಾಂಛನ ಮತ್ತು ಹಾಜಬ್ಬ ಅವರ ಹೆಸರಿನ ಪಟ್ಟಿ, ಹಾಜಬ್ಬ ಮತ್ತು ರಾಷ್ಟ್ರಪತಿಗಳು ನೀಡುತ್ತಿರುವ ಪ್ರಶಸ್ತಿ ಯ ಮೇಲೆಯೇ ಬಂದು, ಅದು ಕಾಣಿಸದಂತಾಗಿದೆ. ಈ ರೀತಿಯಲ್ಲಿ ಹೆಸರಿನ ಪಟ್ಟಿ ಅಥವಾ ಇನ್ಯಾವುದೇ ಕಾರಣಗಳಿಂದ ಪ್ರಶಸ್ತಿಗಳನ್ನು ಮತ್ತು ಪುರಸ್ಕೃತ ರನ್ನು ಮರೆ ಮಾಡಬೇಡಿರಿ…
ಗುಂಡಣ್ಣ ಚಿಕ್ಕಮಗಳೂರು